ADVERTISEMENT

ಬಿಜೆಪಿ ಹೆಚ್ಚು ಸ್ಥಾನ ಪಡೆಯಲು ಮುನ್ನುಡಿ ಬರೆಯಿರಿ: ಕೆ.ಎಸ್‌. ಈಶ್ವರಪ್ಪ ಸಲಹೆ

ಹಿಂದುಳಿದ ವರ್ಗಗಳ ಮೋರ್ಚಾದ ಸಭೆ

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2021, 3:02 IST
Last Updated 28 ನವೆಂಬರ್ 2021, 3:02 IST
ದಾವಣಗೆರೆಯ ದಾವಣಗೆರೆ-ಹರಿಹರ ಅರ್ಬನ್ ಬ್ಯಾಂಕ್ ಸಮುದಾಯ ಭವನದಲ್ಲಿ ಶನಿವಾರ ಬಿಜೆಪಿಯಿಂದ ಆಯೋಜಿಸಿದ್ದ, ಹಿಂದುಳಿದ ವರ್ಗಗಳ ಮೋರ್ಚಾದ ದಾವಣಗೆರೆ, ಚಿತ್ರದುರ್ಗ, ತುಮಕೂರು ಜಿಲ್ಲೆಗಳ ಪ್ರಮುಖರ ಸಭೆಯನ್ನು ಕೆ.ಎಸ್‌. ಈಶ್ವರಪ್ಪ ಉದ್ಘಾಟಿಸಿದರು. ಮುಖಂಡರಾದ ವೀರೇಶ್ ಹನಗವಾಡಿ, ಯಶಪಾಲ್ ಸುವರ್ಣ ಸುರೇಶಬಾಬು, ಸಿದ್ದೇಶ ಯಾದವ್, ಬಸವರಾಜ, ಶಂಕ್ರಪ್ಪ, ಬಿ.ಎಸ್. ಜಗದೀಶ, ಕೆ.ಆರ್. ಜಯಶೀಲಾ, ಹೇಮಂತಕುಮಾರ್ ಇದ್ದರು.
ದಾವಣಗೆರೆಯ ದಾವಣಗೆರೆ-ಹರಿಹರ ಅರ್ಬನ್ ಬ್ಯಾಂಕ್ ಸಮುದಾಯ ಭವನದಲ್ಲಿ ಶನಿವಾರ ಬಿಜೆಪಿಯಿಂದ ಆಯೋಜಿಸಿದ್ದ, ಹಿಂದುಳಿದ ವರ್ಗಗಳ ಮೋರ್ಚಾದ ದಾವಣಗೆರೆ, ಚಿತ್ರದುರ್ಗ, ತುಮಕೂರು ಜಿಲ್ಲೆಗಳ ಪ್ರಮುಖರ ಸಭೆಯನ್ನು ಕೆ.ಎಸ್‌. ಈಶ್ವರಪ್ಪ ಉದ್ಘಾಟಿಸಿದರು. ಮುಖಂಡರಾದ ವೀರೇಶ್ ಹನಗವಾಡಿ, ಯಶಪಾಲ್ ಸುವರ್ಣ ಸುರೇಶಬಾಬು, ಸಿದ್ದೇಶ ಯಾದವ್, ಬಸವರಾಜ, ಶಂಕ್ರಪ್ಪ, ಬಿ.ಎಸ್. ಜಗದೀಶ, ಕೆ.ಆರ್. ಜಯಶೀಲಾ, ಹೇಮಂತಕುಮಾರ್ ಇದ್ದರು.   

ದಾವಣಗೆರೆ: ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಕಾರ್ಯಕ್ರಮಗಳ ಬಗ್ಗೆ ಜಾಗೃತಿ ಮೂಡಿಸಿ ಸೌಲಭ್ಯಗಳನ್ನು ತಲುಪಿಸುವ ಮೂಲಕ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ 150 ಸ್ಥಾನಗಳನ್ನು ಪಡೆಯಲು ಮುನ್ನುಡಿ ಬರೆಯಬೇಕು ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಕೆ.ಎಸ್‌. ಈಶ್ವರಪ್ಪ ಕರೆ ನೀಡಿದರು.

ಇಲ್ಲಿನ ದಾವಣಗೆರೆ-ಹರಿಹರ ಅರ್ಬನ್ ಬ್ಯಾಂಕ್ ಸಮುದಾಯ ಭವನದಲ್ಲಿ ಶನಿವಾರ ಬಿಜೆಪಿಯಿಂದ ಆಯೋಜಿಸಿದ್ದ, ಹಿಂದುಳಿದ ವರ್ಗಗಳ ಮೋರ್ಚಾದ ದಾವಣಗೆರೆ, ಚಿತ್ರದುರ್ಗ, ತುಮಕೂರು ಜಿಲ್ಲೆಗಳ ಪ್ರಮುಖರ ಸಭೆಯಲ್ಲಿ ಅವರು ಮಾತನಾಡಿದರು.

‘ಬಿಜೆಪಿ ರಾಜ್ಯದಲ್ಲಿ ನಾಲ್ಕೈದು ಬಾರಿ ಅಧಿಕಾರ ನಡೆಸಿದೆ. ಇದುವರೆಗೆ ಪಕ್ಷ ಎದುರಿಸಿರುವ ವಿಧಾನಸಭೆ ಚುನಾವಣೆಗಳಲ್ಲಿ ಪೂರ್ಣ ಬಹುಮತ ಬಂದಿಲ್ಲ. ಈ ಬಾರಿ ಅದನ್ನು ಸಾಧ್ಯವಾಗಿಸಲು ಅವಕಾಶವಿದೆ. ಹಿಂದುಳಿದ ವರ್ಗ ಮತ್ತು ದಲಿತರನ್ನು ಬಿಜೆಪಿಗೆ ಹೆಚ್ಚಾಗಿ ಕರೆತರುವ ಮೂಲಕ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಪಕ್ಷಕ್ಕೆ ಪೂರ್ಣ ಬಹುಮತ ತಂದುಕೊಡುವ ಸಂಕಲ್ಪವನ್ನು ಒಬಿಸಿ ಮೋರ್ಚಾದ ಪದಾಧಿಕಾರಿಗಳು ಮಾಡಬೇಕು’ ಎಂದು ಹೇಳಿದರು.

ADVERTISEMENT

‘ಡಿ. 12ರಂದು ಬೆಂಗಳೂರಿನಲ್ಲಿ ಬಿಜೆಪಿಯ ಹಿಂದುಳಿದ ವರ್ಗಗಳ ಮೋರ್ಚಾದ ಪ್ರಮುಖರ ರಾಜ್ಯಮಟ್ಟದ ವಿಶೇಷ ಸಭೆ ಕರೆಯಲಾಗಿದೆ. ಅದರಲ್ಲಿ 3 ಸಾವಿರ ಮಂದಿ ಭಾಗವಹಿಸುವ ನಿರೀಕ್ಷೆಯಿದೆ. ಆ ಸಭೆಗೆ ಪ್ರತಿ ಮಂಡಲದಿಂದ 11 ಜನರು ಬರಬೇಕು’ ಎಂದು ಸೂಚಿಸಿದರು.

‘ಹಿಂದುಳಿದವರು, ದಲಿತರು, ಅಲ್ಪಸಂಖ್ಯಾತರು ನಮ್ಮವರು ಎಂದು ಕಾಂಗ್ರೆಸ್ ಹೇಳುತ್ತದೆ. ಹಾಗಿದ್ದರೆ ಕಾಂಗ್ರೆಸ್ ಹಲವು ರಾಜ್ಯಗಳಲ್ಲಿ ಸೋತು ಏಕೆ ಶಕ್ತಿ ಕಳೆದುಕೊಂಡಿದೆ? ಸಿದ್ದರಾಮಯ್ಯ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಏಕೆ ಸೋತರು? ಕಾಂಗ್ರೆಸ್ ಸರ್ಕಾರ ಮತ್ತೆ ಅಧಿಕಾರಕ್ಕೆ ಏಕೆ ಬರಲಿಲ್ಲ’ ಎಂದು ಪ್ರಶ್ನಿಸಿದರು.

‘ಆರ್‌ಎಸ್‌ಎಸ್ ಮತ್ತು ಬಿಜೆಪಿ ಇರದಿದ್ದರೆ ಈ ದೇಶ ಪಾಕಿಸ್ತಾನ ಆಗುತ್ತಿತ್ತು. ಇಡೀ ದೇಶ ಹಿಂದುತ್ವದ ಪರವಾಗಿ ನಿಲ್ಲುವುದಕ್ಕೆ ಬಿಜೆಪಿ ಕಾರಣ. ಇಲ್ಲದಿದ್ದರೆ ಕಾಂಗ್ರೆಸ್‌ನವರು ಈ ದೇಶವನ್ನು ಮಾರಾಟ ಮಾಡುತ್ತಿದ್ದರು’ ಎಂದರು. ಈ ಹಿಂದೆ ಬಿಜೆಪಿಯನ್ನು ಮುಂದುವರಿದವರ, ಉತ್ತರ ಭಾರತದವರ, ಪದವೀಧರರ ಪಕ್ಷ ಎಂದು ಕರೆಯುತ್ತಿದ್ದರು. ಈಗ ಅದು ಸರ್ವ ವ್ಯಾಪಿಯಾಗಿದೆ.

ಅರಣ್ಯಭೂಮಿ ಮಂಜೂರು: ಸಿದ್ದರಾಮಯ್ಯ ಅಧಿಕಾರದಲ್ಲಿದ್ದಾಗ ಸ್ವಾಮೀಜಿಗಳನ್ನು ಕರೆದು ಅವರಿಗೆ ಒಂದೊಂದು ಎಕರೆ ಭೂಮಿ, ಹಣ ನೀಡುವುದಾಗಿ ಹೇಳಿ ಅರಣ್ಯ ಭೂಮಿ ಮಂಜೂರು ಮಾಡಿದರು. ಅದಕ್ಕೆ ನ್ಯಾಯಾಲಯದಲ್ಲಿ ತಡೆಯಾಜ್ಞೆ ಸಿಕ್ಕಿದ್ದು ಇದುವರೆಗೂ ಅವರಿಗೆ ತಲುಪಿಲ್ಲ ಎಂದರು.

ಸರ್ಕಾರ ಮಾಡುವ ಕೆಲಸವನ್ನು ಮಠಾಧೀಶರು ಮಾಡುತ್ತಿದ್ದಾರೆ. ಶಾಲೆ, ಹಾಸ್ಟೆಲ್, ಆಸ್ಪತ್ರೆ ನಡೆಸುತ್ತಿದ್ದಾರೆ. ಅಂಥವರಿಗೆ ಒಂದೊಂದು ಎಕರೆ ಭೂಮಿ, ಹಣ ಕೊಡಿಸುವುದಾಗಿ ಭರವಸೆ ನೀಡಿದರು.

ರಾಜ್ಯ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ಅಧ್ಯಕ್ಷ ನೆ.ಲ ನರೇಂದ್ರ ಬಾಬು ಮಾತನಾಡಿ, ‘ದೇಶದಲ್ಲಿ ಶೇ 55ರಷ್ಟು ಹಿಂದುಳಿದವರಿದ್ದಾರೆ. ಈ ಸಮಾಜದವರಿಗೆ ಜಾಗೃತಿ ಮೂಡಿಸಬೇಕಿದೆ. ಮತಗಟ್ಟೆ, ಶಕ್ತಿ ಕೇಂದ್ರಗಳ ಮಟ್ಟದಲ್ಲಿ ಸಂಘಟಿತರಾಗಬೇಕಿದೆ’ ಎಂದು ಹೇಳಿದರು.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ವೀರೇಶ ಹನಗವಾಡಿ, ‘ಇತ್ತೀಚೆಗೆ ನಡೆದ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಹಿಂದುಳಿದ ವರ್ಗದವರೇ ಹೆಚ್ಚು ಸಂಖ್ಯೆಯಲ್ಲಿ ಗೆದ್ದಿದ್ದಾರೆ. ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸಬೇಕಿದೆ’ ಎಂದರು.

ಮೋರ್ಚಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಯಶಪಾಲ್ ಸುವರ್ಣ ಮಾತನಾಡಿದರು. ಮುಖಂಡರಾದ ಸುರೇಶಬಾಬು, ಸಿದ್ದೇಶ ಯಾದವ್, ಬಸವರಾಜ, ಶಂಕ್ರಪ್ಪ, ಬಿ.ಎಸ್. ಜಗದೀಶ, ಕೆ.ಆರ್. ಜಯಶೀಲಾ, ಹೇಮಂತಕುಮಾರ್
ಇದ್ದರು.

‘ದೇವರಾಜ ಅರಸು ಜತೆ ಸಿದ್ದರಾಮಯ್ಯ ಹೋಲಿಕೆ ಸಲ್ಲ‘

‘ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರನ್ನು ದೇವರಾಜ ಅರಸು ಅವರಿಗೆ ಹೋಲಿಸುತ್ತಿರುವುದು ಸರಿಯಲ್ಲ. ಅದು ನಾಚಿಕೆಗೇಡಿನ ಸಂಗತಿ‘ ಎಂದು ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದರು.

‘ದೇವರಾಜ ಅರಸು ಅವರ ಬಗ್ಗೆ ನಮಗೆ ಗೌರವವಿದೆ. ಆದರೆ ಸಿದ್ದರಾಮಯ್ಯ ಅವರು ಅರಸು ಅವರ ಹೆಸರು ಬಳಸಿಕೊಂಡು ಹಿಂದುಳಿದವರಿಗೆ ಮೋಸ ಮಾಡಿದ್ದಾರೆ. ಆ ವರ್ಗದವರಿಗೆ ಅವರು ಒಂದೂ ಒಳ್ಳೆಯ ಕೆಲಸವನ್ನು ಮಾಡಿಲ್ಲ. ಕಾಂಗ್ರೆಸ್‌ನವರು ಹಿಂದುಳಿದವರು, ದಲಿತರನ್ನು ಬಳಸಿಕೊಂಡ ಕಾಂಗ್ರೆಸ್ ಅವರು ಮೇಲೇಳಲು ಬಿಡಲಿಲ್ಲ. ಹೀಗಾಗಿ, ಈಗ ಹಿಂದುಳಿದ ವರ್ಗದವರು, ರಾಷ್ಟ್ರೀಯವಾದಿ ಮುಸ್ಲಿಮರು ಬಿಜೆಪಿಗೆ ಬರುತ್ತಿದ್ದಾರೆ’ ಎಂದು ಹೇಳಿದರು.

‘ಕೇಂದ್ರ ಸಚಿವ ಸಂಪುಟದಲ್ಲಿ 27 ಜನ ಹಿಂದುಳಿದ ವರ್ಗದವರಿಗೆ ಸಚಿವ ಸ್ಥಾನ ನೀಡಲಾಗಿದೆ. ಕಾಂಗ್ರೆಸ್ ಅವಧಿಯಲ್ಲಿ ಏಕೆ ಈ ಕೆಲಸ ಆಗಲಿಲ್ಲ’ ಎಂದು ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.