ADVERTISEMENT

ಹೊಂಡ, ಚರಂಡಿ ಇಲ್ಲದ ಕಾಲೊನಿ ದರ್ಶನ

ಶಾಸಕ, ಜಿಲ್ಲಾಧಿಕಾರಿಯಿಂದ ವಿವಿಧ ಪ್ರದೇಶಗಳಿಗೆ ಭೇಟಿ

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2013, 8:34 IST
Last Updated 26 ಸೆಪ್ಟೆಂಬರ್ 2013, 8:34 IST

ಹುಬ್ಬಳ್ಳಿ:  ಜನ ಕಾಲಿಡಲು ಹೆದರುವಂತಹ, ಕೆಸರು ತುಂಬಿಕೊಂಡ ರಸ್ತೆಗಳು. ಬೀದಿಬದಿಗೆ ಹರಿವ ಚರಂಡಿ ನೀರು, ರಸ್ತೆಬದಿಯೇ ಮಲ ವಿಸರ್ಜನೆ...

ಇವು ಶಾಸಕ ಪ್ರಸಾದ್‌ ಅಬ್ಬಯ್ಯ, ಜಿಲ್ಲಾಧಿಕಾರಿ ಸಮೀರ್‌ ಶುಕ್ಲಾ ಬುಧವಾರ ನಗರದ ವಿವಿಧ ಕಾಲೊನಿಗೆ ಭೇಟಿ ನೀಡಿದ ಸಂದರ್ಭ ಕಂಡುಬಂದ ದೃಶ್ಯಗಳು. ಸುರಿವ ಮಳೆ, ಕೆಸರಿನಿಂದ ತುಂಬಿ ತುಳುಕುತ್ತಿದ್ದ ರಸ್ತೆ ಹೊಂಡಗಳನ್ನು ದಾಟುತ್ತಾ, ಮಂಟೂರು ರಸ್ತೆ, ಸೆಟ್ಲ್‌ಮೆಂಟ್‌, ಹಳೇಹುಬ್ಬಳ್ಳಿಯ ವಿವಿಧ ಬಡಾವಣೆಗಳಿಗೆ ಭೇಟಿ ನೀಡಿದ ತಂಡ ಅಲ್ಲಿನ ಸಮಸ್ಯೆಗಳ ಪಟ್ಟಿಮಾಡಿತು. ಆ ಕುರಿತು ತತ್ಕಾಲಕ್ಕೆ ಕೈಗೊಳ್ಳಲು ಸಾಧ್ಯವಿರುವ ಕ್ರಮಗಳ ಬಗ್ಗೆ ಸಂಬಂಧಿಸಿದ ಅಧಿಕಾರಿಗಳ ಜೊತೆ ಚರ್ಚಿಸಿತು. 

ಜನಪ್ರತಿನಿಧಿಗಳು, ಅಧಿಕಾರಿಗಳಿಗೆ ಮುಗಿಬಿದ್ದ ಜನ ತಾವು ಅನುಭವಿಸುತ್ತಿರುವ ಕಷ್ಟಗಳ ಕುರಿತು ಪರಿಪರಿಯಾಗಿ ವಿವರಿಸಿದರು. ಕೆಲವರಂತೂ ಎರಡೂ ಕೈ ಜೋಡಿಸಿ ಮುಗಿದು, ರಸ್ತೆಗೆ ಡಾಂಬರು, ಮನೆ ಮುಂದೆ ಚರಂಡಿ ನಿರ್ಮಾಣಕ್ಕೆ ಬೇಡಿಕೆಯಿಟ್ಟರು.

ಪಾಲಿಕೆ ಸದಸ್ಯರು, ಮಾಧ್ಯಮ ಪ್ರತಿನಿಧಿಗಳ ಜೊತೆಗೂಡಿ ಬಡಾವಣೆಗಳ ದರ್ಶನಕ್ಕೆ ಜಿಲ್ಲಾಧಿಕಾರಿ, ಶಾಸಕರ ತಂಡ ಮೊದಲು ತೆರಳಿದ್ದು ಮಂಟೂರು ರಸ್ತೆಯ ಇಂದಿರಾ ಕಾಲೊನಿಗೆ. ‘ರೈಲು ನಿಲ್ದಾಣಕ್ಕೆ ಹೊಂದಿಕೊಂಡಂತೆ ಇರುವ ಈ ಪ್ರದೇಶದಲ್ಲಿ ಕನಿಷ್ಟ ಕಚ್ಚಾರಸ್ತೆಗಳೂ ನಿರ್ಮಾಣವಾಗಿಲ್ಲ. ವಾಹನಗಳು ಓಡಾಡಲು ಆಗುವುದಿಲ್ಲ. ಆಟೊದವರು ಕರೆದರೆ ಬರುವುದಿಲ್ಲ. ಮಕ್ಕಳಂತೂ ಜಾರಿ ಬೀಳುವುದಕ್ಕೆ ಲೆಕ್ಕವಿಲ್ಲ.

ಇಡೀ ಕಾಲೊನಿಗೆ ಒಂದೇ ಕೊಳವೆಬಾವಿ ಇದ್ದು, ಅದರಿಂದ ಸಮರ್ಪಕವಾಗಿ ನೀರು ಪೂರೈಕೆಯಾಗುತ್ತಿಲ್ಲ. ಕಳೆದ 16 ವರ್ಷದಿಂದ ಇದೇ ಸಮಸ್ಯೆ ಎದುರಿಸುತ್ತಿದ್ದೇವೆ. ಕನಿಷ್ಟ ಕಚ್ಚಾ ರಸ್ತೆ, ಇನ್ನೊಂದು ಕೊಳವೆ ಬಾವಿ ನಿರ್ಮಿಸಿಕೊಡಿ. ಚರಂಡಿ ವ್ಯವಸ್ಥೆ ಮಾಡಿಕೊಡಿ’ ಎಂದು ಸ್ಥಳೀಯರು ಬೇಡಿಕೆಯಿಟ್ಟರು.

ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಸಮೀರ್ ಶುಕ್ಲಾ ‘ಈ ಕಾಲೊನಿಯನ್ನು ಒಳಗೊಂಡಂತೆ ಈ ಭಾಗದ ಅಭಿವೃದ್ಧಿಗೆ ರೂ. 2 ಕೋಟಿ ವಿಶೇಷ ಅನುದಾನದಲ್ಲಿ ಯೋಜನೆ ರೂಪಿಸಲಾಗುತ್ತಿದೆ. ಶೀಘ್ರದಲ್ಲೇ ಟೆಂಡರ್‌ ಕರೆದು ರಸ್ತೆ ನಿರ್ಮಾಣ ಕಾಮಗಾರಿ ಆರಂಭಿಸಲಾಗುವುದು’ ಎಂದು ಭರವಸೆ ನೀಡಿದರು. ಕಾಲೊನಿಯಲ್ಲಿ ಇನ್ನೊಂದು ಬೋರ್‌ವೆಲ್‌ ಕೊರೆಸಿ ನೀರು ಪೂರೈಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ನಂತರ ಸುಭಾಷನಗರ, ತೂಫಾನ್ ಕಾಲೊನಿ, ಕೃಪಾ ಕಾಲೊನಿಗಳಲ್ಲಿನ ರಸ್ತೆ ಸ್ಥಿತಿಯನ್ನು ತಂಡವು ವೀಕ್ಷಿಸಿತು. ಇಲ್ಲಿ ರಸ್ತೆಗಳ ಸ್ಥಿತಿ ಭಿನ್ನವಾಗಿಯೇನು ಇರಲಿಲ್ಲ. ದಾರಿಯಲ್ಲಿ ಕೆಸರು ಬಿಟ್ಟರೆ ಮತ್ತೇನು ಕಾಣುತ್ತಿರಲಿಲ್ಲ. ‘ನೂರಾರು ಮನೆಗಳಿದ್ದರೂ ಸರಿಯಾದ ರಸ್ತೆಯಿಲ್ಲ. ಸ್ನಾನ ಮಾಡಿದ ನೀರು ರಸ್ತೆಗೆ ಹರಿಯುತ್ತಿದೆ. ಗಟಾರದ ವ್ಯವಸ್ಥೆಯಿಲ್ಲ’ ಎಂದು ಜನ ದೂರಿದರು.

ಸೆಟ್ಲ್‌ಮೆಂಟ್‌ ಭಾಗದ ಗಂಗಾಧರ ನಗರಕ್ಕೆ ಭೇಟಿ ನೀಡಿದ ಸಂದರ್ಭ ಅಧಿಕಾರಿಗಳನ್ನು ಕಾಣಲು ಜನ ಮುಗಿಬಿದ್ದರು. ‘ಕುಡಿಯುವ ನೀರು, ಒಳಚರಂಡಿಯ ಸಂಪರ್ಕ ಇದೆ. ಆದರೆ ರಸ್ತೆ ಸೌಲಭ್ಯ ಸರಿಯಿಲ್ಲ’ ಎಂದು ದೂರಿದರು. ‘1984ರಿಂದಲೂ ಇಲ್ಲಿ ಸರ್ಕಾರಿ ಜಾಗದಲ್ಲಿ ವಾಸಿಸುತ್ತಿದ್ದೇವೆ. 30–40 ಮನೆಗಳಿವೆ. ಆದರೆ ಯಾರೊಬ್ಬರ ಬಳಿಯೂ ತಮ್ಮ ಹೆಸರಿನಲ್ಲಿ ಮನೆ ಇರುವ ಪತ್ರ ಇಲ್ಲ.

ಈ ಹಿಂದೆ ಸರ್ಕಾರ ಹಕ್ಕುಪತ್ರ ನೀಡಲು ಮುಂದಾಗಿತ್ತಾದರೂ ಅದು ಸಾಧ್ಯವಾಗಿಲ್ಲ. ದಯಮಾಡಿ ಈಗಲಾದರೂ ಆ ಕೆಲಸ ಮಾಡಿಕೊಡಿ’ ಎಂದು ಬಡಾವಣೆಯ 10ನೇ ಕ್ರಾಸ್‌ನ ನಿವಾಸಿಗಳು ಅಹವಾಲು ಸಲ್ಲಿಸಿದರು. ಕರ್ಕಿ ಬಸವೇಶ್ವರನಗರದ ಹಿಂಭಾಗ­ದಲ್ಲಿ­ರುವ ಕೃಷಿ ಕಾರ್ಮಿಕರ ನಗರಕ್ಕೆ ತಂಡವು ಭೇಟಿ ನೀಡಲಾಗಲಂತೂ ಜಿಲ್ಲಾಧಿಕಾರಿಗಳು ಜಾರಿ ಬೀಳುವುದಷ್ಟೇ ಬಾಕಿ ಇತ್ತು. ಅಷ್ಟರ­ಮಟ್ಟಿಗೆ ರಸ್ತೆ ಇತ್ತು. ‘ರಸ್ತೆ ವಿಸ್ತರಣೆಗೆ ನಾವು ಜಾಗ ಬಿಟ್ಟುಕೊಡಲು ಸಿದ್ಧ. ದಯಮಾಡಿ ರಸ್ತೆಗೆ ಡಾಂಬರು ಹಾಕಿಸಿಕೊಡಿ ಸಾಹೇಬ್ರೆ’ ಎಂದು ಜನ ಕೈಮುಗಿದರು.

ಅಲ್ಲಿಂದ ಹೊರಟ ತಂಡವು ಸೋನಿಯಾ­ಗಾಂಧಿ ನಗರ, ಎಸ್‌.ಎಂ. ಕೃಷ್ಣ ನಗರ ಮೊದಲಾದ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿತು. ಪಾಲಿಕೆ ಸದಸ್ಯರಾದ ಗಣೇಶ ಟಗರಗುಂಟಿ, ಮೋಹನ ಹಿರೇಮನಿ, ಪಿ.ಕೆ. ರಾಯನಗೌಡ್ರ, ಕೆಪಿಸಿಸಿ ಸದಸ್ಯ ಮಹೇಂದ್ರ ಸಿಂಘಿ ಇತರರು ಈ ಸಂದರ್ಭ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.