ADVERTISEMENT

ಕೃಷಿಕರ ಮನ ಸೆಳೆದ ಡ್ರ್ಯಾಗನ್‌ ಹಣ್ಣು: ರೈತ ಸಹೋದರರ ಮಾದರಿ ಬೇಸಾಯಕ್ಕೆ ಶ್ಲಾಘನೆ

​ಪ್ರಜಾವಾಣಿ ವಾರ್ತೆ
Published 10 ನವೆಂಬರ್ 2023, 6:20 IST
Last Updated 10 ನವೆಂಬರ್ 2023, 6:20 IST
ಕುಂದಗೋಳ ತಾಲ್ಲೂಕಿನ ಕಳಸ ಗ್ರಾಮದಲ್ಲಿ ಡ್ರ್ಯಾಗನ್ ಹಣ್ಣು ಬೆಳೆದ ಸಿದ್ದನಗೌಡ್ರ ಸಹೋದರರು
ಕುಂದಗೋಳ ತಾಲ್ಲೂಕಿನ ಕಳಸ ಗ್ರಾಮದಲ್ಲಿ ಡ್ರ್ಯಾಗನ್ ಹಣ್ಣು ಬೆಳೆದ ಸಿದ್ದನಗೌಡ್ರ ಸಹೋದರರು   

‌ಕಳಸ (ಗುಡಗೇರಿ): ಕುಂದಗೋಳ ತಾಲ್ಲೂಕಿನಲ್ಲಿ ಮಾವು, ಬಾಳೆ, ಪೇರಲ, ಚಿಕ್ಕು ಮತ್ತಿತರ ಹಣ್ಣುಗಳು ಬೆಳೆಯುವುದು ಸಾಮಾನ್ಯ. ಇದೀಗ ಕೆಲ ರೈತರು ಡ್ರ್ಯಾಗನ್ ಹಣ್ಣು ಬೆಳೆದು ಗಮನ ಸೆಳೆದಿದ್ದಾರೆ. ಅದರಲ್ಲಿಯೂ ಕಳಸ ಗ್ರಾಮದ ರೈತ ಸಿದ್ದನಗೌಡ್ರ ಸಹೋದರರು ಮಿಶ್ರ ಬೆಳೆಗೆ ಆದ್ಯತೆ ನೀಡಿ ಬೆಳೆ ತೆಗೆದಿದ್ದಾರೆ.

ಕಳಸ ಗ್ರಾಮದ ಜಗದೀಶಗೌಡ ಸಿದ್ದನಗೌಡ್ರ ಹಾಗೂ ಮಂಜುನಾಥಗೌಡ ಸಿದ್ದನಗೌಡ್ರ ಕೇವಲ 2 ಎಕರೆ ಜಮೀನಲ್ಲಿ, ಕಳೆದ 10 ವರ್ಷಗಳಿಂದ ರಾಸಾಯನಿಕ ಮುಕ್ತ ಕೃಷಿ ಮಾಡುತ್ತ ಸ್ವತ: ಅವರು ಜೀವಾಮೃತ ಹಾಗೂ ಬೀಜೋಪಚಾರ ಮಾಡಿಕೊಂಡು ಉತ್ತಮ ಬೆಳೆ ಬೆಳೆಯುತ್ತ ಬಂದಿದ್ದಾರೆ.

ಪ್ರತಿ ವರ್ಷ ಕೃಷಿಯಲ್ಲಿ ಒಂದಿಲ್ಲೊಂದು ತೊಂದರೆ ಒಳಗೆ ಸಿಲುಕಿದ್ದ ಅವರಿಗೆ ಸಾವಯವ ಕೃಷಿ ಕೈಹಿಡಿದಿದೆ. ಕಳೆದ 10 ವರ್ಷಗಳಲ್ಲಿ ಹಂತ, ಹಂತವಾಗಿ ಉತ್ತಮ ಬೆಳೆ ಬೆಳೆದಿದ್ದಾರೆ. ಈಗ ಹೊಸ ಮಾದರಿಯ ಡ್ರ್ಯಾಗನ್ ಹಣ್ಣು ಬೆಳೆಯುವ ಸಾಹಸ ಮಾಡಿದ್ದು, ಉತ್ತಮ ಫಸಲು ತೆಗೆದಿದ್ದಾರೆ.

ADVERTISEMENT

ಈ ಹಣ್ಣು ಆರೋಗ್ಯಕ್ಕೆ ಸಹ ಉತ್ತಮ ಎಂಬ ಹಿನ್ನೆಲೆಯಲ್ಲಿ ಹೆಚ್ಚಿನ ಬೇಡಿಕೆ ಇದೆ. 2 ಎಕರೆ ಜಮೀನಿನಲ್ಲಿಯೇ 15 ಗುಂಟೆ ಡ್ರ್ಯಾಗನ್ ಗಿಡಗಳನ್ನು ಡಿಸೆಂಬರ್‌ 2022 ರಲ್ಲಿ ನಾಟಿ ಮಾಡಿದ್ದಾರೆ., ಈಗಾಗಲೇ ಎರಡು ಬಾರಿ ಹಣ್ಣು ಕಠಾವು ಮಾಡಿದ್ದಾರೆ. ಈ ಹಣ್ಣನ್ನು ಮಾರಾಟ ಮಾಡದೇ ಮೊದಲಿಗೆ ಬಂದ ಹಣ್ಣನ್ನು ಗ್ರಾಮದ ಎಲ್ಲ ದೇವರ ಗುಡಿಗಳಿಗೆ ಅರ್ಪಿಸಿದ್ದಾರೆ. ಎರಡನೇ ಹಂತದ ಬೆಳೆಯನ್ನು ಸಹ ಮಾರಾಟ ಮಾಡದೇ ಗ್ರಾಮದ ಮನೆಗಳಿಗೆ ಉಚಿತವಾಗಿ ನೀಡುವ ಮೂಲಕ ಈ ಹಣ್ಣಿನ ರುಚಿ, ಸ್ವಾದವನ್ನು ಜನರಿಗೆ ಉಣಬಡಿಸಿ ಸಂತೋಷಿಸಿದ್ದಾರೆ.

ಈ ಬೆಳೆಗೆ ₹ 1.50 ಲಕ್ಷ ಖರ್ಚು ಮಾಡಿದ್ದಾರೆ. ಅದರ ದುಪ್ಪಟ್ಟು ಲಾಭ ಹೊಂದುವ ನಿರೀಕ್ಷೆ ಅವರಿಗೆ ಖಾತ್ರಿಯಾಗಿದೆ. 20 ಗುಂಟೆಯಲ್ಲಿ ಮಲ್ಲಿಗೆ ಹಾಗೂ ಗಲಾಟೆ ಹೂವು, 4 ಗುಂಟೆಯಲ್ಲಿ ಸವತಿಕಾಯಿ, ಬೆಂಡಿಕಾಯಿ ಹಾಗೂ 5 ಗುಂಟೆಯಲ್ಲಿ ಮೆಣಸಿನಕಾಯಿ ಉಳಿದ ಜಮೀನಿನಲ್ಲಿ ಶೇಂಗಾ ಬೆಳೆ ಬೆಳೆಯುತ್ತಿದ್ದಾರೆ.

ಮಿಶ್ರ ಬೇಸಾಯದಲ್ಲಿ ಉತ್ತಮ ಬೆಳೆ ತೆಗೆಯುತ್ತಿದ್ದು, ಸುತ್ತಲಿನ ರೈತರಿಗೆ ಮಾದರಿಯಾಗಿದ್ದಾರೆ.

ಡ್ರ್ಯಾಗನ್ ಹಣ್ಣಿನ ಬೆಳೆ
ವಾರದ ಖರ್ಚು–ವೆಚ್ಚಕ್ಕೆ ತರಕಾರಿ, ಹೂವು ಕೃಷಿ ಸಾವಯವ, ಮಿಶ್ರ ಬೇಸಾಯ ಪದ್ಧತಿ ಅಳವಡಿಕೆ ರಾಸಾಯನಿಕ ಮುಕ್ತ ಕೃಷಿ: ಸ್ವತಃ ಬೀಜೋಪಚಾರ
ನಾನು ವೃತ್ತಿಯಲ್ಲಿ ಚಾಲಕ. ಬೇರೆ ಬೇರೆ ರಾಜ್ಯಗಳಲ್ಲಿ ಬೆಳೆಯುತ್ತಿರುವ ತೋಟಗಾರಿಕೆ ಬೆಳೆಗಳನ್ನು ಕಂಡು ಸಹೋದರರ ಜೊತೆ ಚರ್ಚೆ ಮಾಡಿ ನಮ್ಮಲ್ಲಿ ಬೆಳೆದು ಸ್ವಾವಲಂಬನೆ ಸಾಧಿಸಿದ್ದೇವೆ
ಜಗದೀಶಗೌಡ ರೈತ
ಡ್ರ್ಯಾಗನ್‌ ಬೆಳೆಗೆ ಸರ್ಕಾರ ಹೆಕ್ಟೆರ್‌ಗೆ ₹31 ಸಾವಿರ ಸಹಾಯಧನ ನೀಡುತ್ತದೆ. ತಾಲ್ಲೂಕಿನ ವಿಠ್ಠಲಾಫುರ ರೈತರು ಬೆಳೆ ತೆಗೆದು ಹುಬ್ಬಳ್ಳಿ ಮುಂಬಯಿಯಲ್ಲಿ ಮಾರುಕಟ್ಟೆ ಕಂಡುಕೊಂಡಿದ್ದಾರೆ
ಮಂಜುನಾಥ ಕರೋಸೆ ಸಹಾಯಕ ಅಧಿಕಾರಿ ತೋಟಗಾರಿಕೆ ಇಲಾಖೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.