ADVERTISEMENT

ಓದುವ ಅಭಿರುಚಿಗೆ ಬೆಳಕಿನ ಕಿರಣ

‘ಓದುವ ಬೆಳಕು’ ಯೋಜನೆಯಡಿ 9,631 ಮಕ್ಕಳು‌ ನೋಂದಣಿ

ಕಲಾವತಿ ಬೈಚಬಾಳ
Published 21 ಜನವರಿ 2021, 2:05 IST
Last Updated 21 ಜನವರಿ 2021, 2:05 IST
ಅಂಕಿ ಅಂಶ
ಅಂಕಿ ಅಂಶ   

ಹುಬ್ಬಳ್ಳಿ: ಮಕ್ಕಳ ಓದುವ ಅಭಿರುಚಿ ಉತ್ತೇಜಿಸಲು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಇಲಾಖೆ ಜಾರಿಗೆ ತಂದಿರುವ ‘ಓದುವ ಬೆಳಕು’ ಯೋಜನೆಯಡಿ ಜಿಲ್ಲೆಯಲ್ಲಿ 9,631 ಮಕ್ಕಳು ಗ್ರಂಥಾಲಯಗಳಲ್ಲಿ ಹೆಸರು ನೋಂದಾಯಿಸಿಕೊಂಡಿದ್ದಾರೆ. ಇದುವರೆಗೂ ಮಕ್ಕಳು 2,078 ಪುಸ್ತಕಗಳನ್ನು ಎರವಲು ಪಡೆದಿದ್ದಾರೆ.

ಧಾರವಾಡದಲ್ಲಿ ಹೆಚ್ಚು: ಧಾರವಾಡ ತಾಲ್ಲೂಕಿನಲ್ಲಿ ಅತೀ ಹೆಚ್ಚು ಅಂದರೆ 3,149 ಮಕ್ಕಳು ಹೆಸರು ನೋಂದಾಯಿಸಿಕೊಂಡಿದ್ದಾರೆ. ಕಲಘಟಗಿಯಲ್ಲಿ 2,135, ಹುಬ್ಬಳ್ಳಿಯಲ್ಲಿ 1,742, ಕುಂದಗೋಳದಲ್ಲಿ 940, ನವಲಗುಂದದಲ್ಲಿ 747, ಅಣ್ಣಿಗೇರಿ 525 ಹಾಗೂ ಅಳ್ನಾವರ ತಾಲ್ಲೂಕಿನಲ್ಲಿ 393 ಮಕ್ಕಳ ಹೆಸರು ನೋಂದಣಿಯಾಗಿವೆ.

ಶೇ 100 ರಷ್ಟು ಗುರಿ: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಇಲಾಖೆಯು ಮಕ್ಕಳ ದಿನವಾದ ನ.14 ರಂದು 20 ಮಕ್ಕಳ ಹೆಸರನ್ನು ನೋಂದಾಯಿಸುವ ಮೂಲಕ ಯೋಜನೆಗೆ ಚಾಲನೆ ನೀಡಿತ್ತು. ಪ್ರತಿ ಗ್ರಾಮ ಪಂಚಾಯಿತಿಯಲ್ಲೂ ಶೇ 100ರಷ್ಟು ಮಕ್ಕಳನ್ನು ನೋಂದಾಯಿಸುವ ಗುರಿ ನೀಡಿದೆ.

ADVERTISEMENT

ಕೆಲವು ಪಂಚಾಯಿತಿಗಳಲ್ಲಿ ಓದಲು ಸರಿಯಾದ ಸೌಲಭ್ಯಗಳಿಲ್ಲ. ಪಿಡಿಒಗಳು ಓದುವ ಬೆಳಕಿನ ಯೋಜನೆ ಬಗೆಗೆ ಆಸಕ್ತಿ ವಹಿಸುತ್ತಿಲ್ಲ.

ಏನಿದು ಯೋಜನೆ?: ಮಕ್ಕಳ ಹಕ್ಕುಗಳ ರಕ್ಷಣೆಗಾಗಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ ಮಕ್ಕಳ ಸ್ನೇಹಿ ಗ್ರಾಮ ಪಂಚಾಯಿತಿ ಅಭಿಯಾನ ನಡೆಸುತ್ತಿದೆ. ಅದರ ಭಾಗವಾಗಿ 6 ರಿಂದ 18 ವರ್ಷದೊಳಗಿನ ಮಕ್ಕಳಿಗಾಗಿ ‘ಓದುವ ಬೆಳಕು’ ಯೋಜನೆ ಜಾರಿಗೊಳಿಸಿದೆ.

ಕೋವಿಡ್‌ ಕಾರಣ ಓದಿನಿಂದ ವಿಮುಖರಾಗಿರುವ ಮಕ್ಕಳನ್ನು ಮತ್ತೆ ಓದಿಗೆ ಹಚ್ಚುವುದು ಇದರ ಉದ್ದೇಶ. ಗ್ರಾಮ ಪಂಚಾಯಿತಿಗಳು ಗ್ರಂಥಾಲಯದಲ್ಲಿ ಉಚಿತವಾಗಿ ಮಕ್ಕಳ ಹೆಸರನ್ನು ನೋಂದಾಯಿಸಿ, ನೋಂದಣಿ ಶುಲ್ಕವನ್ನೂ ಭರಿಸುತ್ತಿವೆ.

ಗ್ರಂಥಾಲಯಗಳಲ್ಲಿ ಓದುಗರ ಸಂಖ್ಯೆ ಹೆಚ್ಚಳ: ‘ಕೋವಿಡ್‌ ಕಾರಣ ಮಾರ್ಚ್‌ 15ರಂದು ಬಂದ್‌ ಆಗಿದ್ದ ಗ್ರಂಥಾಲಯಗಳನ್ನು ಸೆ.12 ರಂದು ಪುನಃ ಆರಂಭಿಸಲಾಗಿದೆ. ಆರಂಭದಲ್ಲಿ ನಿರೀಕ್ಷಿತ ಪ್ರಮಾಣದ ಓದುಗರು ಗ್ರಂಥಾಲಯಗಳತ್ತ ಮುಖ ಮಾಡಿರಲಿಲ್ಲ. ದಿನವೊಂದಕ್ಕೆ 10–15 ಜನ ಮಾತ್ರ ಬರುತ್ತಿದ್ದರು. ಎರಡು ತಿಂಗಳಿನಿಂದ ದಿನಕ್ಕೆ 80–100 ಜನ ಗ್ರಂಥಾಲಯಗಳಿಗೆ ಬರುತ್ತಿದ್ದಾರೆ. ಸದ್ಯ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳು ನಡೆಯುತ್ತಿರುವುದರಿಂದ ಓದುಗರು ಹೆಚ್ಚಿನ ಸಂಖ್ಯೆಯಲ್ಲಿ ಗ್ರಂಥಾಲಯಗಳತ್ತ ಮುಖ ಮಾಡುತ್ತಿದ್ದಾರೆ’ ಎಂದು ನಗರ ಕೇಂದ್ರ ಗ್ರಂಥಾಲಯದ ಉಪನಿರ್ದೇಶಕ ಎಂ.ಬಿ.ಕರಿಗಾರ ‘ಪ್ರಜಾವಾಣಿ’ಗೆ ತಿಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.