ADVERTISEMENT

ಚುನಾವಣೆ ಬಳಿಕ ಕುಮಾರಸ್ವಾಮಿ ಎಲ್ಲಿದೀಯಪ್ಪ ಎನ್ನಬೇಕಾಗುತ್ತದೆ: ಯಡಿಯೂರಪ್ಪ

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2019, 4:19 IST
Last Updated 5 ಏಪ್ರಿಲ್ 2019, 4:19 IST
   

ದಾವಣಗೆರೆ: ‘ಈ ಚುನಾವಣೆಯ ಬಳಿಕ ಕುಮಾರಸ್ವಾಮಿ ಎಲ್ಲಿದೀಯಪ್ಪ ಎಂದು ನಾವು- ನೀವೆಲ್ಲ ಹುಡುಕಬೇಕಾಗುತ್ತದೆ’ ಎಂದುಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ವ್ಯಂಗ್ಯ ಮಾಡಿದರು.

ಬಿಜೆಪಿ ಅಭ್ಯರ್ಥಿ ಸಂಸದ ಜಿಂ.ಎಂ. ಸಿದ್ದೇಶ್ವರ ಪರ ಪ್ರಚಾರ ನಡೆಸಲು ಯಡಿಯೂರಪ್ಪ ಅವರು ಬೆಳಿಗ್ಗೆ ಇಲ್ಲಿಗೆ ಬಂದಿದ್ದು, ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದರು.

‘ರಾಜ್ಯದಲ್ಲಿ ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡಿದ್ದೇ ಅಕ್ಷಮ್ಯ ಅಪರಾಧ. ಅವರಿಗೆ ಅಧಿಕಾರದ ಮದ ಹೆಚ್ಚಾಗಿದೆ. ಮಂಡ್ಯದಲ್ಲಿ ಸುಮಲತಾ ಗೆಲ್ಲುತ್ತಾರೆ. ಹಾಗೆಯೇ ತುಮಕೂರಿನಲ್ಲಿ ದೇವೇಗೌಡರು ಸೋಲು ನಿಶ್ಚಿತ‘ ಎಂದು ಭವಿಷ್ಯ ನುಡಿದರು.

ADVERTISEMENT

‘ಹಾಸನದಲ್ಲಿ ಐದು ಕಾಮಗಾರಿಗಳು ಪೂರ್ಣಗೊಳ್ಳುವ ಮೊದಲೇರಾಜ್ಯ ಸರ್ಕಾರ ಗುತ್ತಿಗೆದಾರರಿಗೆ ಮುಂಗಡವಾಗಿ ₹1,344 ಕೋಟಿಯನ್ನು ಬಿಡುಗಡೆ ಮಾಡಿದೆ.ಲೋಕಸಭಾ ಚುನಾವಣೆಗೆ ಬಳಸಿಕೊಳ್ಳುವ ಸಲುವಾಗಿಯೇ ಈ ರೀತಿ ಮಾಡಿದ್ದಾರೆ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಆರೋಪಿಸಿದರು.

‘ಇದನ್ನು ಖಾತರಿ ಪಡಿಸಿಕೊಂಡೇ ಆದಾಯ ತೆರಿಗೆ ಅಧಿಕಾರಿಗಳು ಗುತ್ತಿಗೆದಾರರ ಮನೆ ಮೇಲೆ ದಾಳಿ ನಡೆಸಿದ್ದಾರೆ. ರಾಜ್ಯದಲ್ಲಿರುವುದು 10% ಕಮಿಷನ್ ಸರ್ಕಾರವಲ್ಲ; ಇದು 20% ಕಮಿಷನ್ ಸರ್ಕಾರ ಎಂಬುದು ಸಾಬೀತಾಗಿದೆ’ ಎಂದು ಯಡಿಯೂರಪ್ಪ ಪ್ರತಿಪಾದಿಸಿದರು.

‘ದಾವಣಗೆರೆಯಲ್ಲಿ ಸಿದ್ದೇಶ್ವರ ಅವರು ಈಗಾಗಲೇ ಗೆದ್ದಾಗಿದೆ. ಎಷ್ಟು ಲಕ್ಷ ಮತಗಳ ಅಂತರದಲ್ಲಿ ಎಂಬುದನ್ನು ಲೆಕ್ಕ ಮಾಡಬೇಕು ಅಷ್ಟೇ. ರಾಜ್ಯದಲ್ಲಿ ಬಿಜೆಪಿ 22 ಸ್ಥಾನಗಳಲ್ಲಿ ಗೆಲುವು ಸಾಧಿಸುವುದು ನಿಶ್ಚಿತ. ದೇಶದಲ್ಲಿ ಬಿಜೆಪಿ ಸ್ವಂತ ಬಲದ ಮೇಲೆ 300 ಸ್ಥಾನ ಗಳಿಸಲಿದೆ. ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿ ಆಗಲಿದ್ದಾರೆ’ ಎಂದು ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.