ADVERTISEMENT

ದೂಳು:ಬಿ.ಆರ್.ಟಿ.ಎಸ್‌ಗೆ ಮೂರು ನೋಟಿಸ್‌

​ಪ್ರಜಾವಾಣಿ ವಾರ್ತೆ
Published 27 ಅಕ್ಟೋಬರ್ 2017, 7:01 IST
Last Updated 27 ಅಕ್ಟೋಬರ್ 2017, 7:01 IST
ಹುಬ್ಬಳ್ಳಿಯ ಪಿ.ಬಿ. ರಸ್ತೆಯ ಉಣಕಲ್‌ ಕ್ರಾಸ್‌ ಬಳಿ ಬಿ.ಆರ್.ಟಿ.ಎಸ್. ಕಾಮಗಾರಿ ನಡೆಯುತ್ತಿದ್ದು, ದೂಳಿನಲ್ಲಿಯೇ ಸಾಗುತ್ತಿರುವ ವಾಹನ ಸವಾರರು
ಹುಬ್ಬಳ್ಳಿಯ ಪಿ.ಬಿ. ರಸ್ತೆಯ ಉಣಕಲ್‌ ಕ್ರಾಸ್‌ ಬಳಿ ಬಿ.ಆರ್.ಟಿ.ಎಸ್. ಕಾಮಗಾರಿ ನಡೆಯುತ್ತಿದ್ದು, ದೂಳಿನಲ್ಲಿಯೇ ಸಾಗುತ್ತಿರುವ ವಾಹನ ಸವಾರರು   

ಹುಬ್ಬಳ್ಳಿ: ವಿಳಂಬವಾಗಿ ನಡೆಯುತ್ತಿರುವ ಕಾಮಗಾರಿಯಿಂದ ದೂಳು ಹೆಚ್ಚುತ್ತಿದ್ದು, ಆರೋಗ್ಯಕ್ಕೆ ತೊಂದರೆಯಾಗುತ್ತಿದೆ ಎಂದು ಸಾರ್ವಜನಿಕರು ನೀಡಿದ ದೂರಿನ ಅನ್ವಯ ಮಾಲಿನ್ಯ ನಿಯಂತ್ರಣ ಮಂಡಳಿಯು ಬಿ.ಆರ್.ಟಿ.ಎಸ್ ಹಾಗೂ ಕೆ.ಆರ್.ಡಿ.ಸಿ.ಎಲ್‌ಗೆ ನೋಟಿಸ್‌ ಜಾರಿ ಮಾಡಿದೆ.

‘ಅವಳಿ ನಗರದ ನಡುವಿನ ಪಿ.ಬಿ. ರಸ್ತೆಯಲ್ಲಿ ಕೆಲವು ವರ್ಷಗಳಿಂದ ಬಿ.ಆರ್.ಟಿ.ಎಸ್ ಕಾಮಗಾರಿ ನಡೆಯುತ್ತಿದೆ. ಈ ಕಾಮಗಾರಿಯಿಂದ ವಾತಾವರಣದಲ್ಲಿ ದೂಳಿನ ಪ್ರಮಾಣ ಹೆಚ್ಚಿದ್ದು, ಈ ಬಗ್ಗೆ ಸಾರ್ವಜನಿಕರು ದೂರು ನೀಡಿದ್ದಾರೆ. ಅಲ್ಲದೆ, ವಾತಾವರಣದಲ್ಲಿನ ದೂಳಿನ ಕಣಗಳು ಹೆಚ್ಚಾಗಿರುವುದು ನಾವು ನಡೆಸಿದ ಅಧ್ಯಯನದಲ್ಲಿ ದೃಢಪಟ್ಟಿದೆ. ಈ ನಿಟ್ಟಿನಿಂದ ಕಾರಣ ಕೇಳಿ ನೋಟಿಸ್‌ ನೀಡಲಾಗಿದೆ’ ಎಂದು ಜಿಲ್ಲಾ ಮಾಲಿನ್ಯ ನಿಯಂತ್ರಣಾಧಿಕಾರಿ ವಿಜಯಕುಮಾರ ಕಡಕಬಾವಿ ತಿಳಿಸಿದರು.

‘ಎರಡು ವರ್ಷಗಳ ಅವಧಿಯಲ್ಲಿ ಬಿ.ಆರ್.ಟಿ.ಎಸ್‌ ಗೆ ಮೂರು ನೋಟಿಸ್‌ ನೀಡಲಾಗಿದೆ. ಕೆ.ಆರ್.ಡಿ.ಸಿ.ಎಲ್‌ (ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ)ಗೂ ನೋಟಿಸ್‌ ನೀಡಲಾಗಿದೆ. ಆದರೆ, ಬಿ.ಆರ್.ಟಿ.ಎಸ್‌. ನವರು ಉತ್ತರ ನೀಡಿದ್ದು, ಕೆ.ಆರ್.ಡಿ.ಸಿ.ಎಲ್‌ ಈವರೆಗೆ ಉತ್ತರ ನೀಡಿಲ್ಲ’ ಎಂದು ಅವರು ತಿಳಿಸಿದರು.

ADVERTISEMENT

ಸಾಕಾಗಿ ಹೋಗಿದೆ: ‘ನಾನು ಧಾರವಾಡದಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದೇನೆ. ಹುಬ್ಬಳ್ಳಿಯ ಹೊಸೂರಿನಲ್ಲಿ ಮನೆ ಇದೆ. ಬಸ್‌ನಲ್ಲಿ ತೆರಳಲು ವಿಳಂಬವಾಗುತ್ತದೆ ಎಂಬ ಕಾರಣದಿಂದ ಸ್ಕೂಟಿಯಲ್ಲಿ ಹೋಗುತ್ತೇನೆ. ಮೂರು ವರ್ಷಗಳಿಂದ ದೂಳಿನಲ್ಲಿಯೇ ಓಡಾಡುವಂತಾಗಿದೆ. ಆರೋಗ್ಯ ತೊಂದರೆಯೂ ಕಾಣಿಸಿಕೊಂಡಿದೆ’ ಎಂದು ಸವಿತಾ ಎಸ್. ಪಾಟೀಲ ಅಸಮಾಧಾನ ವ್ಯಕ್ತಪಡಿಸಿದರು. ‘ಉಣಕಲ್‌ ಕ್ರಾಸ್‌ ಹಾಗೂ ನವನಗರದಲ್ಲಿ ಫ್ಲೈಓವರ್‌ ನಿರ್ಮಿಸುತ್ತಿದ್ದು, ಸಂಚಾರವೇ ಕಷ್ಟವಾಗಿದೆ’ ಎಂದು ಅಳಲು ತೋಡಿಕೊಂಡರು.

ಸಾರ್ವಜನಿಕರು ಸಹಕರಿಸಿ !
‘ಬಿ.ಆರ್.ಟಿ.ಎಸ್‌ ರಸ್ತೆಯಲ್ಲಿ ಫ್ಲೈ ಓವರ್‌ಗಳನ್ನು ಕೆ.ಆರ್.ಡಿ.ಸಿ.ಎಲ್‌ ನಿರ್ಮಾಣ ಮಾಡುತ್ತಿದೆ. ನವನಗರದಲ್ಲಿ ಫ್ಲೈಓವರ್‌ ನಿರ್ಮಾಣ ಮಾಡುತ್ತಿದ್ದ ವೇಳೆ ದೂಳಿನ ಪ್ರಮಾಣ ಹೆಚ್ಚಾಗಿದ್ದ ಸಂದರ್ಭದಲ್ಲಿ ಮಾಲಿನ್ಯ ನಿಯಂತ್ರಣ ಮಂಡಳಿ ನೋಟಿಸ್‌ ನೀಡಿದೆ. ಆದರೆ, ಈಗ ದೂಳಿನ ಪ್ರಮಾಣ ಹೆಚ್ಚಾಗಿಲ್ಲ’ ಎಂದು ನಿಗಮದ ಅಧಿಕಾರಿಯೊಬ್ಬರು ಹೇಳಿದರು.

‘ಹೊಸೂರು ವೃತ್ತದಿಂದ ಬಿ.ವಿ.ಬಿ ಕಾಲೇಜಿನವರೆಗೆ ಈವರೆಗೆ ಬಿ.ಆರ್‌.ಟಿ.ಎಸ್‌ ಮೂರು ಬಸ್‌ ನಿಲ್ದಾಣ ನಿರ್ಮಿಸಲಾಗುತ್ತಿದ್ದು, ಬೇಗ ಪೂರ್ಣಗೊಳಿಸಲಾಗುವುದು. ಊರ ಹೊರಗಿನ ಕಾಮಗಾರಿ ಬೇಗ ಮುಗಿದಿದೆ. ಊರ ಒಳಗಿನ ಕಾಮಗಾರಿ ನಿಧಾನವಾಗುತ್ತಿದೆ. ರಸ್ತೆಯಲ್ಲಿ ದೂಳು ಏಳದಂತೆ ಕೆಲಸ ಮಾಡುವುದು ಕಷ್ಟ’ ಎಂದು ಹೇಳಿದರು.

ಅಗೆಯುತ್ತಾರೆ: ‘ಕಾಮಗಾರಿಯನ್ನು ಬೇಗ ಪೂರ್ಣಗೊಳಿಸಬೇಕು ಎಂಬ ಉದ್ದೇಶ ನಮಗೂ ಇದೆ. ಆ ನಿಟ್ಟಿನಲ್ಲಿ ನಿರಂತರವಾಗಿ ಕೆಲಸ ಮಾಡುತ್ತಿದ್ದೇವೆ. ಬಿ.ಎಸ್.ಎನ್‌.ಎಲ್‌. ಕೇಬಲ್‌ ಎಳೆಯಲು ಈಗ ಮತ್ತೆ ರಸ್ತೆ ಅಗೆಯಲಾಗುತ್ತಿದೆ. ಇದರಿಂದ ತೊಂದರೆಯಾಗಿದೆ. ಸಾರ್ವಜನಿಕರು ಸಹಕರಿಸಬೇಕು’ಎಂದು ಅವರು ಮನವಿ ಮಾಡಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.