ADVERTISEMENT

ಆಪರೇಷನ್‌ ಸಿಂಧೂರ ಮೂಲಕ ಪಾಕಿಸ್ತಾನಕ್ಕೆ ತಕ್ಕ ಉತ್ತರ: ಸಂಸದ ಜಗದೀಶ ಶೆಟ್ಟರ್‌

​ಪ್ರಜಾವಾಣಿ ವಾರ್ತೆ
Published 7 ಮೇ 2025, 16:06 IST
Last Updated 7 ಮೇ 2025, 16:06 IST
ಜಗದೀಶ ಶೆಟ್ಟರ್‌
ಜಗದೀಶ ಶೆಟ್ಟರ್‌   

ಹುಬ್ಬಳ್ಳಿ: ‘ಕಾಶ್ಮೀರದ ಪಹಲ್ಗಾಮ್‌ನಲ್ಲಿ ಉಗ್ರರು ನಡೆಸಿದ ದಾಳಿಗೆ, ಆಪರೇಷನ್‌ ಸಿಂಧೂರ ಏರ್‌ಸ್ಟ್ರೈಕ್‌ ಮೂಲಕ ಭಾರತ ಪಾಕಿಸ್ತಾನಕ್ಕೆ ತಕ್ಕ ಉತ್ತರ ನೀಡಿದೆ’ ಎಂದು ಸಂಸದ ಜಗದೀಶ ಶೆಟ್ಟರ್‌ ಹೇಳಿದ್ದಾರೆ.

‘ಪಾಕಿಸ್ತಾನದಲ್ಲಿರುವ ಉಗ್ರರ ಒಂಬತ್ತು ಅಡಗು ತಾಣಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದ ಭಾರತ, ಅವುಗಳನ್ನು ದ್ವಂಸ ಮಾಡಿದೆ. ಅಮಾಯಕರ ಜೀವ ತೆಗೆದು ಅಟ್ಟಹಾಸ ಮೆರೆದ ಉಗ್ರರಿಗೆ ನರಕ ದರ್ಶನ ಮಾಡಿಸಿದೆ’ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

‘ಭಾರತ ಶಾಂತಿಪ್ರಿಯ ರಾಷ್ಟ್ರ. ಆದರೆ, ದುಷ್ಟತನದ ವಿರುದ್ಧ ಶಾಂತಿ ಮಂತ್ರ ಪಠಿಸುತ್ತ ಮೌನವಾಗಿರಲು ಸಾಧ್ಯವಿಲ್ಲ ಎಂಬುದನ್ನು ನಮ್ಮ ಸೈನಿಕರು ತೋರಿಸಿಕೊಟ್ಟಿದ್ದಾರೆ. ಸೈನಿಕರ ಶೌರ್ಯ ಹಾಗೂ ಸಮರ್ಪಣಾ ಭಾವಕ್ಕೆ ನಾವೆಲ್ಲ ಚಿರಋಣಿಯಾಗಿರಬೇಕು’ ಎಂದು ಹೇಳಿದ್ದಾರೆ.

ADVERTISEMENT

‘ಕಾಂಗ್ರೆಸ್‌ಗೆ ದೇಶದ ಸುರಕ್ಷತೆಗಿಂತ, ಅಲ್ಪಸಂಖ್ಯಾತರ ಓಲೈಕೆ ಮಾಡುವ ರಾಜಕಾರಣವೇ ಮುಖ್ಯವಾಗಿದೆ. ಎಕ್ಸ್‌ನಲ್ಲಿ ಶಾಂತಿ ಪಾಠ ಮಾಡಿದ ಅವರು, ವ್ಯಾಪಕ ಟೀಕೆಗಳು ಬಂದ ನಂತರ ಅಳಿಸಿ ಹಾಕಿದ್ದಾರೆ. ಅವರು ಓಲೈಕೆ ಮಾಡುತ್ತ, ಶಾಂತಿ ಮಂತ್ರ ಪಠಿಸುತ್ತಲೇ ಇರಲಿ’ ಎಂದು ವ್ಯಂಗ್ಯವಾಡಿರುವ ಶೆಟ್ಟರ್‌, ‘ಪಾಕಿಸ್ತಾನದ ಭಯೋತ್ಪಾದಕರಿಗೆ ಸಹಾಯ ಮಾಡುವ ದೇಶಕ್ಕೂ ಭಾರತ ತಕ್ಕ ಉತ್ತರ ನೀಡಲಿದೆ’ ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.