ADVERTISEMENT

ದಾವಣಗೆರೆ | ಲಿಂಗಾಯತ ಉಳಿಸಲು ಜಗಳ ಬಿಡೋಣ: ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 11 ಜನವರಿ 2026, 17:18 IST
Last Updated 11 ಜನವರಿ 2026, 17:18 IST
ದಾವಣಗೆರೆಯ ರೇಣುಕ ಮಂದಿರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಾಣೇಹಳ್ಳಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿಗೆ ‘ತೋಂಟದ ಸಿದ್ಧಲಿಂಗಶ್ರೀ’ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು ಪ್ರಜಾವಾಣಿ ಚಿತ್ರಗಳು
ದಾವಣಗೆರೆಯ ರೇಣುಕ ಮಂದಿರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಾಣೇಹಳ್ಳಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿಗೆ ‘ತೋಂಟದ ಸಿದ್ಧಲಿಂಗಶ್ರೀ’ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು ಪ್ರಜಾವಾಣಿ ಚಿತ್ರಗಳು   

ದಾವಣಗೆರೆ: ‘ಲಿಂಗಾಯತ ಉಳಿಯಬೇಕಾದರೆ ಆ ಸ್ವಾಮಿ, ಈ ಸ್ವಾಮಿ ಎಂಬ ಜಗಳ ಬಿಡೋಣ. ಎಲ್ಲರೂ ಕೊರಳಿಗೆ ರುದ್ರಾಕ್ಷಿ ಧರಿಸೋಣ, ಹಣೆಗೆ ವಿಭೂತಿ ಹಚ್ಚೋಣ, ಕೈಯಲ್ಲಿ ಲಿಂಗ ಹಿಡಿಯೋಣ’ ಎಂದು ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ ಹೇಳಿದರು. 

ಇಲ್ಲಿನ ಅಭಿನವ ರೇಣುಕ ಮಂದಿರದಲ್ಲಿ ಭಾನುವಾರ ನಡೆದ ಸಿದ್ಧಲಿಂಗೇಶ್ವರ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು. 

‘ಮೂಢನಂಬಿಕೆ ಬೇರೆ, ಮೂಲ ನಂಬಿಕೆಯೇ ಬೇರೆ. ಮೂಢನಂಬಿಕೆಯೊಳಗೆ ಮೂಲನಂಬಿಕೆಯು ಕಳೆದು ಹೋಗಬಾರದು. ಮೂಲನಂಬಿಕೆಯನ್ನು ಉಳಿಸಿಕೊಳ್ಳಲೇಬೇಕು’ ಎಂದು ಹೇಳಿದರು. 

ADVERTISEMENT

‘ಯಡೆಯೂರು ಸಿದ್ದಲಿಂಗೇಶ್ವರರು ಬಸವ ತತ್ವವನ್ನು ಪ್ರಚಾರ ಮಾಡಿದರು’ ಎಂದರು. 

‘ಬಸವಣ್ಣ ಹಾಗೂ ಬಸವ ತತ್ವಗಳನ್ನು ಉಸಿರಾಗಿಸಿಕೊಂಡಿರುವ ಸಾಣೇಹಳ್ಳಿ ಶ್ರೀಗಳಿಗೆ ಪ್ರಶಸ್ತಿ ಒಲಿದಿದೆ. ಶ್ರೀಗಳು ಸಾಂಸ್ಕೃತಿಕ ಹಾಗೂ ಧಾರ್ಮಿಕ ಕ್ಷೇತ್ರದಲ್ಲಿ ಮಹತ್ತರ ಸಾಧನೆ ಮಾಡಿದ್ದಾರೆ. ಬಸವ ಸಂಸ್ಕೃತಿ ಅಭಿಯಾನದ ರೂವಾರಿಯೂ ಆಗಿದ್ದಾರೆ’ ಎಂದು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್‌ನ ಅಧ್ಯಕ್ಷ ಡಾ.ಸಿ.ಸೋಮಶೇಖರ ಹೇಳಿದರು.  

‘ದೀನ ದಲಿತರು ಹಾಗೂ ಶೋಷಿತರ ನೋವಿಗೆ ಅವರು ಸ್ಪಂದಿಸಿದ್ದಾರೆ. ನಿರ್ಮಲ ಮನಸಿನ ಸಂತನಾದ ಸಾಣೇಹಳ್ಳಿ ಶ್ರೀಗಳು ಯಾವುದೇ ಮನ್ನಣೆ ಬಯಸಿದವರಲ್ಲ’ ಎಂದರು. 

‘ಪಂಡಿತಾರಾಧ್ಯ ಶ್ರೀಗಳು ಮಾತೃಹೃದಯಿ. ಸಮಾಜವನ್ನು ತಿದ್ದಲು ತಂದೆಯ ಕಾಠಿಣ್ಯ, ತಾಯಿಯ ಪ್ರೀತಿಯೂ ಅವಶ್ಯ. ಶ್ರೀಗಳಿಗೆ ಪ್ರಶಸ್ತಿ ನೀಡಿರುವುದರಿಂದ ಅದರ ಮೌಲ್ಯ ಹೆಚ್ಚಿದೆ‌’ ಎಂದು ಬೆಟ್ಟಹಳ್ಳಿ ಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಅಭಿಪ್ರಾಯ‍ಪಟ್ಟರು. 

‘ಯಡೆಯೂರು ಸಿದ್ದಲಿಂಗೇಶ್ವರರು ದ್ವಿತೀಯ ಅಲ್ಲಮರು. ಅವರು ಶಿವಯೋಗ ತತ್ವಗಳನ್ನು ಪ್ರಚುರಪಡಿಸಿದರು‌. ಸಾಣೇಹಳ್ಳಿ ಸ್ವಾಮೀಜಿ ನಿಷ್ಠುರವಾದವರು. ನೇರ, ದಿಟ್ಟ, ನಿರಂತರಕ್ಕೆ ಹೆಸರುವಾಸಿ’ ಎಂದು ವಿರಕ್ತಮಠದ ಬಸವಪ್ರಭು ಸ್ವಾಮೀಜಿ ಹೇಳಿದರು. 

ಬೇಲಿಮಠದ ಮಹಾಸಂಸ್ಥಾನದ ಚರಮೂರ್ತಿ ಶಿವರುದ್ರ ಸ್ವಾಮೀಜಿ ಮಾತನಾಡಿದರು.‌ 

ಹೆಬ್ಬಾಳು ವಿರಕ್ತಮಠದ ಮಹಾಂತ ರುದ್ರೇಶ್ವರ ಸ್ವಾಮೀಜಿ, ಗಚ್ಚಿನಮಠದ ಶಿವಬಸವ ಸ್ವಾಮೀಜಿ, ಪವಾಡ ಶ್ರೀ ಬಸವಣ್ಣದೇವರ ಮಠದ ಸಿದ್ಧಲಿಂಗ ಸ್ವಾಮೀಜಿ, ಶಾಸಕ ಕೆ.ಎಸ್.ಬಸವಂತಪ್ಪ, ಮುಖಂಡರಾದ ಅಥಣಿ ವೀರಣ್ಣ, ದೇವರಮನೆ ಶಿವಕುಮಾರ,  ಸಿದ್ಧಗಂಗಾ ವಿದ್ಯಾಸಂಸ್ಥೆಯ ಜಸ್ಟಿನ್ ಡಿಸೌಜ, ಶಿವಣ್ಣ, ಎಂ.ಟಿ.ಸುಭಾಶ್‌ಚಂದ್ರ, ಕೆ.ಎಂ.ವೀರೇಶ್‌, ಡಿ.ಎಸ್‌.ಸಿದ್ದಣ್ಣ, ಪಾಲನೇತ್ರ ಸೇರಿದಂತೆ ಇನ್ನಿತರ ಮುಖಂಡರು ಭಾಗವಹಿಸಿದ್ದರು. 

ಮುಂದಿನ ಪೀಳಿಗೆಗೆ ಪರಿಸರ ಶಿಕ್ಷಣ ಕೃಷಿ ಉತ್ತಮ ಆಡಳಿತ ವ್ಯವಸ್ಥೆ ಹಾಗೂ ಆರೋಗ್ಯದ ಜೊತೆಗೆ ಬಾಂಧವ್ಯವೂ ಅವಶ್ಯವಾಗಿದೆ. ಸ್ವಾಮೀಜಿಗಳು ಈ ಬಗ್ಗೆ ಚಿಂತನೆ ನಡೆಸಲಿ
ಮಹಿಮಾ‌ ಪಟೇಲ್ ಮಾಜಿ ಶಾಸಕ

ಪಂಡಿತಾರಾಧ್ಯ ಶ್ರೀಗೆ ‘ತೋಂಟದ ಸಿದ್ಧಲಿಂಗಶ್ರೀ’ ಪ್ರಶಸ್ತಿ ಪ್ರದಾನ 

‘ತೋಂಟದ ಸಿದ್ಧಲಿಂಗಶ್ರೀ’ ಪ್ರಶಸ್ತಿ ಸ್ವೀಕರಿಸಿದ ಸಾಣೇಹಳ್ಳಿಯ ತರಳಬಾಳು ಶಾಖಾಮಠದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ ‘ಸ್ವಾಮಿತನವೇ ದೊಡ್ಡ ಪ್ರಶಸ್ತಿ. ತಾನಾಗಿಯೇ ಬೆನ್ನತ್ತಿ ಬಂದಾಗ ಬೇಡ ಎಂದರೆ ಸಮಾಜವು ಸೊಕ್ಕು ಎಂದು ಭಾವಿಸಬಾರದು ಎಂಬ ಕಾರಣಕ್ಕೆ ಪ್ರಶಸ್ತಿ ಸ್ವೀಕರಿಸಿದೆ’ ಎಂದು ಹೇಳಿದರು.  ‘ಹಿರಿಯ ಗುರುಗಳು ಹಾಗೂ ಭಕ್ತರಿಗೆ ಒಲಿದ ಪ್ರಶಸ್ತಿ ಇದಾಗಿದೆ. ಸಿದ್ಧಲಿಂಗ ಶ್ರೀಗಳ ವಚನಗಳನ್ನು ಭಕ್ತರು ಸ್ವಾಮೀಜಿಗಳು ಹೆಚ್ಚು ಓದಿಕೊಳ್ಳಬೇಕು. ಜನರು ಬಸವ ತತ್ವಗಳನ್ನು ಪಾಲಿಸಬೇಕು’ ಎಂದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.