ADVERTISEMENT

ಅಡಕತ್ತರಿಯಲ್ಲಿ ತಾಂತ್ರಿಕ ಕಾಲೇಜುಗಳು

ವಿಕ್ರಂ ಕಾಂತಿಕೆರೆ
Published 1 ಅಕ್ಟೋಬರ್ 2012, 5:00 IST
Last Updated 1 ಅಕ್ಟೋಬರ್ 2012, 5:00 IST

ಹುಬ್ಬಳ್ಳಿ: ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (ಕೆಇಎ) ಆಯ್ಕೆ ಪ್ರಕ್ರಿಯೆ ಹಾಗೂ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿಟಿಯು)ದ ಪ್ರವೇಶ ಪ್ರಕ್ರಿಯೆ ನಡುವೆ ಹೊಂದಾಣಿಕೆಯಾಗದ ಕಾರಣ ಲ್ಯಾಟರಲ್ ಎಂಟ್ರಿ ಪಡೆದು ಬರುವ ವಿದ್ಯಾರ್ಥಿಗಳಿಗೆ ಸುಮಾರು ಎರಡು ತಿಂಗಳ ಪಾಠ ನಷ್ಟವಾಗಿದೆ.

ಅವರ ಪಾಲಿಗೆ ಈ ಬಾರಿ ಎಂಜಿನಿಯರಿಂಗ್ ಶಿಕ್ಷಣ ಬಿಸಿತುಪ್ಪವಾಗಿ ಪರಿಣಮಿಸಿದೆ. ಪ್ರವೇಶ ತಡವಾಗಿರುವ ಹಿನ್ನೆಲೆಯಲ್ಲಿ ಪಾಠವನ್ನು ನಿಗದಿತ ಸಮಯದಲ್ಲಿ ಮುಗಿಸುವ ಸಮಸ್ಯೆಯ ಅಡಕತ್ತರಿಯಲ್ಲಿ ಸಿಲುಕಿರುವ ಕಾಲೇಜು ಆಡಳಿತ ಮಂಡಳಿಗಳು ಸಮಯ ಹೊಂದಿಸಲು ಈಗ ಹೊಸ ಯೋಜನೆಗಳನ್ನು ಹಾಕಿಕೊಳ್ಳುತ್ತಿವೆ.

ವಿಟಿಯು ಶೈಕ್ಷಣಿಕ ವರ್ಷದ ವೇಳಾಪಟ್ಟಿ ಪ್ರಕಾರ ತಾಂತ್ರಿಕ ಕಾಲೇಜುಗಳು ಆಗಸ್ಟ್ ಒಂದರಂದು ಆರಂಭವಾಗಿವೆ. ಕೆಇಎ ಆಯ್ಕೆ ಪ್ರಕ್ರಿಯೆ ಪ್ರಕಾರ ಲ್ಯಾಟರಲ್ ಎಂಟ್ರಿ ವಿದ್ಯಾರ್ಥಿಗಳ ಪ್ರವೇಶ ಸೆಪ್ಟೆಂಬರ್ 27ರಂದು ಆರಂಭಗೊಂಡಿದೆ. ಸೋಮವಾರ (ಅಕ್ಟೋಬರ್-1) ಪ್ರವೇಶ ಪಡೆಯಲು ಕೊನೆಯ ದಿನ.

`ಬ್ಯಾಂಕ್ ಡಿಡಿ ತಡವಾಗಿ ಲಭಿಸಿರುವುದು ಮತ್ತಿತರ ಕಾರಣಗಳಿಂದ ಆಯ್ಕೆ ಪ್ರಕ್ರಿಯೆಗೆ ಕೊನೆಯ ಕ್ಷಣದಲ್ಲೂ ಅಡ್ಡಿಯಾಗಿರುವ ಹಿನ್ನೆಲೆಯಲ್ಲಿ ಎಂಜಿನಿಯರಿಂಗ್ ಪ್ರವೇಶದ ಅಂತಿಮ ದಿನವನ್ನು ಮುಂದೂಡುವ ಸಾಧ್ಯತೆಗಳಿವೆ~ ಎಂದು ಕೆಇಎ ಅಧಿಕಾರಿಗಳು ತಿಳಿಸಿದ್ದು, ಈ ಹಿನ್ನೆಲೆಯಲ್ಲಿ ಈ ವಿದ್ಯಾರ್ಥಿಗಳು ಇನ್ನಷ್ಟು ತೊಂದರೆ ಅನುಭವಿಸಬೇಕಾಗುತ್ತದೆ. ಕಾಲೇಜುಗಳ ಆಡಳಿತ ಮಂಡಳಿಗಳ ತಲೆಬಿಸಿ ಹೆಚ್ಚಲಿದೆ.

`ತಡವಾಗಿ ಬರುವ ವಿದ್ಯಾರ್ಥಿಗಳನ್ನು ಉಳಿದ ವಿದ್ಯಾರ್ಥಿಗಳ ಜೊತೆಗೆ ಸೇರಿಸಿಕೊಂಡು ಮುಂದುವರಿಯುವುದು ಕಷ್ಟದ ಕೆಲಸ. ನಾಲ್ಕು ತಿಂಗಳಲ್ಲಿ ಮಾಡುವ ಪಾಠವನ್ನು ಎರಡೇ ತಿಂಗಳಲ್ಲಿ ಮುಗಿಸಬೇಕಾದ ಅನಿವಾರ್ಯ ಸ್ಥಿತಿ ಈಗ ಒದಗಿದೆ.
 

ಉಳಿದಿರುವ ಮ್ಯಾಟ್-1, ಮ್ಯಾಟ್-2, ಭಾರತೀಯ ಸಂವಿಧಾನ, ವ್ಯವಹಾರ ನೀತಿ, ಪರಿಸರ ಅಧ್ಯಯನ ಮತ್ತಿತರ ವಿಷಯಗಳೇ ಒಂದು ಸೆಮಿಸ್ಟರ್‌ಗೆ ಆಗುವಷ್ಟಿದೆ. ಅದನ್ನು ಹೊಂದಿಸಲು ವಿಶೇಷ ತರಗತಿಗಳನ್ನು ನಡೆಸಬೇಕಾಗಿದೆ~ ಎಂದು ನಗರದ ಕೆಎಲ್‌ಇ ತಾಂತ್ರಿಕ ಸಂಸ್ಥೆಯ ಪ್ರಾಚಾರ್ಯ ಡಾ.ಬಸವರಾಜ ಎಸ್.ಅನಾಮಿ `ಪ್ರಜಾವಾಣಿ~ಗೆ ತಿಳಿಸಿದರು.

`ಆನ್‌ಲೈನ್‌ನಲ್ಲಿ ಸೀಟು ಆಯ್ಕೆ ಮಾಡುವ ಸೌಲಭ್ಯ ಕಲ್ಪಿಸಿದರೂ ಕೆಇಎಗೆ ಸರಿಯಾದ ಸಮಯಕ್ಕೆ ಪ್ರಕ್ರಿಯೆಗಳನ್ನು ಮುಗಿಸಲು ಸಾಧ್ಯವಾಗಲಿಲ್ಲ. ಮುಂದೆ ಹೀಗಾಗದಂತೆ ಗಮನಹ ರಿಸಬೇಕು~ ಎಂದು ಬಿವಿಬಿ  ಕಾಲೇಜಿನ ಪ್ರಾಚಾರ್ಯ ಡಾ. ಅಶೋಕ ಶೆಟ್ಟರ ಹೇಳುತ್ತಾರೆ.

`ಆನ್‌ಲೈನ್ ಸೀಟು ಆಯ್ಕೆ ಪ್ರಕ್ರಿಯೆಯಲ್ಲಿ ಕೆಲವು ತೊಂದರೆಗಳು ಕಾಣಿಸಿಕೊಂಡಿದ್ದವು. ಹೀಗಾಗಿ ಪ್ರಕ್ರಿಯೆ ತಡವಾಗಿದೆ. ಸುಮಾರು ಎರಡು ತಿಂಗಳು ನಷ್ಟವಾದ ಕಾರಣ ಇನ್ನು ಅದನ್ನು ಸರಿದೂಗಿಸುವ ದಾರಿಯನ್ನು ನಾವೇ ಹುಡುಕಬೇಕಾಗಿದೆ~ ಎಂದು ಹುಬ್ಬಳ್ಳಿ ಕಾಲೇಜಿನಲ್ಲಿ ಸೀಟು ಗಳಿಸಿದ ಬೆಳಗಾವಿ ಜಿಲ್ಲೆ ರಾಮದುರ್ಗದ ವಿದ್ಯಾರ್ಥಿನಿಯೊಬ್ಬರ ತಂದೆ ಸಿದ್ಧರಾಮಪ್ಪ ದೇಸಾಯಿ ಹೇಳುತ್ತಾರೆ.

`ಹೊಸ ವಿಧಾನವಾದ್ದರಿಂದ ಈ ಬಾರಿ ಆಯ್ಕೆ ಪ್ರಕ್ರಿಯೆಯಲ್ಲಿ ವಿಳಂಬವಾಗಿರುವುದು ನಿಜ. ಎಂಸಿಎ, ಎಂ.ಟೆಕ್ ಮುಂತಾದ ಕೋರ್ಸ್‌ಗಳ ಪ್ರವೇಶಕ್ಕೆ ಸಂಬಂಧಿಸಿ ದಾಖಲೆಗಳ ಪರಿಶೀಲನೆ ಶನಿವಾರ ಮುಗಿದಿದ್ದು ಅಕ್ಟೋಬರ್ 15ರೊಳಗೆ ಎಲ್ಲ ಪ್ರಕ್ರಿಯೆ ಮುಗಿಯಲಿದೆ~ ಎಂದು ಕೆಇಎ ಅಧಿಕಾರಿ ಕೆ.ಟಿ.ಭಟ್ ತಿಳಿಸಿದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT