ADVERTISEMENT

ಹರಿಹರ: ಪೂರ್ಣಕುಂಭಮೇಳ ಮೆರವಣಿಗೆಯ ಮೆರುಗು

ಹರಿಹರೇಶ್ವರ ದೇವಸ್ಥಾನದಲ್ಲಿ ಪೂಜೆ l ಕೊಡಿಯಾಲ ಹೊಸಪೇಟೆ ಪುಣ್ಯಕೋಟಿ ಆಶ್ರಮದಿಂದ ತುಂಗಾರತಿ ಇಂದು

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2022, 6:32 IST
Last Updated 8 ಏಪ್ರಿಲ್ 2022, 6:32 IST
ಹರಿಹರ ಸಮೀಪದ ಕೊಡಿಯಾಲ ಹೊಸಪೇಟೆಯ ಪುಣ್ಯಕೋಟಿ ಆಶ್ರಮದ ತುಂಗಾರತಿ ನಿಮಿತ್ತ ಗುರುವಾರ ಹರಿಹರದಲ್ಲಿ ಬಾಳೆಹೊನ್ನೂರಿನ ರಂಭಾಪುರಿ ಸ್ವಾಮೀಜಿಯವರ ಸಾರೋಟಿನ ಮೆರವಣಿಗೆ ನಡೆಸಲಾಯಿತು.
ಹರಿಹರ ಸಮೀಪದ ಕೊಡಿಯಾಲ ಹೊಸಪೇಟೆಯ ಪುಣ್ಯಕೋಟಿ ಆಶ್ರಮದ ತುಂಗಾರತಿ ನಿಮಿತ್ತ ಗುರುವಾರ ಹರಿಹರದಲ್ಲಿ ಬಾಳೆಹೊನ್ನೂರಿನ ರಂಭಾಪುರಿ ಸ್ವಾಮೀಜಿಯವರ ಸಾರೋಟಿನ ಮೆರವಣಿಗೆ ನಡೆಸಲಾಯಿತು.   

ಹರಿಹರ: ಸಮೀಪದ ಕೊಡಿಯಾಲ ಹೊಸಪೇಟೆ (ರಾಣೆಬೆನ್ನೂರು ತಾಲ್ಲೂಕು)ಯ ಪುಣ್ಯಕೋಟಿ ಆಶ್ರಮದಿಂದ ಶುಕ್ರವಾರದಂದು ಆಯೋಜಿಸಿರುವ 3ನೇ ತುಂಗಾರತಿ ಮುನ್ನಾ ದಿನವಾದ ಗುರುವಾರದಂದು ನಗರದಲ್ಲಿ ಪೂರ್ಣಕುಂಭಮೇಳದೊಂದಿಗೆ ಮೆರವಣಿಗೆ ನಡೆಸಲಾಯಿತು.

ಸಂಜೆ 6ರಿಂದ ಪ್ರಸಿದ್ಧ ಶ್ರೀ ಹರಿಹರೇಶ್ವರ ದೇವಸ್ಥಾನದಲ್ಲಿ ಬಾಳೆಹೊನ್ನೂರಿನ ರಂಭಾಪುರಿ ಸ್ವಾಮೀಜಿ, ಆಶ್ರಮದ ಬಾಲಯೋಗಿ ಜಗದೀಶ್ವರ ಸ್ವಾಮೀಜಿ ಹಾಗೂ ಜನಪ್ರತಿನಿಧಿಗಳ ಸಮ್ಮುಖದಲ್ಲಿ ಪೂಜೆಯನ್ನು ಸಲ್ಲಿಸಿ ರಂಭಾಪುರಿ ಸ್ವಾಮೀಜಿ ಅವರ ಸಾರೋಟಿನ ಮೆರವಣಿಗೆ ಆರಂಭಿಸಲಾಯಿತು.

ಅಲಂಕೃತ ಆನೆ, ಎತ್ತು, ಡೊಳ್ಳು, ತಮಟೆ, ಸೇರಿ ವಿವಿಧ ಮಂಗಳವಾದ್ಯ, ಕಲಾ ತಂಡಗಳು ಹಾಗೂ ಮುತ್ತೈದೆಯರ ಪೂರ್ಣಕುಂಭ ಮೇಳವು ಮೆರವಣಿಗೆಯ ಮೆರುಗನ್ನು ಹೆಚ್ಚಿಸಿತ್ತು. ಶಾಸಕ ಎಸ್. ರಾಮಪ್ಪ, ಮಾಜಿ ಶಾಸಕ ಬಿ.ಪಿ. ಹರೀಶ್, ಎಚ್.ಎಸ್. ಶಿವಶಂಕರ್, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಎಸ್.ಎಂ. ವೀರೇಶ್, ನಗರಸಭೆ ಅಧ್ಯಕ್ಷೆ ಶಾಹಿನಾ ದಾದಾಪೀರ್, ತಹಶೀಲ್ದಾರ್ ಕೆ.ಬಿ. ರಾಮಚಂದ್ರಪ್ಪ, ನಗರಸಭಾ ಸದಸ್ಯರು, ವಿವಿಧ ಸಂಘ, ಸಂಸ್ಥೆಗಳ ಪದಾಧಿಕಾರಿಗಳು ಮೆರವಣಿಗೆಯಲ್ಲಿ ಭಾಗವಹಿಸಿದ್ದರು.

ADVERTISEMENT

ಮೆರವಣಿಗೆಯು ದೇವಸ್ಥಾನ ರಸ್ತೆ, ಶಿವಮೊಗ್ಗ ವೃತ್ತ, ಮುಖ್ಯ ರಸ್ತೆ, ಗಾಂಧಿ ವೃತ್ತ, ಹಳೆ ಪಿ.ಬಿ. ರಸ್ತೆ ಮೂಲಕ ಕೊಡಿಯಾಲ ಹೊಸಪೇಟೆ ಪುಣ್ಯಕೋಟಿ ಆಶ್ರಮ ತಲುಪಿತು.

ಇಂದು ತುಂಗಾರತಿ: ಏ.8ರ ಸಂಜೆ 4ಕ್ಕೆ ಹರ, ಗುರು ಚರಮೂರ್ತಿಗಳ ಸಾನ್ನಿಧ್ಯದಲ್ಲಿ ಪುಣ್ಯಕೋಟಿ ಆಶ್ರಮ ಸಮೀಪದ ತುಂಗಭದ್ರಾ ನದಿ ತಟದಲ್ಲಿ ಸಂಗೀತ ಯುಕ್ತ ತುಂಗಾರತಿ ನೆರವೇರಲಿದೆ. ನಂತರ ನಡೆಯುವ ಧರ್ಮ ಸಭೆಯಲ್ಲಿ ನಾಡಿನ ವಿವಿಧ ಮಠಾಧೀಶರು ಭಾಗವಹಿಸುವರು.

ಗ್ರಾಮೀಣಾಭಿವೃದ್ದಿ ಸಚಿವ ಕೆ.ಎಸ್. ಈಶ್ವರಪ್ಪ ಅವರಿಗೆ ‘ಆಚಾರ್ಯ ವ ಮಹಾಚಾರ್ಯ ಸೇವಾ ವಿಭೂಷಣ’ ಪ್ರಶಸ್ತಿಯನ್ನು ಹಾಗೂ ‘ವಿಶ್ವಮಾತಾ ಪುಣ್ಯಕೋಟಿ ಪ್ರಶಸ್ತಿ’ಯನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರಿಗೆ ಪ್ರಧಾನ ಮಾಡಲಾಗುವುದು. ಕುಂಚಟಿಗ ಮಹಾಸಂಸ್ಥಾನದ ಶಾಂತವೀರ ಶ್ರೀ, ಮುಕ್ತಿ ಮಂದಿರ ಧರ್ಮಕ್ಷೇತ್ರದ ವಿಮಲ ರೇಣುಕ ಶ್ರೀ, ಸೊಲ್ಲಾಪುರದ ಜಯಸೀದ್ದೇಶ್ವರ ಶ್ರೀ, ಪ್ರವಾಸೋದ್ಯಮ ಸಚಿವ ಅನಂದ್ ಸಿಂಗ್, ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್, ತೋಟಗಾರಿಕೆ ಸಚಿವ ಮುನಿರತ್ನ, ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮದ್, ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್‌ ಕುಮಾರ್ ಸ್ವಾಮಿ ಮತ್ತಿತರರು ಭಾಗವಹಿಸುವರು ಎಂದು ಮಠದ ಪ್ರಕಟಣೆತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.