ADVERTISEMENT

ರೈತರು, ಹೋರಾಟಗಾರರ ಸಂಭ್ರಮಾಚರಣೆ

ಮಹದಾಯಿ ನದಿ ನೀರಿಗೆ ಅಧಿಸೂಚನೆ ಹೊರಡಿಸಿದ ಕೇಂದ್ರ ಸರ್ಕಾರ

​ಪ್ರಜಾವಾಣಿ ವಾರ್ತೆ
Published 29 ಫೆಬ್ರುವರಿ 2020, 11:20 IST
Last Updated 29 ಫೆಬ್ರುವರಿ 2020, 11:20 IST
ಮಹದಾಯಿ ಕಳಸಾ ಬಂಡೂರಿ ಹೋರಾಟ ಸಮನ್ವಯ ಸಮಿತಿ ಮುಖಂಡರು ಹುಬ್ಬಳ್ಳಿಯಲ್ಲಿ ಶುಕ್ರವಾರ ಸಿಹಿ ಹಂಚಿ ಸಂಭ್ರಮಾಚರಣೆ ಮಾಡಿದರು
ಮಹದಾಯಿ ಕಳಸಾ ಬಂಡೂರಿ ಹೋರಾಟ ಸಮನ್ವಯ ಸಮಿತಿ ಮುಖಂಡರು ಹುಬ್ಬಳ್ಳಿಯಲ್ಲಿ ಶುಕ್ರವಾರ ಸಿಹಿ ಹಂಚಿ ಸಂಭ್ರಮಾಚರಣೆ ಮಾಡಿದರು   

ಹುಬ್ಬಳ್ಳಿ: ಮಹದಾಯಿ ನದಿ ನೀರು ಹಂಚಿಕೆಗಾಗಿ ಗುರುವಾರ ಕೇಂದ್ರ ಸರ್ಕಾರ ಹೊರಡಿಸಿದ ಅಧಿಸೂಚನೆಯಿಂದಾಗಿ ಜಿಲ್ಲೆಯಲ್ಲಿ ರೈತರು, ರೈತ ಮುಖಂಡರು ಮತ್ತು ಹೋರಾಟಗಾರರಲ್ಲಿ ಹರ್ಷದ ಹೊನಲು ಮೂಡಿದೆ.

ಮಹದಾಯಿ ಕಳಸಾ ಬಂಡೂರಿ ಹೋರಾಟ ಸಮನ್ವಯ ಸಮಿತಿ ಮುಖಂಡರು ಶುಕ್ರವಾರ ನಗರದ ಚನ್ನಮ್ಮ ವೃತ್ತದಲ್ಲಿ ಸಂಭ್ರಮಾಚರಣೆ ಮಾಡಿದರು. ಕನ್ನಡ ಭಾವುಟ ಸುತ್ತಿಕೊಂಡು ಪರಸ್ಪರ ಬಣ್ಣ ಎರಚಿ ಹರ್ಷ ವ್ಯಕ್ತಪಡಿಸಿ ಸಿಹಿ ತಿನಿಸಿದರು. ಆಟೊ ಚಾಲಕರ ಹಾಗೂ ಮಾಲೀಕರ ಸಂಘದವರು ಕೂಡ ವಿಜಯಾಚರಣೆ ಮಾಡಿದರು.

ಈ ವೇಳೆ ಮಾಧ್ಯಮದವರ ಜೊತೆ ಮಾತನಾಡಿದ ಜೆಡಿಎಸ್‌ ಮಾಜಿ ಶಾಸಕ ಎನ್‌.ಎಚ್‌. ಕೋನರಡ್ಡಿ ‘ಉತ್ತರ ಕರ್ನಾಟಕದ ಬಹುದಿನದ ಬೇಡಿಕೆಯಾದ ಮಹದಾಯಿ, ಕಳಸಾ-ಬಂಡೂರಿ ಯೋಜನೆ ಜಾರಿಮಾಡಲು ನಾಲ್ಕು ದಶಕಗಳಿಂದ ಹೋರಾಟ ನಡೆದಿತ್ತು. ಇದು ಈ ಭಾಗದ ಎಲ್ಲ ಹೋರಾಟಗಾರರಿಗೆ ಸಂದ ಜಯ’ ಎಂದು ಸಂತಸ ವ್ಯಕ್ತಪಡಿಸಿದರು.

ADVERTISEMENT

‘ಕೇಂದ್ರ ಅಧಿಸೂಚನೆ ಹೊರಡಿಸಲು ನಮ್ಮ ಭಾಗದ ಅನೇಕ ಜನಪ್ರತಿನಿಧಿಗಳು ಕಾರಣರಾಗಿದ್ದು, ರಾಜ್ಯದ ಪರ ವಾದ ಮಂಡಿಸಿದ ವಕೀಲರ ಪಾತ್ರವನ್ನೂ ಮರೆಯುವಂತಿಲ್ಲ. ಮಹದಾಯಿ ಹೋರಾಟದ ಸಮಯದಲ್ಲಿ ರೈತರ ಹಾಗೂ ವಿವಿಧ ಸಂಘಟನೆಗಳ ಮೇಲೆ ಹೂಡಿರುವ ಮೊಕದ್ದಮೆಗಳನ್ನು ವಾಪಸ್‌ ಪಡೆಯಬೇಕು. ಹೋರಾಟದ ವೇಳೆ ಪ್ರಾಣ ಕಳೆದುಕೊಂಡ ಕುಟುಂಬದ ಸದಸ್ಯರಿಗೆ ತಲಾ ₹10 ಲಕ್ಷ ಪರಿಹಾರ ನೀಡಬೇಕು’ ಎಂದು ಆಗ್ರಹಿಸಿದರು.

ಹೋರಾಟ ಸಮಿತಿಯ ಅಧ್ಯಕ್ಷ ಶಿವಣ್ಣ ಹುಬ್ಬಳ್ಳಿ, ಪ್ರಮುಖರಾದ ರಾಜಣ್ಣ ಕೊರವಿ, ಅಮೃತ ಇಜಾರೆ, ವಿಕಾಸ ಸೊಪ್ಪಿನ, ಮಹೇಶ ಪತ್ತಾರ, ಡಿ.ಜಿ. ಜಂತ್ಲಿ, ಗುರು ರಾಯನಗೌಡ್ರ, ಸಿದ್ದು ತೇಜಿ, ಮಠಪತಿ, ಸಂಜೀವ ಧುಮಕನಾಳ ಪಾಲ್ಗೊಂಡಿದ್ದರು.

ವಿಮಾನ ನಿಲ್ದಾಣದಲ್ಲಿ ಸಂಭ್ರಮ: ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಇಲ್ಲಿನ ವಿಮಾನ ನಿಲ್ದಾಣದಲ್ಲಿ ಬಂದಿಳಿಯುತ್ತಿದ್ದಂತೆ ಬಿಜೆಪಿ ಕಾರ್ಯಕರ್ತರು ಹಾಗೂ ರೈತ ಮುಖಂಡರು ಸಂಭ್ರಮ ಹಂಚಿಕೊಂಡರು. ಹಸಿರು ಶಾಲು ಹೊದಿಸಿ ಜೋಶಿ ಅವರಿಗೆ ಸಿಹಿ ತನಿಸಿ ಖುಷಿ ಹಂಚಿಕೊಂಡರು.

ಬಿಜೆಪಿ ಧಾರವಾಡ ಗ್ರಾಮಾಂತರ ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ಕುಂದಗೋಳಮಠ ಪ್ರತಿಕ್ರಿಯಿಸಿ ‘ನಿರಂತರ ಪ್ರತಿಭಟನೆ, ಬಂದ್ ಹೋರಾಟ ಹೀಗೆ ಅನೇಕ ಘಟನೆಗಳ ಬಳಿಕ ಗೆಲುವು ಲಭಿಸಿದೆ’ ಎಂದಿದ್ದಾರೆ.

ವಿಜಯೋತ್ಸವ ಆಚರಣೆ ಇಂದು: ಶನಿವಾರ ಬೆಳಿಗ್ಗೆ 11.30ಕ್ಕೆ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ವಿಜಯೋತ್ಸವ ಆಚರಿಸಲಾಗುವುದು ಎಂದು ಬಿಜೆಪಿ ಮುಖಂಡ ಶಿವಾನಂದ ಮುತ್ತಣ್ಣವರ ಹೇಳಿದರು.

ಶುಕ್ರವಾರ ‍ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಇದು ಪಕ್ಷಾತೀತ ಕಾರ್ಯಕ್ರಮವಾಗಿದ್ದು ದಲಿತ ಸಂಘಟನೆಗಳು, ರೈತ ಸಂಘಟನೆಗಳು ಸೇರಿದಂತೆ ಎಲ್ಲರೂ ಭಾಗವಹಿಸಬಹುದು’ ಎಂದರು.

ಕಲಾವಿದರಿಗೂ ಸನ್ಮಾನ: 2015ರಲ್ಲಿ ನಟ ಶಿವರಾಜಕುಮಾರ ನೇತೃತ್ವದಲ್ಲಿ ನಡೆದ ಮಹದಾಯಿ ಸಭೆಯಲ್ಲಿ ಅನೇಕ ನಟ, ನಟಿಯರು ಸೇರಿದಂತೆ ಕನ್ನಡ ಚಲನಚಿತ್ರರಂಗ ಬೆಂಬಲ ವ್ಯಕ್ತಪಡಿಸಿತ್ತು. ಆದ್ದರಿಂದ ಮಾ. 4ರಂದು ಬೆಂಗಳೂರಿಗೆ ತೆರಳಿ ಶಿವರಾಜಕುಮಾರ, ಪುನೀತ ರಾಜಕುಮಾರ್‌, ಸುದೀಪ್‌, ದರ್ಶನ್‌ ಮತ್ತು ಆಗಿನ ಚಲನಚಿತ್ರ ಮಂಡಳಿಯ ಅಧ್ಯಕ್ಷ ಡಿಸೋಜಾ, ಸಾ.ರಾ.ಗೋವಿಂದ, ಕೆ.ಪಿ.ಶ್ರೀಕಾಂತ, ರಾಕ್‌ಲೈನ್‌ ವೆಂಕಟೇಶ, ಜಯಮಾಲಾ ಅವರನ್ನು ಸನ್ಮಾನಿಸಲಾಗುವುದು ಎಂದರು.

ನರೇಶ್‌ ಮಲ್ನಾಡ, ಮಲ್ಲಿಕಾರ್ಜುನ್‌ ತಾಲೂರ, ಗಣೇಶ ಅಮರಾವತಿ ಇದ್ದರು.

ನವಲಗುಂದದಲ್ಲಿ ವಿಜಯೋತ್ಸವ ಇಂದು: ಜೆ.ಡಿ.ಎಸ್ ಪಕ್ಷದ ವತಿಯಿಂದ ಫೆ. 29ರಂದು ಮಧ್ಯಾಹ್ನ 3 ಗಂಟೆಗೆ ನವಲಗುಂದದಲ್ಲಿ ವಿಜಯೋತ್ಸವ ಹಾಗೂ ಪಕ್ಷ ಸಂಘಟನೆ ಕುರಿತು ಸಭೆ ನಡೆಯಲಿದೆ. ಎನ್‌.ಎಚ್‌. ಕೋನರಡ್ಡಿ ನೇತೃತ್ವ ವಹಿಸಲಿದ್ದಾರೆ.

ಕೇಂದ್ರ ನುಡಿದಂತೆ ನಡೆದಿದೆ: ಜೋಶಿ

ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಪ್ರಲ್ಹಾದ ಜೋಶಿ, ‘ರೈತರ ಹಿತಾಸಕ್ತಿ ಕಾಪಾಡಲು ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಸರ್ಕಾರ ಬದ್ಧವಾಗಿದ್ದು, ನುಡಿದಂತೆ ನಡೆದುಕೊಂಡಿದ್ದೇವೆ’ ಎಂದರು.

ಅಧಿಸೂಚನೆಗೆ ತಡೆ ತರಲು ಗೋವಾ ಸರ್ಕಾರ ಯತ್ನಿಸಿದರೆ ಮುಂದಿನ ನಡೆಯೇನು ಎಂದು ಕೇಳಿದ ಪ್ರಶ್ನೆಗೆ ‘ಗೋವಾ ಮುಖ್ಯಮಂತ್ರಿ ಜೊತೆ ನಿರಂತರವಾಗಿ ಸಂಪರ್ಕದಲ್ಲಿರುತ್ತೇವೆ. ಕಾನೂನು ತಜ್ಞರ ಸಲಹೆ ಪಡೆಯುತ್ತೇವೆ. ಈಗಾಗಲೇ ಅಧಿಸೂಚನೆ ಹೊರಡಿಸಿರುವ ಕಾರಣ ಏನೂ ಸಮಸ್ಯೆಯಾಗುವುದಿಲ್ಲ’ ಎಂದರು.

‘ಕರ್ನಾಟಕದಿಂದ ಬಂದಿದ್ದ ನಿಯೋಗದ ಸದಸ್ಯರು ಮೇಕೆದಾಟು ಯೋಜನೆ ಬಗ್ಗೆಯೂ ಜಲಸಂಪನ್ಮೂಲ ಸಚಿವ ಗಜೇಂದ್ರ ಸಿಂಗ್‌ ಶೇಖಾವತ್‌ ಅವರನ್ನು ಭೇಟಿಯಾಗಿ ಚರ್ಚಿಸಿದ್ದಾರೆ. ರಾಜ್ಯಕ್ಕೆ ಅನುಕೂಲಕರವಾಗುವ ನಿಟ್ಟಿನಲ್ಲಿ ಸಿಹಿ ಸುದ್ದಿ ಕೊಡುವುದಾಗಿ ಶೇಖಾವತ್‌ ಭರವಸೆ ನೀಡಿದ್ದಾರೆ’ ಎಂದರು.

ಕೃಷ್ಣಾ ನದಿ ನೀರು ಹಂಚಿಕೆ ಬಗ್ಗೆ ಪ್ರತಿಕ್ರಿಯಿಸಿ ‘ತೆಲಂಗಾಣ ಹಾಗೂ ಆಂಧ್ರಗಳ ನಡುವೆ ನೀರು ಹಂಚಿಕೆ ಕುರಿತಷ್ಟೇ ವಿವಾದವಿದೆ’ ಎಂದರು.

18 ತಿಂಗಳಲ್ಲೇ ವಿವಾದ ಅಂತ್ಯಕ್ಕೆ ನ್ಯಾಯಾಧೀಕರಣ ಮಸೂದೆ

ಅಂತರ ರಾಜ್ಯಗಳ ನದಿ ವಿವಾದವನ್ನು 18 ತಿಂಗಳಲ್ಲಿಯೇ ಪೂರ್ಣಗೊಳಿಸುವ ಮಸೂದೆಯನ್ನು ಈಗಾಗಲೇ ಲೋಕಸಭೆಯಲ್ಲಿ ಅಂಗೀಕರಿಸಲಾಗಿದೆ. ಇದಕ್ಕೆ ರಾಜ್ಯಸಭೆಯಲ್ಲಿ ಅನುಮತಿ ಅಗತ್ಯವಿದ್ದು ಈ ಸಲದ ಅಧಿವೇಶನದಲ್ಲಿ ಇದನ್ನು ಪ್ರಸ್ತಾಪಿಸಲಾಗುವುದು ಎಂದರು.

ಅಂತರ ರಾಜ್ಯಗಳ ನದಿವಿವಾದಗಳ ಬಗ್ಗೆ ನಿರಂತರವಾಗಿ ನ್ಯಾಯಮಂಡಳಿಯಲ್ಲಿ ಚರ್ಚೆ ನಡೆಯಬೇಕು. ನಿಗದಿತ ಅವಧಿಯಲ್ಲಿಯೇ ವಿವಾದ ಪರಿಹಾರಬೇಕು. ಯಾವುದೇ ಕಾರಣಕ್ಕೂ ವಿಚಾರಣೆ ಮುಂದೂಡಬಾರದು ಎನ್ನುವ ಉದ್ದೇಶದಿಂದ ನ್ಯಾಯಮಂಡಳಿ ಆರಂಭಿಸಲಾಗುತ್ತಿದೆ ಎಂದರು.

ಬಜೆಟ್‌ನಲ್ಲಿ ಪ್ರತ್ಯೇಕ ಹಣಕ್ಕೆ ಅಬ್ಬಯ್ಯ ಆಗ್ರಹ

ಹುಬ್ಬಳ್ಳಿ: ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿದ್ದು ಸ್ವಾಗತಾರ್ಹ. ಆದರೆ, ಅಂತಿಮ ತೀರ್ಪು ಬಾಕಿ ಇದ್ದು, ರಾಜ್ಯದ ಪರವಾಗಿ ತೀರ್ಪು ದೊರಕಿಸಿಕೊಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದು ಶಾಸಕ ಪ್ರಸಾದ ಅಬ್ಬಯ್ಯ ಒತ್ತಾಯಿಸಿದ್ದಾರೆ.

ಪತ್ರಿಕಾ ಹೇಳಿಕೆ ನೀಡಿರುವ ಅವರು ‘ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿ ತನ್ನ ಪಾಲಿನ ಜವಾಬ್ದಾರಿ ನಿರ್ವಹಿಸಿದೆ. ಇದೀಗ ಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವ ಬಹುದೊಡ್ಡ ಹೊಣೆ ರಾಜ್ಯ ಸರ್ಕಾರದ ಮೇಲಿದೆ. ಪ್ರಸಕ್ತ ಬಜೆಟ್‍ನಲ್ಲಿ ಇದಕ್ಕಾಗಿ ಪ್ರತ್ಯೇಕ ಅನುದಾನ ಮೀಸಲಿರಿಸಿ ಕೂಡಲೇ ಯೋಜನೆ ಅನುಷ್ಠಾನಕ್ಕೆ ಮುಂದಾಗಬೇಕು’ ಎಂದು ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.