ADVERTISEMENT

ಹಾಗೇ ಬಂದು... ಹೀಗೇ ಹೊರಟ ಸೊರಕೆ!

`ಉಸ್ತುವಾರಿ' ಸಚಿವರ ಗೈರು; ಪಾಲಿಕೆ ಪ್ರಗತಿ ಪರಿಶೀಲನಾ ಸಭೆ ರದ್ದು

​ಪ್ರಜಾವಾಣಿ ವಾರ್ತೆ
Published 25 ಜೂನ್ 2013, 5:07 IST
Last Updated 25 ಜೂನ್ 2013, 5:07 IST
ಹುಬ್ಬಳ್ಳಿಯಲ್ಲಿರುವ ಪಾಲಿಕೆ ಸಭಾಂಗಣದಲ್ಲಿ ನಗರಾಭಿವೃದ್ಧಿ ಸಚಿವ ವಿನಯಕುಮಾರ ಸೊರಕೆ ಮಾತನಾಡಿದರು. ಶಾಸಕ ಅರವಿಂದ ಬೆಲ್ಲದ, ವಿಧಾನಪರಿಷತ್ತು ಸದಸ್ಯ ವೀರಣ್ಣ ಮತ್ತಿಕಟ್ಟಿ, ಸಂಸದ ಪ್ರಹ್ಲಾದ ಜೋಶಿ, ಜಿಲ್ಲಾಧಿಕಾರಿ ಸಮೀರ್ ಶುಕ್ಲಾ ಇದ್ದರು.
ಹುಬ್ಬಳ್ಳಿಯಲ್ಲಿರುವ ಪಾಲಿಕೆ ಸಭಾಂಗಣದಲ್ಲಿ ನಗರಾಭಿವೃದ್ಧಿ ಸಚಿವ ವಿನಯಕುಮಾರ ಸೊರಕೆ ಮಾತನಾಡಿದರು. ಶಾಸಕ ಅರವಿಂದ ಬೆಲ್ಲದ, ವಿಧಾನಪರಿಷತ್ತು ಸದಸ್ಯ ವೀರಣ್ಣ ಮತ್ತಿಕಟ್ಟಿ, ಸಂಸದ ಪ್ರಹ್ಲಾದ ಜೋಶಿ, ಜಿಲ್ಲಾಧಿಕಾರಿ ಸಮೀರ್ ಶುಕ್ಲಾ ಇದ್ದರು.   

ಹುಬ್ಬಳ್ಳಿ: ನಗರಾಭಿವೃದ್ಧಿ ಸಚಿವ ವಿನಯಕುಮಾರ್ ಸೊರಕೆ ಮಹಾನಗರ ಪ್ರಗತಿ ಪರಿಶೀಲನಾ ಸಭೆ ನಡೆಸಲು ಸೋಮವಾರ ಸಂಜೆ ಪಾಲಿಕೆಗೆ ಬರುತ್ತಿದ್ದಾರೆ ಎಂದು ಮಾಹಿತಿ ಬರುತ್ತಲೇ ಎಲ್ಲ ವಿಭಾಗದ ಅಧಿಕಾರಿಗಳು ಕಡತಗಳನ್ನು ಸಿದ್ಧಪಡಿಸಿಕೊಂಡಿದ್ದರು. ಪ್ರಗತಿ ಸಾಧನೆಯ ಅಂಕಿಅಂಶಗಳ ಪಟ್ಟಿಯನ್ನು ಸಚಿವರ ಮುಂದೆ ಮಂಡಿಸಿ, ಸಚಿವರಿಂದ ಎದುರಾಗಬಹುದಾದ ಪ್ರಶ್ನೆಗಳಿಗೆ ಉತ್ತರಿಸಲು ತಯಾರಿ ನಡೆಸಿದ್ದರು. ಅಷ್ಟೇ ಅಲ್ಲ, ಸಭೆ ಆರಂಭಕ್ಕೆ ಅರ್ಧ ಗಂಟೆ ಮೊದಲೇ ಪಾಲಿಕೆ ಸಭಾಂಗಣದಲ್ಲಿ ಮಣ ಭಾರದ ಕಡತಗಳ ಸಹಿತ ಬಂದು ಆಸೀನರಾಗಿದ್ದರು!

ಮೊದಲ ಬಾರಿ ಆಗಮಿಸುತ್ತಿರುವ ಸಚಿವರನ್ನು ಸ್ವಾಗತಿಸಲು ಭರ್ಜರಿ ಸಿದ್ಧತೆ ಮಾಡಲಾಗಿತ್ತು. ಶಾಲು, ಹಾರ- ತುರಾಯಿ ಎಲ್ಲವೂ ತಂದಿಡಲಾಗಿತ್ತು. ಪಾಲಿಕೆಯ ಅಭಿವೃದ್ಧಿ ನೋಟವನ್ನು ಬಿಂಬಿಸುವ ಪ್ರಗತಿ ಪರಿಶೀಲನಾ ವರದಿಯನ್ನೂ ಸಿದ್ಧಪಡಿಸಿಕೊಳ್ಳಲಾಗಿತ್ತು.

ಪಾಲಿಕೆ ಆಯುಕ್ತರಾಗಿದ್ದ ವೈ.ಎಸ್.ಪಾಟೀಲ ನಾಲ್ಕು ದಿನಗಳ ಹಿಂದೆಯಷ್ಟೇ ವರ್ಗಾವಣೆಗೊಂಡಿದ್ದರಿಂದ ಈ ಎಲ್ಲ ಹೊಣೆಯನ್ನು ಇತರ ಹಿರಿಯ ಅಧಿಕಾರಿಗಳಿಗೆ ವಹಿಸಿದ್ದರು.

ನಾಲ್ಕು ಗಂಟೆಗೆ ಬರಬೇಕಿದ್ದ ಸಚಿವರು ಪಾಲಿಕೆ ಆವರಣಕ್ಕೆ ಬಂದಾಗ ಗಂಟೆ  ಐದು ದಾಟಿತ್ತು. ಅವರನ್ನು ಮೊದಲು ಸ್ವಾಗತಿಸಿದ್ದು, ಹುಬ್ಬಳ್ಳಿ-ಧಾರವಾಡ ನಿವೇಶನರಹಿತ ಆಂದೋಲನ ಸಂಘಟನೆಯ ಪ್ರತಿಭಟನೆ. ಪಾಲಿಕೆ ವ್ಯಾಪ್ತಿಯ ನಿವೇಶನರಹಿತರಿಗೆ ನಿವೇಶನ ನೀಡುವಂತೆ ಆಗ್ರಹಿಸಿದ ಘೋಷಣೆ.

ಬೇಡಿಕೆಯನ್ನು ಪರಿಶೀಲಿಸುವುದಾಗಿ ಪ್ರತಿಭಟನೆಕಾರರಿಗೆ ಭರವಸೆ ನೀಡಿದ ಸಚಿವರು, ಪಾಲಿಕೆಯ ಆಯುಕ್ತರ ಕಚೇರಿಯಲ್ಲಿ ಹಿಂದಿನ ಆಯುಕ್ತ ವೈ.ಎಸ್. ಪಾಟೀಲ ಮತ್ತು ಪಾಲಿಕೆ ಆಡಳಿತಾಧಿಕಾರಿಯೂ ಆದ ಜಿಲ್ಲಾಧಿಕಾರಿ ಸಮೀರ್ ಶುಕ್ಲಾ ಅವರಿಂದ ಯೋಜನೆಗಳ ಅನುಷ್ಠಾನದ ಕುರಿತು ಮಾಹಿತಿ ಪಡೆದರು. ಅವರ ಜೊತೆಗೇ `ಪ್ರಗತಿ ಪರಿಶೀಲನಾ ಸಭೆ'ಯನ್ನೂ ನಡೆಸಿದರು. ಈ ವಿಷಯ ಗೊತ್ತಿರದ ವಿಧಾನಪರಿಷತ್ತು ಸದಸ್ಯ ವೀರಣ್ಣ ಮತ್ತಿಕಟ್ಟಿ, ಸಭಾಂಗಣದ ವೇದಿಕೆಯಲ್ಲಿ ಕುಳಿತು ಸಚಿವರ ನಿರೀಕ್ಷೆಯಲ್ಲಿದ್ದರು!

ಅಧಿಕಾರಿಗಳು, ಮತ್ತಿಕಟ್ಟಿ, ಮಧ್ಯಮದವರು ಎಲ್ಲರೂ ಆಯುಕ್ತರ ಕಚೇರಿಯ ಮಹಡಿಯಲ್ಲಿರುವ ಸಭಾಂಗಣದಲ್ಲಿ ಕಾದದ್ದಷ್ಟೆ ಬಂತು... ಸುಮಾರು 5.40ಕ್ಕೆ ಸಭಾಂಗಣಕ್ಕೆ ಬಂದ ಸಚಿವರು, ಅಧಿಕಾರಿಗಳ ಸಮ್ಮುಖದ್ಲ್ಲಲೇ 10 ನಿಮಿಷ ಸುದ್ದಿಗೋಷ್ಠಿ ನಡೆಸಿ, `10 ದಿನಗಳ ಬಳಿಕ ಮತ್ತೇ ಬರುತ್ತೇನೆ' ಎಂದು ಹೇಳಿ ಹೊರಟರು. ಸಭಾಂಗಣದಲ್ಲಿ ಸಚಿವರ ಜೊತೆ ಕೆಲಹೊತ್ತು ಕಾಣಿಸಿಕೊಂಡ ಸಂಸದ ಪ್ರಹ್ಲಾದ ಜೋಶಿ ಮತ್ತು ಶಾಸಕ ಅರವಿಂದ ಬೆಲ್ಲದ, ಸಚಿವರು ಹೊರಡುವ ಮೊದಲೇ ತೆರಳಿದ್ದರು.

ಆಶ್ಚರ್ಯವೆಂದರೆ, ಪ್ರಗತಿ ಪರಿಶೀಲನಾ ಸಭೆ ರದ್ದುಗೊಂಡಿರುವ ವಿಷಯ ಕೊನೆ ಕ್ಷಣದವರೆಗೆ ಯಾರಿಗೂ ಗೊತ್ತಿರಲಿಲ್ಲ. ಈ ಬಗ್ಗೆ ವಿಚಾರಿಸಿದಾಗ, `ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್, ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್, ವಿಧಾನಪರಿಷತ್ತು ಸದಸ್ಯ ಬಸವರಾಜ ಹೊರಟ್ಟಿ ಗೈರು ಹಾಜರಿ ಹಿನ್ನೆಲೆಯಲ್ಲಿ ಸಭೆ ರದ್ದುಪಡಿಸಲಾಯಿತು' ಎಂದು ಪಾಲಿಕೆಯ ವಿಶೇಷಾಧಿಕಾರಿ ಎಸ್.ಎಚ್. ನರೇಗಲ್ ಮಾಹಿತಿ ನೀಡಿದರು.

ಹುಡಾದಿಂದಲೂ `ಮಾಹಿತಿ' ಮಾತ್ರ!
ಸಚಿವರ ಉಪಸ್ಥಿತಿಯಲ್ಲಿ ಸೋಮವಾರ ಸಂಜೆ ಜರುಗಿದ ಹುಬ್ಬಳ್ಳಿ- ಧಾರಾವಾಡ ನಗರಾಭಿವೃದ್ಧಿ ಪ್ರಾಧಿಕಾರ (ಹುಡಾ) ಸಭೆ  ಕೇವಲ 15 ನಿಮಿಷದಲ್ಲಿ ಮುಕ್ತಾಯವಾಗಿತ್ತು. 5.30ಕ್ಕೆ ನಿಗದಿಯಾಗಿದ್ದ ಸಭೆ, ಆರಂಭಗೊಂಡಾಗ 6.45 ಆಗಿತ್ತು. ನಗರಾಭಿವೃದ್ಧಿ ಯೋಜನೆಯ ಸಮಗ್ರ ಪರಿಚಯ ಮತ್ತು ಭವಿಷ್ಯದ ಯೋಜನೆಗಳ ಕುರಿತ ಸ್ಲೈಡ್ ಷೋ ಸಿದ್ಧಪಡಿಸಿಕೊಂಡು ಅಧಿಕಾರಿಗಳು ಕಾದಿದ್ದರು.

ಸಭೆಗೆ ಬಂದ ಸಚಿವರು ಪ್ರಾಧಿಕಾರದ ಆಯುಕ್ತ ತಿಪ್ಪೇಶಿ ಮತ್ತು ಜಿಲ್ಲಾಧಿಕಾರಿ ಸಮೀರ್ ಶುಕ್ಲಾ ಅವರಿಂದ ಕೆಲಹೊತ್ತು ಮಾಹಿತಿ ಪಡೆದರು. ಉದ್ದೇಶಿತ ನಗರ ಅಭಿವೃದ್ಧಿ ಯೋಜನೆ (ಸಿಡಿಪಿ) ಜನ ಸಾಮಾನ್ಯರ ಪರವಾಗಿರಲಿ, ಬಿಲ್ಡರ್ಸ್‌ ಅಥವಾ ಶ್ರೀಮಂತ ಪರ ಬೇಡ ಎಂದು ಸಲಹೆ ನೀಡಿ ಸಭೆ ಕೊನೆಗೊಳಿಸಿದರು!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.