ADVERTISEMENT

ಕಾಮಗಾರಿ ಕಳಪೆಯಾದರೆ ಕ್ರಮ: ಶೆಟ್ಟರ್‌

ಶಿವ ಕಾಲೊನಿಯಲ್ಲಿ ಕಾಂಕ್ರೀಟ್‌ ರಸ್ತೆ ನಿರ್ಮಾಣಕ್ಕೆ ಭೂಮಿಪೂಜೆ

​ಪ್ರಜಾವಾಣಿ ವಾರ್ತೆ
Published 29 ಅಕ್ಟೋಬರ್ 2019, 11:37 IST
Last Updated 29 ಅಕ್ಟೋಬರ್ 2019, 11:37 IST
ಹುಬ್ಬಳ್ಳಿಯ ಶಿವ ಕಾಲೊನಿಯಲ್ಲಿ ಮಂಗಳವಾರ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ಕಾಂಕ್ರೀಟ್‌ ರಸ್ತೆ ನಿರ್ಮಾಣಕ್ಕೆ ಚಾಲನೆ ನೀಡಿದರು
ಹುಬ್ಬಳ್ಳಿಯ ಶಿವ ಕಾಲೊನಿಯಲ್ಲಿ ಮಂಗಳವಾರ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ಕಾಂಕ್ರೀಟ್‌ ರಸ್ತೆ ನಿರ್ಮಾಣಕ್ಕೆ ಚಾಲನೆ ನೀಡಿದರು   

ಹುಬ್ಬಳ್ಳಿ: ನಗರದಲ್ಲಿ ಸಾಕಷ್ಟು ರಸ್ತೆ ಅಭಿವೃದ್ಧಿ ಕೆಲಸಗಳು ನಡೆಯುತ್ತಿದ್ದು, ಕಾಮಗಾರಿ ಕಳಪೆಯಾದರೆ ಗುತ್ತಿಗೆದಾರರೇ ಹೊಣೆ. ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್‌ ಎಚ್ಚರಿಸಿದರು.

ಗೋಪನಕೊಪ್ಪದಲ್ಲಿರುವ ಶಿವ ಕಾಲೊನಿಯಲ್ಲಿ ಮಂಗಳವಾರ 200 ಮೀಟರ್‌ ಕಾಂಕ್ರೀಟ್‌ ರಸ್ತೆ ನಿರ್ಮಾಣ ಕಾರ್ಯಕ್ಕೆ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು ‘ಒಟ್ಟು ₹21 ಲಕ್ಷ ವೆಚ್ಚದ ಕಾಮಗಾರಿ ಇದಾಗಿದ್ದು, ಲೋಕೋಪಯೋಗಿ ಇಲಾಖೆಯ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಅನುದಾದನಲ್ಲಿ ಕೆಲಸ ಕೈಗೆತ್ತಿಕೊಳ್ಳಲಾಗಿದೆ. ಬುಧವಾರದಿಂದಲೇ ಕಾಮಗಾರಿ ಆರಂಭವಾಗಲಿದೆ’ ಎಂದರು.

ನಗರದಲ್ಲಿ ಅಳವಡಿಸಿರುವ ಪೇವರ್ಸ್‌ ಬಹುತೇಕ ಕಡೆ ಕಿತ್ತು ಹೋಗಿವೆಯಲ್ಲ ಎನ್ನುವ ಪ್ರಶ್ನೆಗೆ ‘ಗುಣಮಟ್ಟಕ್ಕೆ ಒತ್ತು ನೀಡಿ ಕೆಲಸ ಮಾಡುವಂತೆ ಎಲ್ಲ ಗುತ್ತಿಗೆದಾರರಿಗೆ ಸೂಚಿಸಿದ್ದೇನೆ. ನಿಗಾ ವಹಿಸುವಂತೆ ಅಧಿಕಾರಿಗಳಿಗೂ ಹೇಳಿದ್ದೇನೆ. ಡಾಂಬಾರು ರಸ್ತೆಯ ಗುಣಮಟ್ಟಗಳು ಬೇಗನೆ ಹಾಳಾಗುತ್ತಿವೆ. ಆದ್ದರಿಂದ ಎಲ್ಲ ಕಡೆ ಕಾಂಕ್ರೀಟ್‌ ರಸ್ತೆ ನಿರ್ಮಾಣಕ್ಕೆ ಒತ್ತು ಕೊಡಲಾಗುತ್ತಿದೆ’ ಎಂದರು.

ADVERTISEMENT

‘ಹಿಂದಿನ ಸಮ್ಮಿಶ್ರ ಸರ್ಕಾರ ಕೆಲ ಗುತ್ತಿಗೆದಾರರಿಗೆ ಬಿಲ್‌ ಬಾಕಿ ಉಳಿಸಿಕೊಂಡಿದ್ದ ಕಾರಣ ಈಗ ಕಾಮಗಾರಿಗಳು ನಿಧಾನವಾಗುತ್ತಿವೆ. ಈ ಸಮಸ್ಯೆಯನ್ನು ಹಂತ ಹಂತವಾಗಿ ಪರಿಹರಿಸಲಾಗುವುದು. ನಗರದಲ್ಲಿ ಅತಿಕ್ರಮಣವಾಗಿರುವ ಜಾಗ ತೆರವುಗೊಳಿಸುವ ಕಾರ್ಯ ನಡೆಯುತ್ತಿದೆ. ದೀಪಾವಳಿ ಹಬ್ಬ ಮುಗಿದ ಈ ಕೆಲಸ ಬಳಿಕ ಚುರುಕು ಪಡೆದುಕೊಳ್ಳಲಿದೆ’ ಎಂದು ಹೇಳಿದರು.

ಬಿಜೆಪಿ ಮುಖಂಡ ಈಶ್ವರಗೌಡ ಪಾಟೀಲ, ಸ್ಥಳೀಯರಾದ ಈರಪ್ಪ ಹೊಲತಿಕೋಟಿ, ಬಸವರಾಜ ಡೊಂಬರ, ಪ್ರಕಾಶ, ಕಾಂತಣ್ಣ ಹೆಗಡೆ, ಶಿವಪ್ಪ ರಾಮಪ್ಪ ಕಲ್ಯಾಣಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.