ADVERTISEMENT

ವಿಶಿಷ್ಟ ಕಾಮದೇವರು: ದರ್ಶನ ಇಂದಿನಿಂದ 

ರಾಜ್ಯ, ಹೊರ ರಾಜ್ಯಗಳಿಂದಲೂ ಧಾವಿಸಿ ಬರುವ ಭಕ್ತರು

​ಪ್ರಜಾವಾಣಿ ವಾರ್ತೆ
Published 28 ಫೆಬ್ರುವರಿ 2026, 7:16 IST
Last Updated 28 ಫೆಬ್ರುವರಿ 2026, 7:16 IST
ನವಲಗುಂದ ಹೋಳಿ ಹುಣ್ಣಿಮೆ ನಿಮಿತ್ತ ರಾಮಲಿಂಗ ಓಣಿಯಲ್ಲಿ ಪ್ರತಿಷ್ಠಾಪನೆಗೊಳ್ಳಲಿರುವ ರಾಮಲಿಂಗ ಕಾಮದೇವರು
ನವಲಗುಂದ ಹೋಳಿ ಹುಣ್ಣಿಮೆ ನಿಮಿತ್ತ ರಾಮಲಿಂಗ ಓಣಿಯಲ್ಲಿ ಪ್ರತಿಷ್ಠಾಪನೆಗೊಳ್ಳಲಿರುವ ರಾಮಲಿಂಗ ಕಾಮದೇವರು   

ಅಬ್ದುಲರಝಾಕ ನದಾಫ

ನವಲಗುಂದ: ಹೋಳಿ ಹುಣ್ಣಿಮೆ ಆಂದರೆ ರಂಗು ರಂಗಿನ ಬಣ್ಣ ಎರಚಿ ಮೋಜಿಗಾಗಿ ಅಲ್ಲದೇ ಶ್ರದ್ಧಾ ಭಕ್ತಿಯಿಂದಲೂ ಆಚರಣೆ ಗೊಳ್ಳಲಿದೆ ಎಂಬುದಕ್ಕೆ ನವಲಗುಂದ ರಾಮಲಿಂಗ ಕಾಮಣ್ಣ ರಾಜ್ಯದೆಲ್ಲೆಡೆ ಖ್ಯಾತಿ ಪಡೆದಿದೆ. ಹೋಳಿ ಹಬ್ಬದ ವಿಶೇಷತೆ ಎತ್ತಿ ತೋರಿಸುವ ಮೂಲಕ ಲಕ್ಷಾಂತರ ಭಕ್ತರು ರಾಜ್ಯವಲ್ಲದೇ ಇತರೆ ರಾಜ್ಯಗಳಿಂದ ಜನಸಾಗರಕ್ಕೆ ಸಾಕ್ಷಿಯಾಗಿದೆ.

ಸವಣೂರಿನಿಂದ ಬಂದ್ ಈ ಕಾಮದೇವನ ಮೂರ್ತಿಯನ್ನು ನವಲಗುಂದಕ್ಕೆ ಯಾರು ಬರಮಾಡಿಕೊಂಡರು ಎಂಬುದು ಮಾತ್ರ ಇಂದಿಗೂ ನಿಗೂಢ. ಆದರೆ ಕಾಮದೇವನ ಪವಾಡ ಸದೃಶ ಮಹಿಮೆಯಿಂದಾಗಿ ನವಲಗುಂದವು ಒಂದು ಸುಕ್ಷೇತ್ರವಾಗಿ ಹಾಗೂ ಹೋಳಿಹಬ್ಬವು ಜಾತ್ರೆಯ ಸ್ವರೂಪ ಪಡೆಯುವುದಕ್ಕೆ ಕಾರಣವಾಗಿದೆ.

ADVERTISEMENT

ಹರಕೆ ಫಲಿಸಿದ ಸಂಗತಿಯನ್ನು ಸಹಸ್ರಾರು ಜನರು ಸಾಕ್ಷಿಯಾಗಿ ವಿವರಿಸುವುದು ಕೂಡಾ ಈ ಕಾಮದೇವನ ಪ್ರಖ್ಯಾತಿಗೆ ಕಾರಣವಾಗಿದೆ. ಸರ್ವ ಧರ್ಮೀಯವರು ಜಾತಿ ಭೇದ ಮರೆತು ಹಬ್ಬವನ್ನು ಆಚರಿಸುತ್ತಾ ಬಂದಿದ್ದಾರೆ.

ರಾಮಲಿಂಗ ಕಾಮಣ್ಣ ಸೇರಿದಂತೆ ಪಟ್ಟಣದ ಸುಮಾರು 14 ಕಡೆ ಕಾಮಣ್ಣಗಳನ್ನು ಪ್ರತಿವರ್ಷ ಏಕಾದಶಿಯಂದು ಪ್ರತಿಷ್ಠಾಪಿಸಲಾಗುತ್ತದೆ. ಇವುಗಳಲ್ಲಿ ಪಟ್ಟಣದ ಆರಾಧ್ಯ ದೈವ, ಕಲಿಯುಗದ ಕಾಮಧೇನು ರಾಮಲಿಂಗ ಓಣಿ ಕಾಮಣ್ಣ ಪ್ರಖ್ಯಾತಿ ಹೊಂದಿದ್ದಾನೆ. ಪೂಜೆ, ಜಗ್ಗಲಿಗೆಯ ಮೆರವಣಿಗೆ ನಂತರ ಕಾಮಣ್ಣನನ್ನು ದಹಿಸಲಾಗುತ್ತದೆ. ಹೀಗೆ ಹಲವು ದಶಕಗಳಿಂದಲೂ ಆಚರಿಸಿಕೊಂಡು ಬರಲಾಗುತ್ತದೆ.

ಮದುವೆ, ಮಕ್ಕಳು, ಸಂತಾನ ಭಾಗ್ಯ, ಮನೆ, ಆಸ್ತಿ, ಸಂಪತ್ತು, ಆರೋಗ್ಯ ಸೇರಿದಂತೆ ಬರುವ ಭಕ್ತರು ಬೇಡಿಕೊಂಡು ಬೆಳ್ಳಿಯ ತೊಟ್ಟಿಲು, ಬಾಸಿಂಗ, ಛತ್ರಿ, ಚಾಮರ ನೀಡುತ್ತಾರೆ. ಇದುವೇ ಕ್ವಿಂಟಲ್‌ಗಿಂತ ಅಧಿಕವಾಗುತ್ತದೆ.

ಪೂಜಾರಿಯಲ್ಲದ ದೇವರು: ಜಗತ್ತಿನ ಎಲ್ಲ ದೇವಸ್ಥಾನದ ದೇವರಿಗೆ ಪೂಜಾರಿ ಇರುತ್ತಾರೆ. ಆದರೆ ಈ ದೇವರಿಗೆ ಭಕ್ತರೇ ಪೂಜಾರಿಗಳು. ಹರಕೆ ಹೊತ್ತು, ಪೂಜೆ ಮಾಡಿದರೆ ಮುಗಿಯಿತು. ಅಲ್ಲದೇ ಈ ಕಾಮಣ್ಣ ಭಾವೈಕ್ಯದ ಸಂಕೇತ. ಹಿಂದೂ–ಮುಸ್ಲಿಂರು ಶ್ರದ್ಧಾ–ಭಕ್ತಿಯಿಂದ ಪಾಲ್ಗೊಳ್ಳುತ್ತಾರೆ ಎನ್ನುವುದೇ ವಿಶೇಷ.

ದರ್ಶನಕ್ಕೆ ಆಗಮಿಸಿದ ಭಕ್ತರಿಗೆ ನಾಗರಿಕರು, ಸಂಘ ಸಂಸ್ಥೆ, ರಾಜಕಾರಣಿಗಳು ತಮ್ಮ ಕೈಲಾದಷ್ಟು ಉಪಹಾರ, ಹಣ್ಣು-ಹಂಪಲು, ನೀರು ಮತ್ತು ತಂಪು-ಪಾನೀಯ ನೀಡುವ ಮೂಲಕ ಪಟ್ಟಣದ ಜನರು ಕಾಮದೇವರಿಗೆ ಹರಕೆಯ ರೂಪದಲ್ಲಿ ಸೇವೆ ಸಲ್ಲಿಸುತ್ತಾರೆ.

ಅಷ್ಟೇ ಅಲ್ಲದೆ ದೇವಸ್ಥಾನದ ಟ್ರಸ್ಟ್ ಕಮೀಟಿಯವರು 5 ದಿನ ಅನ್ನಸಂತರ್ಪಣೆ ಮಾಡಲಿದ್ದು, ಪಟ್ಟಣದ ಯುವಕರು, ಹಿರಿಯರು ಹಾಗೂ ಎಲ್ಲ ಓಣಿಯ ಉತ್ಸಾಹಿ ಯುವಕರು ಸೇವೆಗೆ ಸಾತ್ ನೀಡಲಿದ್ದಾರೆ.

ಫೆ.28ರ ಬೆಳಗಿನ ಜಾವ ರಾಮಲಿಂಗಕಾಮದೇವರ ದರುಶನದೊಂದಿಗೆ ಪ್ರಾರಂಭಗೊಳ್ಳಲಿದ್ದು ಮಾ.3ರಂದು ಹೋಳಿ ಹುಣ್ಣಿಮೆ, ಮಾ.4ರಂದು ಬಣ್ಣದ ಆಟ(ಓಕುಳಿ) ಅಂದು ಸಂಜೆವರೆಗೂ ಕಾಮಣ್ಣನ ದರ್ಶನ ನಿರಂತರವಾಗಿರುತ್ತದೆ. ಅಂದು ರಾತ್ರಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ರಾಮಲಿಗ ಕಾಮಣ್ಣ ವೈಶಿಷ್ಟ್ಯ ಪೂರ್ಣ ಹಲಗಿ, ವಾದ್ಯ ಮೇಳದೊಂದಿಗೆ ಮೆರವಣೆಗೆ ನಡೆಯಲಿದೆ. ಉಳಿದ ಕಾಮಣ್ಣಗಳ ಅಗ್ನಿಸ್ಪರ್ಶದ ನಂತರ ಇಷ್ಟಾರ್ಥ ಸಿದ್ಧಿ ರಾಮಲಿಂಗ ಕಾಮಣ್ಣನ ದಹನವಾಗಲಿದೆ.

ಯುಗಾದಿಗೆ ಮರುಜನ್ಮ: ಯುಗಾದಿ ಪ್ರತಿಪದೆಯಂದು ಕಾಮದೇವರು ಮರುಜನ್ಮ ಮತ್ತೆ ಹೊಸ ವರ್ಷದ ಯುಗಾದಿ ಪ್ರತಿಪದೆಯಂದು ಕಾಮದೇವರು ಮರುಜನ್ಮ ಪಡೆಯುತ್ತಾನೆ. ಅದರ ಪ್ರತೀಕವಾಗಿ ಪಾಡ್ಯದ ಒಂದು ದಿನ ಮತ್ತೆ ಕಾಮದೇವರ ಪ್ರತಿಷ್ಠಾಪನೆಯಾಗುತ್ತದೆ. ಭಕ್ತರಿಗೆ ಅಂದು ದರ್ಶನಕ್ಕೆ ಮುಕ್ತ ಅವಕಾಶವಿರುತ್ತದೆ. ಹುಣ್ಣಿಮೆಯ ಉತ್ಸವದಲ್ಲಿ ಬರದೇ ಇರುವ ಭಕ್ತರು ಯುಗಾದಿ ಪಾಡ್ಯದಂದು ಬಂದು ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಹಾಗೂ ಹರಕೆಗಳನ್ನು ಅರ್ಪಿಸುವುದಕ್ಕೆ ಭಕ್ತರು ಬರುತ್ತಾರೆ.

ನಿಂಗಪ್ಪ ಬಾರಕೇರ

Quote - ರಾಮಲಿಂಗ ಕಾಮದೇವ ನೊಂದವರ ಕಂಬನಿ ಒರೆಸುವ ಕರುಣಾಳು. ಇಷ್ಟಾರ್ಥ ಪೂರೈಸುವ ಅಧಿದೇವತೆ ಆಗಿರುವುದು ಸತ್ಯ ನಿಂಗಪ್ಪ ಬಾರಕೇರ ಬಸಾಪುರ ವಿಎಸ್‌ಎಸ್‌ ಬ್ಯಾಂಕ್ ಅಧ್ಯಕ್ಷರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.