ADVERTISEMENT

ಅಳ್ನಾವರ: 12 ರಂದು ನಿಕಾಲಿ ಕುಸ್ತಿ ಪಂದ್ಯಾವಳಿ

​ಪ್ರಜಾವಾಣಿ ವಾರ್ತೆ
Published 9 ಮೇ 2024, 14:09 IST
Last Updated 9 ಮೇ 2024, 14:09 IST
ಅಳ್ನಾವರದಲ್ಲಿ ನಡೆಯಲಿರುವ ಕುಸ್ತಿ ಪಂದ್ಯಾವಳಿಗೆ ಅಖಾಡ ಸಿದ್ದವಾಗಿರುವುದು
ಅಳ್ನಾವರದಲ್ಲಿ ನಡೆಯಲಿರುವ ಕುಸ್ತಿ ಪಂದ್ಯಾವಳಿಗೆ ಅಖಾಡ ಸಿದ್ದವಾಗಿರುವುದು   

ಅಳ್ನಾವರ: ಗ್ರಾಮದೇವಿ ಜಾತ್ರಾ ಮಹೋತ್ಸವ ಪ್ರಯುಕ್ತ ಪಟ್ಟಣದಲ್ಲಿ ಮೇ 12ರಂದು ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟದ ಹೊನಲು ಬೆಳಕಿನ ಮುಕ್ತ ನಿಕಾಲಿ ಕುಸ್ತಿ ಪಂದ್ಯಾವಳಿ ಆಯೋಜಿಸಲಾಗಿದೆ ಎಂದು ಆಯೋಜಕ ರಾಜು ಪೆಜೋಳ್ಳಿ ತಿಳಿಸಿದ್ದಾರೆ.

ಕಳೆದ ವರ್ಷ ಕೂಡಾ ಬೃಹತ್ ಕುಸ್ತಿ ಪಂದ್ಯಾವಳಿ ಆಯೋಜಿಸಿ ಇಲ್ಲಿನ ಕುಸ್ತಿ ಆಸಕ್ತರ ಮನ ತಣಿಸಿದ ಪೆಜೋಳ್ಳಿ  ಅವರು, ಈ ಬಾರಿ ದೊಡ್ಡ ಮಟ್ಟದ ಪಂದ್ಯಾವಳಿ ಹಮ್ಮಿಕೊಂಡಿದ್ದಾರೆ. ಭಾರತೀಯ ಭೂ ಸೇನೆಯ ಯೋಧರಾದ ಇವರು ದೇಶ ಸೇವೆ ಜೊತೆಗೆ ಕುಸ್ತಿ ಆಟಕ್ಕೆ ಪ್ರೊತ್ಸಾಹ ನೀಡುತ್ತಾ ಬಂದಿದ್ದಾರೆ.

ದೇಶ ವಿದೇಶಗಳಿಂದ ಕುಸ್ತಿ ಪಟುಗಳು ಪಟ್ಟಣಕ್ಕೆ ಆಗಮಿಸುವರು. ಕುಸ್ತಿ ವೀಕ್ಷಿಸಲು ಎಪಿಎಂಸಿ ಹತ್ತಿರ ಹೊಲದಲ್ಲಿ ಬೃಹತ್ ಕ್ರೀಡಾಂಗಣ ನಿರ್ಮಿಸಲಾಗಿದೆ. ಡಿಜಿಟಲ್ ಪರದೆ ಅಳವಡಿಸಲಾಗುವುದು.  

ADVERTISEMENT

ಭಾನುವಾರ ಮಧ್ಯಾಹ್ನ 3ಕ್ಕೆ ಪಂದ್ಯಾವಳಿ ಆರಂಭವಾಗಲಿದೆ.  ಜಯವಂತ ಪೆಜೋಳ್ಳಿ ಮೈದಾನದ ಪೂಜೆ ನೇರವೇರಿಸುವರು. ಕರ್ನಾಟಕ ಕೇಸರಿ ವಿಜೇತ ಹಾಗೂ ಇಲ್ಲಿನ ಹಿರಿಯ ಕುಸ್ತಿ ಪಟು ಶಂಕರ ಅಷ್ಟೇಕರ ಪಂದ್ಯಾವಳಿ ಉದ್ಘಾಟಿಸುವರು.  

ಹೆಸರಾಂತ ಕುಸ್ತಿಪಟುಗಳಾದ ಇರಾನದ ರಿಝಾ, ‘ಭಾರತ ಕೇಸರಿ‘ ಪ್ರಶಸ್ತಿ ವಿಜೇತ ಜಸ್ಸಾಪಟ್ಟಿ, ‘ಕರ್ನಾಟಕ ಕೇಸರಿ‘ ಸದಾಶಿವ ನೆಲವಡೆ, ರೋಹನ, ‘ಮಹಾರಾಷ್ಟ್ರ ಕೇಸರಿ‘ ಶಿವರಾಜ ರಾಶಕೆ, ಸಿಕಂದರ ಶೇಖ,  ಲೀನಾ ಸಿದ್ದಿ, ಗಾಯತ್ರಿ ಸುತಾರ, ಕೀರ್ತಿ ಗುಡಲೇಕರ ಸೇರಿದಂತೆ ಹಲವು ಪೈಲ್ವಾನರು ಈ ಪಂದ್ಯಾವಳಿಯಲ್ಲಿ ಭಾಗವಹಿಸುವರು. 

ಪಂಜಾಬ್, ಹರಿಯಾಣ, ಮಹಾರಾಷ್ಟ್ರ, ಕರ್ನಾಟಕ ಹೀಗೆ ಒಟ್ಟು ಎರಡು ನೂರಕ್ಕೂ ಅಧಿಕ ಕುಸ್ತಿ ಪಟುಗಳು ಭಾಗವಹಿಸುವರು. 40ಸಾವಿರಕ್ಕೂ ಅಧಿಕ ಜನರು ಕುಸ್ತಿ ಪಂದ್ಯ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿದೆ.

ಅಂಕಣಕ್ಕೆ ಬೇಕಾದ ಮಣ್ಣನ್ನು ಬೆಳಗಾವಿಯಿಂದ ತರಿಸಲಾಗಿದೆ. ಇಟ್ಟು ₹ 1.50 ಕೋಟಿ ವೆಚ್ಚದಲ್ಲಿ ಪಂದ್ಯಾವಳಿ ಆಯೋಜಿಸಲಾಗಿದೆ. ₹ 1500 ನಿಂದ ₹ 12 ಲಕ್ಷದವರೆಗೆ ಬಹುಮಾನ ಇರಲಿದೆ ಎಂದು ಆಯೋಜಕ ರಾಜು ಪೇಜೋಳ್ಳಿ ತಿಳಿಸಿದ್ದಾರೆ.

ಪಟ್ಟಣದಲ್ಲಿ 12 ವರ್ಷಗಳ ನಂತರ ಅದ್ದೂರಿಯಾಗಿ ನಡೆದ ಗ್ರಾಮದೇವಿ ಜಾತ್ರಾ ಉತ್ಸವದ ಸ್ಥಳದ ಹತ್ತಿರವೇ ಈ ಅಂಕಣ ಸಿದ್ದವಾಗಿದೆ ಎಂದು ತಿಳಿಸಿದರು. 

ಪ್ರಕಾಶ ಪೆಜೊಳ್ಳಿ, ಸಂತೋಷ್ ಪೆಜೊಳ್ಳಿ, ಪರಶುರಾಮ ಪಾಳೇಗಾರ, ರವಿ ಶಿರೋಡಕರ, ಬಾಳು ದಬಾಲಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.