ADVERTISEMENT

ಬಿಸಿಲು ಮರೆಸಿದ ಮಳೆರಾಯ...ತಂಪು ತಂದ...

​ಪ್ರಜಾವಾಣಿ ವಾರ್ತೆ
Published 3 ಜುಲೈ 2012, 6:05 IST
Last Updated 3 ಜುಲೈ 2012, 6:05 IST
ಬಿಸಿಲು ಮರೆಸಿದ ಮಳೆರಾಯ...ತಂಪು ತಂದ...
ಬಿಸಿಲು ಮರೆಸಿದ ಮಳೆರಾಯ...ತಂಪು ತಂದ...   

ಹುಬ್ಬಳ್ಳಿ: ಸೋಮವಾರ ಬೆಳಿಗ್ಗೆ ಮಳೆಯೊಂದಿಗೆ ಚೆಲ್ಲಾಟವಾಡಿದ ಬಿಸಿಲು ನಂತರ ಸೋತು ಮರೆಯಾಯಿತು.  ಇದರಿಂದ ಸೋಮವಾರ ಸುಮಾರು ಮಧ್ಯಾಹ್ನ 12 ಗಂಟೆಯಿಂದ ಜಿಟಿ ಜಿಟಿಯಾಗಿದ್ದ ಮಳೆ ಆಗಾಗ ಜೋರಾಗಿ ಸುರಿದು ತಂಪಾದ ವಾತಾವರಣವನ್ನು ಉಂಟು ಮಾಡಿತು.

ಮಳೆಯಾಗುತ್ತಿದ್ದರೂ ವಿದ್ಯಾನಗರದ ಸರ್ಕಾರಿ ಮಹಿಳಾ ಪಾಲಿಟೆಕ್ನಿಕ್ ಕಾಲೇಜಿನ ಅಂಗಳದಲ್ಲಿ ಜಿಟಿಎಸ್ ಶಾಲೆಯ ವಿದ್ಯಾರ್ಥಿಗಳು ಕ್ರಿಕೆಟ್ ಆಡಿದರು. ಛತ್ರಿ, ರೇನ್‌ಕೋಟ್ ಒಯ್ಯದ ಶಾಲೆಯ ವಿದ್ಯಾರ್ಥಿಗಳು ಮಳೆಯಲ್ಲಿಯೇ ಮನೆ ಸೇರಿದರೆ, ಅಪ್ಪ-ಅಮ್ಮನ ಒತ್ತಾಯಕ್ಕೆ ರೇನ್‌ಕೋಟ್ ಒಯ್ದಿದ್ದ ಮಕ್ಕಳು ತಮ್ಮ ಗೆಳೆಯರಿಗೂ ಆಸರೆಯಾದರು.

ದುರ್ಗದಬೈಲ್‌ನಲ್ಲಿಯ ಮಹಾತ್ಮ ಗಾಂಧಿ ಮಾರ್ಕೆಟ್ ಹಾಗೂ ಹಳೇಹುಬ್ಬಳ್ಳಿಯ ದುರ್ಗದಬೈಲ್‌ನಲ್ಲಿ ಮಳೆಯ ನಡುವೆಯೇ ಸಾರ್ವಜನಿಕರು ತರಕಾರಿ ಕೊಂಡರು. ಬಿಸಿಲಿಗೂ ಮಳೆಗೂ ಆಸರೆಯಾದೀತೆಂದು ದೊಡ್ಡ ಛತ್ರಿಯಡಿ ಆಶ್ರಯ ಪಡೆದ ಕಾಯಿಪಲ್ಲೆ ಮಾರುವವರ ನಡುವೆ, ಟವೆಲ್ಲುಗಳನ್ನು ಹೊದ್ದುಕೊಂಡು ಕಾಯಿಪಲ್ಲೆ ಮಾರುವುದನ್ನು ಮುಂದುವರಿಸಿದರು.

ADVERTISEMENT

ಮಳೆಯ ಮನ್ಸೂಚನೆ ಇದ್ದವರು ಜರ್ಕಿನ್ ಧರಿಸಿ ದ್ವಿಚಕ್ರ ವಾಹನಗಳಲ್ಲಿ ಸಂಚರಿಸಿದರು. ಕೆಲವು ಸವಾರರು ಕರ್ಚಿಫ್‌ಗಳನ್ನು ತಲೆಗೆ ಹಾಕಿಕೊಂಡರೆ, ಅವರ ಹಿಂದೆ ಕುಳಿತಿದ್ದವರು ತಲೆ ಮೇಲೆ ಸೆರಗು ಹೊದ್ದು ಮನೆಗೆ ತೆರಳಿದರು. ಜರ್ಕಿನ್ ಹಾಗೂ ಹೆಲ್ಮೆಟ್ ಇಲ್ಲದ ಕಾಲೇಜು ವಿದ್ಯಾರ್ಥಿನಿಯರು ತಮ್ಮಲ್ಲಿಯ ದುಪ್ಪಟ್ಟಾವನ್ನೇ ತಲೆಗೆ ಸುತ್ತಿಕೊಂಡು ದ್ವಿಚಕ್ರ ವಾಹನಗಳನ್ನು ಓಡಿಸಿದರು.

`15 ದಿನಗಳವರೆಗೆ ಆರಿದ್ರಾ ಮಳಿ ಬರ‌್ತದ. ಬರೋ ಅಮಾವಾಸ್ಯೆವರೆಗೆ ಆರಿದ್ರಾ ಮಳಿ ಅವಧಿ. ಆರಿದ್ರಾ ಮಳಿ ಛಲೋ ಆದ್ರ ದರಿದ್ರ ಹೋಗ್ತದ. ಈ ಮಳಿ ಸರಿಯಾಗಿ ಆದ್ರ ಜ್ವಾಳ, ಉಳ್ಳಾಗಡ್ಡಿ, ಗೋವಿನಜೋಳ, ಹತ್ತಿ, ಶೇಂಗಾ, ಬಳ್ಳೊಳ್ಳಿ ಬೆಳಿಬಹುದು. ಆದ್ರ ಮುಂಗಾರಿ ಮಳೆ ಕೈಕೊಟ್ಟಿದ್ರಿಂದ ಬಹಳ ತ್ರಾಸು ಆತ್ರಿ~ ಎನ್ನುತ್ತಾರೆ ಹುಬ್ಬಳ್ಳಿ ತಾಲ್ಲೂಕಿನ ಇಂಗಳಹಳ್ಳಿಯ ರೈತ ಬಾಗಪ್ಪ ವೆಂಕಟಣ್ಣವರ.

ತಡದ ಮಳಿ ಜಡದ ಬಂತು...

ಧಾರವಾಡ: `ಓ ಮೋಡಗಳೇ ಎಲ್ಲಿ ಹೋಗುವಿರಿ, ನಿಲ್ಲಿ. ನಾಲ್ಕು ಹನಿಯ ಚೆಲ್ಲಿ~ ಎಂಬ ಮಾತಿಗೆ ಓಗೊಟ್ಟ ಮೋಡರಾಯ ಸೋಮವಾರ ಇಳೆಯನ್ನು ಮಳೆಯಿಂದ ತೋಯಿಸಿದ.

`ತಡದ ಬಂದ ಮಳಿ ಜಡದ ಬಂತು~ ಎಂಬ ಗ್ರಾಮೀಣರ ಮಾತಿನಂತೆ ತಿಂಗಳ ಬಳಿಕ ಇದೇ ಮೊದಲ ಬಾರಿಗೆ ಸುಮಾರು 45 ನಿಮಿಷಗಳಿಗೂ ಹೆಚ್ಚು ಕಾಲ ನಗರದಲ್ಲಿ ಜೋರಾಗಿಯೇ ಸುರಿಯಿತು. ತಾಲ್ಲೂಕಿನ ವಿವಿಧ ಭಾಗಗಳಲ್ಲೂ ಮಳೆ ತನ್ನ ಅಬ್ಬರವನ್ನು ತೋರಿಸಿದ್ದು, ಮಳೆಯಿಲ್ಲದೇ ಬಿತ್ತನೆ ಕಾರ್ಯವನ್ನು ಸ್ಥಗಿತಗೊಳಿಸಿದ್ದ ಕೃಷಿಕರ ಮೊಗದಲ್ಲಿ ಈ ಮಳೆ ಮಂದಹಾಸವನ್ನು ಉಂಟು ಮಾಡಿದೆ.

ಬೆಳಿಗ್ಗೆಯಿಂದಲೇ ನಗರದಲ್ಲಿ ಮೋಡ ಕವಿದ ವಾತಾವರಣವಿತ್ತು. ಬೆಳಿಗ್ಗೆಯೇ ಜೋರಾದ ಮಳೆ ಬೀಳಲಿದೆ ಎಂಬ ನಿರೀಕ್ಷೆ ಇತ್ತಾದರೂ ಸಂಜೆ 4.15ರ ಸುಮಾರಿಗೆ ಮಳೆರಾಯ ತನ್ನ ನರ್ತನ ಆರಂಭಿಸಿದ. ಸಂಜೆ 5 ಗಂಟೆಯವರೆಗೂ ಸತತವಾಗಿ ಒಂದೇ ಸಮನೆ ಸುರಿದ ಮಳೆ, ಒಂದರ್ಧ ಗಂಟೆ ಬಿಡುವು ನೀಡಿತು. ಶಾಲಾ ಸಮಯವಾದ್ದರಿಂದ ಮಕ್ಕಳು ಮನೆ ಸೇರಿಕೊಳ್ಳಲಿ ಎಂದೇನೋ?!

ಅದಾದ ಬಳಿಕವೂ ಸಂಜೆ ಕೆಲ ಹೊತ್ತಿನವರೆಗೂ ಜಿಟಿ ಜಿಟಿ ಮಳೆ ಸುರಿಯಿತು. ಬಹಳ ದಿನಗಳ ನಂತರ ಕಾಣಿಸಿಕೊಂಡ ಮಳೆಯಿಂದ ನಗರವಾಸಿಗಳು ಸಂತಸಪಟ್ಟರೆ, ಗ್ರಾಮೀಣರಿಗೂ ಇಮ್ಮಡಿ ಸಂತಸವಾಯಿತು. ಈಗಾಗಲೇ ಹೊಲಗಳನ್ನು ಬಿತ್ತನೆಗಾಗಿ ಹದಗೊಳಿಸಿ, ಬೀಜ-ಗೊಬ್ಬರಗಳನ್ನು ಸಂಗ್ರಹಿಸಿಟ್ಟಿದ್ದ ರೈತರು ಇದೀಗ ಬಿತ್ತನೆಯ ಕಾರ್ಯಕ್ಕೆ ಮುಂದಾಗುವ ಧಾವಂತದಲ್ಲಿದ್ದಾರೆ. ಬಿತ್ತನೆಗೆ ಅನುವಾಗುವಂತೆ ನೆಲ ತೊಯ್ಯಲು ಇನ್ನೂ ಒಂದೆರಡು ಬಾರಿ ಇಂಥ ಮಳೆ ಬೀಳಬೇಕು ಎಂದು ರೈತರು ಬಯಸಿದ್ದು, ಮಳೆರಾಯನ ಚಿತ್ತ ಎತ್ತಿದೆಯೋ ನೋಡಬೇಕು.

ಆದರೆ ನಗರದಲ್ಲಿ ಮಳೆ ಸುರಿದುದರಿಂದ ಎಂದಿನಂತೆ ಛತ್ರಿ, ಜೆರ್ಕಿನ್, ಟೋಪಿ, ಮಫ್ಲರ್, ರೇನ್ ಕೋಟ್‌ಗಳು ಸಿಟಿಯ ನಾಜೂಕು ಬದುಕಿನ ಮಂದಿಯ ಮೈಯನ್ನು ಅಲಂಕರಿಸಿದ್ದವು. ನಗರದ ಜವಳಿ ಅಂಗಡಿಗಳು ಮಳೆಗಾಲದಲ್ಲಿ ವ್ಯಾಪಾರ ಜೋರು ಮಾಡಿಕೊಳ್ಳುವ ಸಲುವಾಗಿ ಷೋಕೇಸ್‌ಗಳಲ್ಲಿ ತರಹೇವಾರಿ ಬಣ್ಣದ ಜೆರ್ಕಿನ್‌ಗಳನ್ನು ಪ್ರದರ್ಶನಕ್ಕೆ ಇಟ್ಟಿವೆ. ಅವುಗಳ ಖರೀದಿ ಮಳೆರಾಯನ ಆರ್ಭಟ ಆಧರಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.