ಧಾರವಾಡ: ಮಹಿಳಾ ಸಬಲೀಕರಣ ಮತ್ತು ಉದ್ಯಮಶೀಲತೆಗೆ ಒತ್ತು ನೀಡುವ ಉದ್ದೇಶದಿಂದ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್ ಯೋಜನೆಯಡಿ ಅಕ್ಕ ಕೆಫೆಯನ್ನು ಆರಂಭಿಸಲಾಗಿದ್ದು, ಇದು ಮಹಿಳೆಯರ ಆರ್ಥಿಕ ಸಬಲೀಕರಣಕ್ಕೆ ಕೊಡುಗೆ ನೀಡಲಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಹೇಳಿದರು.
ಕಬ್ಬೆನೂರು ಗ್ರಾಮದ ಕಾಮಧೇನು ಮಹಿಳಾ ಸ್ವಸಹಾಯ ಸಂಘದವರು ಜಿಲ್ಲಾ ಪಂಚಾಯಿತಿ ಸಮೀಪದ ಕಟ್ಟಡದಲ್ಲಿ ತೆರೆದಿರುವ ಅಕ್ಕ-ಕಫೆ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.
‘ಮಹಿಳೆಯರನ್ನು ಸ್ವಸಹಾಯ ಗುಂಪುಗಳಡಿ ಸಂಘಟಿಸಿ, ಅವರಿಗೆ ಕೃಷಿ ಮತ್ತು ಕೃಷಿಯೇತರ ವಿಭಾಗಗಳಡಿ ವಿವಿಧ ಜೀವನೋಪಾಯ ಚಟುವಟಿಕೆಗಳನ್ನು ಒದಗಿಸುವುದರ ಜೊತೆಗೆ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯವಾಗಿ ಸ್ವಾವಲಂಬನೆಯ ಜೀವನವನ್ನು ನಿರ್ವಹಿಸುವಲ್ಲಿ ನಿರಂತರ ಬೆಂಬಲ ನೀಡಲಾಗುತ್ತಿದೆ’ ಎಂದರು.
‘ಮಹಿಳೆಯರು ಕೌಶಲಗಳನ್ನು ಕಲಿತು ಜೀವನೋಪಾಯದೊಂದಿಗೆ ಸಬಲೀಕರಣದ ಬದುಕನ್ನು ರೂಪಿಸಿಕೊಳ್ಳಲು ಅವಶ್ಯಕ ಸಾಮರ್ಥ್ಯಾಭಿವೃದ್ಧಿ ತರಬೇತಿಗಳನ್ನು ಏರ್ಪಡಿಸಿ, ಪ್ರತಿಯೊಬ್ಬ ಮಹಿಳೆಗೂ ಅವಕಾಶಗಳನ್ನು ಕಲ್ಪಿಸಲು ಸರ್ಕಾರ ಶ್ರಮಿಸುತ್ತಿದೆ’ ಎಂದು ಹೇಳಿದರು.
‘ಮಹಿಳೆಯರ ಜೀವನೋಪಾಯ ಚಟುವಟಿಕೆಗಳಿಗೆ ಹೆಚ್ಚಿನ ಉತ್ತೇಜನ ನೀಡುವಲ್ಲಿ ರಾಜ್ಯ ಸರ್ಕಾರವು ಬಜೆಟ್‍ನಲ್ಲಿ ಅಕ್ಕ-ಕೆಫೆ ಕಾರ್ಯಕ್ರಮವನ್ನು ಘೋಷಿಸಿತ್ತು. ಸರ್ಕಾರದ ಆದೇಶದಂತೆ ಗ್ರಾಮೀಣ ಪ್ರದೇಶದಲ್ಲಿ ಸ್ಥಳೀಯ ಆಹಾರವನ್ನು ಕಡಿಮೆ ದರದಲ್ಲಿ ಒದಗಿಸಲು ಮಹಿಳೆಯರೇ ನಡೆಸುವ 50 ಅಕ್ಕ–ಕೆಫೆಗಳನ್ನು (ಸಂಜೀವಿನಿ ) ಸ್ಥಾಪಿಸಲು ತಾತ್ವಿಕ ಅನುಮೋದನೆ ನೀಡಿ ಆದೇಶಿಸಿದೆ’ ಎಂದರು.
ಶಾಸಕ ಎನ್.ಎಚ್.ಕೋನರಡ್ಡಿ, ಗ್ಯಾರಂಟಿ ಯೋಜನೆಗಳ ಜಿಲ್ಲಾ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎಸ್.ಆರ್.ಪಾಟೀಲ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗುಂಜನ್ ಆರ್ಯ, ಜಿಲ್ಲಾ ಪಂಚಾಯಿತಿ ಸಿಇಒ ಭುವನೇಶ ಪಾಟೀಲ, ಉಪಕಾರ್ಯದರ್ಶಿ ಮಲ್ಲಿಕಾರ್ಜುನ ತೊದಲಬಾಗಿ ಹಾಗೂ ಕಾಮಧೇನು ಮಹಿಳಾ ಸ್ವಸಹಾಯ ಸಂಘದ ಅಧ್ಯಕ್ಷೆ ರಾಜಶ್ರೀ ಮಂಜುನಾಥ ಪವಾಡಿ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.