ADVERTISEMENT

ಜೋಪಡಿಗೆ ಬೆಂಕಿ ಹಚ್ಚಿ ಜೈಲು ಸೇರಿದ ಆರೋಪಿ

​ಪ್ರಜಾವಾಣಿ ವಾರ್ತೆ
Published 18 ಮೇ 2021, 16:22 IST
Last Updated 18 ಮೇ 2021, 16:22 IST

ಹುಬ್ಬಳ್ಳಿ: ತಾಯಿಗೆ ಆಶ್ರಯ ನೀಡುತ್ತಿದ್ದಾರೆ ಎಂದು ಕೋಪಗೊಂಡ ಮಗ, ರಾತ್ರೋ ರಾತ್ರಿ ತಾಯಿ ಆಶ್ರಯ ಪಡೆಯುತ್ತಿದ್ದ ಜೋಪಡಿಗೆ ಬೆಂಕಿ ಹಚ್ಚಿದ ಪ್ರಕರಣ ನಗರದ ಮಂಟೂರ ರಸ್ತೆಯ ಜೋಪಡಿ ಓಣಿಯಲ್ಲಿ ನಡೆದಿದೆ.

ಸ್ಥಳೀಯ ನಿವಾಸಿ ಸತೀಶ ಗೋನಾ ಬೆಂಕಿ ಹಚ್ಚಿದ ಆರೋಪಿಯಾಗಿದ್ದು, ಶಹರ ಠಾಣೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಸತೀಶನು ತಾಯಿ ಜೊತೆ ಸದಾ ಜಗಳವಾಡುತ್ತಿದ್ದನು. ಅವರ ಮೇಲೆ ಹಲ್ಲೆ ನಡೆಸುತ್ತ, ಮಾನಸಿಕ ಕಿರುಕುಳ ನೀಡುತ್ತಿದ್ದನು. ಇದನ್ನು ಸಹಿಸಲಾಗದೆ ಅವರು, ಪರಿಚಯವಿದ್ದ ಮೇರಿ ದುಬಾಲ್ ಅವರ ಜೋಪಡಿಗೆ ಹೋಗಿ ಆಗಾಗ ವಿಶ್ರಾಂತಿ ಪಡೆಯುತ್ತಿದ್ದರು.

‘ತಾಯಿಗೆ ನಿಮ್ಮ ಮನೆಯಲ್ಲಿ ವಿಶ್ರಾಂತಿ ಪಡೆಯಲು ಅವಕಾಶ ನೀಡಬೇಡಿ’ ಎಂದು ಮೇರಿ ಮನೆಯವರಿಗೆ ಸತೀಶ ಆಗಾಗ ಬೆದರಿಕೆ ಹಾಕುತ್ತಿದ್ದನು. ಅದನ್ನೇ ಮನಸ್ಸಲ್ಲಿಟ್ಟುಕೊಂಡು ಬೆಂಕಿ ಹಚ್ಚಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ADVERTISEMENT

‘ಮಗನ ದೌರ್ಜನ್ಯ ತಾಳಲಾಗದೆ ತಾಯಿ ಆಗಾಗ ನಮ್ಮ ಮನೆಗೆ ಬಂದು ವಿಶ್ರಾಂತಿ ಪಡೆಯುತ್ತಿದ್ದರು. ಅದನ್ನು ಸಹಿಸಲಾಗದೆ ಅವನು, ನಾವು ಮಲಗಿದ್ದಾಗ ರಾತ್ರಿ ವೇಳೆ ಪೆಟ್ರೋಲ್‌ ಸುರಿದು ಜೋಪಡಿಗೆ ಬೆಂಕಿ ಹಚ್ಚಿದ್ದಾನೆ. ಜೋಪಡಿ ಸಂಪೂರ್ಣ ಸುಟ್ಟು ಕರಕಲಾಗಿದ್ದು, ಅದೃಷ್ಟವಶಾತ್‌ ನಾವು ಪ್ರಾಣಾಪಾಯದಿಂದ ಪಾರಾಗಿದ್ದೇವೆ. ಸೋಫಾ, ಬಟ್ಟೆ ಹಾಗೂ ದಿನೋಪಯೋಗಿ ಪ್ಲಾಸ್ಟಿಕ್‌ ಸಾಮಗ್ರಿಗಳು ಸುಟ್ಟು ಹೋಗಿವೆ. ಅಂದಾಜು ₹50 ಸಾವಿರ ನಷ್ಟವಾಗಿದೆ’ ಎಂದು ಜೋಪಡಿ ಮನೆ ಮಾಲೀಕ ಫ್ರಾಂಚೀಸ್‌ ದುಬಾಲ್‌ ತಿಳಿಸಿದ್ದಾರೆ.

ಮನೆಗೆ ನುಗ್ಗಿ ಜೀವ ಬೆದರಿಕೆ

ಹುಬ್ಬಳ್ಳಿ: ತನ್ನ ಸಹಚರನಿಗೆ ಗುತ್ತಿಗೆ ಕಾಮಗಾರಿ ನೀಡಲಿಲ್ಲ ಎಂದು ಕೋಪಗೊಂಡ ಕರಾದಗಿ ಓಣಿಯ ಸಾದಿಕ್‌ ಎಕ್ಕುಂಡಿ ಮೂವರು ಸ್ನೇಹಿತರೊಂದಿಗೆ ವಿದ್ಯಾನಗರದ ಗುತ್ತಿಗೆದಾರ ಅರ್ಜುನ ಗುಡ್ಡದ ಅವರ ಮನೆಗೆ ನುಗ್ಗಿ, ಅವರ ಪತ್ನಿಗೆ ಜೀವ ಬೆದರಿಕೆ ಹಾಕಿದ್ದಾನೆ.

ಸಾದಿಕ್‌ ಸೇರಿ ಲೋಕಪ್ಪನಹಕ್ಕಲದ ಸೋಮಲಿಂಗ ಯಲಿಗಾರ, ರಮೇಶ ಪಂಚಗಟ್ಟಿ, ಜಾಫರ್‌ ಬಿಲ್ಡರ್‌ ವಿರುದ್ಧ ವಿದ್ಯಾನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅರ್ಜುನ ಗುತ್ತಿಗೆ ಪಡೆದ ಕೆಲಸದಲ್ಲಿ ಸೋಮಲಿಂಗ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ. ಗುತ್ತಿಗೆ ಕಾಮಗಾರಿ ಹೆಚ್ಚಿದ್ದಾಗ ಉಳಿದವರಿಗೆ ಅದನ್ನು ನಿರ್ವಹಿಸಲು ಹೇಳುತ್ತಿದ್ದ. ಅದೇ ರೀತಿ ಸೋಮಲಿಂಗ ತನಗೂ ಗುತ್ತಿಗೆ ಕೆಲಸ ನೀಡುವಂತೆ ಕೇಳುತ್ತಿದ್ದ. ಅವನ ವಿರುದ್ಧ ಅಪರಾಧ ಪ್ರಕರಣ ಹಾಗೂ ಗೂಂಡಾಗಳ ಸಂಪರ್ಕವಿದ್ದರಿಂದ ಗುತ್ತಿಗೆ ಕೆಲಸ ನೀಡಲು ನಿರಾಕರಿಸಿದ್ದರು. ಇದರಿಂದ ಕೋಪಗೊಂಡ ಸೋಮಲಿಂಗ, ಅರ್ಜುನ ಜೊತೆ ವೈಮನಸ್ಸು ಕಟ್ಟಿಕೊಂಡು, ಆಗಾಗ ಜೀವ ಬೆದರಿಕೆ ಹಾಕುತ್ತಿದ್ದ. ಪರಿಚಯವಿರುವ ಸಾದಿಕ್‌ನಿಗೆ ವಿಷಯ ತಿಳಿಸಿ, ನಾಲ್ವರು ಸೇರಿ ಅವರ ಮನೆಗೆ ನುಗ್ಗಿ ಪತ್ನಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಲ್ಲದೆ, ಅರ್ಜುನ ಎಲ್ಲಿ ಸಿಗುತ್ತಾನೋ ಅಲ್ಲಿ ಕೊಚ್ಚಿ ಕೊಲೆ ಮಾಡುವುದಾಗಿಯೂ ಬೆದರಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಸಿಮ್‌ ಬ್ಲಾಕ್‌ ಸಂದೇಶ; ₹1.51 ಲಕ್ಷ ವಂಚನೆ

ಹುಬ್ಬಳ್ಳಿ: ಸಿಮ್‌ ಬ್ಲಾಕ್‌ ಓಪನ್‌ ಮಾಡಲು ಮೊಬೈಲ್‌ಗೆ ಟೀಮ್‌ ವೀವರ್‌ ಆ್ಯಪ್‌ ಡೌನ್‌ಲೋಡ್‌ ಮಾಡಿಕೊಳ್ಳುವಂತೆ ತಿಳಿಸಿದ ವಂಚಕ, ನಗರದ ಯಲ್ಲಾಪರ ಓಣಿಯ ವಿಜಯಲಕ್ಷ್ಮಿ ಗಂಗಣ್ಣವರ ಎಸ್‌ಬಿಐ ಖಾತೆಯಿಂದ ₹1.51 ಲಕ್ಷ ವರ್ಗಾಯಿಸಿಕೊಂಡಿದ್ದಾನೆ.

ವಿಜಯಲಕ್ಷ್ಮಿ ಅವರ ಮೊಬೈಲ್‌ಗೆ ಸಿಮ್‌ ಬ್ಲಾಕ್‌ ಆಗಿರುವ ಸಂದೇಶ ಬಂದಿದ್ದು, ಅದನ್ನು ಓಪನ್‌ ಮಾಡಲು ಅದರಲ್ಲಿರುವ ಮೊಬೈಲ್‌ ನಂಬರ್‌ಗೆ ಕರೆ ಮಾಡುವಂತೆ ತಿಳಿಸಲಾಗಿತ್ತು. ಆ ನಂಬರ್‌ಗೆ ಕರೆ ಮಾಡಿದಾಗ ಟೀಮ್‌ ವೀವರ್‌ ಡೌನ್‌ಲೋಡ್‌ ಮಾಡಿಕೊಂಡು ಅಳವಡಿಸಿಕೊಳ್ಳಬೇಕು ಎಂದು ವಂಚಕ ತಿಳಿಸಿದ್ದ. ಡೌನ್ಲೋಡ್‌ ಮಾಡಿಕೊಂಡ ಆ್ಯಪ್‌ಗೆ ಎಕ್ಸೆಸ್‌ ನೀಡಿ, ಹಣ ವರ್ಗಾಯಿಸಿಕೊಂಡಿದ್ದಾನೆ. ಹುಬ್ಬಳ್ಳಿ ಸೈಬರ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

46 ಮಂದಿ ವಿರುದ್ಧ ಐದು ಪ್ರಕರಣ ದಾಖಲು

ಹುಬ್ಬಳ್ಳಿ: ಲಾಕ್‌ಡೌನ್‌ ನಿಯಮ ಉಲ್ಲಂಘಿಸಿ ಅವಳಿ ನಗರದ ವಿವಿಧ ಬಡಾವಣೆಗಳಲ್ಲಿ ಕ್ರಿಕೆಟ್‌ ಆಡುತ್ತಿದ್ದವರ ವಿರುದ್ಧ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸಿ 46 ಮಂದಿ ವಿರುದ್ಧ ಐದು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಶಹರ ಪೊಲೀಸ್‌ ಠಾಣೆಯಲ್ಲಿ 10 ಮಂದಿ, ಕಸಬಾ ಪೊಲೀಸ್‌ ಠಾಣೆಯಲ್ಲಿ ಒಂಬತ್ತು ಮಂದಿ, ಹಳೇಹುಬ್ಬಳ್ಳಿ ಪೊಲೀಸ್‌ ಠಾಣೆಯಯಲ್ಲಿ ಐದು ಮಂದಿ, ಕೇಶ್ವಾಪುರ ಠಾಣೆಯಲ್ಲಿ ಆರು ಮಂದಿ ಹಾಗೂ ಧಾರವಾಡದ ಉಪನಗರ ಪೊಲೀಸ್‌ ಠಾಣೆಯಲ್ಲಿ 16 ಮಂದಿ ವಿರುದ್ಧ ಪ್ರತ್ಯೇಕ ಪ್ರಕರಣ ದಾಖಲಾಗಿವೆ ಎಂದು ಪೊಲೀಸ್‌ ಕಮಿಷನರ್‌ ಲಾಬೂರಾಮ್‌ ತಿಳಿಸಿದ್ದಾರೆ.

ನಕಲಿ ಪತ್ರಕರ್ತ ವಶಕ್ಕೆ

ಹುಬ್ಬಳ್ಳಿ: ಪತ್ರಕರ್ತನೆಂದು ಹೇಳಿಕೊಂಡು ವಾಹಿನಿಯೊಂದರ ನಕಲಿ ಗುರುತಿನ ಚೀಟಿ ಇಟ್ಟುಕೊಂಡು ಬೈಕ್‌ಲ್ಲಿ ಓಡಾಡುತ್ತಿದ್ದ ವ್ಯಕ್ತಿಯನ್ನು ಮಂಗಳವಾರ ಪೊಲೀಸರು ಚನ್ನಮ್ಮ ವೃತ್ತದ ಬಳಿ ವಶಕ್ಕೆ ಪಡೆದುಕೊಂಡಿದ್ದಾರೆ.

ಜಾಕ್ ನಿಕೋಲಸ್ ಹೆಸರಿನ ನಕಲಿ‌ ಪತ್ರಕರ್ತನನ್ನು ಉಪನಗರ ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಿದ್ದಾರೆ.

11 ಮಂದಿ ಬಂಧನ

ಹುಬ್ಬಳ್ಳಿ: ಕುಂಬಾರ ಓಣಿಯ ಸಾರ್ವಜನಿಕ ರಸ್ತೆಯ ಇಸ್ಪಿಟ್‌ ಆಡುತ್ತಿದ್ದ 11 ಮಂದಿಯನ್ನು ಕಮರಿಪೇಟೆ ಪೊಲೀಸರು ಬಂಧಿಸಿ, ₹2,050 ನಗದು ಹಾಗೂ ₹21,300 ಮೌಲ್ಯದ ಎಂಟು ಮೊಬೈಲ್‌ಗಳನ್ನು ವಶಪಡಿಸಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.