ADVERTISEMENT

ಮಳೆಗಾಲದಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಿ: ಡಾ. ವೆಂಕಟೇಶ್

​ಪ್ರಜಾವಾಣಿ ವಾರ್ತೆ
Published 24 ಜೂನ್ 2021, 3:59 IST
Last Updated 24 ಜೂನ್ 2021, 3:59 IST
ದಾವಣಗೆರೆಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ‘ಮಲೇರಿಯಾ ವಿರೋಧಿ ಮಾಸಾಚರಣೆ’ಯನ್ನು ಜಿಲ್ಲಾ ವರದಿಗಾರರ ಕೂಟದ ಅಧ್ಯಕ್ಷ ಜಿ.ಎಂ. ಆರಾಧ್ಯ ಉದ್ಘಾಟಿಸಿದರು.
ದಾವಣಗೆರೆಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ‘ಮಲೇರಿಯಾ ವಿರೋಧಿ ಮಾಸಾಚರಣೆ’ಯನ್ನು ಜಿಲ್ಲಾ ವರದಿಗಾರರ ಕೂಟದ ಅಧ್ಯಕ್ಷ ಜಿ.ಎಂ. ಆರಾಧ್ಯ ಉದ್ಘಾಟಿಸಿದರು.   

ದಾವಣಗೆರೆ: ಮಳೆಗಾಲದಲ್ಲಿ ನೀರಿ ನಿಲ್ಲದಂತೆ ನೋಡಿಕೊಳ್ಳಬೇಕು. ಆಗ ಮಲೇರಿಯಾ ನಿಯಂತ್ರಣ ಸುಲಭ ಎಂದು ತಾಲ್ಲೂಕು ಆರೋಗ್ಯ ಅಧಿಕಾರಿ ಡಾ. ವೆಂಕಟೇಶ್ ಹೇಳಿದರು.

‘ಶೂನ್ಯ ಮಲೇರಿಯಾ ಗುರಿಯನ್ನು ತಲುಪಿ’ ಎಂಬ ಧೈಯವಾಕ್ಯದಡಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿಗಳ ಕಚೇರಿ ವತಿಯಿಂದನಗರದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ‘ಮಲೇರಿಯಾ ವಿರೋಧಿ ಮಾಸಾಚರಣೆ’ಯಲ್ಲಿ ಅವರು ಮಾತನಾಡಿದರು.

ಮಲೇರಿಯಾ ರೋಗವು ಅನಾಫಿಲೀಸ್ ಎಂಬ ಹೆಣ್ಣು ಸೊಳ್ಳೆಗಳಿಂದ ಹರಡುವ ಕಾಯಿಲೆ. ಮಳೆಗಾಲದಲ್ಲಿ ಹೆಚ್ಚು ನೀರು ಸಂಗ್ರಹವಾಗುವಲ್ಲಿ ಸೊಳ್ಳೆಗಳ ಸಂತಾನೋತ್ಪತ್ತಿ ಹೆಚ್ಚಾಗುತ್ತದೆ. ಮುಂಗಾರು ಆರಂಭಕ್ಕೂ ಮುಂಚೆ ವಿವಿಧ ಕಾರ್ಯಕ್ರಮಗಳ ಮೂಲಕ ಜನರಲ್ಲಿ ಜಾಗೃತಿ ಮೂಡಿಸಿ ನೀರು ನಿಲ್ಲದಂತೆ ನೋಡಿಕೊಂಡು ಸೊಳ್ಳೆಗಳ ಸಂತಾನೋತ್ಪತ್ತಿ ತಡೆಗಟ್ಟಿ ಮಲೇರಿಯಾ ನಿಯಂತ್ರಿಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ವಿವರಿಸಿದರು.

ADVERTISEMENT

2025 ಕ್ಕೆ ರಾಜ್ಯವನ್ನು ಮಲೇರಿಯಾ ಮುಕ್ತವನ್ನಾಗಿಸುವುದು ಸರ್ಕಾರದ ಗುರಿಯಾಗಿದೆ. 2015‌ರಲ್ಲಿ ಜಿಲ್ಲೆಯಲ್ಲಿ 26 ಮಲೇರಿಯಾ ಪ್ರಕರಣಗಳು ಕಂಡುಬಂದಿದ್ದವು. 2020ರಲ್ಲಿ ಕೇವಲ 4 ಪ್ರಕರಣಗಳು ಕಂಡುಬಂದಿದೆ. ಈ ವರ್ಷ ಯಾವುದೇ ಪ್ರಕರಣ ವರದಿಯಾಗಿಲ್ಲ, ವರ್ಷದಿಂದ ವರ್ಷಕ್ಕೆ ಪ್ರಕರಣಗಳ ಸಂಖ್ಯೆ ಇಳಿಮುಖವಾಗುತ್ತಿದೆ ಎಂದರು.

‘ಮಲೇರಿಯಾವನ್ನು ನಿಯಂತ್ರಿಸಲು ಕಾಯಿಲೆಯನ್ನು ಶೀಘ್ರ ಪತ್ತೆ ಹಚ್ಚಿ ಸಂಪೂರ್ಣ ಚಿಕಿತ್ಸೆ ನೀಡುವುದು ಅಗತ್ಯ. 24 ಗಂಟೆಗಳಲ್ಲಿ ರಕ್ತ ಲೇಪನಗಳ ಪರೀಕ್ಷೆ ಮಾಡುವುದು, ಜಿಲ್ಲೆಯ ವಲಸಿಗರ ಮತ್ತು ಹೊರರಾಜ್ಯದ ವಲಸಿಗರ ಸಮೀಕ್ಷೆ ಮಾಡುವುದು, ವಿವಿಧ ಕಾರ್ಯಕ್ರಮಗಳ ಮೂಲಕ ಜಾಗೃತಿ ಮೂಡಿಸುವುದು, ಮಲೇರಿಯಾ ಪತ್ತೆಯಾದ ಗ್ರಾಮ, ಪ್ರದೇಶಗಳಲ್ಲಿ ಸಂಪರ್ಕ ಅಥವಾ ಸಮೂಹ ರಕ್ತಲೇಪನಾ ಸಂಗ್ರಹ ಮಾಡುವುದು ಮತ್ತು ಐಇಸಿ ಚಟುವಟಿಕೆ ಮಾಡಿಸುವುದು, ಸ್ವಚ್ಛ ನೀರಿನ ತಾಣಗಳಿಗೆ ಲಾರ್ವಾಹಾರಿ ಮೀನು ಬಿಡುಗಡೆ ಮಾಡುವುದು ಹೀಗೆ ಹಲವು ನಿಯಂತ್ರಣ ಕ್ರಮಗಳನ್ನು ಕೈಗೊಳ್ಳಲಾಗಿದೆ’ ಎಂದು ವಿವರಿಸಿದರು.

ಮನೆಯ ಸುತ್ತಮುತ್ತ ತಗ್ಗು ಪ್ರದೇಶಗಳಲ್ಲಿ ನೀರು ಸಂಗ್ರಹವಾಗದಂತೆ ನೋಡಿಕೊಳ್ಳಬೇಕು. ನಿಂತ ನೀರಿಗೆ ವಾರಕ್ಕೊಮ್ಮೆ ಲಾರ್ವಾ ನಾಶಕ ಅಥವಾ ಸುಟ್ಟ ಎಂಜಿನ್ ಆಯಿಲ್, ಸೀಮೆ ಎಣ್ಣೆ ಹಾಕುವುದು. ಸ್ವ ರಕ್ಷಣೆಗಾಗಿ ಸೊಳ್ಳೆಪರದೆ, ಸಂಜೆ ಹೊತ್ತಲ್ಲಿ ಧೂಪದ ಹೊಗೆ ಹಾಕುವುದು, ಒಡೋಮಸ್, ಸೊಳ್ಳೆ ಬತ್ತಿ, ಸೊಳ್ಳೆ ನಿವಾರಕಗಳು, ಕಿಟಕಿಗಳಿಗೆ ಜಾಲರಿ ಬಡಿಸುವುದು, ಸೊಳ್ಳೆ ಬ್ಯಾಟ್ ಮುಂತಾದವುಗಳನ್ನು ಬಳಸಬೇಕು ಎಂದು ಸಲಹೆ ನೀಡಿದರು.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಅಶೋಕ್ ಕುಮಾರ್, ‘ಜನರಿಗೆ ಆರೋಗ್ಯ, ಸ್ವಚ್ಛತೆ ಬಗ್ಗೆ ತಿಳಿವಳಿಕೆ ಮೂಡಿಸಲು ಸಾಕಷ್ಟು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಕಲಾ ತಂಡ, ಸಂಗೀತ ಕಾರ್ಯಕ್ರಮಗಳ ಮೂಲಕ ಜನರಿಗೆ ಜಾಗೃತಿ ಮೂಡಿಸಲಾಗಿದೆ. ದೇಶವನ್ನು ಪೋಲಿಯೊ ಮುಕ್ತವನ್ನಾಗಿ ಮಾಡಿಲಾಗಿದೆ. ಅದೇ ರೀತಿ ಮಲೇರಿಯಾ ಮುಕ್ತವನ್ನಾಗಿ ಮಾಡಬೇಕಾಗಿದೆ’ ಎಂದರು.

ಜಿಲ್ಲಾ ವರದಿಗಾರರ ಕೂಟದ ಅಧ್ಯಕ್ಷ ಜಿ.ಎಂ. ಆರಾಧ್ಯ ಕಾರ್ಯಕ್ರಮ ಉದ್ಘಾಟಿಸಿದರು. ಪ್ರಧಾನ ಕಾರ್ಯದರ್ಶಿ ಮಂಜುನಾಥ ಕಾಡಜ್ಜಿ, ತಾಲ್ಲೂಕು ಆರೋಗ್ಯ ಶಿಕ್ಷಣ ಅಧಿಕಾರಿ ಡಾ.ತಿಪ್ಪೇಸ್ವಾಮಿ, ಪತ್ರಕರ್ತರು, ಆರೋಗ್ಯ ಕಾರ್ಯಕರ್ತರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.