ADVERTISEMENT

ಸಾಲ ನೀಡಲು ವಿಶ್ವಬ್ಯಾಂಕ್ ತಾತ್ವಿಕ ಒಪ್ಪಿಗೆ

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2011, 11:55 IST
Last Updated 9 ಫೆಬ್ರುವರಿ 2011, 11:55 IST

ಹುಬ್ಬಳ್ಳಿ: ಅವಳಿನಗರದ ಬಸ್ ನಿಲ್ದಾಣಗಳ ಅಭಿವೃದ್ಧಿ ಹಾಗೂ ಎರಡೂ ನಗರಗಳ ಮಧ್ಯೆ ಬಸ್ ಸಾರಿಗೆ ಸೌಲಭ್ಯವನ್ನು ಉನ್ನತ ದರ್ಜೆಗೆ ಏರಿಸುವ ಸಲುವಾಗಿ ಅಗತ್ಯವಾದ ಧನ ಸಹಾಯ ನೀಡಲು ವಿಶ್ವಬ್ಯಾಂಕ್ ಅಧಿಕಾರಿಗಳ ತಂಡ ತಾತ್ವಿಕವಾಗಿ ಒಪ್ಪಿಗೆ ನೀಡಿದೆ.ವಿಶ್ವಬ್ಯಾಂಕ್ ಅಧಿಕಾರಿಗಳ ತಂಡದ ಜೊತೆ ಮಂಗಳವಾರ ಸಭೆ ನಡೆಸಿದ ನಂತರ ವಾಯವ್ಯ ಕರ್ನಾಟಕ ಸಾರಿಗೆ ಸಂಸ್ಥೆಯ ಅಧ್ಯಕ್ಷ ಮಲ್ಲಿಕಾರ್ಜುನ ಸಾವಕಾರ ‘ಪ್ರಜಾವಾಣಿ’ಗೆ ಈ ಮಾಹಿತಿ ನೀಡಿದರು. ‘ವಿಶ್ವಬ್ಯಾಂಕ್ ಸಾಲದ ರೂಪದಲ್ಲಿ ಶೇ.70ರಿಂದ 80ರಷ್ಟು ಧನ ಸಹಾಯ ಒದಗಿಸಲಿದ್ದು, ಮಿಕ್ಕ ಹಣವನ್ನು ರಾಜ್ಯ ಸರ್ಕಾರ ಭರಿಸಲಿದೆ’ ಎಂದು ಅವರು ಹೇಳಿದರು.

ಯೋಜನೆ ಅನುಷ್ಠಾನಕ್ಕೆ ಬರುವ ಪ್ರದೇಶಗಳಿಗೆ ಸೋಮವಾರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದ ಅಧಿಕಾರಿಗಳ ತಂಡ, ಮಂಗಳವಾರ ವಾಯವ್ಯ ಕರ್ನಾಟಕ ಸಾರಿಗೆ ಸಂಸ್ಥೆ, ಪಾಲಿಕೆ, ಲೋಕೋಪಯೋಗಿ, ರಾಜ್ಯ ನಗರ ಸಾರಿಗೆ ಅಭಿವೃದ್ಧಿ ನಿಗಮ (ಕೆಎಸ್‌ಆರ್‌ಡಿಎಲ್) ಮತ್ತು ಸಾರಿಗೆ ಇಲಾಖೆಯ ಅಧಿಕಾರಿಗಳ ಜೊತೆ ಸಮಾಲೋಚನೆ ನಡೆಸಿತು.‘ಚರ್ಚೆಯ ವಿವರಗಳನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಗಮನಕ್ಕೆ ತಂದು, ರಾಜ್ಯ ಸರ್ಕಾರದ ಒಪ್ಪಿಗೆ ಪಡೆದು, ಶೀಘ್ರವೇ ಯೋಜನೆಯನ್ನು ಅನುಷ್ಠಾನಕ್ಕೆ ತರಲಾಗುತ್ತದೆ. ನಮ್ಮ ಸಂಸ್ಥೆ ಹಾಕಿಕೊಂಡ ಯೋಜನೆಗಳಿಗೆ ರೂ. 146 ಕೋಟಿ ಬೇಕಾಗುತ್ತದೆ’ ಎಂದು ಸಾವಕಾರ ತಿಳಿಸಿದರು.

‘ಹುಬ್ಬಳ್ಳಿ-ಧಾರವಾಡ ಅವಳಿನಗರದ ನಡುವೆ ‘ಬಸ್ ತ್ವರಿತ ಪ್ರಯಾಣ ಸೌಲಭ್ಯ’ (ಬಸ್ ರ್ಯಾಪಿಡ್ ಟ್ರಾನ್ಸಿಟ್ ಸಿಸ್ಟಮ್-ಬಿಆರ್‌ಟಿಎಸ್) ಅನುಷ್ಠಾನಕ್ಕೆ ತರುವುದು, ಹುಬ್ಬಳ್ಳಿ ಮತ್ತು ಧಾರವಾಡ ನಗರಗಳ ಹಳೇ ಬಸ್ ನಿಲ್ದಾಣ ಮತ್ತು ಸಿಬಿಟಿ ನಿಲ್ದಾಣಗಳ ಅಭಿವೃದ್ಧಿ, ಮೂರು ಹೊಸ ಡಿಪೋಗಳ ಸ್ಥಾಪನೆ, ಈಗಿರುವ ಡಿಪೋಗಳನ್ನು ಉನ್ನತ ದರ್ಜೆಗೆ ಏರಿಸುವುದು ಮತ್ತು 300 ಬಸ್‌ಗಳ ಖರೀದಿ ಯೋಜನೆಯಲ್ಲಿ ಸೇರಿವೆ’ ಎಂದು ಅವರು ವಿವರಿಸಿದರು.

‘ಹೊಸ ಬಸ್‌ಗಳ ಖರೀದಿಗೆ ರೂ.75 ಕೋಟಿ, ಬಸ್ ನಿಲ್ದಾಣ ಮೇಲ್ದರ್ಜೆಗೆ ಏರಿಸಲು ಹಾಗೂ ಡಿಪೋ ನಿರ್ಮಾಣಕ್ಕೆ ರೂ.55 ಕೋಟಿ, ಸಾರಿಗೆ ವ್ಯವಸ್ಥೆ ಆಧುನೀಕರಣಕ್ಕೆ ರೂ. 15 ಕೋಟಿ ಖರ್ಚು ಮಾಡಲು ಉದ್ದೇಶಿಸಲಾಗಿದೆ’ ಎಂದು ಹೇಳಿದರು.ವಾಯವ್ಯ ಕರ್ನಾಟಕ ಸಾರಿಗೆ ಸಂಸ್ಥೆಯು ವಿಶ್ವಬ್ಯಾಂಕ್‌ಗೆ ಸಲ್ಲಿಸಿರುವ ಪ್ರಸ್ತಾವದಲ್ಲಿ ಕೆಲವು ಸ್ಪಷ್ಟನೆ ಕೇಳಿದ್ದು, ಈ ಕುರಿತು ವಿವರಣೆ ನೀಡಲಾಗುತ್ತದೆ. ಬಿಆರ್‌ಟಿಎಸ್ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಅಹ್ಮದಾಬಾದ್‌ನ ಎಸ್‌ಇಪಿಟಿ ವಿಶ್ವವಿದ್ಯಾಲಯದ ತಂಡ ವಾರದಲ್ಲೇ ವರದಿ ನೀಡಲಿದೆ. ಈಗಾಗಲೇ ಇಂತಹ ವ್ಯವಸ್ಥೆ ಅಹ್ಮದಾಬಾದ್‌ನಲ್ಲಿ ಅಸ್ತಿತ್ವದಲ್ಲಿದೆ ಎಂದು ತಿಳಿಸಿದರು.

‘ವಿಶ್ವಬ್ಯಾಂಕ್‌ನಿಂದ ಸಾಲ ಮಂಜೂರಾತಿ ಪ್ರಕ್ರಿಯೆ ಪೂರ್ಣಗೊಳ್ಳಲು 3-4 ತಿಂಗಳ ಕಾಲಾವಕಾಶ ಬೇಕಾಗಬಹುದು. ನಂತರ ಯೋಜನೆಯ ಕಾಮಗಾರಿ ಆರಂಭಗೊಳ್ಳಲು ನಾಲ್ಕು ತಿಂಗಳು ಬೇಕು. ಅಕ್ಟೋಬರ್ ವೇಳೆಗೆ ಕಾಮಗಾರಿ ಶುರುವಾಗುವ ಸಾಧ್ಯತೆ ಇದೆ’ ಎಂದು ಸಾವಕಾರ ಹೇಳಿದರು.ಬಿಆರ್‌ಟಿಎಸ್ ಸೌಲಭ್ಯ ಅನುಷ್ಠಾನಕ್ಕೆ ಬಂದರೆ ಹುಬ್ಬಳ್ಳಿ-ಧಾರವಾಡ ಮಧ್ಯೆ ಬಸ್ ಸಂಚಾರಕ್ಕಾಗಿಯೇ ಪ್ರತ್ಯೇಕ ಮಾರ್ಗ ನಿರ್ಮಾಣವಾಗಲಿದೆ. ಇದರಿಂದ ಎರಡೂ ನಗರಗಳ ಮಧ್ಯೆ ಸಂಚಾರದ ಅವಧಿ ಅರ್ಧದಷ್ಟು ತಗ್ಗಲಿದೆ ಎಂಬುದು ಅಧಿಕಾರಿಗಳ ವಿವರಣೆಯಾಗಿದೆ.

ಬಸ್ ಖರೀದಿ, ಬಸ್ ನಿಲ್ದಾಣ ಮತ್ತು ಡಿಪೋಗಳ ಅಭಿವೃದ್ಧಿ ವಾಯವ್ಯ ಕರ್ನಾಟಕ ಸಾರಿಗೆ ಸಂಸ್ಥೆಯಿಂದ ಅನುಷ್ಠಾನಕ್ಕೆ ಬರಲಿದ್ದರೆ, ಬಿಆರ್‌ಟಿಎಸ್ ಸೌಲಭ್ಯ ಪಿಡಬ್ಲ್ಯುಡಿ ಮತ್ತು ಕೆಎಸ್‌ಆರ್‌ಡಿಎಲ್ ಜಂಟಿಯಾಗಿ ಕಾರ್ಯಗತಗೊಳಿಸಲಿವೆ.ವಿಶ್ವಬ್ಯಾಂಕ್ ಅಧಿಕಾರಿಗಳಾದ ನೂಪುರ ಗುಪ್ತಾ, ಒ.ಪಿ. ಅಗರವಾಲ್, ವೆಂಕಟ್, ಸ್ಯಾಮ್, ಕೇಂದ್ರ ಸರ್ಕಾರದ ಪಟ್ಟಣ ಅಭಿವೃದ್ಧಿ ಇಲಾಖೆಯ ಐ.ಸಿ. ಶರ್ಮಾ ತಂಡದಲ್ಲಿದ್ದ ಪ್ರಮುಖರಾಗಿದ್ದರು. ರಾಜ್ಯ ಸರ್ಕಾರದ ಪರವಾಗಿ ರಾಜ್ಯ ನಗರ ಸಾರಿಗೆ ಅಭಿವೃದ್ಧಿ ನಿಗಮದ ಆಯುಕ್ತರಾದ ವಿ.ಮಂಜುಳಾ ತಂಡಕ್ಕೆ ಅಗತ್ಯವಾದ ಮಾಹಿತಿ ಒದಗಿಸಿದರು. ಮಧ್ಯಾಹ್ನದವರೆಗೆ ಚರ್ಚೆ ನಡೆಸಿದ ತಂಡ, ನಂತರ ಗೋವಾ ಮಾರ್ಗವಾಗಿ ವಾಪಸು ತೆರಳಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.