ADVERTISEMENT

ನೇಕಾರ ಕಾಲೊನಿಗೆ ರಜತ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2011, 8:25 IST
Last Updated 14 ಸೆಪ್ಟೆಂಬರ್ 2011, 8:25 IST

ಹುಬ್ಬಳ್ಳಿ: ನಗರದ ವಿದ್ಯಾನಗರದಲ್ಲಿರುವ ನೇಕಾರ ಕಾಲೊನಿಯಲ್ಲಿ ಸೋಮವಾರ ಜನ್ಮದಿನದ ಸಂಭ್ರಮ.
ಡಚ್ ಸರ್ಕಾರದ ಸಹಾಯಧನದಲ್ಲಿ 25 ವರ್ಷಗಳ ಹಿಂದೆ ಜನ್ಮ ತಾಳಿದ ಕಾಲೊನಿಯ ಮನೆಗಳು ಇನ್ನೂ ನೇಕಾರರಿಗೆ ಹಸ್ತಾಂತರವಾಗಿಲ್ಲ. ಆದರೂ ಈ ಸಮಸ್ಯೆ ಪರಿಹಾರವಾಗುವ ನಿರೀಕ್ಷೆಯಲ್ಲಿ ನೇಕಾರರು ಬೆಳ್ಳಿಹಬ್ಬದ ಆನಂದವನ್ನು ಉಂಡರು.

ಸಂಜೆ ಕಾಲೊನಿಯಲ್ಲಿರುವ ಸರ್ಕಾರಿ ಶಾಲೆಯ ಆವರಣದಲ್ಲಿ ನಡೆದ ಸರಳ ಸಮಾರಂಭದಲ್ಲಿ ಕೇಕ್ ಕತ್ತರಿಸಿ ಅವರು ಕಾಲೊನಿಯ `ಜನ್ಮದಿನ~ವನ್ನು ಆಚರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ರಾಜ್ಯ ಕೈಮಗ್ಗ ನಿಗಮದ ಅಧ್ಯಕ್ಷ ಎಂ.ಡಿ. ಲಕ್ಷ್ಮೀನಾರಾಯಣ, ಮನೆಗಳನ್ನು ಹಸ್ತಾಂತರಿಸುವ ಕುರಿತು ಕೇಂದ್ರದ ಸಂಬಂಧಪಟ್ಟ ಸಚಿವರ ಜೊತೆ ಮಾತನಾಡಿದ್ದು ಶೀಘ್ರ ಸೂಕ್ತ ನಿರ್ಧಾರ ಕೈಗೊಳ್ಳುವ ಭರವಸೆ ಲಭಿಸಿದೆ ಎಂದು ತಿಳಿಸಿದರು.

ಡಚ್ ಮನೆಗಳು ಕೇಂದ್ರ ಸರ್ಕಾರದ ಯೋಜನೆ. ಇವುಗಳನ್ನು ಹಸ್ತಾಂತರ ಮಾಡಬೇಕಾದರೆ ಕಾಲೊನಿಗೆ ಕನಿಷ್ಟ 25 ವರ್ಷಗಳಾಗಿರಬೇಕು. ಈ ಕಾಲೊನಿಗೆ ಈಗ 25 ವರ್ಷಗಳಾಗಿವೆ. ಹೀಗಾಗಿ ಮನೆಗಳ ಹಸ್ತಾಂತರಕ್ಕೆ ಹಸಿರು ನಿಶಾನೆ ಸಿಗಬಹುದು ಎಂಬ ಭರವಸೆ ಇದೆ ಎಂದು ಅವರು ತಿಳಿಸಿದರು.

ಕೈಮಗ್ಗ ನಿಗಮದ ಕೇಂದ್ರ ಕಚೇರಿಯನ್ನು ಹುಬ್ಬಳ್ಳಿಗೆ ಸ್ಥಳಾಂತರಿಸಬೇಕು ಎಂಬ ಬೇಡಿಕೆ ಅನೇಕ ವರ್ಷಗಳಿಂದ ಇತ್ತು. ಈ ಬೇಡಿಕೆಗೆ ನಿಗಮ ಪೂರಕವಾಗಿ ಸ್ಪಂದಿಸಿದೆ. ಈ ಬಾರಿ ಪರಿವರ್ತನ ಕರವನ್ನು ಹೆಚ್ಚಿಸಲಾಗಿದೆ ಎಂದು ಅವರು ತಿಳಿಸಿದರು.

ನೇಕಾರರ ಸಂಘದ ರಾಜ್ಯ ಘಟಕದ ಉಪಾಧ್ಯಕ್ಷ ಎನ್.ಜೆ. ಮಾಳವದೆ, ಧಾರವಾಡ ಘಟಕದ ಅಧ್ಯಕ್ಷ ನಾಗಪ್ಪ ಬನ್ನಿಗಿಡದ, ನಿಗಮದ ಜಂಟಿ ನಿರ್ದೇಶಕ ಆನಂದ ಕಿತ್ತೂರ, ವ್ಯವಸ್ಥಾಪಕ ದೇವರಾಜ, ಕಂಪೆನಿ ಸೆಕ್ರೆಟರಿ ಸತ್ಯಪ್ರಕಾಶ, ಕಾಲೊನಿಯ ಮುಖಂಡ ಎ.ಎಂ. ಮುಲ್ಲಾ, ಹಿರಿಯ ನೇಕಾರರಾದ ಎಂ.ಎಚ್. ಶೇಟ್ ಹಾಗೂ ಫಕೀರಪ್ಪ ಗರಗದ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.