ADVERTISEMENT

‘ಸರ್ಕಾರದಿಂದ ಪ್ರಥಮ ಬಾರಿಗೆ ಚನ್ನಮ್ಮ ವಿಜಯೋತ್ಸವ’

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2017, 7:05 IST
Last Updated 16 ಅಕ್ಟೋಬರ್ 2017, 7:05 IST
ಬಸವ ಜಯಮೃತ್ಯುಂಜಯ ಸ್ವಾಮೀಜಿ
ಬಸವ ಜಯಮೃತ್ಯುಂಜಯ ಸ್ವಾಮೀಜಿ   

ಹುಬ್ಬಳ್ಳಿ: ‘ಭಾರತ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪ್ರಥಮ ಬಾರಿಗೆ ಬ್ರಿಟಿಷರ ವಿರುದ್ಧ ಹೋರಾಡಿ ಜಯ ಗಳಿಸಿದ ವೀರ ಮಹಿಳೆ ಕಿತ್ತೂರು ರಾಣಿ ಚನ್ನಮ್ಮಳ ವಿಜಯೋತ್ಸವ ಹಾಗೂ ಜಯಂತಿಯನ್ನು ರಾಜ್ಯ ಸರ್ಕಾರವು ಪ್ರಥಮ ಬಾರಿಗೆ ಸರ್ಕಾರಿ ಕಾರ್ಯಕ್ರಮವನ್ನಾಗಿ ಆಚರಿಸಲು ಒಪ್ಪಿಕೊಂಡು, ಅಧಿಸೂಚನೆ ಹೊರಡಿಸಿದೆ’ ಎಂದು ಕೂಡಲಸಂಗಮದ ಪಂಚಮಸಾಲಿಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ತಿಳಿಸಿದರು.

‘ಅಕ್ಟೋಬರ್‌ 23 ರಂದು ಸಂಜೆ 5ಕ್ಕೆ ವಿಧಾನಸೌಧದ ಬ್ಯಾಂಕ್ವೆಟ್‌ ಹಾಲ್‌ನಲ್ಲಿ ಪ್ರಥಮ ಬಾರಿಗೆ ಸರ್ಕಾರದ ವತಿಯಿಂದ ನಡೆಯುವ ಚನ್ನಮ್ಮನ ವಿಜಯೋತ್ಸವವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಲಿದ್ದಾರೆ’ ಎಂದು ಅವರು ಭಾನುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

‘ದೇಶದ ಸಂಸತ್‌ ಭವನದ ಎದುರು ಇರುವ ಚನ್ನಮ್ಮಳ ಮೂರ್ತಿಗೆ ಅಕ್ಟೋಬರ್‌ 23 ರಂದು ಕೇಂದ್ರ ಸರ್ಕಾರದಿಂದ ಸೂಕ್ತ ಗೌರವ ಸಿಗುವಂತಾಗಬೇಕಾಗಿದ್ದು, ಈ ಸಂಬಂಧ ಕೇಂದ್ರ ಸಚಿವರಿಗೆ ಪತ್ರ ಬರೆಯಲಾಗಿದೆ’ ಎಂದು ಅವರು ಹೇಳಿದರು.

ADVERTISEMENT

‘ಸಿಬಿಎಸ್‌ಇ ಪಠ್ಯಕ್ರಮದಲ್ಲಿ ಕಿತ್ತೂರು ರಾಣಿ ಚನ್ನಮ್ಮ, ಕೆಳದಿ ಚನ್ನಮ್ಮ, ರಾಣಿ ಅಬ್ಬಕ್ಕ, ಬೆಳವಡಿ ಮಲ್ಲಮ್ಮ ಅವರಂಥ ಸ್ವಾತಂತ್ರ್ಯ ಹೋರಾಟಗಾರ್ತಿಯರ ಜೀವನ, ಹೋರಾಟವನ್ನು ಮಕ್ಕಳಿಗೆ ಪರಿಚಯಿಸುವ ಕೆಲಸವಾಗಬೇಕಾಗಿದೆ’ ಎಂದರು.

ಸಮಿತಿಗೆ ನೇಮಕ: ಅಖಿಲ ಭಾರತ ಕಿತ್ತೂರು ರಾಣಿ ಚನ್ನಮ್ಮ ಜಯಂತಿ ಮತ್ತು ವಿಜಯೋತ್ಸವ ಸಮಿತಿ ಅಧ್ಯಕ್ಷರನ್ನಾಗಿ ಶಾಸಕ ವಿಜಯಾನಂದ ಕಾಶಪ್ಪನವರ ಅವರನ್ನು ನೇಮಕ ಮಾಡಲಾಗಿದೆ ಎಂದು ಸ್ವಾಮೀಜಿ ತಿಳಿಸಿದರು.

ಬೆಂಗಳೂರಿನಲ್ಲಿ ಸಚಿವ ವಿನಯ ಕುಲಕರ್ಣಿ ಅವರ ಮನೆಯಲ್ಲಿ ಗುರುವಾರ(ಅ.12) ನಡೆದ ಸಭೆಯಲ್ಲಿ ಸಮಿತಿಗೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ ಎಂದರು. ಸಮಿತಿಗೆ ಮಹಾ ಪೋಷಕರನ್ನಾಗಿ ಎಸ್‌.ಬಿ.ಸಿದ್ನಾಳ, ಎಚ್‌.ಎಂ.ರೇವಣ್ಣ, ಪಿ.ಸಿ.ಸಿದ್ದನಗೌಡರ, ಬಸನಗೌಡ ಪಾಟೀಲ ಯತ್ನಾಳ, ಶಿವಾನಂದ ಪಾಟೀಲ, ಎ.ಬಿ.ಪಾಟೀಲ, ಸಂಗಣ್ಣ ಕರಡಿ, ಮಂಜುನಾಥ ಕನ್ನೂರ, ಗೌರಮ್ಮ ಕಾಶಪ್ಪನವರ, ಪ್ರೊ.ಸಿ.ಎಸ್‌.ನಿಲೋಗಲ್‌, ಜಿ.ಬಿ.ಪಾಟೀಲ, ಸಿ.ಎ.ಪೊಲೀಸ್‌ ಪಾಟೀಲ ಅವರನ್ನು ನೇಮಕ ಮಾಡಲಾಗಿದೆ ಎಂದು ಹೇಳಿದರು.

ಗೌರವಾಧ್ಯಕ್ಷರನ್ನಾಗಿ ಮುರುಗೇಶ ನಿರಾಣಿ ಹಾಗೂ ಉಪಾಧ್ಯಕ್ಷರನ್ನಾಗಿ ಎಚ್‌.ಎಸ್‌.ಶಿವಶಂಕರ, ಆನಂದ ಮಾಮನಿ ಮತ್ತು ವಿಶ್ವನಾಥ ಪಾಟೀಲ ಅವರನ್ನು ನೇಮಕ ಮಾಡಲಾಗಿದೆ ಎಂದು ತಿಳಿಸಿದರು. ಸಮಾಜದ ಮುಖಂಡರಾದ ನೀಲಕಂಠ ಅಸೂಟಿ, ರಾಜಶೇಖರ ಮೆಣಸಿನಕಾಯಿ, ಕಲ್ಲಪ್ಪ ಎಲಿವಾಳ, ಮುತ್ತಣ್ಣ ಬಾಡಿನ, ವಿಕಾಸ ಸೊಪ್ಪನ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.