
–ಕೃಷ್ಣಿ ಶಿರೂರ
ಹುಬ್ಬಳ್ಳಿ: ರಕ್ತದ ಅಗತ್ಯವಿದ್ದಾಗ ರಕ್ತದಾನಿಗಳು ನೆನಪಾಗುತ್ತಾರೆ ಮತ್ತು ರಕ್ತದಾನದ ಮಹತ್ವವೂ ಅರಿವಿಗೆ ಬರುತ್ತದೆ. ಜನರ ಜೀವ ಉಳಿಸುವುದರಲ್ಲಿ ರಕ್ತದಾನಿಗಳು ಪ್ರಮುಖ ಪಾತ್ರ ವಹಿಸುತ್ತಾರೆ. ಅಂಥವರಲ್ಲಿ ಕಿರಣ ಗಡ ಕೂಡ ಒಬ್ಬರು. ಅವರು ಈವರೆಗೆ 58 ಬಾರಿ ರಕ್ತದಾನ ಮಾಡಿದ್ದಾರೆ. ರಾಜ್ಯಕ್ಕೆ ಸೀಮಿತಗೊಳ್ಳದೇ ಸಾಮಾಜಿಕ ಜಾಲತಾಣದ ಮೂಲಕ ದೇಶದಾದ್ಯಂತ ರಕ್ತದಾನಿಗಳ ಸಂಪರ್ಕ ಸಾಧಿಸುತ್ತಾರೆ.
ಐಟಿ ಕಂಪನಿಯೊಂದರ ಹಿರಿಯ ವಲಯ ಮಾರಾಟ ವ್ಯವಸ್ಥಾಪಕರಾದ ಹುಬ್ಬಳ್ಳಿಯ ಕಿರಣ ಗಡ ರಕ್ತದಾನದ ಮಹತ್ವ ತಿಳಿಪಡಿಸುವುದರ ಜೊತೆಗೆ ಸಂಪನ್ಮೂಲ ವ್ಯಕ್ತಿಯಾಗಿ ಜಾಗೃತಿ ಮೂಡಿಸುತ್ತಾರೆ. ಆಗಾಗ್ಗೆ ಶಿಬಿರ ಕೂಡ ಆಯೋಜಿಸುತ್ತಾರೆ. ವಿದ್ಯಾರ್ಥಿಗಳಿಗೂ ತಿಳಿ ಹೇಳುತ್ತಾರೆ. 2017ರಿಂದ ಅವರು ನಗರದ ರಾಷ್ಟ್ರೋತ್ಥಾನ ರಕ್ತ ಕೇಂದ್ರದ ಡೆವೆಲಪ್‌ಮೆಂಟ್ ಟ್ರಸ್ಟಿಯೂ ಆಗಿದ್ದಾರೆ.
2006ರಲ್ಲಿ ಅತ್ತಿಗೆಗೆ ಹೆರಿಗೆ ವೇಳೆ ಅಗತ್ಯಬಿದ್ದ ರಕ್ತಕ್ಕಾಗಿ ಪರದಾಡಿದ ಸಂದರ್ಭವೇ ಕಿರಣ ಅವರನ್ನು ರಕ್ತದಾನಿಯಾಗಲು ಕಾರಣವಾಯಿತು. ಒಂದು ಊರು ಅಥವಾ ರಾಜ್ಯಕ್ಕೆ ಸೀಮಿತಗೊಳ್ಳದೇ ರಕ್ತದ ಅಗತ್ಯವಿರುವವರಿಗೆ ಎಲ್ಲ ನೆರವಾಗಬೇಕು ಎಂಬ ಉದ್ದೇಶದಿಂದ ಕಿರಣ ಅವರು ಫೇಸ್‌ಬುಕ್, ವಾಟ್ಸ್‌ಆ್ಯಪ್ ಮೂಲಕ ದೇಶವ್ಯಾಪಿ ಜನರನ್ನು ಸಂಪರ್ಕಿಸತೊಡಗಿದರು. ‘ಆಲ್ ಇಂಡಿಯಾ ಬ್ಲಡ್ ಗ್ರೂಪ್’ನ ಸಂಯೋಜಕರಾಗಿ ನೇಮಕಗೊಂಡರು. ಈಗ ಅವರಿಗೆ ಸಿಕ್ಕಿಂನಿಂದ ಕನ್ಯಾಕುಮಾರಿವರೆಗೂ ರಕ್ತದಾನಿಗಳ ಸಂಪರ್ಕವಿದೆ.
‘ಸಾವು–ಬದುಕಿನ ನಡುವೆ ಹೋರಾಡುತ್ತಿದ್ದ ಗಂಗಾವತಿಯ ಯುವತಿಯೊಬ್ಬರಿಗೆ ರಕ್ತದಾನ ಮಾಡಿದ್ದು ಮತ್ತು 51 ದಿನ ಐಸಿಯುನಲ್ಲಿದ್ದ 8 ವರ್ಷದ ಬಾಲಕನಿಗೆ 27 ಯುನಿಟ್ ರಕ್ತದ ವ್ಯವಸ್ಥೆ ಮಾಡಿದ್ದು ಸದಾ ನೆನಪಿನಲ್ಲಿ ಇರುತ್ತದೆ. ಹಲವರ ಪ್ರಾಣ ಉಳಿಸಿದ ಸಮಾಧಾನವಿದೆ’ ಎಂದು ಕಿರಣ ಗಡ ‘ಪ್ರಜಾವಾಣಿ’ಗೆ ತಿಳಿಸಿದರು.
ಕಿರಣ ಗಡ ಅವರ ದೂರವಾಣಿ ಸಂಖ್ಯೆ: 9845741489
26140 ದಾನಿಗಳಿಂದ ರಕ್ತ ಸಂಗ್ರಹಣೆ
ಹುಬ್ಬಳ್ಳಿಯ ನಿಲೀಜನ್ ರಸ್ತೆಯಲ್ಲಿ 2010ರಲ್ಲಿ ಆರಂಭಗೊಂಡ ಶಾ ದಾಮಜಿ ಜಾದವಜಿ ಛೇಡಾ ಮೆಮೊರಿಯಲ್ ರಾಷ್ಟ್ರೋತ್ಥಾನ ರಕ್ತಕೇಂದ್ರ ಈವರೆಗೆ 26140 ದಾನಿಗಳಿಂದ 40285 ಯುನಿಟ್ ರಕ್ತ ಸಂಗ್ರಹಿಸಿ ರೋಗಿಗಳಿಗೆ ವಿತರಿಸಿದೆ. 424 ರಕ್ತದಾನ ಶಿಬಿರಗಳನ್ನು ನಡೆಸಿದೆ. ‘2022ರ ಏಪ್ರಿಲ್‌ನಿಂದ 2023ರ ಮಾರ್ಚ್‌ವರೆಗೆ 153 ರಕ್ತದಾನ ಶಿಬಿರ ಏರ್ಪಡಿಸಿ 8001 ದಾನಿಗಳಿಂದ ರಕ್ತ ಸಂಗ್ರಹಿಸಿದೆ. ರೋಗಿಗಳಿಂದ ರಕ್ತದ ಪರಿಷ್ಕರಣಾ ಶುಲ್ಕ ಮಾತ್ರ ಪಡೆದು ವಿತರಿಸುತ್ತೇವೆ’ ಎಂದು ರಾಷ್ಟ್ರೋತ್ಥಾನ ರಕ್ತಕೇಂದ್ರದ ಆಡಳಿತಾಧಿಕಾರಿ ದತ್ತಮೂರ್ತಿ ಕುಲಕರ್ಣಿ ಹೇಳಿದರು.
ಯಾರು ರಕ್ತದಾನ ಮಾಡಬಹುದು
*18 ರಿಂದ 65 ವರಯಸ್ಸಿನ ಎಲ್ಲ ಆರೋಗ್ಯವಂತ ವ್ಯಕ್ತಿಗಳು * ಪುರುಷರು 3 ತಿಂಗಳಿಗೊಮ್ಮೆ ಮಹಿಳೆಯರು 4 ತಿಂಗಳಿಗೊಮ್ಮೆ * ವ್ಯಕ್ತಿಯ ತೂಕ 45 ಕೆಜಿ ಗಿಂತ ಹೆಚ್ಚಿರಬೇಕು * ಹಿಮೋಗ್ಲೋಬಿನ್ ಮಟ್ಟ 12.5 ಜಿಎಸ್ಎಂ ಇರಬೇಕು * ರಕ್ತದಾನಕ್ಕೂ ಮುನ್ನ ತಪಾಸಣೆ ಅವಶ್ಯ
ರಕ್ತದಾನದ ಉಪಯೋಗ
* ರಕ್ತದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಪ್ರಮಾಣ ಕಡಿಮೆ ಆಗುವುದು * ಹೊಸ ರಕ್ತಕಣಗಳ ಉತ್ಪತ್ತಿಗೆ ಸಹಕಾರಿ * ಕ್ಯಾನ್ಸರ್‌ಗೆ ತುತ್ತಾಗುವ ಸಾಧ್ಯತೆ ಕಡಿಮೆ * ಹೃದಯದ ಆರೋಗ್ಯಕ್ಕೆ ಒಳ್ಳೆಯದು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.