ADVERTISEMENT

ಭದ್ರಾ ಬಲದಂಡೆ ನಾಲೆಗಳಿಗೆ ನೀರು: ದಾವಣಗೆರೆ ಬಂದ್‌ಗೆ ಮಿಶ್ರ ಪ್ರತಿಕ್ರಿಯೆ

​ಪ್ರಜಾವಾಣಿ ವಾರ್ತೆ
Published 25 ಸೆಪ್ಟೆಂಬರ್ 2023, 6:37 IST
Last Updated 25 ಸೆಪ್ಟೆಂಬರ್ 2023, 6:37 IST
<div class="paragraphs"><p>ದಾವಣಗೆರೆ ನಗರದ ಕೇಂದ್ರ ಬಸ್ ನಿಲ್ದಾಣದಲ್ಲಿ ಬಸ್‌ಗಳ ಸಂಚಾರ ವಿರಳವಾಗಿದೆ.</p></div>

ದಾವಣಗೆರೆ ನಗರದ ಕೇಂದ್ರ ಬಸ್ ನಿಲ್ದಾಣದಲ್ಲಿ ಬಸ್‌ಗಳ ಸಂಚಾರ ವಿರಳವಾಗಿದೆ.

   

ದಾವಣಗೆರೆ: ಭದ್ರಾ ಬಲದಂಡೆ ನಾಲೆಗಳಿಗೆ 100 ದಿ‌ನ ನಿರಂತರವಾಗಿ ನೀರು ಹರಿಸುವಂತೆ ಒತ್ತಾಯಿಸಿ ಭಾರತೀಯ ರೈತ ಒಕ್ಕೂಟ ಕರೆ ನೀಡಿದ್ದ ದಾವಣಗೆರೆ ಬಂದ್‌ಗೆ‌ ಸೋಮವಾರ ಮಿಶ್ರ‌ ಪ್ರತಿಕ್ರಿಯೆ ವ್ಯಕ್ತವಾಯಿತು.

ಬೆಳಿಗ್ಗೆಯಿಂದಲೇ ನಗರದ ಹಲವೆಡೆ ಅಂಗಡಿಗಳನ್ನು ಮುಚ್ಚಲಾಗಿದೆ‌. ಇನ್ನೂ ಕೆಲವೆಡೆ ಕೆಲವು ಮಳಿಗೆಗಳನ್ನು ತೆರೆಯಲಾಗಿದೆ‌.

ADVERTISEMENT

ನಗರದ ಜಯದೇವ ವೃತ್ತ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬಂದ್ ಗೆ ಉತ್ತಮ‌ ಪ್ರತಿಕ್ರಿಯೆ ವ್ಯಕ್ತವಾಗಿದೆ.

ನಗರದ ಕೇಂದ್ರ ಬಸ್ ನಿಲ್ದಾಣದಲ್ಲಿ ಬಂದ್ ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಸಾರಿಗೆ ಬಸ್ ಗಳ ಓಡಾಟ ಬಹುತೇಕ ಸ್ಥಗಿತಗೊಂಡಿದೆ. ಪಕ್ಕದಲ್ಲಿನ ಖಾಸಗಿ ಬಸ್ ನಿಲ್ದಾಣದಲ್ಲಿ ಕೆಲವು ಬಸ್ ಗಳ ಸಂಚಾರ ಕಂಡುಬಂತು.

ವಾಣಿಜ್ಯ ಪ್ರದೇಶವಾದ ಮಂಡಿಪೇಟೆ, ಕಾಳಿಕಾದೇವಿ ರಸ್ತೆ, ಕೆ.ಆರ್‌.ಮಾರುಕಟ್ಟೆ, ಬಿನ್ನಿಕಂಪನಿ ರಸ್ತೆ, ಚಾಮರಾಜಪೇಟೆ, ಎಂ.ಜಿ.ರಸ್ತೆಯಲ್ಲಿ ರೈತರ ಹೋರಾಟಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬಂಗಾರದ ಅಂಗಡಿ, ಪ್ರಾವಿಜನ್ ಸ್ಟೋರ್, ಹೋಟೆಲ್, ಇನ್ನಿತರ ಅಂಗಡಿಗಳನ್ನು ಸ್ವಯಂ ಪ್ರೇರಿತವಾಗಿ ಮುಚ್ಚಲಾಗಿದೆ.

ತರಕಾರಿ, ಹಣ್ಣು, ತಳ್ಳುಗಾಡಿಯ ಹೋಟೆಲ್‌ಗಳ ವ್ಯಾಪಾರ ಎಂದಿನಂತೆ ನಡೆಯುತ್ತಿದೆ.

ನಗರದ ಪ್ರಮುಖ ವೃತ್ತಗಳಲ್ಲಿ ಬಂದ್ ವಾತಾವರಣ ಇದೆ‌. ಇನ್ನುಳಿದ ಕಡೆಗಳಲ್ಲಿ ಬಂದ್ ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ನಗರ ಸಾರಿಗೆಯಲ್ಲಿ ವ್ಯತ್ಯಯ ಉಂಟಾಗಿದ್ದು ಪ್ರಯಾಣಿಕರು ಆಟೊಗಳಲ್ಲಿ ಸಂಚರಿಸುತ್ತಿದ್ದಾರೆ.

ಬಂದ್ ಹಿನ್ನೆಲೆಯಲ್ಲಿ ನಗರದ ವಿವಿಧೆಡೆ ಪೊಲೀಸ್ ಭದ್ರತೆ ಹೆಚ್ಚಿಸಲಾಗಿದೆ‌. ಬಂದ್ ಗೆ ಕನ್ನಡಪರ ಸಂಘಟನೆಗಳು, ಆಮ್ ಆದ್ಮಿ ಪಕ್ಷ, ಬಿಜೆಪಿ, ದಲ್ಲಾಲರ ಸಂಘ ಸೇರಿದಂತೆ ಹಲವು ಸಂಘ ಸಂಸ್ಥೆಗಳೂ ಬೆಂಬಲ ವ್ಯಕ್ತಪಡಿಸಿವೆ‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.