ADVERTISEMENT

ಅಕ್ಕಿಹೊಂಡ ಮಾರುಕಟ್ಟೆ ಸ್ಥಳಾಂತರ ಇಂದು?

ಜಿಲ್ಲಾಡಳಿತ, ವರ್ತಕರ ನಡುವೆ ಹಗ್ಗ-ಜಗ್ಗಾಟ: ನ್ಯಾಯಾಂಗ ನಿಂದನೆಯ ತೂಗುಗತ್ತಿ

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2013, 6:20 IST
Last Updated 5 ಸೆಪ್ಟೆಂಬರ್ 2013, 6:20 IST

ಹುಬ್ಬಳ್ಳಿ: ಇಲ್ಲಿನ ಅಕ್ಕಿಹೊಂಡ ಮಾರುಕಟ್ಟೆ ಯನ್ನು ಅಮರಗೋಳದ ಎಪಿಎಂಸಿ ಪ್ರಾಂಗಣಕ್ಕೆ ಸ್ಥಳಾಂತರಿಸುವ ವಿಚಾರ ವರ್ತಕರು ಹಾಗೂ ಜಿಲ್ಲಾಡಳಿತದ ನಡುವೆ ಸಂಘರ್ಷಕ್ಕೆ ಕಾರಣವಾಗಿದೆ.

ಹೈಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಇದೇ 5ರಿಂದ ಅಕ್ಕಿಹೊಂಡ ಮಾರುಕಟ್ಟೆಯನ್ನು ಅಮರ ಗೋಳಕ್ಕೆ ಸ್ಥಳಾಂತರಿಸಲು ಒಂದೆಡೆ ಜಿಲ್ಲಾಡಳಿತ ಸಿದ್ಧತೆ ನಡೆಸಿದ್ದರೆ, ಇನ್ನೊಂದೆಡೆ ಬಲವಂತವಾಗಿ ಒಕ್ಕಲೆಬ್ಬಿಸಿದರೆ ವ್ಯಾಪಾರ ಬಂದ್ ಮಾಡಿ ಪ್ರತಿಭಟನೆಗೆ ಮುಂದಾಗುವುದಾಗಿ ವರ್ತಕರ ಸಂಘ ಬೆದರಿಕೆ ಹಾಕಿದೆ.

ಕಟ್ಟುನಿಟ್ಟಿನ ಜಾರಿ: ನ್ಯಾಯಾಲದ ಆದೇಶದಂತೆ ಅಕ್ಕಿಹೊಂಡ ಮಾರುಕಟ್ಟೆಯಲ್ಲಿ ಬುಧವಾರ ಮಧ್ಯರಾತ್ರಿಯ ನಂತರ ಯಾವುದೇ ವಹಿವಾಟಿಗೆ ಅವಕಾಶ ನೀಡದಂತೆ ಹಾಗೂ ಕಡ್ಡಾಯವಾಗಿ ಅಲ್ಲಿಂದ ಸ್ಥಳಾಂತರಿಸುವಂತೆ ಇತ್ತೀಚೆಗೆ ಎಪಿಎಂಸಿ ಆಡಳಿತದೊಂದಿಗೆ ಧಾರವಾಡದಲ್ಲಿ ಸಭೆ ನಡೆಸಿರುವ ಜಿಲ್ಲಾಧಿಕಾರಿ ಸಮೀರ್ ಶುಕ್ಲಾ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಪೊಲೀಸ್ ಇಲಾಖೆ ಹಾಗೂ ಮಹಾನಗರ ಪಾಲಿಕೆ ಅಧಿಕಾರಿಗಳ ಸಹಾಯ ಪಡೆದು ಗುರುವಾರ ಬೆಳಿಗ್ಗೆಯಿಂದ ಅಲ್ಲಿ ವಹಿವಾಟು ನಡೆಯದಂತೆ ನೋಡಿಕೊಳ್ಳಲು ತಿಳಿಸಿರುವ ನೀಡಿರುವ ಅವರು, ಅಕ್ಕಿಹೊಂಡದೊಳಗೆ ಉತ್ಪನ್ನಗಳನ್ನು ಹೊತ್ತು ತರುವ ಯಾವುದೇ ಲಾರಿಗೆ ಒಳಗೆ ಪ್ರವೇಶ ನೀಡದಂತೆ ಸೂಚನೆ ನೀಡಿದ್ದಾರೆ. ನ್ಯಾಯಾಲಯದ ಆದೇಶ ಉಲ್ಲಂಘಿಸಿ ಅಲ್ಲಿ ವ್ಯಾಪಾರ ನಡೆಸಲು ಮುಂದಾ ಗುವ ವರ್ತಕರ ವಿರುದ್ಧ ಮೊಕದ್ದಮೆ ದಾಖಲಿ ಸಲು ತಿಳಿಸಿದ್ದಾರೆ.

ಈ ಮಧ್ಯೆ ಅಕ್ಕಿಹೊಂಡ ಸ್ಥಳಾಂತರದ ವಿಚಾ ರದಲ್ಲಿ ಜಿಲ್ಲಾಧಿಕಾರಿ ಅವರ ಸೂಚನೆಯಂತೆ ಇಲಾಖೆ ಕಾರ್ಯನಿರ್ವಹಿಸಲಿದೆ ಎಂದು ಪೊಲೀಸ್ ಆಯುಕ್ತ ಬಿ.ಎ.ಪದ್ಮನಯನ ಪತ್ರಿಕೆಗೆ ಪ್ರತಿಕ್ರಿಯಿಸಿದರು.

`ನ್ಯಾಯಾಂಗ ನಿಂದನೆ ಆಗಲಿದೆ'
`ನ್ಯಾಯಾಲಯ ಒಪ್ಪಿಗೆ ನೀಡದೇ ಅಕ್ಕಿ ಹೊಂಡದ ವರ್ತಕರು ಗುರುವಾರದಿಂದ ಅಲ್ಲಿ ವ್ಯಾಪಾರ ಮಾಡುವಂತಿಲ್ಲ. ಅದಕ್ಕೆ ಒಪ್ಪದಿದ್ದಲ್ಲಿ ನ್ಯಾಯಾಂಗ ನಿಂದನೆ ಆಗಲಿದೆ' ಎಂದು ಇಲ್ಲಿನ ಎಪಿಎಂಸಿ ಕಾರ್ಯದರ್ಶಿ ಕೆ.ಕೆ.ಎಸ್.ವಿ. ಪ್ರಸಾದ್ ಹೇಳಿದರು.

ಅಕ್ಕಿಹೊಂಡ ಸ್ಥಳಾಂತರ ಪ್ರಕ್ರಿಯೆ ಕುರಿತು `ಪತ್ರಿಕೆ'ಯೊಂದಿಗೆ ಮಾತನಾಡಿದ ಅವರು, ಮಾರ್ಚ್ 5ರಂದು 92 ಮಂದಿ ವರ್ತಕರು ಹೈಕೋರ್ಟ್ ಎದುರು ಬರೆದುಕೊಟ್ಟಂತೆ ಸ್ಥಳಾಂತರಗೊಳ್ಳುವುದು ಅನಿವಾರ್ಯ. ಆರು ತಿಂಗಳ ನಂತರ ನಾವೇ ಮಂದಾಗಿ ಎಪಿಎಂಸಿ ಪ್ರಾಂಗಣಕ್ಕೆ ತೆರಳುವುದಾಗಿ ಲಿಖಿತವಾಗಿ ತಿಳಿಸಿದ್ದರು. ಆದ್ದರಿಂದ ನ್ಯಾಯಾಲಯದ ಆದೇಶ ಪಾಲನೆ ಅವರ ಕರ್ತವ್ಯವಾಗಿದೆ ಎಂದರು.


ಕೃಷಿ ಉತ್ಪನ್ನ ಮಾರುಕಟ್ಟೆ ಇಲಾಖೆ ಗುರುತಿಸಿದ 112 ಉತ್ಪನ್ನಗಳನ್ನು ಇನ್ನು ಮುಂದೆ ಅಕ್ಕಿಹೊಂಡದಲ್ಲಿ ಮಾರಾಟ ಮಾಡು ವಂತಿಲ್ಲ. ನಿಯಮ ಮೀರಿ ವರ್ತಕರು ಮಾರಾಟ ಮಾಡಿದಲ್ಲಿ ಕಾನೂನು ಕ್ರಮ ಕೈಗೊಳ್ಳಲಾ ಗುವುದು.

ಎಪಿಎಂಸಿ ಪ್ರಾಂಗಣದಲ್ಲಿ ಈಗಾಗಲೇ ಹೊಸದಾಗಿ ಲೈನ್ ಹಾಕಿ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ. ಸಾಕಷ್ಟು ಖಾಲಿ ಜಾಗ ಇರುವುದರಿಂದ ಪಾರ್ಕಿಂಗ್ ಸಮಸ್ಯೆ ಇಲ್ಲ. ಚರಂಡಿ, ರಸ್ತೆ ಸಿದ್ಧಗೊಂಡಿವೆ. ವಿದ್ಯುತ್ ಲೈನ್ ಎಳೆಯಲಾಗಿದೆ. ಈಗಾಗಲೇ ಸಿಂಡಿಕೇಟ್ ಬ್ಯಾಂಕ್‌ನ ಶಾಖೆ ಅಲ್ಲಿದ್ದು, ಶೀಘ್ರ ಸ್ಟೇಟ್‌ಬ್ಯಾಂಕ್ ಹಾಗೂ ಆಕ್ಸಿಸ್ ಬ್ಯಾಂಕ್ ಶಾಖೆಗಳು ಆರಂಭವಾಗಲಿವೆ. ವರ್ತಕರು ಅರ್ಜಿ ಕೊಡದೇ ದೂರವಾಣಿ ಸೌಕರ್ಯ ಕಲ್ಪಿಸಲು ಆಗುವುದಿಲ್ಲ ಎಂದರು.

ಹೈಕೋರ್ಟ್ ಆದೇಶ ಪಾಲನೆ
ಜಿಲ್ಲಾಡಳಿತ ಹೈಕೋರ್ಟ್ ಆದೇಶ ಪಾಲನೆ ಮಾಡಲಿದೆ. ಮಂಗಳೂರು ಎಪಿಎಂಸಿ ಮಾದರಿಯಲ್ಲಿ ಅಕ್ಕಿಹೊಂಡಕ್ಕೆ ಉಪಮಾರುಕಟ್ಟೆಯಾಗಿ ಮಾನ್ಯತೆ ನೀಡುವಂತೆ ಹೈಕೋರ್ಟ್‌ನಿಂದ ನಮಗೆ ಯಾವುದೇ ಆದೇಶ ಬಂದಿಲ್ಲ. ಹೊಸದಾಗಿ ಅಂತಹ ಆದೇಶ ಬಂದಿದ್ದಲ್ಲಿ ಸಂಘದವರು ಆದೇಶಪತ್ರ ತಂದುಕೊಡಲಿ. ಬುಧವಾರ ಮಧ್ಯರಾತ್ರಿಯ ನಂತರ ಅಲ್ಲಿ ವಹಿವಾಟು ನಡೆದಲ್ಲಿ ನ್ಯಾಯಾಂಗ ನಿಂದನೆ ಹಾಗೂ ಎಪಿಎಂಸಿ ಕಾಯ್ದೆ ಉಲ್ಲಂಘನೆ ಅಡಿ ಕ್ರಮ ಕೈಗೊಳ್ಳಲಾಗುವುದು.
 -ಸಮೀರ್‌ಶುಕ್ಲಾ, ಜಿಲ್ಲಾಧಿಕಾರಿ

ಇಲಾಖೆಯ ವಿವೇಚನೆ...
ಮಂಗಳೂರು ಮಾದರಿಯಲ್ಲಿ ಅಕ್ಕಿಹೊಂಡಕ್ಕೆ ಮಾರು ಕಟ್ಟೆ ಮನ್ನಣೆ ನೀಡುವಂತೆ ಮಂಗಳವಾರ  ಹೈಕೋರ್ಟ್ ಹೊಸದಾಗಿ ಯಾವುದೇ ಆದೇಶ ನೀಡಿಲ್ಲ. ವರ್ತಕರ ಸಂಘ ಸಲ್ಲಿಸಿದ ಮನವಿ ಪತ್ರವನ್ನು ನ್ಯಾಯಾಲಯ ಕೃಷಿ ಮಾರುಕಟ್ಟೆ ಇಲಾಖೆಗೆ ಕೊಟ್ಟು ಪರಿಶೀಲಿಸಲು ಹೇಳಿದೆ. ಮನವಿಗೆ ಮನ್ನಣೆ ಕೊಡುವ ಅಥವಾ ಬಿಡುವ ಅಧಿಕಾರವನ್ನು ಇಲಾಖೆಗೆ ಬಿಟ್ಟಿದೆ.
- ಗಿರೀಶ್, ಕೃಷಿ ಮಾರುಕಟ್ಟೆ ಇಲಾಖೆ ಉಪನಿರ್ದೇಶಕ

`ಎರಡೂ ಕಡೆ ವ್ಯಾಪಾರಕ್ಕೆ ಅವಕಾಶ ನೀಡಿ'
ಹುಬ್ಬಳ್ಳಿ: ಅಕ್ಕಿಹೊಂಡ ಹಾಗೂ ಎಪಿಎಂಸಿ ಪ್ರಾಂಗಣ ಎರಡೂ ಕಡೆ ವ್ಯಾಪಾರ ಮಾಡಲು ಅವಕಾಶ ಮಾಡಿಕೊಟ್ಟಲ್ಲಿ ಮಾತ್ರ ಸ್ಥಳಾಂತರಕ್ಕೆ ಒಪ್ಪುವುದಾಗಿ ಅಕ್ಕಿಹೊಂಡ ವರ್ತಕರ ಸಂಘದ ಅಧ್ಯಕ್ಷ ಜಿ.ಎಂ.ಚಿಕ್ಕಮಠ ಹೇಳಿದರು.

ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲಾಡಳಿತ ಬಲವಂತವಾಗಿ ಒಕ್ಕಲೆಬ್ಬಿಸಲು ಮುಂದಾದಲ್ಲಿ ವ್ಯಾಪಾರ ಬಂದ್ ಮಾಡಿ ಪ್ರತಿಭಟನೆ ನಡೆಸಲು ಸಂಘದ ವತಿಯಿಂದ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಹೇಳಿದರು.

`ವರ್ತಕರ ಸಂಘದ ಈ ನಿಲುವು ನ್ಯಾಯಾಂಗ ನಿಂದನೆಯಲ್ಲವೇ' ಎಂಬ ಪ್ರಶ್ನೆಗೆ ಆ ಬಗ್ಗೆ  ವಕೀಲರೊಂದಿಗೆ ಚರ್ಚಿಸಿ ಸ್ಪಷ್ಟನೆ ನೀಡುವುದಾಗಿ ಚಿಕ್ಕಮಠ ತಿಳಿಸಿದರು.

`ಸೆಪ್ಟಂಬರ್ 5ರಿಂದ ಎಪಿಎಂಸಿ ಪ್ರಾಂಗಣಕ್ಕೆ ಸ್ಥಳಾಂತರಗೊಳ್ಳುವುದಾಗಿ ಹೈಕೋರ್ಟ್‌ಗೆ 92 ಮಂದಿ ವ್ಯಾಪಾರಸ್ಥರು ಬರೆದುಕೊಟ್ಟಿರುವುದು ನಿಜ. ಆದರೆ ಅಷ್ಟರೊಳಗೆ ಅಲ್ಲಿ ಮೂಲ ಸೌಕರ್ಯ ಕಲ್ಪಿಸಿಕೊಡುವುದಾಗಿ ನ್ಯಾಯಾಲಯದ ಎದುರು ಹೇಳಿದ್ದ ಮಾತನ್ನು ಎಪಿಎಂಸಿ ಆಡಳಿತವೂ ಉಳಿಸಿಕೊಂಡಿಲ್ಲ' ಎಂದು ಆಕ್ರೋಶ ವ್ಯಕ್ತಪಡಿಸಿದರು.

ಅಕ್ಕಿಹೊಂಡ ಸ್ಥಳಾಂತರಕ್ಕೆ ಎಪಿಎಂಸಿ ಪ್ರಾಂಗಣದಲ್ಲಿ ನಿಗದಿಗೊಳಿಸಿರುವ ಜಾಗದಲ್ಲಿ ಈಗಲೂ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಿಲ್ಲ. ಒಳಚರಂಡಿ, ರಸ್ತೆ, ವಿದ್ಯುತ್, ದೂರವಾಣಿ, ಪಾರ್ಕಿಂಗ್ ಸೌಲಭ್ಯ ಕಲ್ಪಿಸಿಲ್ಲ. ವ್ಯವಹಾರ ನಡೆಸಲು ಬ್ಯಾಂಕ್ ಸೌಲಭ್ಯ ಇಲ್ಲ. ಸೂಕ್ತ ಭದ್ರತೆಯೂ ಇಲ್ಲ. ಎಪಿಎಂಸಿಗೆ ಸ್ಥಳಾಂತರ ಮಾಡಿದಲ್ಲಿ 20 ಸಾವಿರ ಕುಟುಂಬಗಳು ಬೀದಿಗೆ ಬೀಳಲಿವೆ ಎಂದು ಚಿಕ್ಕಮಠ ಆರೋಪಿಸಿದರು.

ಸುಪ್ರಿಂಕೋರ್ಟ್‌ಗೆ ಅರ್ಜಿ: ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಈಗಾಗಲೇ ಅಕ್ಕಿಹೊಂಡ ವರ್ತಕರ ಸಂಘದ ವತಿಯಿಂದ ಸುಪ್ರಿಂಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಲಾಗಿದೆ. ಈ ಸಂದರ್ಭದಲ್ಲಿ ಮಾರುಕಟ್ಟೆ ಸ್ಥಳಾಂತರ ಮಾಡುವುದು ಸರಿಯಲ್ಲ ಎಂದರು.

ಅಕ್ಕಿಹೊಂಡ ಮಾರುಕಟ್ಟೆಯನ್ನು 2007ರಲ್ಲಿ ಡಿನೋಟಿಫಿಕೇಶನ್ ಮಾಡಿದ್ದ ಸರ್ಕಾರ 2008ರಲ್ಲಿ ಮತ್ತೆ ಅಲ್ಲಿನ ವರ್ತಕರಿಗೆ 10 ವರ್ಷಗಳ ಕಾಲ ವ್ಯಾಪಾರ ನಡೆಸಲು ಅವಕಾಶ ಮಾಡಿಕೊಟ್ಟಿದೆ. 2018ರವರೆಗೆ ಲೈಸೆನ್ಸ್ ಇದ್ದು, ಈಗ ಸ್ಥಳಾಂತರಕ್ಕೆ ಮುಂದಾಗಿರುವುದೇಕೆ ಎಂದು ಪ್ರಶ್ನಿಸಿದರು.

ಸುದ್ದಿಗೋಷ್ಠಿಯಲ್ಲಿ ಸಂಘದ ಸದಸ್ಯರಾದ ಡಿ.ಡಿ.ಹುಬ್ಬಳ್ಳಿ, ರಾಜು ಶೀಲವಂತರ, ಬಾಬಣ್ಣ ಬುರಟ್ಟಿ, ಬಸವರಾಜ ಮುಷ್ಠಿ, ಪ್ರಭು ಅಂಗಡಿ ಮತ್ತಿತರರು ಹಾಜರಿದ್ದರು.

`ವ್ಯಾಪಾರ ಹಾಳು ಮಾಡಿಕೊಳ್ಳಲು ಸಿದ್ಧವಿಲ್ಲ'
`ಗ್ರಾಹಕರು ಇದ್ದ ಕಡೆ ನಾವು ಇರಲಿದ್ದೇವೆ. ಅಕ್ಕಿಹೊಂಡ ಬಿಟ್ಟು ಎಪಿಎಂಸಿ ಪ್ರಾಂಗಣಕ್ಕೆ ಹೋಗಿ ನಮ್ಮ ವ್ಯಾಪಾರ ಹಾಳು ಮಾಡಿಕೊಳ್ಳುವುದಕ್ಕೆ ಸಿದ್ಧರಿಲ್ಲ. ನಮ್ಮನ್ನು ಸ್ಥಳಾಂತರ ಮಾಡುವ ಬದಲು ಕಿರಾಣಿ ವಸ್ತುಗಳನ್ನು ದೊಡ್ಡ ಪ್ರಮಾಣದಲ್ಲಿ ಮಾರಾಟ ಮಾಡುವ ಬಿಗ್‌ಬಜಾರ್, ಈಸಿಡೇ ಮಾಲ್‌ಗಳನ್ನೂ ಸ್ಥಳಾಂತರಿಸಲಿ.
 -ಜಿ.ಎಂ.ಚಿಕ್ಕಮಠ, ಅಕ್ಕಿಹೊಂಡ ವರ್ತಕರ ಸಂಘದ ಅಧ್ಯಕ್ಷ

ರಿಯಲ್ ಎಸ್ಟೇಟ್ ಮಾಫಿಯಾದ ಒತ್ತಡ
`ದೊಡ್ಡ ಊರು ಎಂದಾಗ ಟ್ರಾಫಿಕ್ ದಟ್ಟಣೆಯ ಸಮಸ್ಯೆ ಇರುತ್ತದೆ. ಅದೇ ಕಾರಣ ಒಡ್ಡಿ ಅಕ್ಕಿಹೊಂಡ ಸ್ಥಳಾಂತರ ಸಲ್ಲ. ಇದರ ಹಿಂದೆ ಆ ಭಾಗದ ರಿಯಲ್ ಎಸ್ಟೇಟ್ ಮಾಫಿಯಾದ ಕೈವಾಡ ಇದೆ. ಅಷ್ಟಕ್ಕೂ ಮಂಗಳೂರು ಎಪಿಎಂಸಿ ಮಾದರಿಯಲ್ಲಿಯೇ ಹುಬ್ಬಳ್ಳಿಯ ಅಕ್ಕಿಹೊಂಡ ಮಾರುಕಟ್ಟೆಗೆ ಉಪಮಾರುಕಟ್ಟೆಯ ಸ್ಥಾನಮಾನ ನೀಡುವಂತೆ ಮಂಗಳವಾರ ಧಾರವಾಡದ ಹೈಕೋರ್ಟ್ ಪೀಠ ಸರ್ಕಾರಕ್ಕೆ ಆದೇಶಿಸಿದೆ.'
-ರಮೇಶ್ ಬಾಫಣಾ, ವರ್ತಕರ ಸಂಘದ ಸದಸ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.