ADVERTISEMENT

ಆಶ್ರಯ ಮನೆಗೆ ಆಗ್ರಹಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2012, 6:35 IST
Last Updated 19 ಏಪ್ರಿಲ್ 2012, 6:35 IST

ಹುಬ್ಬಳ್ಳಿ: ನಗರ ಹೊರವಲಯದ ಬಿಡ್ನಾಳದಲ್ಲಿ ಆಶ್ರಯ ಯೋಜನೆಯಡಿ ಮನೆಗಳನ್ನು ನಿರ್ಮಿಸಿಕೊಡಬೇಕು ಎಂದು ಆಗ್ರಹಿಸಿ ಫಲಾನುಭವಿಗಳು ಬುಧವಾರ ಪಾಲಿಕೆ ಮುಂದೆ ಪ್ರತಿಭಟನೆ ನಡೆಸಿದರು.

ಚಿಟಗುಪ್ಪಿ ಆಸ್ಪತ್ರೆ ಬಳಿ ಜಮಾಯಿಸಿದ ಪ್ರತಿಭಟನಾಕಾರರು ಪಾಲಿಕೆ ಕಚೇರಿಗೆ ಮೆರವಣಿಗೆಯಲ್ಲಿ ಆಗಮಿಸಿ ಜಂಟಿ ಆಯುಕ್ತರ ಮುಖಾಂತರ ಆಯುಕ್ತರಿಗೆ ಮನವಿ ಸಲ್ಲಿಸಿದರು.

ಎರಡನೇ ಹಂತದಲ್ಲಿ ಆಶ್ರಯ ಮನೆಗಳನ್ನು ನಿರ್ಮಿಸುವುದಾಗಿ ಹೇಳಿದ ಆಶ್ರಯ ಸಮಿತಿ, 2003-04ನೇ ಸಾಲಿನಲ್ಲಿ ಪ್ರತಿಯೊಬ್ಬ ಫಲಾನುಭವಿಯಿಂದ ತಲಾ 25 ಸಾವಿರ ರೂಪಾಯಿ ಪಡೆದುಕೊಂಡಿದೆ. ಆದರೆ ಇನ್ನು ಕೂಡ ಮನೆಗಳನ್ನು ನಿರ್ಮಿಸಿಕೊಟ್ಟಿಲ್ಲ. ಹೀಗಾಗಿ ಫಲಾನುಭವಿಗಳು ಅತಂತ್ರರಾಗಿದ್ದಾರೆ ಎಂದು ಪ್ರತಿಭಟನಾಕಾರರು ದೂರಿದರು.

ಆದಷ್ಟು ಶೀಘ್ರವಾಗಿ ಮನೆಗಳನ್ನು ನಿರ್ಮಿಸಿಕೊಡಬೇಕು. ಇಲ್ಲವಾದರೆ ಪ್ರತಿಭಟನೆಯನ್ನು ತೀವ್ರಗೊಳಿಸಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ಪ್ರತಿಭಟನಾಕಾರರನ್ನು ಭೇಟಿಯಾದ ಶಾಸಕ ವೀರಭದ್ರಪ್ಪ ಹಾಲಹರವಿ, ಮುಂದಿನ 15-20 ದಿನಗಳೊಳಗೆ ಹಕ್ಕುಪತ್ರಗಳನ್ನು ನೀಡಿ, ಫಲಾನುಭವಿಗಳ ಒಪ್ಪಿಗೆ ಇದ್ದರೆ ವಿವಿಧ ಯೋಜನೆಯಡಿ ಮನೆಗಳನ್ನು ನಿರ್ಮಿಸಿಕೊಡಲಾಗುವುದು ಎಂದು ಹೇಳಿದರು. ಆದರೆ ಇದಕ್ಕೆ ಪ್ರತಿಭಟನಾಕಾರರು ಒಪ್ಪಲಿಲ್ಲ.
 
ಆಶ್ರಯ ಯೋಜನೆಯಡಿಯಲ್ಲೇ ಮನೆಗಳನ್ನು ನಿರ್ಮಿಸಿಕೊಡಬೇಕು, ಇದಕ್ಕೆ ಸಂಬಂಧಿಸಿ ಲಿಖಿತವಾಗಿ ಭರವಸೆ ನೀಡಬೇಕು  ಎಂದು ಅವರು ಪಟ್ಟು ಹಿಡಿದರು. ಆದರೆ ಪಾಲಿಕೆ ಆಯುಕ್ತರು ಸ್ಥಳದಲ್ಲಿಲ್ಲದ ಕಾರಣ ಸದ್ಯ ಯಾವುದೇ ಭರವಸೆ ನೀಡುವಂತಿಲ್ಲ ಎಂದು ತಿಳಿಸಿದ ಶಾಸಕರು, ಇದೇ 25ರಂದು ನಡೆಯಲಿರುವ ಆಶ್ರಯ ಸಮಿತಿ ಸಭೆಯಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳುವುದಾಗಿ ತಿಳಿಸಿದರು.
 
ಪಾಲಿಕೆ ಮಾಜಿ ಸದಸ್ಯ ಮೋಹನ ಅಸುಂಡಿ, ಮುಖಂಡರಾದ ರವಿಕುಮಾರ ಬದ್ನಿ, ಜೆ.ಜೆ. ಪಾಟೀಲ, ಡಿ.ಸಿ. ಪೂಜಾರ, ಎಂ.ಆರ್. ರಾಯಚೂರ, ಸುರೇಶ ಕುಲಕರ್ಣಿ, ವಾಸಂತಿ ಜಾಧವ, ಸುರೇಖಾ ಪವಾರ  ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.