ADVERTISEMENT

‘ಅಧರ್ಮದ ಅಸುರರನ್ನು ನಾಶ ಮಾಡಿ’

​ಪ್ರಜಾವಾಣಿ ವಾರ್ತೆ
Published 2 ಡಿಸೆಂಬರ್ 2013, 7:23 IST
Last Updated 2 ಡಿಸೆಂಬರ್ 2013, 7:23 IST
ಧಾರವಾಡ ಮಾಳಮಡ್ಡಿಯ ವನವಾಸಿ ರಾಮಮಂದಿರದಲ್ಲಿ ಭಾನುವಾರ ನಡೆದ ಪ್ರವಚನ ಸಮಾರೋಪದಲ್ಲಿ ಉಡುಪಿ ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಅವರ ತುಲಾಭಾರ ನೆರವೇರಿತು
ಧಾರವಾಡ ಮಾಳಮಡ್ಡಿಯ ವನವಾಸಿ ರಾಮಮಂದಿರದಲ್ಲಿ ಭಾನುವಾರ ನಡೆದ ಪ್ರವಚನ ಸಮಾರೋಪದಲ್ಲಿ ಉಡುಪಿ ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಅವರ ತುಲಾಭಾರ ನೆರವೇರಿತು   

ಧಾರವಾಡ: ಹಿಂದೂ ಧರ್ಮದ ಶರೀರದಲ್ಲಿ ವೈಷ್ಣವರು–ಶೈವರು ಸಂಘಟಿತರಾದರೆ ಅಧರ್ಮವೆಂಬ ಅಸುರರನ್ನು ನಾಶ ಮಾಡಬಹುದು. ಒಂದೇ ದೇಹದಲ್ಲಿ ಹರಿಹರರು ಒಂದಾಗಿ ದೈತ್ಯರನ್ನು ಸಂಹರಿಸಿದಂತೆ, ಹರಿಭಕ್ತರು ಹಾಗೂ ಹರನ ಭಕ್ತರು ಒಂದಾಗಬೇಕಾಗಿದೆ ಎಂದು ಉಡುಪಿ ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಆಶಯ ವ್ಯಕ್ತಪಡಿಸಿದರು.

ಮಾಳಮಡ್ಡಿಯ ವನವಾಸಿ ರಾಮಮಂದಿರದಲ್ಲಿ ಭಾನುವಾರ ಪ್ರವಚನ ಸಮಾರೋಪ ಕಾರ್ಯಕ್ರಮದಲ್ಲಿ ತುಲಾಭಾರ ಸ್ವೀಕರಿಸಿದ ಬಳಿಕ ಮಾತನಾಡಿದ ಅವರು, ‘ದೇಶದ ಎಲ್ಲ ಧರ್ಮಗಳೂ ಹಿಂದೂ ಧರ್ಮವೆಂಬ ಅಮೃತಕ್ಕಾಗಿ ಒಂದಾಗಬೇಕು. ಸಮಾಜದಲ್ಲಿ ಮತಾಂತರ ಮುಂತಾದ ಒಡಕುಗಳು ಮೂಡುತ್ತಿರುವಾಗ ಹಿಂದೂಗಳೆಲ್ಲ ಪರಸ್ಪರ ಒಡಕು ತೊಡೆದು ಹಾಕಬೇಕು. ಶೈವರೂ ಶಿವಭಕ್ತರು. ಅವರೂ ಹಿಂದೂಗಳೇ. ಆದ್ದರಿಂದ ಹಿಂದೂಗಳಾದ ನಾವೇ ವಿಘಟನೆಗೊಂಡರೆ ಹಿಂದೂ ಧರ್ಮದ ಸಾಮರಸ್ಯ ಕಳೆದು ಹೋಗಿ ನಾಶ ಹೊಂದುವ ಸಂದರ್ಭ ಬರುತ್ತದೆ’ ಎಂದು ತಿಳಿಸಿದರು.

‘ಜೀವನದಲ್ಲಿ ನಾವೆಲ್ಲ ಕಷ್ಟ ಪಟ್ಟು ಗಳಿಸಿದ ಹಣವೆಂಬ ಲಕ್ಷ್ಮೀಯನ್ನು ಕೆಟ್ಟದ್ದಕ್ಕೆ ವಿನಿಯೋಗಿಸಬಾರದು. ದುಶ್ಚಟಗಳೆಂಬ ದೈತ್ಯರಿಗೆ ಹಣವೆಂಬ ಲಕ್ಷ್ಮೀಯನ್ನು ಕೊಟ್ಟು ಮದುವೆ ಮಾಡದೇ ನಾಡಿ ಏಳಿಗೆಗೆ, ಧರ್ಮ ಕಾರ್ಯಕ್ಕೆ ವಿನಿಯೋಗಿಸಿದರೆ ಲಕ್ಷ್ಮೀ- ನಾರಾಯಣನ ಮದುವೆ ಮಾಡಿದಂತೆ’ ಎಂದರು.

ಪಂ. ವೆಂಕಟನರಸಿಂಹಾಚಾರ್ ಜೋಶಿ ಸ್ವಾಗತಿಸಿದರು. ವ್ಯಾಸತೀರ್ಥ ಕನವಳ್ಳಿ ಪ್ರರ್ಥಿಸಿದರು. ಗೀತಾ ಭಜನಾ ಮಂಡಳಿಯಿಂದ ಭಜನೆ ಜರುಗಿತು. ವಾದಿರಾಜ ತಂಡದಿಂದ ವೇದಘೋಷ ಮೊಳಗಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.