ADVERTISEMENT

ಬಾಂಗ್ಲಾ ಹಿಂದೂಗಳ ರಕ್ಷಣೆಗೆ ಆಗ್ರಹ: ಚನ್ನಗಿರಿಯಲ್ಲಿ ವಿಎಚ್‌ಪಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 27 ಡಿಸೆಂಬರ್ 2025, 3:05 IST
Last Updated 27 ಡಿಸೆಂಬರ್ 2025, 3:05 IST
ಚನ್ನಗಿರಿ ಪಟ್ಟಣದಲ್ಲಿ ಬಾಂಗ್ಲಾ ದೇಶದಲ್ಲಿ ಹಿಂದೂಗಳ ನರಮೇಧವನ್ನು ಖಂಡಿಸಿ ಶುಕ್ರವಾರ ವಿಎಚ್ ಪಿ ಹಾಗೂ ಬಜರಂಗದಳದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಚನ್ನಗಿರಿ ಪಟ್ಟಣದಲ್ಲಿ ಬಾಂಗ್ಲಾ ದೇಶದಲ್ಲಿ ಹಿಂದೂಗಳ ನರಮೇಧವನ್ನು ಖಂಡಿಸಿ ಶುಕ್ರವಾರ ವಿಎಚ್ ಪಿ ಹಾಗೂ ಬಜರಂಗದಳದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.   

ಚನ್ನಗಿರಿ: ಬಾಂಗ್ಲಾ ದೇಶದಲ್ಲಿ ಹಿಂದೂ ಯುವಕ ದೀಪು ಚಂದ್ರದಾಸ್ ಅವರನ್ನು ಇಸ್ಲಾಮಿಕ್ ಜಿಹಾದಿಗಳು ಅತ್ಯಂತ ಕ್ರೂರವಾಗಿ ಬೆಂಕಿ ಹಚ್ಚಿ ವಿಕೃತವಾಗಿ ಸಾಯಿಸಿರುವುದನ್ನು ಹಾಗೂ ಈ ದೇಶದಲ್ಲಿ ಹಿಂದೂಗಳ ರಕ್ಷಣೆಗೆ ಒತ್ತಾಯಿಸಿ ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳದ ಕಾರ್ಯಕರ್ತರು ಶುಕ್ರವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು.

ಕಳೆದ ಎರಡು ವರ್ಷಗಳಿಂದ ಬಾಂಗ್ಲಾ ದೇಶದಲ್ಲಿ ನಡೆಯುತ್ತಿರುವ ಹಿಂದೂಗಳ ನರಮೇಧವು ವಿಶ್ವದ ಹಿಂದೂಗಳಲ್ಲಿ ಭಯದ ವಾತಾವರಣವನ್ನು ಉಂಟು ಮಾಡಿದೆ. ಇತ್ತೀಚೆಗೆ ಏನು ತಪ್ಪು ಮಾಡದ ಹಿಂದೂ ಯುವಕ ದೀಪು ಚಂದ್ರದಾಸ್ ಅವರನ್ನು ಈ ದೇಶದ ಇಸ್ಲಾಮಿಕ್ ಜಿಹಾದಿಗಳು ಅತ್ಯಂತ ಕ್ರೂರವಾಗಿ ಬೆಂಕಿ ಹಚ್ಚಿ ಸಾಯಿಸುವ ಮೂಲಕ ವಿಕೃತಿಯನ್ನು ಮೆರೆದಿದ್ದಾರೆ. ಇಡೀ ಮಾನವ ಸಮಾಜ ತಲೆ ತಗ್ಗಿಸುವ ಈ ಘಟನೆಯನ್ನು ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳ ತೀವ್ರವಾಗಿ ಖಂಡಿಸುತ್ತದೆ. ಬಾಂಗ್ಲಾ ದೇಶದ ಹಿಂದೂಗಳ ರಕ್ಷಣೆಗೆ ಕೇಂದ್ರ ಸರ್ಕಾರವು ಈ ಕೂಡಲೇ ಭಾರತದ ಗಡಿಯನ್ನು ತೆರೆಯಬೇಕು.

ಅಷ್ಟೇ ಅಲ್ಲದೇ ರಾಜ್ಯ ಸರ್ಕಾರ, ಗೃಹ ಇಲಾಖೆ, ಪೊಲೀಸ್ ಇಲಾಖೆ ರಾಜ್ಯದಲ್ಲಿ ಅಡಗಿರುವ ಅಕ್ರಮ ಅಲ್ಪಸಂಖ್ಯಾತ ಬಾಂಗ್ಲಾ ವಲಸಿಗರನ್ನು ಗಡಿಪಾರು ಮಾಡುವಂತೆ ಒತ್ತಾಯಿಸುತ್ತಿದೆ. ಇಲ್ಲವಾದಲ್ಲಿ ಹಿಂದೂಗಳ ಉಳಿವಿಗಾಗಿ ಬಜರಂಗದಳ ರಾಜ್ಯದಲ್ಲಿ ನೇರ ಕಾರ್ಯಾಚರಣೆ ನಡೆಸುತ್ತದೆ ಎಂದು ಪ್ರತಿಭಟನಾಕಾರರು ತಿಳಿಸಿದರು.

ADVERTISEMENT

ಪಟ್ಟಣದ ಊರ ಬಾಗಿಲು ಆಂಜನೇಯ ಸ್ವಾಮಿ ದೇವಸ್ಥಾನದಿಂದ ಹೊರಟ ಪ್ರತಿಭಟನಾ ಮೆರವಣಿಗೆ ಬಾಂಗ್ಲಾ ದೇಶದ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ಸಾಗಿ ಗಾಂಧಿ ವೃತ್ತಕ್ಕೆ ಆಗಮಿಸಿ ಮಾನವ ಸರಪಳಿ ರಚಿಸಿ ಒಂದಿಷ್ಟು ಹೊತ್ತು ಹೆದ್ದಾರಿ ತಡೆ ನಡೆಸಿದರು. ನಂತರ ಅಲ್ಲಿಂದ ತಹಶೀಲ್ದಾರ್ ಕಚೇರಿಗೆ ಬಂದು ಗ್ರೇಡ್-2 ತಹಶೀಲ್ದಾರ್ ಕೆ.ಆರ್. ರುಕ್ಮಿಣಿಬಾಯಿ ಅವರಿಗೆ ಮನವಿ ಸಲ್ಲಿಸಿದರು.

ವಿಎಚ್ ಪಿ ಜಿಲ್ಲಾ ಕೋಶಾಧ್ಯಕ್ಷ ಕೆ.ಎಚ್. ಮಂಜುನಾಥ್, ಬಜರಂಗದಳ ಜಿಲ್ಲಾ ಸಂಯೋಜಕ ಎನ್. ರವಿಚಂದ್ರ, ವಿಎಚ್ ಪಿ ತಾಲ್ಲೂಕು ಅಧ್ಯಕ್ಷ ಜಯಣ್ಣ, ಪಟ್ಲಿ ನಾಗರಾಜ್, ಬುಳ್ಳಿ ಗಣೇಶ್, ನವೀನ್, ಕಿರಣ್ ಕೋರಿ, ಜಿತೇಂದ್ರ, ಶ್ರೀನಿವಾಸ್, ತಿಮ್ಮೇಶ್, ಹೇಮಚಂದು ಪ್ರತಿಭಟನೆಯಲ್ಲಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.