ದಾವಣಗೆರೆ: ನಿರಂತರವಾಗಿ ಮುಂದುವರಿಯುತ್ತಿರುವ ವೈದಿಕಶಾಹಿ ಯಜಮಾನಿಕೆಯ ಪರಿಣಾಮವಾಗಿ ಜಾತಿ ವ್ಯವಸ್ಥೆ ಹಾಗೂ ಅಸಮಾನತೆ ಜೀವಂತವಾಗಿವೆ. ಇದೇ ಕಾರಣಕ್ಕೆ ಕೆಲ ಶಕ್ತಿಗಳು ಸಂವಿಧಾನ ಬದಲಾವಣೆಗೆ ಪ್ರಯತ್ನಿಸುತ್ತಿವೆ ಎಂದು ಪ್ರೊ.ಮಲ್ಲಿಕಾರ್ಜುನ ಹಲಸಂಗಿ ಕಳವಳ ವ್ಯಕ್ತಪಡಿಸಿದರು.
ಇಲ್ಲಿನ ರೋಟರಿ ಬಾಲಭವನದಲ್ಲಿ ಜನತಂತ್ರ ಉಳಿಸಿ ಆಂದೋಲನದ ವತಿಯಿಂದ ‘ಜನತಂತ್ರಕ್ಕೆ ಎದುರಾಗುವ ಸವಾಲುಗಳು ಮತ್ತು ಪರಿಹಾರಗಳು’ ಕುರಿತು ಭಾನುವಾರ ಏರ್ಪಡಿಸಿದ್ದ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.
‘ಶೋಷಿತ ಸಮುದಾಯಗಳ ನಡುವಿನ ಒಗ್ಗಟ್ಟಿನ ಕೊರತೆಯ ಕಾರಣಕ್ಕೆ ಸಾವಿರಾರು ವರ್ಷಗಳಿಂದ ಗುಲಾಮರಾಗಿ ಉಳಿದಿದ್ದೇವೆ. ವರ್ಣ ವ್ಯವಸ್ಥೆ, ಜಾತಿ ವ್ಯವಸ್ಥೆ, ವೈದ್ದಿಕಶಾಹಿ ಪ್ರಾಬಲ್ಯದಿಂದ ಅಪಾಯದಲ್ಲಿ ಬದುಕು ಸವೆಸಿದ್ದೇವೆ’ ಎಂದರು.
‘ದೇಶ ಪ್ರಜಾಪ್ರಭುತ್ವ ವ್ಯವಸ್ಥೆಗೆ ಒಳಪಟ್ಟ ನಂತರ ಶೋಷಿತ ಸಮುದಾಯಗಳಿಗೆ ಸ್ವಾತಂತ್ರ್ಯದ ಅರಿವಾಗಿದೆ. ಸ್ವಾತಂತ್ರ್ಯದ ಮೌಲ್ಯಗಳನ್ನು ಅರ್ಥ ಮಾಡಿಕೊಳ್ಳದೇ ಹೋದರೆ ದೇಶ ಮತ್ತೊಮ್ಮೆ ಪರತಂತ್ರಕ್ಕೆ ಒಳಪಡಲಿದೆ. ಆ ಬಳಿಕ ಎಂದಿಗೂ ಸ್ವಾತಂತ್ರ್ಯ ಲಭಿಸದು. ದಮನಿತರಿಗೆ ಜನತಂತ್ರ ಜೀವನ, ಉಸಿರು; ಆದರೆ, ಇನ್ನೂ ಕೆಲವರಿಗೆ ಐಷಾರಾಮಿ ಬದುಕು’ ಎಂದು ಹೇಳಿದರು.
‘ಇಂಧೋರ್‌ನಲ್ಲಿ ಕಲುಷಿತ ನೀರು ಕುಡಿದು ಹಲವರು ಪ್ರಾಣ ಕಳೆದುಕೊಂಡಿದ್ದಾರೆ. ಈ ದುರಂತದ ವಿರುದ್ಧ ಧ್ವನಿ ಎತ್ತುವ ಪ್ರಯತ್ನ ನಡೆಯುತ್ತಿಲ್ಲ. ಹೋರಾಟದ ಅನಿವಾರ್ಯತೆ ಹಿಂದೆಂದಿಗಿಂತ ಈಗ ಹೆಚ್ಚಾಗಿದೆ. ಬಿ.ಆರ್. ಅಂಬೇಡ್ಕರ್ ಹಾಗೂ ಪ್ರೊ.ಬಿ. ಕೃಷ್ಣಪ್ಪ ಅವರು ತೋರಿದ ಮಾರ್ಗದಲ್ಲಿ ಸಾಗಬೇಕಿದೆ’ ಎಂದು ನಿವೃತ್ತ ಪೊಲೀಸ್ ಅಧಿಕಾರಿ ರವಿನಾರಾಯಣ ಅಭಿಪ್ರಾಯಪಟ್ಟರು.
‘ಕಾರ್ಯಾಂಗ ಮತ್ತು ಶಾಸಕಾಂಗಕ್ಕೆ ಅಂಟಿಕೊಂಡಿದ್ದ ಭ್ರಷ್ಟಾಚಾರ ಸಮಾಜದ ಎಲ್ಲ ಕ್ಷೇತ್ರಗಳನ್ನು ಆವರಿಸಿದೆ. ಸ್ವಾತಂತ್ರ್ಯ ಮತ್ತು ಸಂವಿಧಾನಕ್ಕೆ ಧಕ್ಕೆ ಉಂಟಾಗುತ್ತಿರುವ ಬಗ್ಗೆ ಆತಂಕಗಳು ಎದುರಾಗಿವೆ. ಜನರ ನೈಜ ಸಮಸ್ಯೆಗಳನ್ನು ಮರೆಮಾಚುವ ಹುನ್ನಾರವೂ ನಡೆಯುತ್ತಿದೆ. ಧರ್ಮಕ್ಕೆ ಧಕ್ಕೆ ಉಂಟಾಗುತ್ತಿದೆ ಎಂಬ ಹುಸಿ ಭಾವನೆ ಬಿತ್ತಲಾಗುತ್ತಿದೆ’ ಎಂದರು.
ಜನತಂತ್ರ ಉಳಿಸಿ ಆಂದೋಲನದ ಸಂಚಾಲಕ ಇಮ್ತಿಯಾಜ್ ಹುಸೇನ್ ಅಧ್ಯಕ್ಷತೆ ವಹಿಸಿದ್ದರು. ಪ್ರೊ.ಸಿ.ಕೆ. ಮಹೇಶ್, ರಾಮು ಗೋಸಾಯಿ, ಎಸ್.ಎಚ್. ಗುರುಮೂರ್ತಿ, ಬಾಲೇನಹಳ್ಳಿ ರಾಮಣ್ಣ, ದುರ್ಗೇಶ್ ಗುಡಿಗೇರಿ, ಚೌಡಪ್ಪ, ಎಚ್. ಮಲ್ಲೇಶ್ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.