ADVERTISEMENT

ಆಮರಣ ಉಪವಾಸ ಅಂತ್ಯ

​ಪ್ರಜಾವಾಣಿ ವಾರ್ತೆ
Published 9 ಜೂನ್ 2011, 10:00 IST
Last Updated 9 ಜೂನ್ 2011, 10:00 IST

ಧಾರವಾಡ: ಯೋಗ ಗುರು ಬಾಬಾ ರಾಮದೇವ್‌ಅವರ ಭ್ರಷ್ಟಾಚಾರ ನಿರ್ಮೂಲನಾ ಹೋರಾಟಕ್ಕೆ ಬೆಂಬಲಾರ್ಥ ಇಲ್ಲಿನ ಕೋರ್ಟ್ ಸರ್ಕಲ್ ಸಮೀಪ ಪತಂಜಲಿ ಯೋಗ ಸಮಿತಿ ಹಾಗೂ ಭಾರತ ಸ್ವಾಭಿಮಾನ ಟ್ರಸ್ಟ್ ಸದಸ್ಯರು ನಡೆಸಿದ್ದ ಆಮರಣ ಉಪವಾಸ ಸತ್ಯಾಗ್ರಹ ಬುಧವಾರ ಅಂತ್ಯಗೊಂಡಿತು.

ಸತ್ಯಾಗ್ರಹ ಸ್ಥಳಕ್ಕೆ ಜಿಲ್ಲಾಧಿಕಾರಿ ದರ್ಪಣ್ ಜೈನ್ ಭೇಟಿ ನೀಡಿ, ಆಮರಣ ಉಪವಾಸ ನಿರತ, ವಕೀಲ ಬಿ.ಡಿ.ಹಿರೇಮಠ ಅವರಿಗೆ ಎಳನೀರು ಕುಡಿಸುವ ಮೂಲಕ ಮುಕ್ತಾಯಗೊಳಿಸಿದರು. ಹಿರೇಮಠ ಜೊತೆಗೆ  ಶಂಕರ ದೊಡಮನಿ, ಎಸ್.ಜಿ.ಚಿಕ್ಕಮಠ ಸಹ ಉಪವಾಸ ಅಂತ್ಯಗೊಳಿಸಿದರು.

ಯೋಗ ಗುರು ದೆಹಲಿಯಲ್ಲಿ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಸಂದರ್ಭದಲ್ಲಿ ರಾತ್ರೋರಾತ್ರಿ ನಡೆದ ಘಟನೆಯನ್ನು ಸಮಿತಿ ಸದಸ್ಯರು ತೀವ್ರವಾಗಿ ಖಂಡಿಸಿದರು. ಕೂಡಲೇ ಬಾಬಾ ಅವರ ಬೇಡಿಕೆಗಳನ್ನು ಕೇಂದ್ರ ಸರಕಾರ ಈಡೇರಿಸದೇ ಹೋದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದು ಬಿ.ಡಿ.ಹಿರೇಮಠ ಎಚ್ಚರಿಕೆ ನೀಡಿದರು.

ರಾಮಕೃಷ್ಣ ವಿವೇಕಾನಂದ ಆಶ್ರಮದ ಸ್ವಾಮಿ ವಿಜಯಾನಂದ ಸರಸ್ವತಿ, ಹುಡಾ ಅಧ್ಯಕ್ಷ ದತ್ತಾ ಡೋರ್ಲೆ, ತಹಸೀಲ್ದಾರ ರವೀಂದ್ರ ಕರಲಿಂಗಣ್ಣವರ, ಸ್ವಾತಂತ್ರ್ಯ ಹೋರಾಟಗಾರ ಕಬ್ಬಿನಕಂತಿಮಠ, ಎಂ.ಡಿ.ಪಾಟೀಲ, ಶಿವಾನಂದ ಗಾಳಿ, ಶರಣು ಅಂಗಡಿ, ಸುಜಾತಾ ಹಡಗಲಿ, ತಾ.ಭ.ಚವ್ಹಾಣ, ಎಫ್.ಬಿ.ಹಬೀಬ, ದೇವಾನಂದ ರತ್ನಾಕರ, ಚಂದ್ರಶೇಖರ ಉಳ್ಳಾಗಡ್ಡಿ, ಎ.ಬಿ.ಇಟಗಿ, ರಾಮಚಂದ್ರ ಅವಲಕ್ಕಿ ಸೇರಿದಂತೆ ಭಾರತ ಸ್ವಾಭಿಮಾನ ಹಾಗೂ ಪತಂಜಲಿ ಯೋಗ ಸಮಿತಿಯ ಸದಸ್ಯರು, ಅಭಿಮಾನಿಗಳು ಈ ಸಂದರ್ಭದಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.