ADVERTISEMENT

ಬಿತ್ತನೆ ಸಿದ್ಧತೆ ಪೂರ್ಣ; ಬೀಜ ವಿತರಣೆ

ಜಿಲ್ಲೆಯಾದ್ಯಂತ ಭೂಮಿ ಹದಗೊಳಿಸಿದ ಮಳೆ; ರೈತರ ಮೊಗದಲ್ಲಿ ಕಳೆ

​ಪ್ರಜಾವಾಣಿ ವಾರ್ತೆ
Published 25 ಮೇ 2018, 2:52 IST
Last Updated 25 ಮೇ 2018, 2:52 IST
ಧಾರವಾಡ ತಾಲ್ಲೂಕಿನ ಗರಗ ಗ್ರಾಮದಲ್ಲಿ ಬಿತ್ತನೆ ಕಾರ್ಯದಲ್ಲಿ ತೊಡಗಿದ ದೃಶ್ಯ
ಧಾರವಾಡ ತಾಲ್ಲೂಕಿನ ಗರಗ ಗ್ರಾಮದಲ್ಲಿ ಬಿತ್ತನೆ ಕಾರ್ಯದಲ್ಲಿ ತೊಡಗಿದ ದೃಶ್ಯ   

ಧಾರವಾಡ: ಕಳೆದ ಹಲವು ವರ್ಷಗಳಿಂದ ಬೇಕೆಂದಾಗ ಸುರಿಯದೇ ಕೈಕೊಟ್ಟು ಆತಂಕ ಸೃಷ್ಟಿಸುತ್ತಿದ್ದ ಮಳೆ, ಈ ಬಾರಿ ಅವಧಿಗೂ ಮುನ್ನ ಸುರಿದಿರುವುದರಿಂದ ಹೊಲಗಳಲ್ಲಿ ಕೃಷಿ ಚಟುವಟಿಕೆ ಭರದಿಂದ ಸಾಗಿದೆ.

ಪ್ರಸ್ತುತ ಮುಂಗಾರು ಹಂಗಾಮಿಗೆ ಜಿಲ್ಲೆಯ 2.31ಲಕ್ಷ ಹೆಕ್ಟೇರ್ ಜಮೀನು ಬಿತ್ತನೆಯ ಗುರಿ ಹೊಂದಲಾಗಿದೆ. ಮಳೆಯೂ ಗುರಿ ಸಾಧನೆಗೆ ಮುನ್ನುಡಿ ಬರೆದಿದೆ.

ಕಳೆದ ವರ್ಷ ಮುಂಗಾರಿನಲ್ಲಿ ಬಿತ್ತಿದ್ದ ಹೆಸರು ತಕ್ಕಮಟ್ಟಿನ ಇಳುವರಿ ನೀಡಿದ್ದರೂ, ಗುಣಮಟ್ಟದ ಸಮಸ್ಯೆಯಿಂದ ಬೆಲೆಯಲ್ಲಿ ಕುಸಿತ ಕಂಡಿತ್ತು. ಹಿಂಗಾರು ಹಂಗಾಮಿನಲ್ಲಿ ಬಿತ್ತಿದ ಕಡಲೆಗೂ ಬೆಲೆ ಸಿಗದೆ ರೈತರು ಪರಿತಪಿಸಿದ್ದರು.

ADVERTISEMENT

ಜಿಲ್ಲೆಯ ಎಲ್ಲಾ ಭಾಗಗಳಲ್ಲೂ ಮಳೆ ಉತ್ತಮವಾಗಿದೆ. ಎಲ್ಲಾ ಬಗೆಯ ಮುಂಗಾರಿನ ಬೆಳೆಗಳು ಬಿತ್ತನೆಯಾಗುವ ಸಾಧ್ಯತೆ ಇದೆ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಟಿ.ಎಸ್‌.ರುದ್ರೇಶಪ್ಪ ಹೇಳಿದರು.

ಬಿತ್ತನೆ ಬೀಜ: ಒಟ್ಟು 54,577 ಕ್ವಿಂಟಲ್ ಬಿತ್ತನೆ ಬೀಜ ಬೇಕಾಗುತ್ತಿದ್ದು, ಭತ್ತ 6,437 ಕ್ವಿಂಟಲ್, ಮುಸುಕಿನ ಜೋಳ 10,694 ಕ್ವಿಂಟಲ್, ತೊಗರಿ 125 ಕ್ವಿಂಟಲ್, ಉದ್ದು 79 ಕ್ವಿಂಟಲ್, ಹೆಸರು 1,762 ಕ್ವಿಂಟಲ್, ಶೇಂಗಾ 14,618 ಕ್ವಿಂಟಲ್, ಸೋಯಾ ಅವರೆ 20,630 ಕ್ವಿಂಟಲ್ಕಾಗಬಹುದು ಎಂದು ಅಂದಾಜಿಸಲಾಗಿದೆ.

‘ಕರ್ನಾಟಕ ರಾಜ್ಯ ಬೀಜ ನಿಗಮ, ಕೆ.ಓ.ಎಫ್‌, ರಾಷ್ಟ್ರೀಯ ಬೀಜ ನಿಗಮ ಹಾಗೂ ಖಾಸಗಿ ಸಂಸ್ಥೆಗಳಿಂದ ಅಂದಾಜು 7,346 ಕ್ವಿಂಟಲ್‌ನಷ್ಟು ಎಲ್ಲ ಬೆಳೆಗಳ ಬಿತ್ತನೆ ಬೀಜಗಳನ್ನು ಜಿಲ್ಲೆಯ 14 ರೈತ ಸಂಪರ್ಕ ಕೇಂದ್ರಗಳು ಹಾಗೂ 14 ಹೆಚ್ಚುವರಿ ಕೇಂದ್ರಗಳಲ್ಲಿ ಸಂಗ್ರಹಿಸಿ, ಸಹಾಯಧನದಲ್ಲಿ ವಿತರಣೆ ಮಾಡಲಾಗುತ್ತಿದೆ’ ಎಂದು ರುದ್ರೇಶಪ್ಪ ಅವರು ತಿಳಿಸಿದರು.

ರಸಗೊಬ್ಬರ: ‘ಯೂರಿಯಾ 30,710 ಮೆಟ್ರಿಕ್ ಟನ್, ಡಿ.ಎ.ಪಿ. 24,428 ಮೆಟ್ರಿಕ್ ಟನ್, ಪೋಟ್ಯಾಶ್ 6,567 ಮೆಟ್ರಿಕ್ ಟನ್ ಹಾಗೂ ಕಾಂಪ್ಲೆಕ್ಸ್‌ 1,56,941 ಮೆಟ್ರಿಕ್ ಟನ್‌ ರಸಗೊಬ್ಬರ ಬೇಕಾಗಬಹುದೆಂದು ಅಂದಾಜಿಸಲಾಗಿದೆ. ಖಾಸಗಿ ಮಾರಾಟಗಾರರು ಹಾಗೂ ಸಹಕಾರಿ ಸಂಘಗಳಲ್ಲಿ 16,635 ಮೆಟ್ರಿಕ್ ಟನ್‌ನಷ್ಟು ದಾಸ್ತಾನು ಇದ್ದು, ಅಗತ್ಯಕ್ಕೆ ಅನುಗುಣವಾಗಿ ವಿತರಿಸಲಾಗುವುದು’ ಎಂದರು.

ಬೀಜ, ರಸಗೊಬ್ಬರ ಅಲ್ಲದೇ ಬೀಜೋಪಚಾರದ ಔಷಧಿ, ಅಣುಜೀವಿ ಗೊಬ್ಬರಗಳು, ಲಘು ಪೋಷಕಾಂಶಗಳನ್ನೂ ರಿಯಾಯಿತಿ ದರದಲ್ಲಿ ವಿತರಿಸಲಾಗುತ್ತಿದೆ ಎಂದು ರುದ್ರೇಶಪ್ಪ ತಿಳಿಸಿದರು.

ಬೀಜ ವಿತರಣಾ ಕೇಂದ್ರಗಳ ವಿವರ

ಹುಬ್ಬಳ್ಳಿ: ಜಿಲ್ಲೆಯ 28 ಕೇಂದ್ರಗಳಲ್ಲಿ ರಿಯಾಯ್ತಿ ದರದಲ್ಲಿ ರೈತರಿಗೆ ಬಿತ್ತನೆ ಬೀಜ ವಿತರಿಸಲಾಗುತ್ತಿದೆ. ಕೇಂದ್ರಗಳ ಪಟ್ಟಿ ಈ ಕೆಳಗಿನಂತಿದೆ.

ಧಾರವಾಡ ತಾಲ್ಲೂಕಿನ ರೈತ ಸಂಪರ್ಕ ಕೇಂದ್ರಗಳಾದ ಧಾರವಾಡ, ಗರಗ, ಅಮ್ಮಿನಭಾವಿ, ಅಳ್ನಾವರ, ನಿಗದಿ (ಹೆಚ್ಚುವರಿ), ಹೆಬ್ಬಳ್ಳಿ (ಹೆಚ್ಚುವರಿ), ಉಪ್ಪಿನ ಬೆಟಗೇರಿ (ಹೆಚ್ಚುವರಿ), ನರೇಂದ್ರ (ಹೆಚ್ಚುವರಿ) ಹಾಗೂ ಮನಗುಂಡಿ (ಸೊಸೈಟಿ)

ಹುಬ್ಬಳ್ಳಿ ತಾಲ್ಲೂಕಿನ ರೈತ ಸಂಪರ್ಕ ಕೇಂದ್ರಗಳಾದ ಹುಬ್ಬಳ್ಳಿ, ಶಿರಗುಪ್ಪಿ, ಛಬ್ಬಿ, ಹಳೇ ಹುಬ್ಬಳ್ಳಿ, ಬಿಡ್ನಾಳ, ಕುಸುಗಲ್, ಕಲಘಟಗಿ ತಾಲೂಕಿನ ರೈತ ಸಂಪರ್ಕ ಕೇಂದ್ರಗಳಾದ ಕಲಘಟಗಿ, ತಬಕದಹೊನ್ನಳ್ಳಿ, ಧುಮ್ಮವಾಡ, ತಾವರಗೆರೆ (ಹೆಚ್ಚುವರಿ), ಮಿಶ್ರಿಕೋಟಿ ( ಹೆಚ್ಚುವರಿ), ಗಂಜಿಗಟ್ಟಿ(ಹೆಚ್ಚುವರಿ), ಬೇಗೂರು (ಹೆಚ್ಚುವರಿ), ಕುಂದಗೋಳ ತಾಲ್ಲೂಕಿನ ರೈತ ಸಂಪರ್ಕ ಕೇಂದ್ರಗಳಾದ ಕುಂದಗೋಳ, ಸಂಶಿ, ಯರಗುಪ್ಪಿ (ಸೊಸೈಟಿ), ಯಲಿವಾಳ (ಹೆಚ್ಚುವರಿ), ಗುಡಗೇರಿ (ಸೊಸೈಟಿ), ನವಲಗುಂದ ತಾಲ್ಲೂಕಿನ ರೈತ ಸಂಪರ್ಕ ಕೇಂದ್ರಗಳಾದ ಅಣ್ಣಿಗೇರಿ, ಮೊರಬ, ನವಲಗುಂದ (ಹೆಚ್ಚುವರಿ) ಮತ್ತು ಶಲವಡಿ (ಹೆಚ್ಚುವರಿ).

**
ಉತ್ತಮ ಮಳೆಯಾಗುತ್ತಿರುವುದರಿಂದ ಬಿತ್ತನೆಗೆ ಪೂರಕವಾಗಿ ಬೀಜ ಹಾಗೂ ರಸಗೊಬ್ಬರ ಪೂರೈಕೆಗೆ ಕೃಷಿ ಇಲಾಖೆ ವತಿಯಿಂದ ಸಕಲ ಸಿದ್ದತೆ ಮಾಡಿಕೊಂಡಿದೆ
- ಟಿ.ಎಸ್‌. ರುದ್ರೇಶಪ್ಪ, ಕೃಷಿ ಇಲಾಖೆ ಜಂಟಿ ನಿರ್ದೇಶಕ 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.