ADVERTISEMENT

ಸಣ್ಣ ವ್ಯಾಪಾರಿಗಳಿಗೆ ದೊಡ್ಡ ಪೆಟ್ಟು: ಸರ್ಕಾರದ ಪಡಿತರವೇ ಆಧಾರ

ಕೋವಿಡ್‌ ಲಾಕ್‌ಡೌನ್‌ನಿಂದಾಗಿ ನಡೆಯದ ವ್ಯಾಪಾರ

ಪ್ರಮೋದ
Published 16 ಜೂನ್ 2021, 12:40 IST
Last Updated 16 ಜೂನ್ 2021, 12:40 IST
ಮುಸ್ತಾಕ್‌ ಅಹ್ಮದ್‌
ಮುಸ್ತಾಕ್‌ ಅಹ್ಮದ್‌   

‌ಹುಬ್ಬಳ್ಳಿ: ಕೋವಿಡ್‌ ಲಾಕ್‌ಡೌನ್‌ ಅನೇಕರ ಬದುಕುಗಳನ್ನು ಛಿದ್ರಗೊಳಿಸಿದ್ದು, ಬದುಕಿನ ಬಂಡಿ ಸಾಗಿಸಲು ಪರದಾಡುವಂತೆ ಮಾಡಿದೆ. ನಿತ್ಯದ ದುಡಿಮೆಯನ್ನೇ ನಂಬಿಕೊಂಡಿದ್ದ ಸಣ್ಣ ವ್ಯಾಪಾರಿಗಳಿಗೆ ಸೋಂಕಿನ ಹಾವಳಿ ದೊಡ್ಡ ಪೆಟ್ಟು ನೀಡಿದೆ.

ಹೂವಿನ ವ್ಯಾಪಾರ ಮಾಡುವವರು, ತಳ್ಳುವ ಗಾಡಿಯಲ್ಲಿ ಸ್ಟೇಷನರಿ ಸಾಮಗ್ರಿಗಳನ್ನು ಮನೆಮನೆಗೆ ಹೋಗಿ ಮಾರಾಟ ಮಾಡುವವರು, ಗ್ಯಾರೇಜು ಹೊಂದಿರುವವರು, ಬಟ್ಟೆಗಳನ್ನು ಹೊಲಿಯುವವರು, ಪಾನ್‌ಶಾಪ್‌ಗಳ ಮಾಲೀಕರು, ಬೀದಿಬದಿ ವ್ಯಾಪಾರಿಗಳು ಹಾಗೂ ಗೂಡಂಗಡಿ ಸಾಮಗ್ರಿಯ ಮಾರಾಟದಿಂದಲೇ ಬದುಕು ಕಟ್ಟಿಕೊಂಡವರು ಲಾಕ್‌ಡೌನ್‌ನಿಂದಾಗಿ ಹೊಟ್ಟೆ ಹೊರೆಯುವುಕ್ಕೂ ಕಷ್ಟ ಪಡಬೇಕಾಗಿದೆ.

ಬಹಳಷ್ಟು ಜನ ಹತ್ತಾರು ವರ್ಷಗಳಿಂದ ಸಣ್ಣ ವ್ಯಾಪಾರವನ್ನೇ ನೆಚ್ಚಿಕೊಂಡವರು. ಹೀಗಾಗಿ ಬಹುತೇಕರಿಗೆ ಈ ಕೆಲಸದ ಹೊರತಾಗಿ ಬೇರೆ ಏನೂ ಗೊತ್ತಿಲ್ಲ. ಗೊತ್ತಿದ್ದರೂ ದೀರ್ಘ ಅವಧಿಯವರೆಗೆ ಲಾಭದಾಯಕವಾಗಿ ನಡೆಸಿಕೊಂಡು ಹೋಗಲು ಸಾಧ್ಯವಾಗಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ಸೋಂಕಿನ ಭೀತಿಯಲ್ಲಿ ಹೊಟ್ಟೆ ತುಂಬಾ ತಿನ್ನಬೇಕು ಎನ್ನುವ ಆಸೆಗಿಂತ; ಸಿಕ್ಕ ಸಾಮಗ್ರಿಯಲ್ಲಿಯೇ ಆಹಾರ ತಯಾರಿಸಿ ಹೊಟ್ಟೆ ಹೊರೆದು ಜೀವ ಉಳಿಸಿಕೊಂಡರೆ ಸಾಕು ಎನ್ನುವಂತಾಗಿದೆ ವ್ಯಾಪಾರಸ್ಥರ ಮನಸ್ಥಿತಿ.

ADVERTISEMENT

ಸೋನಿಯಾ ಗಾಂಧಿ ನಗರ, ಎಸ್.ಎಂ. ಕೃಷ್ಣ ನಗರ, ಬಿಡ್ನಾಳ, ಸಿಬಿಟಿ, ಹಳೇ ಹುಬ್ಬಳ್ಳಿ ಹಾಗೂ ಕೇಶ್ವಾಪುರ ಸೇರಿದಂತೆ ಹಲವು ಬಡಾವಣೆಗಳಲ್ಲಿ ಸಣ್ಣ ವ್ಯಾಪಾರವನ್ನೇ ನೆಚ್ಚಿಕೊಂಡವವರು ಬಹಳಷ್ಟು ಸಂಖ್ಯೆಯಲ್ಲಿದ್ದಾರೆ. ಆಯಾ ದಿನ ತಮ್ಮ ವೃತ್ತಿಗೆ ಸಂಬಂಧಿಸಿದ ಸಾಮಗ್ರಿಗಳನ್ನು ತರುವುದು, ಒಂದಷ್ಟು ಆದಾಯ ಗಳಿಸುವುದು ನಿತ್ಯದ ಕಾಯಕ. ಲಾಕ್‌ಡೌನ್‌ನಿಂದಾಗಿ ಒಂದೂ ದಿನ ಅವರಿಗೆ ವ್ಯಾಪಾರ ಮಾಡಲು ಸಾಧ್ಯವಾಗಿಲ್ಲ.

ಸಣ್ಣ ವ್ಯಾಪಾರಿಗಳಲ್ಲಿ ಬಹುತೇಕರಿಗೆ ಹೊಟ್ಟೆಪಾಡಿಗಾಗಿ ಸರ್ಕಾರ ನೀಡಿದ ಪಡಿತರ ಧಾನ್ಯಗಳೇ ಆಸರೆಯಾಗಿವೆ. ಪೂರ್ಣ ಲಾಕ್‌ಡೌನ್‌ ಸಮಯದಲ್ಲಿ ಅನೇಕ ಸಂಘ, ಸಂಸ್ಥೆಗಳು ಹಾಗೂ ದಾನಿಗಳು ಆಹಾರ ಧಾನ್ಯಗಳ ಕಿಟ್‌ ಹಾಗೂ ಇನ್ನಿತರ ವಸ್ತುಗಳನ್ನು ನೀಡಿವೆ. ಆದರೆ, ಬೀಡಿ ಕಾರ್ಮಿಕರ ಕಾಲೊನಿಯಂಥ ಹಿಂದುಳಿದ ಬಡಾವಣೆಗೆ ಯಾರೂ ಬಂದಿಲ್ಲ, ನೆರವಿನ ಹಸ್ತವೂ ಚಾಚಿಲ್ಲ. ಅವರಿವರ ಬಳಿ ಸಾಲ ಮಾಡಿ ಸಂಕಷ್ಟದ ದಿನಗಳನ್ನು ದೂಡಿದ್ದೇವೆ ಎನ್ನುತ್ತಾರೆ ವ್ಯಾಪಾರಿಗಳು.

‘ಸರ್ಕಾರ ಕೊಟ್ಟ ಪಡಿತರ ಧಾನ್ಯದಿಂದ ನಿತ್ಯಕ್ಕೆ ಬೇಕಾದ ಎಲ್ಲ ಅಡುಗೆಯನ್ನು ಮಾಡಲು ಆಗುವುದಿಲ್ಲ ನಿಜ; ನಮಗೆ ಏನೂ ಇಲ್ಲದಾಗ ಸಿಕ್ಕ ಪದಾರ್ಥವೇ ದೊಡ್ಡ ಆಸರೆಯಲ್ಲವೇ. ಲಾಕ್‌ಡೌನ್‌ ಅವಧಿಯಲ್ಲಿ ನಮ್ಮನ್ನು ಬದುಕಿಸಿದ್ದು ಅದೇ ಪಡಿತರ. ಸರ್ಕಾರ ಬಹಳಷ್ಟು ವರ್ಗದವರಿಗೆ ಪರಿಹಾರ ನೀಡಿದೆ. ನಮಗೂ ಪರಿಹಾರ ಕೊಟ್ಟು ನೆರವಾಗಬೇಕು’ ಎಂದು ಆನಂದ ನಗರದಲ್ಲಿ ಗ್ಯಾರೇಜ್‌ ನಡೆಸುತ್ತಿರುವ ಬೀಡಿ ಕಾರ್ಮಿಕರ ಕಾಲೊನಿಯ ಸುಲೇಮಾನ್ ಯಲಿಗಾರ ಹಾಗೂ ಸಿಬಿಟಿಯ ಇದ್ದಿಲು ವ್ಯಾಪಾರಿ ಸುಲೇಮಾನ್‌ ಅಬ್ಬಾಸ್‌ ಆಗ್ರಹಿಸಿದರು.

ಮಾಮೂಲಿ ದಿನಗಳಲ್ಲಿ ನಿತ್ಯ ₹500ರಿಂದ ₹600 ದುಡಿಯುತ್ತಿದ್ದೆ. ಒಂದಷ್ಟು ಹಣ ಉಳಿಯುತ್ತಿತ್ತು. ಈಗ ಪ್ರತಿ ಪೈಸೆಗೂ ಅಲೆದಾಡುವಂತಾಗಿದೆ. ಅಲ್ಲಿಲ್ಲಿ ಸಾಲ ಮಾಡಿದ್ದೇನೆ.
ಮುಸ್ತಾಕ್‌ ಅಹ್ಮದ್‌
ಹೂವಿನ ವ್ಯಾಪಾರಿ, ದುರ್ಗದ ಬೈಲ್‌

ಓಣಿಗಳಲ್ಲಿ ಅಡ್ಡಾಡಿ ಸ್ಟೇಷನರಿ ಸಾಮಗ್ರಿ ಮಾರಾಟ ಮಾಡುವ ಕೆಲಸ 25 ವರ್ಷಗಳಿಂದ ಮಾಡುತ್ತಿದ್ದೇನೆ. ಈಗ ನಯಾಪೈಸೆಯೂ ಆದಾಯವಿಲ್ಲ. ಸರ್ಕಾರ ನಮ್ಮತ್ತಲೂ ಕಣ್ತೆರೆದು ನೋಡಲಿ.
ಜಿಲಾನ್‌ಸಾಬ್‌ ಎಂ. ಬಳಿಗಾರ
ಬೀಡಿ ಕಾರ್ಮಿಕರ ಕಾಲೊನಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.