ಕುಂದಗೋಳ: ಬಿತ್ತನೆ, ನಾಟಿ, ಕಟಾವಿಗೆ ಯಂತ್ರಗಳು ಬಂದು ಹಲವು ವರ್ಷಗಳಾದವು. ರೈತರ ಕೆಲಸವೂ ಸುಲಭವಾಯಿತು. ಈಗ ಎಡೆ ಹೊಡೆಯಲೂ ಯಂತ್ರ ಬಂದಿದೆ. ಇದು ಎಲ್ಲಿಯೊ ಖರೀದಿ ಮಾಡಿದ ಯಂತ್ರ ಅಲ್ಲ. ಸಹೋದರಿಬ್ಬರು ತಾವೇ ತಯಾರಿಸಿ ಕಡಿಮೆ ಖರ್ಚಿನಲ್ಲಿ ’ಎಡೆ ಯಂತ್ರ’ ನಿರ್ಮಿಸಿ ಸೈ ಎನಿಸಿಕೊಂಡಿದ್ದಾರೆ.
ಸಸಿ ಬೆಳೆದ ನಂತ ಎಡೆ ಹೊಡೆಯಲು ಎರಡು ಎತ್ತುಗಳು ಬೇಕೇ ಬೇಕು. ಅದೇ ಎತ್ತುಗಳು ಮಾಡುವ ನಾಜೂಕು ಎಡೆ ಹೊಡೆಯವ ಕೆಲಸವನ್ನು ಯಂತ್ರದಿಂದಲೇ ಮಾಡುತ್ತಿದ್ದಾರೆ ತಾಲ್ಲೂಕಿನ ಗುಡೇನಕಟ್ಟಿ ಗ್ರಾಮದ ರೈತ ಸಹೋದರರು.
ಎತ್ತು ಸಾಕಲು ಖರ್ಚು ಹಾಗೂ ಕಾರ್ಮಿಕರ ವೇತನ ಭರಿಸುವುದು ಕಷ್ಟ ಎಂದರಿತು ರೈತರಾದ ನಿಂಗಪ್ಪ ಹಾಗೂ ಮಂಜುನಾಥ ನಿರಲಗಿ ಸಹೋದರು, ತಮ್ಮಲ್ಲಿದ್ದ ಪುಲ್ಲಿ ಎಂಜಿನ್‌ಗೆ ಮುಂದೆ ಬೈಕ್ ಚಕ್ರ ಹಾಗೂ ಹಿಂದೆ ದೊಡ್ಡ ಗ್ರಾತ್ರ ಟ್ರ್ಯಾಕ್ಟರ್ ಚಕ್ರ ಅಳವಡಿಸಿದರು. ಅದನ್ನು ಮೂರು ಚಕ್ರದ ಬೈಕ್‌ನಂತೆ ನಿರ್ಮಿಸಿ ಹಿಂದೆ ಎಡೆಕುಂಟೆ ಅಳವಡಿಸಿದರು. ಎಂಜಿನ್‌ಗೆ ಪೆಟ್ರೊಲ್ ಹಾಕಿ, ಬೆಲ್ಟ್ ಅಥವಾ ಚೈನ್ ಅಳವಡಿಸಿ ಎಂಜಿನ್ ಸ್ಟ್ರಾಟ್ ಮಾಡಿದರೆ ಎಡೆ ಕೆಲಸ ಸಾವಧಾನವಾಗಿ ನಡೆಯಿತು.
ಬೈಕ್ ರೀತಿಯಲ್ಲಿ ಕ್ಲಚ್, ಬ್ರೇಕ್, ಎಕ್ಸಲೇಟರ್, ಮೂರು ಚಕ್ರದ ವಾಹನ ಇದಾಗಿದ್ದು, ಇದರಿಂದ ಹೆಸರು, ಶೆಂಗಾ, ಸೋಯಾ, ಸೇರಿದಂತೆ ಎಲ್ಲ ಬೆಳೆಗಳಲ್ಲಿ 7 ಕುಂಟೆಗಳಿಂದ ಎಡೆ ಹಾಗೂ ಹತ್ತಿಯಲ್ಲಿ 2 ಕುಂಟೆಗಳ ಎಡೆ ಹಾಗೂ ಸಣ್ಣ ಟ್ಯಾಂಕ್ ಅಳವಡಿಸಿ ಕಿಟನಾಶಕ ಸಿಂಪಡಿಸಲು ಬಳಸಬಹುದಾಗಿದೆ. 1 ಲೀಟರ್ ಡೀಸೆಲ್‌ನಿಂದ ಒಂದು ಎಕರೆ ಎಡೆ ಹೊಡೆಯಬಹುದು. 1 ಲೀಟರ್ ಡಿಸೇಲ್ ಬಳಸಿ ನಾಲ್ಕು ಎಕರೆಗೆ ಔಷಧ ಸಿಂಪಡಿಸಬಹುದಾಗಿದೆ.
ಈ ಕುರಿತು ಮಾತನಾಡಿ ರೈತ ನಿಂಗಪ್ಪ ನೀರಲಗಿ, ’ನಮ್ಮದು ಎರಡೂವರೆ ಎಕರೆ ಹೊಲ ಇದೆ. ಇನ್ನಷ್ಟು ಲಾವಣಿ ಹೊಲ ಮಾಡುತ್ತೇವೆ. ಕೂಲಿ ಕಾರ್ಮಿಕರ ಸಮಸ್ಯೆ ಹಾಗೂ ವೆಚ್ಚ ಗಮನಿಸಿ ಹಾವೇರಿ ಜಿಲ್ಲೆಯ ನಮ್ಮ ಸ್ನೇಹಿತರೊಬ್ಬರು ಇಂತಹ ಯಂತ್ರ ಬಳಕೆ ಮಾಡಿದ್ದರು. ಅವರಿಗೆ ಎರಡು ಲಕ್ಷ ಖರ್ಚಾಗಿತ್ತು. ನಾವು ಸ್ಥಳೀಯವಾಗಿಯೇ ₹80 ಸಾವಿರದಲ್ಲಿ ತಯಾರಿಸಿಕೊಂಡಿದ್ದೇವೆ. ಇದರಿಂದ ಹತ್ತಿ, ಶೆಂಗಾ, ಸೊಯಾಬೀನ್, ಮೆಣಸಿನಕಾಯಿ ಎಲ್ಲ ಬೆಳೆಗಳಿಗೆ ಎಡೆ ಹೊಡೆಯುವುದು. ಕಿಟನಾಶಕ ಸಿಂಪಡಣೆ ಮಾಡುತ್ತೇವೆ. ನಮಗೆ ಇದರಿಂದ ಬಹಳ ಅನುಕೂಲವಾಗಿದೆ‘ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.