
ಅಳ್ನಾವರ: ಇಲ್ಲಿನ ಇಂದಿರಾ ನಗರ ಬಡಾವಣೆಯ ವೀರಭದ್ರೇಶ್ವರ ದೇವಸ್ಥಾನದಲ್ಲಿ ವೀರಭದ್ರೇಶ್ವರ ಹಾಗೂ ಇನ್ನುಳಿದ ದೇವತೆಗಳ ಪ್ರಾಣ ಪ್ರತಿಷ್ಠಾಪನೆಯ 9ನೇ ವಾರ್ಷಿಕೋತ್ಸವ ಭಾನುವಾರ ನಡೆಯಿತು.
ಭಾರತ ಹುಣ್ಣಿಮೆಯ ಶುಭ ದಿನದಂದು ನಡೆದ ಧಾರ್ಮಿಕ ಕೈಂಕರ್ಯಗಳು ಪಟ್ಟಣದಲ್ಲಿ ಭಕ್ತಿಲೋಕ ಸೃಷ್ಟಿಸಿದ್ದವು. ಶನಿವಾರ ಮತ್ತು ಭಾನುವಾರ ಎರಡೂ ದಿನ ಭಕ್ತರ ದಂಡು ದೇವಸ್ಥಾನಕ್ಕೆ ಹರಿದು ಬಂತು.
ಭಾನುವಾರ ಬೆಳಗಿನ ಜಾವ 5 ಗಂಟೆಗೆ ರುದ್ರಾಭಿಷೇಕ ಸೇರಿದಂತೆ ಸಕಲ ಧಾರ್ಮಿಕ ವಿಧಿಗಳು ಆರಂಭವಾದವು. ಪ್ರಮುಖ ಘಟ್ಟ ಗುಗ್ಗಳೋತ್ಸವದಲ್ಲಿ 15 ಜನರು ಶುಭ್ರ ವಸ್ತ್ರಧಾರಿಗಳಾಗಿ ಕೈಯಲ್ಲಿ ಕುಂಭಗಳನ್ನು ಹಿಡಿದು ಶ್ರದ್ಧೆಯಿಂದ ಭಾಗಿಯಾದರು. ಸವಣೂರಿನ ನಾಗಪ್ಪ ಕುಂಬಾರ ತಂಡದ ವೀರಗಾಸೆಯ ನಿನಾದ ಪಟ್ಟಣದ ತುಂಬ ಹರಡಿತ್ತು.
ಭಕ್ತರು ಪಲ್ಲಕ್ಕಿ ಹೊತ್ತು ಸಾಗಿದರು. ಪ್ರತಿ ಮನೆ ಎದುರು ಪಲ್ಲಕ್ಕಿ ಬಂದಾಗ ಭಕ್ತರು ನೀರು ಹಾಕಿ ಆರತಿ ಮಾಡಿ ಭಕ್ತಿ ಸೇವೆ ಸಲ್ಲಿಸಿದರು. ಮಹಿಳೆಯರು ಪೂರ್ಣಕುಂಭ ಹೊತ್ತು ಮೆರವಣಿಗೆಗೆ ಮೆರುಗು ಮೂಡಿಸಿದ್ದರು.
ದೇವಸ್ಥಾನದ ಆವರಣದಲ್ಲಿ ಪುರವಂತರ ವೀರಾವೇಶದ ನುಡಿ, ಒಡಪುಗಳನ್ನು ಭಕ್ತರು ಆಸಕ್ತಿಯಿಂದ ಆಲಿಸಿದರು. ಪುರವಂತರ ದಕ್ಷಿಣ ಬ್ರಹ್ಮ ಸಂವಾರ ಸನ್ನಿವೇಶ
ಪ್ರದರ್ಶನ ಗಮನ ಸೆಳೆಯಿತು. ದೇವಸ್ಥಾನದಲ್ಲಿನ ಭದ್ರಕಾಳಿ, ಗಣೇಶ, ನಾಗದೇವತಾ, ಬಸವಣ್ಣ ಮೂರ್ತಿಗಳನ್ನು ಸಿಂಗರಿಸಲಾಗಿತ್ತು. ಅನ್ನ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.