ADVERTISEMENT

ಮನೆಮನೆಗೆ ‘ಸಬ್ಸಿಡಿ ಮಾಹಿತಿ’ ಆಂದೋಲನ

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2013, 5:14 IST
Last Updated 17 ಸೆಪ್ಟೆಂಬರ್ 2013, 5:14 IST

ಹುಬ್ಬಳ್ಳಿ: ನಗರದ ಕೆಲವು ಅಡುಗೆ ಅನಿಲ ಏಜೆನ್ಸಿಗಳ ‘ಡೆಲಿವರಿ ಬಾಯ್ಸ್‌’ ಈಗ ಕೇವಲ ಸಿಲಿಂಡರ್‌ ಮಾತ್ರ ತೆಗೆದುಕೊಂಡು ಬರುತ್ತಿಲ್ಲ. ಅವರ ಕೈಯಲ್ಲಿ ಒಂದು ಚೀಟಿ ಮತ್ತು ಒಂದು ಕರಪತ್ರವೂ ಇರುತ್ತದೆ. ಅದರಲ್ಲಿ ಇರುವುದು ಕೇಂದ್ರ ಸರ್ಕಾರದ ಸಬ್ಸಿಡಿಗೆ ಸಂಬಂಧಪಟ್ಟ ಮಾಹಿತಿ; ಸಬ್ಸಿಡಿ ಪಡೆಯಲು ಗ್ರಾಹಕರು ಮಾಡಬೇಕಾದ ಕರ್ತ್ವವ್ಯಗಳ ಕುರಿತ ವಿವರ.

ರಾಜ್ಯದ ಮೈಸೂರು ಮತ್ತು ತುಮಕೂರಿನಲ್ಲಿ ಸಬ್ಸಿಡಿಯನ್ನು ನೇರವಾಗಿ ಗ್ರಾಹಕರ ಬ್ಯಾಂಕ್‌ ಖಾತೆಗೆ ಜಮಾ ಮಾಡುವ ಯೋಜನೆ ಜಾರಿಗೊಳಿಸಿರುವ ಕೇಂದ್ರ ಸರ್ಕಾರ ಮೂರನೇ ಹಂತದಲ್ಲಿ ಧಾರವಾಡ ಮತ್ತು ಉಡುಪಿ ಜಿಲ್ಲೆಗಳನ್ನು ಆರಿಸಿಕೊಂಡಿದೆ. ಅಕ್ಟೋಬರ್‌ ಒಂದರಿಂದ ಧಾರವಾಡ ಜಿಲ್ಲೆಯ ಎಲ್ಲ ಎಲ್‌ಪಿಜಿ ಗ್ರಾಹಕರು ಈ ಸೌಲಭ್ಯಕ್ಕೆ ಒಳಪಡುತ್ತಾರೆ. ವಿವಿಧ ಮೂಲಗಳ ಮೂಲಕ ಈ ವಿವರವನ್ನು ಪ್ರಚಾರ ಮಾಡಿದರೂ ಗ್ರಾಹಕರ ಪೈಕಿ ಹೆಚ್ಚಿನವರು ಸುಮ್ಮನೆ ಕುಳಿತ ಕಾರಣ ಗ್ಯಾಸ್ ಏಜೆನ್ಸಿಯವರೇ ಪ್ರಚಾರಕ್ಕೆ ಮುಂದಾಗಿದ್ದಾರೆ. ಭಾರತ್‌ ಪೆಟ್ರೋಲಿಯಂ ಲಿಮಿಟೆಡ್‌ ಕಂಪೆನಿ ಈ ವಿಷಯದಲ್ಲಿ ಮುಂಚೂಣಿಯಲ್ಲಿದ್ದು ದೇಶಪಾಂಡೆ ನಗರದ ಗರಗಟ್ಟೆ ಗ್ಯಾಸ್‌ ಏಜೆನ್ಸಿಯವರು ಆಧಾರ್‌ ನೋಂದಣಿ ಕೇಂದ್ರಕ್ಕೂ ತಮ್ಮ ಏಜೆನ್ಸಿಯಲ್ಲೇ ಅವಕಾಶ ನೀಡಿ ಯೋಜನೆಯಲ್ಲಿ ಸಂಪೂರ್ಣ ತೊಡಗಿಸಿಕೊಂಡಿದ್ದಾರೆ.

ವರ್ಷದಲ್ಲಿ ಒಂಬತ್ತು ಸಿಲಿಂಡರ್‌ಗಳಿಗೆ ಕೇಂದ್ರ ಸರ್ಕಾರ ನೀಡುವ ಸಬ್ಸಿಡಿಯನ್ನು ಪಡೆಯಬೇಕಾ­ದರೆ ಗ್ರಾಹಕರು ತಮ್ಮ ಆಧಾರ್‌ ಕಾರ್ಡ್‌ನ ಜೆರಾಕ್ಸ್‌ ಪ್ರತಿಯನ್ನು ಏಜೆನ್ಸಿಗೆ ಕೊಡ­ಬೇಕು. ಅದರಲ್ಲಿ ಮೊಬೈಲ್‌ ಸಂಖ್ಯೆ, ಗ್ರಾಹಕ ಸಂಖ್ಯೆ­ಯನ್ನು ಕೊಡಬೇಕು. ಗ್ಯಾಸ್‌ ಏಜೆನ್ಸಿಯವರು ಇದನ್ನು ತಮ್ಮ ಕಂಪೆನಿಯ ಪೋರ್ಟಲ್‌ನಲ್ಲಿ ಫೀಡ್‌ ಮಾಡುತ್ತಾರೆ. ಇದೇ ರೀತಿಯಲ್ಲಿ ಬ್ಯಾಂಕ್‌ನಲ್ಲೂ ನಡೆಯುತ್ತದೆ. ಜಿಲ್ಲೆಯ ಲೀಡ್ ಬ್ಯಾಂಕ್‌ ಹಾಗೂ ಕೇಂದ್ರ ಸರ್ಕಾರದ ನಾಗರಿಕ ಪೂರೈಕೆ ಇಲಾಖೆಯ ಸರ್ವರ್‌ಗೆ ಈ ಎಲ್ಲ ಮಾಹಿತಿ ರವಾನೆಯಾ­ಗುತ್ತದೆ. ಗ್ಯಾಸ್‌ ಏಜೆನ್ಸಿಯಲ್ಲಿ ಮತ್ತು ಬ್ಯಾಂಕ್‌­ನಲ್ಲಿ ನೀಡಿದ ಮಾಹಿತಿ ಪರಸ್ಪರ ಹೊಂದಿಕೆ­ಯಾದರೆ ಗ್ರಾಹಕ ಸಬ್ಸಿಡಿ ಪಡೆಯಲು ಅರ್ಹನಾಗುತ್ತಾನೆ.

ಅಕ್ಟೋಬರ್‌ ಒಂದರಿಂದ ಗ್ರಾಹಕ ಸಿಲಿಂಡರ್‌ ಒಂದಕ್ಕೆ ₨ 959 (ಸದ್ಯದ ಬೆಲೆ) ಕೊಡಬೇಕು. ಎರಡು ದಿನಗಳ ಒಳಗೆ ಸಬ್ಸಿಡಿ ಮೊತ್ತ (ಈಗ ₨ 416.50) ಬ್ಯಾಂಕ್‌ ಖಾತೆಗೆ ಜಮಾ ಆಗುತ್ತದೆ. ಇಷ್ಟು ಆಗಬೇಕಾದರೆ ಆಧಾರ್‌ ನೋಂದಣಿ ಆಗಲೇ ಬೇಕು. ಇದು ಗ್ರಾಹಕರ ಕರ್ತವ್ಯ. ಆದರೆ ಜಿಲ್ಲೆಯಲ್ಲಿ ಇನ್ನೂ 25 ಶೇಕಡಾ ಮಂದಿ ಕೂಡ ಇದನ್ನು ಮಾಡಲು ಮುಂದಾಗಲಿಲ್ಲ. ಈ ಹಿನ್ನೆಲೆಯಲ್ಲಿ ಕೊನೆಗೆ ತಮ್ಮ ಮೇಲೆ ಆರೋಪ ಬರು­ವುದು ಬೇಡ ಎಂಬ ಕಾರಣಕ್ಕೆ ಏಜೆನ್ಸಿ­ಯವರು ತಾವೇ ಪ್ರಚಾರಕ್ಕೆ ಮುಂದಾಗಿದ್ದಾರೆ. ಇದು ಅತ್ಯಂತ ಯಶಸ್ವಿಯೂ ಆಗಿದೆ.

ಸೆಪ್ಟೆಂಬರ್ ಒಂದರಿಂದ ‘ಪ್ರಚಾರ ಅಭಿ­ಯಾನ’ ನಡೆಸುತ್ತಿರುವ ಗರಗಟ್ಟೆ ಗ್ಯಾಸ್‌ ಏಜೆನ್ಸಿ­ಯಲ್ಲಿ ದಿನಗಳೆದಂತೆ ಜನರ ಪಾಳಿ ಹೆಚ್ಚುತ್ತಿದೆ. ಏಜೆನ್ಸಿಯ ಸಿಬ್ಬಂದಿ ಇಡೀ ದಿನ ಗ್ರಾಹಕರ ಮಾಹಿತಿ ನೋಂದಣಿಯಲ್ಲಿ ತೊಡಗಿದ್ದಾರೆ. ಇಲ್ಲಿ ಆಧಾರ್‌ ನೋಂದಣಿ ಸೌಲಭ್ಯವೂ ಇರುವುದ­ರಿಂದ ಒಂದೇ ಸೂರಿನಡಿ ಎಲ್ಲ ಕೆಲಸಗಳನ್ನು ಮಾಡಿ­ಸಿ­ಕೊಂಡು ಹೋಗುವ ಖುಷಿ ಗ್ರಾಹಕರಿಗೆ ಸಿಗುತ್ತಿದೆ.

‘ಕೊನೆಯ ಗಳಿಗೆಯಲ್ಲಿ ಉಂಟಾಗುವ ಜನ­ದಟ್ಟಣೆಯನ್ನು ಇಲ್ಲದಾಗಿಸಲು ಮತ್ತು ಗ್ರಾಹಕರು ಆದಷ್ಟು ಬೇಗ ತಮ್ಮ ಸೌಲಭ್ಯವನ್ನು ಪಡೆದು­ಕೊಳ್ಳಲು ಅನುಕೂಲವಾಗಲಿ ಎಂದು ಬಿಲ್‌ ಜೊತೆ ಸೀಲ್‌ ಹಾಕಿದ ಚೀಟಿ ಹಾಗೂ ಕರಪತ್ರ­ಗಳನ್ನು ಹಂಚಲಾಗುತ್ತಿದೆ. ಇದಕ್ಕೆ ಉತ್ತಮ ಸ್ಪಂದನೆ ದೊರಕಿದೆ. ಯಾವುದೇ ಕಂಪೆನಿಯ, ಯಾವುದೇ ಏಜೆನ್ಸಿಯ ಗ್ರಾಹಕರು ಬಂದರೂ ನಮ್ಮಲ್ಲಿ ಮಾಹಿತಿಯನ್ನು ಫೀಡ್‌ ಮಾಡಿಕೊಡು­ತ್ತೇವೆ. ಗ್ಯಾಸ್‌ ಸಿಲಿಂಡರ್‌ಗಳ ಅಕ್ರಮ ಬಳಕೆ, ಅವ್ಯವಹಾರ ತಡೆಗಟ್ಟಲು ಕೇಂದ್ರ ಜಾರಿಗೆ ತಂದಿರುವ ಈ ಮಹತ್ವದ ಯೋಜನೆ ಯಶಸ್ವಿಯಾ­ಗಬೇಕೆಂಬುದು ನಮ್ಮ ಬಯಕೆ’ ಎಂದು ಗರಗಟ್ಟೆ ಗ್ಯಾಸ್‌ ಏಜೆನ್ಸಿಯ ಮಾಲೀಕ ಅನೂಪ್‌ ಗರಗಟ್ಟೆ ‘ಪ್ರಜಾವಾಣಿ’ಗೆ ತಿಳಿಸಿದರು.

‘ನಮ್ಮ ಹುಡುಗರು ಗ್ರಾಹಕರು ಏಜೆನ್ಸಿಗೆ ತೆಗೆದುಕೊಂಡು ಬರಬೇಕಾದ ಜೆರಾಕ್ಸ್‌ ಪ್ರತಿ ಹಾಗೂ ಮಾಹಿತಿಯನ್ನೂ ತಾವೇ ಸಂಗ್ರಹ ಮಾಡಿಕೊಂಡು ಬರುತ್ತಾರೆ. ಒಂದು ಬಾರಿ ಫೀಡ್ ಆದ ಮಾಹಿತಿಯನ್ನು ಸ್ವತಃ ನಾನು ‘ಕ್ರಾಸ್‌ ಚೆಕ್‌’ ಮಾಡುತ್ತೇನೆ. ಮಾಹಿತಿ ತಾಳೆ ಆಗದಿದ್ದರೆ ಗ್ರಾಹಕರಿಗೆ ತಿಳಿಸಿ ಸರಿಪಡಿಸಲಾಗುತ್ತದೆ. ಎಲ್ಲ ಎಲ್‌ಪಿಜಿ ಗ್ರಾಹಕರು ಇನ್ನಾದರೂ ಆದಷ್ಟು ಬೇಗ ತಮ್ಮ ಮಾಹಿತಿಯನ್ನು ಫೀಡ್‌ ಮಾಡಿಸಿಕೊಳ್ಳಲು ಮುಂದಾಗಬೇಕು’ ಎಂದು ಅನೂಪ್‌ ಮನವಿ ಮಾಡಿದರು.

‘ಸರ್ಕಾರದ ಸೌಲಭ್ಯವನ್ನು ಜನರಿಗೆ ತಲುಪಿಸಲು ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗಿದೆ. ಪ್ರತಿ ಗ್ರಾಹಕನ ಮನೆ ಬಾಗಿಲಿಗೆ ಮಾಹಿತಿ ತಲುಪಿಸುತ್ತಿದ್ದೇವೆ. ಸದ್ಯದಲ್ಲೇ ಬಸ್‌್ ನಿಲ್ದಾಣ ಹಾಗೂ ರೈಲು ನಿಲ್ದಾಣಗಳಲ್ಲಿ ಪ್ರಚಾರ ಕಾರ್ಯ ಆರಂಭಿಸಲಾಗುವುದು. ಬ್ಯಾಂಕಿಗೆ ಕೊಡಬೇಕಾದ ಜೆರಾಕ್ಸ್‌ ಪ್ರತಿ ಮತ್ತು ಮಾಹಿತಿಯನ್ನು ಸಂಗ್ರಹ ಮಾಡಲು ಏಜೆನ್ಸಿಗಳ ಮುಂದೆ ಪೆಟ್ಟಿಗೆ­ಯೊಂದನ್ನು ಇರಿಸುವ ಕಾರ್ಯ ಕೂಡ ಶೀಘ್ರದಲ್ಲಿ ನಡೆಯಲಿದೆ’ ಎಂದು ಭಾರತ್‌ ಪೆಟ್ರೋಲಿಯಂ ಕಾರ್ಪೊರೇಷನ್‌ ಪ್ರಾದೇಶಿಕ ಕಚೇರಿಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.