ADVERTISEMENT

ಸಾಧನೆಯ ಬೆನ್ನತ್ತಿದ ಹೂ ಮಾರುವ ಯುವಕ

ಎಂಜಿನಿಯರಿಂಗ್‌ ಓದುತ್ತಿರುವ ನಿಟುವಳ್ಳಿ ಹುಡುಗನ ಕಾಯಕ

​ಪ್ರಜಾವಾಣಿ ವಾರ್ತೆ
Published 24 ಜುಲೈ 2020, 6:45 IST
Last Updated 24 ಜುಲೈ 2020, 6:45 IST
ಚಂದ್ರಶೇಖರ್
ಚಂದ್ರಶೇಖರ್   

ದಾವಣಗೆರೆ: ಇನ್‌ಫರ್ಮೇಶನ್‌ ಸೈನ್ಸ್‌ನಲ್ಲಿ ಎಂಜಿನಿಯರ್‌ ಆಗಬೇಕು, ಯುಪಿಎಸ್‌ಸಿ ಪರೀಕ್ಷೆ ಬರೆಯಬೇಕು ಎಂದೆಲ್ಲ ಕನಸು ಹೊತ್ತು ಸೈಕಲೇರಿ ಹೂವು ಮಾರುತ್ತಿರುವ ಈ ಹುಡುಗನ ಹೆಸರು ಚಂದ್ರಶೇಖರ್‌.

ಕನಸು ಕಟ್ಟಿದ್ದಷ್ಟೇ ಅಲ್ಲ. ಮೈಸೂರಿನ ನ್ಯಾಷನಲ್‌ ಇನ್‌ಸ್ಟಿಟ್ಯೂಟ್ ಆಫ್ ಎಂಜಿನಿಯರಿಂಗ್ (ಎನ್‌ಐಇ) ವಿದ್ಯಾ ಸಂಸ್ಥೆಯಲ್ಲಿ ಇನ್‌ಫರ್ಮೇಶನ್ ‌ಸೈನ್ಸ್ ಓದುತ್ತಿದ್ದಾನೆ. ನಾಲ್ಕು ವರ್ಷದ ಈ ಕೋರ್ಸ್‌ನಲ್ಲಿ ಎರಡು ವರ್ಷ ಪೂರೈಸಿದ್ದಾರೆ. ನಾಲ್ಕು ಸೆಮಿಸ್ಟರ್‌ಗಳು ಮುಗಿದಿವೆ. ಈಗ ಐದನೇ ಸೆಮಿಸ್ಟರ್‌ನಲ್ಲಿದ್ದಾರೆ. ಮುಗಿಸಿರುವ ನಾಲ್ಕು ಸೆಮಿಸ್ಟರ್‌ಗಳಲ್ಲಿ 10ಕ್ಕೆ 8.3 ಅಂಕ ಗಳಿಸಿದ್ದಾನೆ. ರಜೆ ಇರುವುದರಿಂದ ಹೂ ಮಾರಾಟ ಕಾಯಕ ಮುಂದುವರಿಸಿದ್ದಾರೆ.

‘ತಂದೆ ಮಂಜುನಾಥ ಅವರನ್ನು ನಾನು ಹತ್ತನೇ ತರಗತಿಯಲ್ಲಿರುವಾಗಲೇ ಕಳೆದುಕೊಂಡಿದ್ದೇವೆ. ಅಕ್ಷರದರಿವು ಇಲ್ಲದ ತಾಯಿ ಕರಿಬಸಮ್ಮ ನನ್ನನ್ನು ಮತ್ತು ಅಕ್ಕ ಜ್ಯೋತಿಯನ್ನು ಹೂವು ಕಟ್ಟಿ ಮಾರಿ ಸಾಕಿದ್ದಾರೆ. ಸಣ್ಣದರಿಂದಲೂ ಅವ್ವ ಹೂವು ಕಟ್ಟಿದಾಗ ನಾನು ಸೈಕಲ್‌ನಲ್ಲಿ ಮಾರುತ್ತಿದ್ದೆ. ಈಗಲೂ ರಜೆ ಇದ್ದಾಗ ಅದೇ ಕೆಲಸ ಮಾಡುತ್ತೇನೆ. ನಮ್ಮನ್ನು ಸಲಹುವ ತಾಯಿಗೆ ಸ್ವಲ್ಪ ನೆರವು ನೀಡಿದಂತಾಗುತ್ತದೆ’ ಎಂದು ಚಂದ್ರಶೇಖರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

ನಿಟುವಳ್ಳಿ ದುರ್ಗಾಂಬಿಕಾ ದೇವಸ್ಥಾನ ಬಳಿಯ ನಿವಾಸಿ ಆಗಿರುವ ಚಂದ್ರಶೇಖರ್‌ ಎಸ್ಸೆಸ್ಸೆಲ್ಸಿಯಲ್ಲಿ ಶೇ 94.38, ಪಿಯು ವಿಜ್ಞಾನ ವಿಭಾಗದಲ್ಲಿ ಶೇ 93.5 ಅಂಕ ಪಡೆದ ಪ್ರತಿಭಾವಂತ. ಅಕ್ಕ ಬಿ.ಕಾಂ ಮುಗಿಸಿ ಉದ್ಯೋಗದ ಹುಡುಕಾಟದಲ್ಲಿದ್ದಾರೆ.

‘ಸೈಕಲಲ್ಲಿ ಹೂವು ಮಾರುತ್ತಿದ್ದೆ. ಈಗ ದಿನಕ್ಕೆ ₹ 20 ಬಾಡಿಗೆ ನೀಡಿ ತಳ್ಳುಗಾಡಿಯಲ್ಲಿ ಹೂ ಮಾರಾಟ ಮಾಡುತ್ತಿದ್ದೇನೆ. ದಿನಕ್ಕೆ ₹ 200ರಿಂದ ₹ 300 ಉಳಿಯುತ್ತದೆ. ಮೈಸೂರಿನಲ್ಲಿ ಓದುವ ಸಮಯದಲ್ಲೂ ಬಿಡುವಿದ್ದಾಗ ಇಂಟರ್ನ್‌ಶಿಪ್‌ ಆಡಿಟ್‌ ಪಾರ್ಟ್‌ ಟೈಮ್‌ ಕೆಲಸಕ್ಕೆ ಹೋಗುತ್ತಿದ್ದೆ. ಪುಸ್ತಕದ ಖರ್ಚನ್ನು ಹೊಂದಿಸಿಕೊಳ್ಳುತ್ತಿದ್ದೆ’ ಎಂದು ವಿವರಿಸಿದರು.

‘ಮಕ್ಕಳು‌ ಓದುತ್ತಿದ್ದಾರೆ ಎಂದರೆ ಈಗಿನ ಕಾಲದ ಪೋಷಕರು ಮಕ್ಕಳಿಗೆ ಸ್ವಲ್ಪವೂ ತೊಂದರೆಯಾಗದಂತೆ ನೋಡಿಕೊಳ್ಳುತ್ತಾರೆ. ಮನೆಯಲ್ಲಿ‌ ಸ್ವಲ್ಪವೂ ಕೆಲಸ‌ ಕೊಡದೇ ಓದಲು ಪ್ರತ್ಯೇಕ ಕೊಠಡಿ, ಕಂಪ್ಯೂಟರ್‌ ವ್ಯವಸ್ಥೆ, ಓಡಾಡಲು ಬೈಕ್ ಎಲ್ಲ ಕೊಡಿಸುತ್ತಾರೆ. ಅಂಥ ಮಕ್ಕಳಿಗೆ ಪೋಷಕರ ಕಷ್ಟವೂ ಅರ್ಥವಾಗುವುದಿಲ್ಲ. ಸಮಾಜದ ಕಷ್ಟವೂ ಅರ್ಥವಾಗುವುದಿಲ್ಲ. ಅಂಥವರ ಮಧ್ಯೆ ಕಷ್ಟಜೀವಿಯಷ್ಟೇ ಆಗದೇ ಅಗಾಧ ಕನಸುಗಳನ್ನು ಹೊತ್ತು, ನನಸು ಮಾಡಲು ಮುನ್ನಡೆಯುತ್ತಿರುವ, ಯಾವ ಕೀಳರಿಮೆಯನ್ನೂ ಇಟ್ಟುಕೊಳ್ಳದೇ ಹೂವು ಮಾರುತ್ತಿರುವ ಚಂದ್ರಶೇಖರ್‌ ಯುವಪೀಳಿಗೆಗೆ ಆದರ್ಶ. ಕಾಳಜಿ ಇರುವ ಪ್ರಬುದ್ಧ ವಿದ್ಯಾರ್ಥಿ. ಅವನು ನಮ್ಮ ಮನೆ ಮುಂದಿನ ರಸ್ತೆಯಲ್ಲೇ ಹೂವು ಮಾರಾಟ ಮಾಡುತ್ತಾ ಹೋಗುತ್ತಿರುತ್ತಾನೆ’ ಎಂದು ಸರಸ್ವತಿ ನಗರದ ನಿವಾಸಿ, ಮಾಗನೂರು ಬಸಪ್ಪ ಪಿಯು ಕಾಲೇಜು ಪ್ರಾಂಶುಪಾಲ ಪ್ರಸಾದ್‌ ಬಂಗೇರ ಎಸ್‌. ಅಭಿಪ್ರಾಯ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.