ADVERTISEMENT

ಹರಿಜನ ಶಾಲಾ ಮಕ್ಕಳಿಗೆ ಸಂಪೂರ್ಣ ನೆರವು: ಕಿಚ್ಚ ಸುದೀಪ್‌ ಚಾರಿಟಬಲ್ ಸೊಸೈಟಿ ಘೋಷಣೆ

​ಪ್ರಜಾವಾಣಿ ವಾರ್ತೆ
Published 17 ಮಾರ್ಚ್ 2021, 9:29 IST
Last Updated 17 ಮಾರ್ಚ್ 2021, 9:29 IST
ಶಾಲಾ ವಿವಾದ ಪರಿಹರಿಸಲು ಹುಬ್ಬಳ್ಳಿಗೆ‌ ಬಂದ ಕಿಚ್ಚ ಸುದೀಪ ಚಾರಿಟಬಲ್ ಸೊಸೈಟಿ ಸದಸ್ಯರು ಸ್ಥಳೀಯರೊಂದಿಗೆ ಚರ್ಚಿಸಿದರು.
ಶಾಲಾ ವಿವಾದ ಪರಿಹರಿಸಲು ಹುಬ್ಬಳ್ಳಿಗೆ‌ ಬಂದ ಕಿಚ್ಚ ಸುದೀಪ ಚಾರಿಟಬಲ್ ಸೊಸೈಟಿ ಸದಸ್ಯರು ಸ್ಥಳೀಯರೊಂದಿಗೆ ಚರ್ಚಿಸಿದರು.    

ಹುಬ್ಬಳ್ಳಿ: ಇಲ್ಲಿನ ರಾಮನಗರದ ಹರಿಜನ ಹೆಣ್ಣುಮಕ್ಕಳ ಕನ್ನಡ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಕಿಂಚಿತ್ತೂ ತೊಂದರೆಯಾಗದಂತೆ ನಮ್ಮ ತಂಡ ಸಂಪೂರ್ಣವಾಗಿ ಕಾಳಜಿ ವಹಿಸಲಿದೆ ಎಂದು ಕಿಚ್ಚ ಸುದೀಪ್‌ ಚಾರಿಟಬಲ್‌ ಸೊಸೈಟಿ ಅಧ್ಯಕ್ಷ ರಮೇಶ ಕಿಟ್ಟಿ ಭರವಸೆ ನೀಡಿದರು.

ಗಾಂಧಿವಾಡ ಕೋ ಆಪರೇಟಿವ್ ಹೌಸಿಂಗ್ ಸೊಸೈಟಿ, ಅನುದಾನಿತ ಹರಿಜನ ಶಾಲೆಗೆ 30 ವರ್ಷಗಳ ಅವಧಿಗೆ ಜಾಗ ಲೀಸ್‌ ನೀಡಿತ್ತು. ಈ ಅವಧಿ ಪೂರ್ಣಗೊಂಡಿದ್ದು ಜಾಗ ಬಿಟ್ಟುಕೊಡಬೇಕು ಎಂದು ನ್ಯಾಯಾಲಯ ಆದೇಶ ನೀಡಿದೆ. ಇದರಿಂದಾಗಿ ಮಕ್ಕಳ ಹಾಗೂ ಶಿಕ್ಷಕರ ಭವಿಷ್ಯ ಅತಂತ್ರವಾಗಿತ್ತು.

ಈ ಕುರಿತು ಮಾಧ್ಯಮಗಳಲ್ಲಿ ಪ್ರಕಟವಾದ ವರದಿ ನೋಡಿ ನಟ ಸುದೀಪ್‌ ಶಾಲೆಗೆ ನೆರವು ನೀಡುವುದಾಗಿ ಘೋಷಿಸಿದ್ದರು. ವಸ್ತು ಸ್ಥಿತಿ ಪರಿಶೀಲನೆಗೆ ರಮೇಶ, ಚಾರಿಟಬಲ್‌ ಸೊಸೈಟಿ ನಿರ್ದೇಶಕರಾದ ನಾಗೇಂದ್ರ ಮತ್ತು ಪುಟ್ಟರಾಜು ಬುಧವಾರ ಶಾಲೆಗೆ ಭೇಟಿ ನೀಡಿ ಆಡಳಿತ ಮಂಡಳಿ, ಹಳೆ ವಿದ್ಯಾರ್ಥಿಗಳು, ಸ್ಥಳೀಯರು ಮತ್ತು ವಿದ್ಯಾರ್ಥಿಗಳ ಜೊತೆ ಚರ್ಚೆ ನಡೆಸಿದರು.

ADVERTISEMENT

‘ಇಲ್ಲಿನ ಶಾಲೆ ಹಲವಾರು ಮಕ್ಕಳ ಬದುಕಿಗೆ ಆಶಾಕಿರಣವಾಗಿದೆ. ಶಾಲೆಯನ್ನು ಸ್ಥಳಾಂತರ ಮಾಡಬಾರದು’ ಎಂದು ಆಡಳಿತ ಮಂಡಳಿಯವರು ಒತ್ತಾಯಿಸಿದರು.

ಕೊನೆಯಲ್ಲಿ ಮಾತನಾಡಿದ ರಮೇಶ ‘ಹರಿಜನ ಶಾಲೆಯ ಮಕ್ಕಳು ಅಳುತ್ತಿದ್ದ ವಿಡಿಯೊವನ್ನು ಸಾಮಾಜಿಕ ತಾಣದಲ್ಲಿ ನೋಡಿದ ಸುದೀಪ್‌ ಅವರು ಮಕ್ಕಳ ನೆರವಿಗೆ ನಿಲ್ಲಬೇಕು, ಇದಕ್ಕಾಗಿ ನೀವು ಹುಬ್ಬಳ್ಳಿಗೆ ಹೋಗಿ ವಸ್ತುಸ್ಥಿತಿ ಪರಿಶೀಲಿಸಬೇಕೆಂದು ಸೂಚಿಸಿದ್ದರು. ಅವರ ನಿರ್ದೇಶನದಂತೆ ಇಲ್ಲಿಗೆ ಬಂದಿದ್ದೇವೆ’ ಎಂದರು.

‘ಎರಡು ತಿಂಗಳಲ್ಲಿ ದಿಢೀರ್‌ ಆಗಿ ಹೊಸ ಕಟ್ಟಡ ನಿರ್ಮಿಸಲು ಸಾಧ್ಯವಿಲ್ಲ. ಮಕ್ಕಳಿಗೆ ತಾತ್ಕಾಲಿಕವಾಗಿ ಸಮೀಪದ ಶಾಲೆಯೊಂದರಲ್ಲಿ ಎರಡು ಕೊಠಡಿಗಳನ್ನು ಸ್ಥಳೀಯರೇ ನೀಡಿದ್ದಾರೆ. ಮುಂದಿನ ಶೈಕ್ಷಣಿಕ ವರ್ಷದಲ್ಲಿ ಬಾಡಿಗೆ ಅಥವಾ ಸ್ವಂತ ಕಟ್ಟಡ ಯಾವುದು ಬೇಕು? ಎನ್ನುವುದನ್ನು ಆಡಳಿತ ಮಂಡಳಿ ತೀರ್ಮಾನಿಸಿದರೆ ಅದನ್ನು ಒದಗಿಸಲು ನಾವು ಬದ್ಧ’ ಎಂದರು.

‘ಶಾಲಾ ಆಡಳಿತ ಮಂಡಳಿ ಹಾಗೂ ಸೊಸೈಟಿ ನಡುವಿನ ನ್ಯಾಯಾಲಯದ ವ್ಯಾಜ್ಯದಲ್ಲಿ ನಾವು ಭಾಗಿಯಾಗುವುದಿಲ್ಲ. ನಮ್ಮ ಕಾಳಜಿ ಇರುವುದು ಮಕ್ಕಳ ಬಗ್ಗೆ ಮಾತ್ರ’ ಎಂದು ಸ್ಪಷ್ಟಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.