ADVERTISEMENT

`ಅಖಂಡ ಭಾರತ ದರ್ಶನ' ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 3 ಜುಲೈ 2013, 5:52 IST
Last Updated 3 ಜುಲೈ 2013, 5:52 IST

ಧಾರವಾಡ: `ಭಾರತ ದೇಶದ ಸಂಸ್ಕೃತಿಗೆ ಬುದ್ಧ, ಬಸವಾದಿ ಶರಣರಿಂದ ಹಿಡಿದು ಮಹಾತ್ಮ ಗಾಂಧೀಜಿವರೆಗೂ ಅನೇಕರು ವಿವಿಧ ರೀತಿಯಿಂದ ಅಪಾರವಾದ ಕೊಡುಗೆ ನೀಡಿದ್ದಾರೆ' ಎಂದು ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಡಾ.ಬಿ.ಕೆ.ಎಸ್.ವರ್ಧನ್ ಹೇಳಿದರು.

ಕಾರವಾರ ಸದಾಶಿವಗಡದ ಶ್ರೀ ಭಾರತ ಮಾತಾ ಮಂದಿರವು ರೈಜಿಂಗ್ ಸ್ಟಾರ್ ಆರ್ಟ್ ಮತ್ತು ಕಲ್ಚರಲ್ ಅಕಾಡೆಮಿ ಸಹಯೋಗದೊಂದಿಗೆ ಮಂಗಳವಾರ ನಗರದಲ್ಲಿ ಆಯೋಜಿಸಿದ್ದ `ಅಖಂಡ ಭಾರತ ದರ್ಶನ' 500 ಡಿಜಿಟಲ್ ಬ್ಯಾನರ್‌ಗಳ ಮೂಲಕ ಛಾಯಾ ಚಿತ್ರಗಳ ಪ್ರದರ್ಶನವನ್ನು ಉದ್ಘಾಟಿಸಿ ಅವರು ಮಾತನಾಡಿದರು.

`ಭಾರತ ದೇಶದಲ್ಲಿ ಎಲ್ಲರೂ ಸಾಮಾಜಿಕ ತಳಹದಿಯ ಮೇಲೆ ಬದುಕುವ ಪ್ರಕ್ರಿಯೆ ಪ್ರಾಚೀನ ಕಾಲದಿಂದಲೂ ಬಂದಿದೆ. ಆದರೆ, ಇತ್ತೀಚಿನ ಬೆಳವಣಿಗೆಯಲ್ಲಿ ಕೆಲವು ಹಿತಾಸಕ್ತಿಗಳ ಆಧಾರದ ಮೇಲೆ ನಮ್ಮ ಧರ್ಮ ಶ್ರೇಷ್ಠ, ನಿಮ್ಮ ಧರ್ಮ ಶ್ರೇಷ್ಠ ಎಂಬ ಪರಂಪರೆ ಬೆಳೆದುಕೊಂಡು ಬಂದಿದೆ. ಸ್ವಾತಂತ್ರ್ಯಾನಂತರ ನಮ್ಮ ಸಂಸ್ಕೃತಿಯನ್ನು ಅರ್ಥ ಮಾಡಿಕೊಳ್ಳುವಲ್ಲಿ ಯಾವುದೋ ಶಕ್ತಿ ನಮ್ಮನ್ನು ಕಟ್ಟಿಹಾಕಿದೆ. ಆದರೆ, ಒಟ್ಟಾರೆಯಾಗಿ ನಾವೆಲ್ಲರೂ ಭಾರತೀಯರು ಎಂಬ ಭಾವನೆಯನ್ನು ಮೂಡಿಸಲು ಈ ಛಾಯಾಚಿತ್ರ ಪ್ರದರ್ಶನ ಪ್ರೇರೇಪಣೆಯಾಗಲಿದೆ' ಎಂದರು.

ಈ ಛಾಯಾಚಿತ್ರ ಪ್ರದರ್ಶನದಲ್ಲಿ, ನಾಡಿನ ಹೆಸರಾಂತ ಕಲಾವಿದರು, ಕವಿಗಳು, ರಾಷ್ಟ್ರನಾಯಕರು, ಪ್ರೇಕ್ಷಣೀಯ ಸ್ಥಳಗಳು, ನದಿಗಳು, ಬಸವಾದಿ ಶರಣರು, ಸೇರಿದಂತೆ ಇನ್ನೂ ಅನೇಕ ಛಾಯಾಚಿತ್ರಗಳು ಪ್ರದರ್ಶನಕ್ಕಿದ್ದವು.

ಸಾಹಿತಿ ಮೋಹನ ನಾಗಮ್ಮನವರ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಜಾಗೃತ ಮತ್ತು ಸಂಶೋಧನಾ ಸಂಸ್ಥೆ ಸದಸ್ಯ ಲಕ್ಷ್ಮಣ ಬಕ್ಕಾಯಿ, ಭಾರತ ಮಾತಾ ಮಂದಿರ ಸಂಸ್ಥಾನದ ಸಂಸ್ಥಾಪಕ ವಸಂತ ಬಾಂದೇಕರ, ವಕೀಲ ಪ್ರಕಾಶ ಉಡಿಕೇರಿ, ಎಸ್.ಬಿ.ಚಿಕ್ಕಾಪುರ ಮತ್ತಿತರರು ಇದ್ದರು.  ಪ್ರಕಾಶ ಮಲ್ಲಿಗವಾಡ ಸ್ವಾಗತಿಸಿದರು. ಪ್ರೇಮಾ ನಡುವಿನಮನಿ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.