ADVERTISEMENT

ಹುಬ್ಬಳ್ಳಿ ಈದ್ಗಾ ಮೈದಾನ ಪರಿಶೀಲನೆ ನಡೆಸಿದ ಎಡಿಜಿಪಿ ಅಲೋಕ್ ಕುಮಾರ್

​ಪ್ರಜಾವಾಣಿ ವಾರ್ತೆ
Published 29 ಆಗಸ್ಟ್ 2022, 8:09 IST
Last Updated 29 ಆಗಸ್ಟ್ 2022, 8:09 IST
   

ಹುಬ್ಬಳ್ಳಿ: 'ನಗರದ ಈದ್ಗಾ ಮೈದಾನದಲ್ಲಿ ಗಣೇಶಮೂರ್ತಿ ಪ್ರತಿಷ್ಠಾಪನೆ ಕುರಿತು ಪಾಲಿಕೆಯ ಸದನ ಸಮಿತಿ ನೀಡುವ ವರದಿಗೆ ಅನುಗುಣವಾಗಿ ಕಾನೂನು ಕ್ರಮ ಕೈಗೊಳ್ಳಲಾಗುವುದು' ಅಪರಾಧ ಮತ್ತು ಕಾನೂನು ಸುವ್ಯವಸ್ಥೆ ಎಡಿಜಿಪಿ ಅಲೋಕ್ ಕು‌ಮಾರ್ ಹೇಳಿದರು.

ಹುಧಾ ಪೊಲೀಸ್ ಕಮಿಷನರೇಟ್ ಘಟಕದ ಅಧಿಕಾರಿಗಳ ಜೊತೆ ಸೋಮವಾರ ಈದ್ಗಾ ಮೈದಾನಕ್ಕೆ ಭೇಟಿ ನೀಡಿ, ಅಲ್ಲಿ ಕೈಗೊಂಡಿರುವ ಭದ್ರತೆ ಪರಿಶೀಲಿಸಿ ಮಾಧ್ಯಮದವರೊಂದಿಗೆ ಮಾತನಾಡಿದರು.

'ಈದ್ಗಾ ಮೈದಾನದಲ್ಲಿ ಗಣೇಶೋತ್ಸವಕ್ಕೆ ಅವಕಾಶ ನೀಡಬೇಕೋ, ಬೇಡವೋ ಎನ್ನುವುದು ಪಾಲಿಕೆಗೆ ಮತ್ತು ಸರ್ಕಾರಕ್ಕೆ ಸಂಬಂಧಪಟ್ಟ ವಿಷಯ. ಅವರ ಸೂಚನೆಯಂತೆ ಭದ್ರತೆಗೆ ಕ್ರಮ ಕೈಗೊಳ್ಳಲಾಗುವುದು. ಯಾವುದೇ ಅಹಿತಕರ ಘಟನೆಗೆ ಅವಕಾಶ ನೀಡುವುದಿಲ್ಲ' ಎಂದು ಹೇಳಿದರು.

ADVERTISEMENT

'ಗಣೇಶೋತ್ಸವ ಅಂಗವಾಗಿ ರಾಜ್ಯದಾದ್ಯಂತ ಪಥ ಸಂಚಲನ ನಡೆಸಲಾಗಿದೆ. ಹುಬ್ಬಳ್ಳಿ-ಧಾರವಾಡ, ಬೆಳಗಾವಿ, ಶಿವಮೊಗ್ಗ ಜಿಲ್ಲೆಗಳಲ್ಲಿ ದೊಡ್ಡ ಮಟ್ಟದಲ್ಲಿ ಉತ್ಸವ ನಡೆಯುತ್ತವೆ. ಇಲ್ಲಿನ ಸೂಕ್ಷ್ಮ ಪ್ರದೇಶಗಳಲ್ಲಿ ಒಂದುವಾರದಿಂದ ಪಥಸಂಚಲನ ನಡೆಯುತ್ತಿವೆ. ಅಲ್ಲದೆ, ಡ್ರೋಣ್ ಕ್ಯಾಮೆರಾಗಳನ್ನು ಬಳಸಿ ಹದ್ದಿನ ಕಣ್ಣಿಡಲಾಗುತ್ತಿದೆ. ರೌಡಿಗಳಿಂದ ಮುಚ್ಚಳಿಕೆ ಪತ್ರವನ್ನು ಸಹ ಬರೆಸಿಕೊಳ್ಳಲಾಗುತ್ತಿದೆ' ಎಂದರು.

'ಹಬ್ಬದ ಸಂದರ್ಭದಲ್ಲಿ ಗ್ರಾಮೀಣ ಭಾಗಗಳಲ್ಲಿ ಮದ್ಯ, ಗಾಂಜಾ ಸೇವನೆ ಹೆಚ್ಚಾಗುತ್ತವೆ. ಅವುಗಳಿಂದ ಶಾಂತಿ ಸುವ್ಯವಸ್ಥೆಗೆ ಧಕ್ಕೆ ಬರುವ ಸಾಧ್ಯತೆಯಿದೆ. ಅಂಥವರ ಮೇಲೆ ಕಣ್ಣಿಟ್ಟು ಪ್ರಕರಣ ದಾಖಲಿಸಲು ಸೂಚಿಸಲಾಗಿದೆ‌. ಯಾವುದೇ ಕಾರಣಕ್ಕೂ ಅಪರಾಧ ಚಟುವಟಿಕೆಗಳಿಗೆ ಅವಕಾಶ ನೀಡುವುದಿಲ್ಲ' ಎಂದು ಹೇಳಿದರು.

'ಕೋರ್ಟ್ ಆದೇಶದ ಪ್ರಕಾರ ರಾತ್ರಿ 10ರಿಂದ ಬೆಳಿಗ್ಗೆ 6ರವರೆಗೆ ಡಿಜೆ ಬಳಕೆ ಮಾಡುವಂತಿಲ್ಲ. ಬೆಳಿಗ್ಗೆ 6ರ ನಂತರ ನಿಯಮಾವಳಿ ಪ್ರಕಾರ ಬಳಸಬಹುದು. ಕಾನೂನು ಉಲ್ಲಂಘಿಸಿದರೆ ಅಂಥವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು' ಎಂದು‌ ಎಡಿಜಿಪಿ ತಿಳಿಸಿದರು.

ಪೊಲೀಸ್ ಕಮಿಷನರ್ ಲಾಭೂರಾಮ್, ಎಸ್ಪಿ ಲೋಕೇಶ ಜಗಲಾಸರ್, ಡಿಸಿಪಿಗಳಾದ ಸಾಹಿಲ್ ಬಾಗ್ಲಾ, ಗೋಪಾಲ ಬ್ಯಾಕೋಡ್, ಎಸಿಪಿ ವಿನೋದ ಮುಕ್ತೇದಾರ ಇತರ ಅಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.