ADVERTISEMENT

ಪ್ರಯಾಣಿಕರಿಗೆ ಹೊರೆಯಾದ ಬಸ್ ಟಿಕೆಟ್ ದರ

​ಪ್ರಜಾವಾಣಿ ವಾರ್ತೆ
Published 25 ಜನವರಿ 2012, 10:00 IST
Last Updated 25 ಜನವರಿ 2012, 10:00 IST

ಅಳ್ನಾವರ: ಸುಲಭ ಸಾರಿಗೆ ವ್ಯವಸ್ಥೆ ಕಲ್ಪಿಸಬೇಕಾದ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯವರು    ಪ್ರಯಾಣಿಕರಿಂದ ಹೆಚ್ಚಿನ ಹಣ ವಸೂಲಿ ಮಾಡಿ ಅನಗತ್ಯ ಗೊಂದಲ ಸೃಷ್ಟಿ ಮಾಡುತ್ತಿರುವ ಘಟನೆ ದಿನ ನಿತ್ಯ ಅಳ್ನಾವರ- ರಾಮನಗರ ಮಾರ್ಗದಲ್ಲಿ ನಡೆಯುತ್ತಿದೆ.
 
ಅಳ್ನಾವರ-ರಾಮನಗರ ಮಧ್ಯ ಇರುವ ಅಂತರ ಕೇವಲ 32 ಕಿ.ಮೀ. ಆದರೆ ಇಲಾಖೆಯ ಟಿಕೆಟ್‌ನಲ್ಲಿ 74 ಕಿ.ಮೀ. ಎಂದು ನಮೂದಿಸಲಾಗಿದೆ. ಈ ಮಾರ್ಗಕ್ಕೆ ದರ ರೂ. 25 ಇದ್ದು, ಅನಗತ್ಯವಾಗಿ ರೂ. 56 ಪಡೆಯಲಾಗುತ್ತಿದ್ದು, ಪ್ರಯಾಣಿಕರಿಗೆ ಹೊರೆಯಾಗಿ ಪರಿಣಮಿಸಿದೆ. ಅನ್ಯ ಮಾರ್ಗ ತೋಚದೆ ಪ್ರಯಾಣಿಕರು ತಮ್ಮದಲ್ಲದ ತಪ್ಪಿನಿಂದ ದಂಡ ತೆರಬೇಕಾಗಿದೆ.

ಇಲ್ಲಿನ ನಾಗರಿಕರು ದುಡಿಯಲು ಮತ್ತು ಇನ್ನಿತರ ಕೆಲಸಕ್ಕಾಗಿ ಗೋವಾಕ್ಕೆ ಹೋಗುವುದು ವಾಡಿಕೆ. ಆದರೆ ಖಾಸಗಿ ಬಸ್‌ಗಳ ಪೈಪೋಟಿ ನಡುವೆ ತಮ್ಮದಲ್ಲದ ತಪ್ಪಿಗೆ ಬಾರ ಹೊರಬೇಕಾಗಿದೆ. ಗೋವಾಕ್ಕೆ ತೆರಳಲು ಪರ್ಯಾಯ ಮಾರ್ಗವಿಲ್ಲದೆ ಇದೇ ಮಾರ್ಗದಲ್ಲಿ ಚಲಿಸುವುದು ಅನಿವಾರ್ಯವಾಗಿದೆ
.
ಈ ಭಾಗದ ರಸ್ತೆ ಕೆಟ್ಟು ಹೋಗಿದ್ದರಿಂದ ಬೀಡಿ, ಖಾನಾಪುರ ಮಾರ್ಗವಾಗಿ ರಾಮನಗರದಿಂದ ಗೋವಾಕ್ಕೆ ಚಲಿಸುವ ವ್ಯವಸ್ಥೆ ಕಳೆದ ಹಲವಾರು ತಿಂಗಳುಗಳಿಂದ ಜಾರಿಯಲ್ಲಿ ಇತ್ತು. ಈಗ ರಸ್ತೆ ಕೆಲಸ ನಡೆದಿದ್ದು, ಸಾರಿಗೆಗೆ ಯೋಗ್ಯವಾಗಿದ್ದರಿಂದ ಇಲಾಖೆಯ ಬಸ್‌ಗಳು ಈ ಮಾರ್ಗದಲ್ಲಿ ಚಲಿಸುತ್ತಿವೆ.

ಹಿಂದೆ ಬೀಡಿ, ಖಾನಾಪುರ ಮಾರ್ಗವಾಗಿ ರಾಮನಗರಕ್ಕೆ ಬಸ್ ಸಂಚಾರ ನಡೆದಿತ್ತು, ಅದೇ ಮಾರ್ಗದ ಟಿಕೆಟ್ ಅನ್ನು ಬದಲಿಸದೇ ಇರುವುದು ಇದಕ್ಕೆ ಪ್ರಮುಖ ಕಾರಣವಾಗಿದೆ.

ಗೋವಾಕ್ಕೆ ತೆರಳುವ ಬಸ್‌ಗಳು ಅಳ್ನಾವರ ಬಸ್ ನಿಲ್ದಾಣಕ್ಕೆ ಬಾರದೇ ದೂರದ ಅಳ್ನಾವರ ಕ್ರಾಸ್ ಹತ್ತಿರ ಪ್ರಯಾಣಿಕರನ್ನು ಇಳಿಸುತ್ತಿರುವುದರಿಂದ ತುಂಬ ತೊಂದರೆಯಾಗಿದೆ.

ಇನ್ನಾದರೂ ಇಲಾಖೆ ಇಂತಹ ಸಣ್ಣ ಪುಟ್ಟ ವಿಚಾರಗಳನ್ನು ಕೂಲಂಕಷವಾಗಿ ಪರಿಶೀಲಿಸಿ ಪ್ರಯಾಣಿಕರಿಗೆ ಹೊರೆ ಆಗದ ಹಾಗೆ ಕ್ರಮ ಜರುಗಿಸಬೇಕು ಎಂದು ನಾಗರಿಕರು ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.