ADVERTISEMENT

ವಿವಿಧ ಅವ್ಯವಹಾರಗಳೇ ಚರ್ಚೆಗೆ ಗ್ರಾಸ: ಜಿ.ಪಂ ಸಾಮಾನ್ಯ ಸಭೆಯಲ್ಲಿ ಕ್ರಮಕ್ಕೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 13 ಜನವರಿ 2020, 13:49 IST
Last Updated 13 ಜನವರಿ 2020, 13:49 IST
ದಾವಣಗೆರೆ ಜಿಲ್ಲಾ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪದ್ಮ ಬಸವಂತಪ್ಪ ಮಾತನಾಡಿದರು
ದಾವಣಗೆರೆ ಜಿಲ್ಲಾ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪದ್ಮ ಬಸವಂತಪ್ಪ ಮಾತನಾಡಿದರು   

ದಾವಣಗೆರೆ: ನರೇಗಾದಲ್ಲಿ ₹ 6 ಕೋಟಿ ಅವ್ಯವಹಾರ, ಆಸ್ಪತ್ರೆಯ ನಿರ್ವಹಣೆಗೆ ಬಳಕೆಯಾಗದೆ ಪಾವತಿಯಾಗುತ್ತಿರುವ ಅನುದಾನ, ವಿದ್ಯಾಸಂಸ್ಥೆ ಆರಂಭಿಸಲೆಂದು ಸರ್ಕಾರಿ ಭೂಮಿ ಪಡೆದು ಬೇರೆಯವರಿಗೆ ಮಾರಾಟ... ಹೀಗೆ ವಿವಿಧ ಅವ್ಯವಹಾರಗಳೇ ಸೋಮವಾರ ನಡೆದ ಜಿಲ್ಲಾ ಪಂಚಾಯಿತಿ ಸಭೆಯನ್ನು ಪೂರ್ತಿ ಆವರಿಸಿತು. ಅವ್ಯವಹಾರ ಮಾಡಿದವರ ವಿರುದ್ಧ ಕ್ರಮಕೈಗೊಳ್ಳಲೇಬೇಕು ಎಂದು ಸದಸ್ಯರು ಪಟ್ಟು ಹಿಡಿದರು.

‘ನಮ್ಮ ಕುಂದುಕೊರತೆ ಆಲಿಸಿ’ ಎಂದು ಸಭೆ ಆರಂಭಗೊಳ್ಳುತ್ತಿದ್ದಂತೆ ದೊಣೆಹಳ್ಳಿ ಕ್ಷೇತ್ರದ ಸದಸ್ಯೆ ಶಾಂತಕುಮಾರಿ ಮಾತು ಆರಂಭಿಸಿದರು. ‘ತಪ್ಪು ಮಾಡಿರುವ ಪಿಡಿಒಗಳ ಮೇಲೆ ಕ್ರಮ ಕೈಗೊಳ್ಳಿ. ಆದರೆ ಅದೇ ಹೆಸರಲ್ಲಿ ಎಲ್ಲ ಪಂಚಾಯಿತಿಗಳ ಪಿಡಿಒಗಳ ವಿಚಾರಣೆ ನಡೆಸಲಾಗುತ್ತಿದೆ. ಇದರಿಂದ 22 ಪಂಚಾಯಿತಿಗಳಲ್ಲಿ ಕೆಲಸ ಸ್ಥಗಿತಗೊಂಡಿದೆ’ ಎಂದು ಅವರು ಹೇಳಿದರು.

‘ನರೇಗಾ ಕೆಲಸಗಳು ನಿಂತಿವೆ. ಕೆಲಸಗಳನ್ನು ಮತ್ತೆ ಆರಂಭಿಸಲು ನಿರ್ದೇಶನ ನೀಡಬೇಕು. ಒಬ್ಬ ಪಿಡಿಒ ಮಾಡಿದ ತಪ್ಪಿಗೆ ಎಲ್ಲ ಪಿಡಿಒಗಳು ವಿಚಾರಣೆ ಎದುರಿಸುವಂತಾಗಿದೆ. ನಮ್ಮಲ್ಲಿಗೆ ಅಧಿಕಾರಿಗಳು ವರ್ಗ ಆಗಿ ಬರಲು ಹೆದರುತ್ತಿದ್ದಾರೆ’ ಎಂದು ಅಣಬೂರು ಜೆ. ಸವಿತಾ ದ್ವನಿಗೂಡಿಸಿದರು.

ADVERTISEMENT

ತಪ್ಪು ಮಾಡಿದ ಪಿಡಿಒಗಳ ಜತೆಗೆ, ನಿರಪರಾಧಿ ಪಿಡಿಒಗಳನ್ನು ಕೂಡ ಅಮಾನತು ಮಾಡಲಾಗಿದೆ. ಆನಂತರ ನಿರಪರಾಧಿ ಪಿಡಿಒಗಳ ಅಮಾನತು ರದ್ದು ಮಾಡುವಾಗ ತಪ್ಪು ಮಾಡಿದವರ ಅಮಾನತೂ ರದ್ದಾಗಿದೆ. ಅಮಾನತು ಮಾಡಿದ್ದು ಯಾರು? ಯಾವ ಮಾನದಂಡದಲ್ಲಿ ವಾಪಸ್‌ ತಗೊಳ್ಳಲಾಯಿತು. ಇದಕ್ಕೆ ಸಂಬಂಧಿಸಿದ ಸರ್ಕಾರಿ ಆದೇಶ ಇದ್ದರೆ ತೋರಿಸಿ ಎಂದು ಸೊಕ್ಕೆ ಎಸ್‌.ಕೆ. ಮಂಜುನಾಥ ಒತ್ತಾಯಿಸಿದರು.

ಅಮಾನತು ಮಾಡಿದ ಮೇಲೆ ಆನಂತರ ರದ್ದು ಪಡಿಸಬೇಕು. ಅವರು ಕೆಲಸದಲ್ಲಿ ಶಾಶ್ವತವಾಗಿ ಇರದಂತೆ ಮಾಡಲು ಆಗುವುದಿಲ್ಲ. ಅಮಾನತು ರದ್ದು ಮಾಡಿದರೆ ತನಿಖೆ ಮುಗಿಯಿತು ಎಂದರ್ಥವಲ್ಲ. ತನಿಖೆ ಮುಂದುವರಿಯುತ್ತದೆ. ತಪ್ಪು ಮಾಡಿದ್ದು ತನಿಖೆಯಲ್ಲಿ ಸಾಬೀತಾದರೆ ಕಾನೂನು ಕ್ರಮಗಳು ಇದ್ದೇ ಇರುತ್ತವೆ ಎಂದು ಸಿಇಒ ಪದ್ಮ ಬಸವಂತಪ್ಪ ಸಮಜಾಯಿಷಿ ನೀಡಿದರು.

ಜಗಳೂರು ತಾಲ್ಲೂಕಿನ ಹನುಮನಹಳ್ಳಿ ಮತ್ತು ಕ್ಯಾಸನಹಳ್ಳಿಯಲ್ಲಿ ಕೆಲಸ ಮಾಡಿ ಅವ್ಯವಹಾರದ ಆರೋಪ ಹೊತ್ತಿರುವ ಜಯಕುಮಾರ್‌ ಎಂಬ ಪಿಡಿಒ ಬಾನುವಳ್ಳಿಗೆ ಬಂದಿದ್ದಾರೆ. ಅಂಥವರು ಇಲ್ಲಿಗೆ ಬೇಡ ಎಂದು ನಮ್ಮೂರಲ್ಲಿ ಜನ ವಿರೋಧ ವ್ಯಕ್ತ‍ಪಡಿಸುತ್ತಿದ್ದಾರೆ. ಅದಕ್ಕಾಗಿ ಜಯಕುಮಾರ್‌ ಏನು ಮಾಡಿದ್ದಾರೆ ಎಂದು ದಾಖಲೆ ತೆಗೆದು ನೋಡಿದಾಗ ಕ್ಯಾಸನಹಳ್ಳಿಯಲ್ಲಿ 1255 ಮತ್ತು ಹನುಮನಹಳ್ಳಿಯಲ್ಲಿ 1140 ಜಾಬ್‌ಕಾರ್ಡ್‌ಗಳನ್ನು ರದ್ದು ಮಾಡಿ ₹ 6 ಕೋಟಿ ಹಗರಣ ಮಾಡಿದ್ದಾರೆ. ಕೆರೆಹೂಳು ತೆಗೆಯುವ ಒಂದು ಕಾಮಗಾರಿಯಲ್ಲಿ ಸಿಮೆಂಟ್‌, ಕಾಂಕ್ರಿಟ್‌ಗಳು ಎಲ್ಲಿಂದ ಬರುತ್ತವೆ. ಅವೆಲ್ಲವನ್ನು ತೋರಿಸಿದ್ದಾರೆ. ನರೇಗಾ ಕಾಮಗಾರಿಗಳು 60:40 ಅನುಪಾತ ಅನುಸರಿಸಿಲ್ಲಿ ಎಂದು ಬಿ.ಎಂ. ವಾಗೀಶಸ್ವಾಮಿ ತಿಳಿಸಿದರು.

ನರೇಗಾ ಕಾಮಗಾರಿಗಳು 60:40 ಅನುಪಾತದಲ್ಲಿ ಇದೆಯೇ ಎಂದು ಪರೀಕ್ಷಿಸಿದರೆ ಸಾಕು ಎಲ್ಲ ಹಗರಣಗಳು ಹೊರಗೆ ಬರುತ್ತವೆ ಎಂದು ಉಪಾಧ್ಯಕ್ಷ ಸುರೇಂದ್ರ ನಾಯ್ಕ್‌ ಸಲಹೆ ನೀಡಿದರು.

ಇಂಥ ಹಗಲು ದರೋಡೆ ವಿರುದ್ಧ ಕ್ರಮಕೈಗೊಳ್ಳುವಂತೆ ಲೋಕೇಶ್ವರ, ಮಂಜುಳಾ ಟಿ.ವಿ.ರಾಜು ಮುಂತಾದವರು ಆಗ್ರಹಿಸಿದರು.

ಈಗಾಗಲೇ ಹಲವು ಪಿಡಿಒಗಳ ಮೇಲೆ ಕ್ರಿಮಿನಲ್‌ ಮೊಕದ್ದಮೆ ಹೂಡಲಾಗಿದೆ. ಈಗ ಬಂದಿರುವ ಆರೋಪದಲ್ಲಿ ಕ್ರಿಮಿನಲ್‌ ಮೊಕದ್ದಮೆ ಹೂಡುವಂತಿದ್ದರೆ ಅದಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಸಿಇಒ ಭರವಸೆ ನೀಡಿದರು.

ಯಾವಾಗ ಕ್ರಮ ಕೈಗೊಳ್ಳಿತ್ತೀರಿ ಎಂದು ಜಿ.ಸಿ.ನಿಂಗಪ್ಪ ಪ್ರಶ್ನಿಸಿದರು. ಒಂದು ವಾರದೊಳಗೆ ಎಂದು ಸಿಇಒ ಉತ್ತರಿಸಿದರು. ಮೊದಲೇ ನಮ್ಮಲ್ಲಿ ಪಿಡಿಒಗಳ ಕೊರತೆ ಇದೆ. ಈಗ ಇರುವವರೂ ವರ್ಗಾವಣೆ ಕೇಳುತ್ತಿದ್ದಾರೆ. ವರ್ಗ ಮಾಡಬಾರದು ಎಂದು ಬಿಳಿಚೋಡಿನ ಉಮಾ ವೆಂಕಟೇಶ್‌ ಮನವಿ ಮಾಡಿದರು. ಅಲ್ಲಿಗೆ ಬೇರೆಯವರು ವರ್ಗ ಆಗಿ ಬರುವುದಿದ್ದರಷ್ಟೇ ಅವರನ್ನು ಅಲ್ಲಿಂದ ಬಿಡುಗಡೆ ಮಾಡಲಾಗುವುದು. ಇಲ್ಲದಿದ್ದರೆ ಮಾಡಲ್ಲ ಎಂದು ಸಿಇಒ ತಿಳಿಸಿದರು.

ನರೇಗಾದಲ್ಲಿ ಜಿಲ್ಲೆಗೆ ₹ 17 ಕೋಟಿ ಬಾಕಿ ಇದೆ. ಅದನ್ನು ರಾಜ್ಯ ಮತ್ತು ಕೇಂದ್ರ ಸರ್ಕಾರ ಬಿಡುಗಡೆ ಮಾಡುವಂತೆ ಒತ್ತಾಯಿಸಬೇಕು ಎಂದು ಕೆ.ಎಸ್. ಬಸವಂತಪ್ಪ ಆಗ್ರಹಿಸಿದರು. ನರೇಗಾಕ್ಕೆ ಸಂಬಂಧಿಸಿದಂತೆ ಒಬ್ಬ ವೆಂಡರ್‌ಗೆ ಸುಮಾರು ₹ 4 ಕೋಟಿ ಹಾಕಲಾಗಿದೆ. ಅದಕ್ಕೆ ಮಿತಿ ಇಲ್ವ ಎಂದು ಎಸ್‌.ಕೆ. ಮಂಜುನಾಥ ಪ್ರಶ್ನಿಸಿದರು.

ಈ ಎಲ್ಲದರ ಬಗ್ಗೆ ಜ.27ಕ್ಕೆ ಪ್ರತ್ಯೇಕ ಸಭೆ ಕರೆಯಲಾಗುವುದು. ಹಗರಣಗಳ ವಿರುದ್ಧ ಕೈಗೊಂಡ ಕ್ರಮಗಳು, ಇದಕ್ಕೆ ಸಂಬಂಧಪಟ್ಟ ಎಲ್ಲ ವಿವರಗಳನ್ನು ನೀಡಬೇಕು ಎಂದು ಅಧ್ಯಕ್ಷೆ ಯಶೋದಮ್ಮ ಮರುಳಪ್ಪ ತಿಳಿಸಿ ಚರ್ಚೆಗೆ ತೆರೆಎಳೆದರು.

ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷ ಬಿ. ಫಕೀರಪ್ಪ, ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಜಿ. ವೀರಶೇಖರಪ್ಪ, ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಲೋಕೇಶ್ವರ, ಸದಸ್ಯರು ಉಪಸ್ಥಿತರಿದ್ದರು.

ಸರ್ಕಾರದ ಆಸ್ತಿ ಮಾರಾಟ‌

ಜಿಲ್ಲಾ ಪಂಚಾಯಿತಿ ಪಕ್ಕದಲ್ಲಿಯೇ ಇಂಡಸ್ಟ್ರೀಯಲ್‌ ಏರಿಯಾದ ಬಳಿ ವಿದ್ಯಾಸಂಸ್ಥೆ ನಡೆಸಲೆಂದು ಶಿಕ್ಷಣ ಇಲಾಖೆಯಿಂದ ಎರಡು ಎಕರೆ ಜಮೀನನ್ನು ಖಾಸಗಿಯವರು ಪಡೆದುಕೊಂಡಿದ್ದಾರೆ. ಅಲ್ಲಿ ವಿದ್ಯಾಸಂಸ್ಥೆ ನಡೆಸುವ ಬದಲು ಬೇರೆಯವರಿಗೆ ಮಾರಾಟ ಮಾಡಿದ್ದಾರೆ ಎಂದು ಕೆ.ಎಸ್‌. ಬಸವಂತಪ್ಪ ಆರೋಪಿಸಿದರು.

ಅವರಿಗೆ ನೋಟಿಸ್‌ ನೀಡಿದಾಗ ಖಾರವಾಗಿ ಉತ್ತರಿಸಿದ್ದಾರೆ ಎಂದು ಡಿಡಿಪಿಐ ಪರಮೇಶ್ವರಪ್ಪ ಉತ್ತರಿಸಿದರು. ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ದೂರು ನೀಡಿ. ಯಾವುದಕ್ಕೆ ಭೂಮಿ ಪಡೆಯಲಾಗಿದೆಯೋ ಅದಕ್ಕೆ ಬಳಸಿಲ್ಲ ಅಂದರೆ ವಾಪಸ್‌ ಪಡೆಯಲು ಅವಕಾಶ ಇದೆ ಎಂದು ಸಿಇಒ ಪದ್ಮ ಬಸವಂತಪ್ಪ ತಿಳಿಸಿದರು.

‘ಸಿ.ಜಿ. ಆಸ್ಪತ್ರೆಯಲ್ಲಿ ಸರಿಯಾದ ಚಿಕಿತ್ಸೆ ಇಲ್ಲ’

ಸಿ.ಜಿ. ಆಸ್ಪತ್ರೆಯಲ್ಲಿ ಸರಿಯಾಗಿ ಚಿಕಿತ್ಸೆ ನೀಡುತ್ತಿಲ್ಲ. ಜನರಿಂದ ಹಣ ಪಡೆಯಲಾಗುತ್ತಿದೆ. ಮೂಳೆ ಮುರಿತ ಮತ್ತಿತರ ಚಿಕಿತ್ಸೆಗಳಿಗೆ ಖಾಸಗಿ ಆಸ್ಪತ್ರೆಗೆ ಹೋದರೆ ಕೂಡಲೇ ಚಿಕಿತ್ಸೆ ನೀಡಲಾಗುತ್ತದೆ. ಆದರೆ ಸರ್ಕಾರಿ ಆಸ್ಪತ್ರೆಯಲ್ಲಿ ಬಾವು ಕಡಿಮೆಯಾಗಬೇಕು ಎಂದು ವಾರಗಟ್ಟಳೆ ಕೂರಿಸಿ ಆಮೇಲೆ ಚಿಕಿತ್ಸೆ ನೀಡಲಾಗುತ್ತದೆ. ಬೆಡ್‌ ಸರಿ ಇಲ್ಲ. ಅಲ್ಲಿ ಶೌಚಾಲಯದಲ್ಲಿ ಕಮೋಡ್‌ ಇಲ್ಲ. ಸ್ವಚ್ಛತೆ ಇಲ್ಲ. ಸ್ವಲ್ಪ ಅನುಕೂಲ ಇದ್ದರೂ ಅಲ್ಲಿಗೆ ಯಾರೂ ಖಂಡಿತ ಬರಲ್ಲ ಎಂದು ಉಪಾಧ್ಯಕ್ಷ ಸುರೇಂದ್ರ ನಾಯ್ಕ್‌ ಆರೋಪಿಸಿದರು.

‘ಖಾಸಗಿ ಆಸ್ಪತ್ರೆಗಳಿಗೆ ಹೋದವರಿಗೆ ಆಯುಷ್ಮಾನ್‌ ಭಾರತ್‌ ಸೌಲಭ್ಯ ನೀಡುತ್ತಿಲ್ಲ. ಸರ್ಕಾರಿ ಆಸ್ಪತ್ರೆಯಿಂದ ಒಂದು ಪತ್ರ ಬೇಕು ಎಂದು ಖಾಸಗಿ ಆಸ್ಪತ್ರೆಯವರು ಕೇಳುತ್ತಾರೆ. ಜಿಲ್ಲಾ ಆಸ್ಪತ್ರೆಗೆ ಬಂದರೆ ರೋಗಿಯನ್ನೇ ಕರೆದುಕೊಂಡು ಬಂದರಷ್ಟೇ ಕೊಡುತ್ತೇವೆ ಎನ್ನುತ್ತಾರೆ’ ಎಂದು ಕೆ.ಎಸ್‌. ಬಸವಂತಪ್ಪ ಆರೋಪಿಸಿದರು.

‘ಆಸ್ಪತ್ರೆ ನಿರ್ವಹಣೆ ಹಣ ನಾಪತ್ತೆ’

ಪ್ರತಿ ಸರ್ಕಾರಿ ಆಸ್ಪತ್ರೆ, ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ನಿರ್ವಹಣೆಗೆಂದು ಸರ್ಕಾರದಿಂದ ಹಣ ಬರುತ್ತದೆ. ಆದರೆ ನಿರ್ವಹಣೆ ಆಗದೇ ಹಣ ಪಾವತಿಯಾಗುತ್ತಿದೆ. ಜಿಲ್ಲೆಯಲ್ಲಿ ಒಟ್ಟು 87 ಆಸ್ಪತ್ರೆಗಳಿವೆ. ಅವುಗಳನ್ನು ಎರಡು ಕೆಟಗರಿ ಮಾಡಲಾಗಿದೆ. ಮೊದಲ ಗೆಟಗರಿಯಲ್ಲಿ ಬರುವವುಗಳಿಗೆ ₹ 4 ಲಕ್ಷ ಹಾಗೂ ಎರಡನೇ ಗೆಟಗರಿಯಲ್ಲಿ ಬರುವುಗಳಿಗೆ ₹ 1.70 ಲಕ್ಷ ಬರುತ್ತದೆ. ಈ ಹಣ ಎಲ್ಲಿ ಹೋಗುತ್ತದೆ ಎಂಬುದೇ ಗೊತ್ತಾಗುವುದಿಲ್ಲ. ಈ ಅವ್ಯವಹಾರದ ಬಗ್ಗೆ ತನಿಖೆಯಾಗಬೇಕು ಎಂದು ಕೆ.ಎಸ್‌. ಬಸವಂತಪ್ಪ ಒತ್ತಾಯಿಸಿದರು.

ಸಭೆಯಲ್ಲಿ ಕೇಳಿಬಂದ ವಿಚಾರಗಳು

ಹೊಳೆ ಸಿರಿಗೆರೆಯಲ್ಲಿ ಶಾಲಾ ಕಟ್ಟಡ ನಿರ್ಮಾಣಕ್ಕೆ ಸೀಲ್‌ ಇಟ್ಟಿಗೆ ಬಳಸಲಾಗುವುದು ಎಂದು ಅಂದಾಜುಪಟ್ಟಿಯಲ್ಲಿ ತಿಳಿಸಿ ಸಿಮೆಂಟ್‌ ಇಟ್ಟಿಗೆ ಬಳಸಲಾಗುತ್ತಿದೆ–ವಿ.ಡಿ. ಹೇಮಾವತಿ

ಶಾಲೆಗಳಲ್ಲಿ ಕಂಪ್ಯೂಟರ್‌ ಹಾಳಾದರೆ ಗುಜರಿಗೆ ಹಾಕುವುದು ಸರಿಯಾದ ಕ್ರಮವಲ್ಲ. ಅದರ ವಾರಂಟಿ, ಗ್ಯಾರಂಟಿ ನೋಡಬೇಕು. ಪೂರೈಕೆದಾರರು ಬದಲಿ ಕಂಪ್ಯೂಟರ್‌ ಒದಗಿಸಬೇಕು– ತೇಜಸ್ವಿ ಪಟೇಲ್‌

ದುರಸ್ತಿ ಮಾಡಬೇಕಾದ ಶಾಲೆಗಳ ಪಟ್ಟಿಯನ್ನು ಜಿಲ್ಲಾ ಪಂಚಾಯಿತಿ ಸದಸ್ಯರು ನೀಡಿದ್ದನ್ನು ಬದಲಾಯಿಸಿ ಬೇರೆ ಪಟ್ಟಿಯನ್ನು ಅಧಿಕಾರಿಗಳು ತಯಾರಿಸಿದ್ದಾರೆ– ಲೋಕೇಶ್ವರ

ಶಾಲೆಗಳಲ್ಲಿ ಶೌಚಾಲಯಗಳಿಲ್ಲ – ಸುರೇಂದ್ರನಾಯ್ಕ್‌; ಸ್ವಚ್ಛ ಭಾರತ್‌ ಮಿಷನ್‌ ಯೋಜನೆಯಡಿ ನಿರ್ಮಿಲಾಗುವುದು– ಸಿಇಒ

ರೈತರಿಗೆ ಕೇಂದ್ರ ಸರ್ಕಾರ ನೀಡುವ ₹ 2 ಸಾವಿರ ಸಹಾಯಧನವನ್ನು ಸಾಲಕ್ಕೆ ಮುರಿದುಕೊಳ್ಳಲಾಗುತ್ತಿದೆ. ಮರುಪಾವತಿಗೆ ಕ್ರಮ ಕೈಗೊಳ್ಳಿ– ಜಿ.ಸಿ. ನಿಂಗಪ್ಪ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.