ಅಳ್ನಾವರ: ಪಟ್ಟಣದ ಎಪಿಎಂಸಿ ಆವರಣದಲ್ಲಿ ಮಾವು ಖರೀದಿ ಆರಂಭವಾಗಿದೆ. ಆದರೆ, ಕೆ.ಜಿ.ಗೆ ದರ ₹33 ಇದ್ದದ್ದು, ದಿಢೀರನೆ ₹26ಕ್ಕೆ ಕುಸಿದಿದೆ. ಇದರಿಂದ ಬೆಳೆಗಾರರು ಸಂಕಷ್ಟಕ್ಕೀಡಾಗಿದ್ದಾರೆ.
ಈ ಬಾರಿ ಹವಾಮಾನ ವೈಪರೀತ್ಯದಿಂದ ಜಿಲ್ಲೆಯಲ್ಲಿ ಮಾವು ಫಸಲು ಕಡಿಮೆಯಾಗಿದೆ. ಮಳೆ, ಗಾಳಿ, ಬಿಸಿಲಿಗೆ ಮಾವಿನ ಕಾಯಿಗಳು ಉದುರಿವೆ. ಈಗ ದರವೂ ಕುಸಿದಿದೆ.
ಈ ವರ್ಷ ಮಾವು ಖರೀದಿ ದಲ್ಲಾಳಿಗಳು, ವರ್ತಕರ ಯೂನಿಯನ್ ರಚಿಸಿಕೊಂಡು ಎಪಿಎಂಸಿಯಿಂದ ಪರವಾನಗಿ ಪಡೆದು, ಅಲ್ಲಿನ ಆವರಣದಲ್ಲಿ ತಾತ್ಕಾಲಿಕ ಶೆಡ್ ನಿರ್ಮಿಸಿಕೊಂಡು ಮಾವು ಖರೀದಿಯಲ್ಲಿ ತೊಡಗಿದ್ದಾರೆ.
‘ಈವರೆಗೆ ಮಾವು ಸಂಸ್ಕರಣೆ ಕಾರ್ಖಾನೆಯವರು ಖರೀದಿಗೆ ಬಂದಿಲ್ಲ. ಹೀಗಾಗಿ, ದರ ಕುಸಿತವಾಗಿದೆ’ ಎಂದು ಸ್ಥಳೀಯ ಖರೀದಿದಾರ ಖಾಸೀಂ ಹಟ್ಟಿಹೊಳಿ ಹೇಳುತ್ತಾರೆ.
‘ಮಾವು ಖರೀದಿಸುವ ದಲ್ಲಾಳಿಗಳಿಗೂ ವ್ಯಾಪಾರ ಇಲ್ಲವಾಗಿದೆ. ದರ, ಇಳುವರಿ ಎರಡೂ ಕಳೆದ ವರ್ಷಕ್ಕಿಂತ ಕಡಿಮೆ ಇದೆ’ ಎಂದು ಮಾವಿನಕಾಯಿ ಖರೀದಿದಾರ ಅಜಿಜ್ ದೇವರಾಯಿ ಹೇಳುತ್ತಾರೆ.
ಮಳೆ ರಭಸದ ಗಾಳಿಗೆ ಮಾವಿನ ಕಾಯಿಗಳು ನೆಲಕಚ್ಚಿವೆ. ಕೀಟ ಬಾಧೆಯೂ ಇದೆ. ಇದರಿಂದ ಬೆಳೆಗಾರರು ಕಂಗಾಲಾಗಿದ್ಧಾರೆಅಶೋಕ ಜೋಡಟ್ಟಿ ರೈತ ಕುಂಬಾರಕೊಪ್ಪ
‘ಅಳ್ನಾವರ ತಾಲ್ಲೂಕಿನಲ್ಲಿ ಮಾವು ಪ್ಲಾಂಟೇಷನ್ ಹೆಚ್ಚು ಇದೆ. ಹವಾಮಾನ ವೈಪರೀತ್ಯದಿಂದ ಸತತ ಆರನೇ ವರ್ಷ ಮಾವು ಫಸಲು ಕಡಿಮೆಯಾಗಿದೆ. ಉತ್ತಮ ಧಾರಣೆಯೂ ಇಲ್ಲ. ಬೆಳೆಗೆ ಮಾಡಿದ ಖರ್ಚಿನಷ್ಟೂ ಆದಾಯ ಸಿಗುತ್ತಿಲ್ಲ’ ಎಂದು ಕೋಗಿಲಗೇರಿಯ ಮಾವು ಬೆಳೆಗಾರರ ಭರತೇಶ ಪಾಟೀಲ ಸಂಕಷ್ಟ ತೋಡಿಕೊಂಡರು. ಹಣ್ಣು ಮಾರಾಟ: ಪಟ್ಟಣದ ಆಜಾದ್ ರಸ್ತೆಯಲ್ಲಿ ಬೆಳಿಗ್ಗೆ ಹೊತ್ತಿನಲ್ಲಿ ಮಾವಿನ ಹಣ್ಣಿನ ಸಗಟು ಮಾರಾಟ ನಡೆಯುತ್ತದೆ. ಒಂದು ಟ್ರೇನಲ್ಲಿ ಐದು ಅಥವಾ ಆರು ಡಜನ್ ಹಣ್ಣಿರುತ್ತವೆ. ಸವಾಲು ಮೂಲಕ ಮಾರಾಟ ನಡೆಯುತ್ತಿದೆ. ಡಜನ್‌ಗೆ ₹200 ರಿಂದ ₹300 ವರೆಗೆ ದರ ಇದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.