ADVERTISEMENT

ಹುಬ್ಬಳ್ಳಿ | ಭ್ರಷ್ಟಾಚಾರ ನಿರ್ಮೂಲನೆ ಮೂಲ ಧ್ಯೇಯವಾಗಲಿ: ಮುಕುಲ್ ಸರನ್ ಮಾಥುರ್

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2025, 5:19 IST
Last Updated 28 ಅಕ್ಟೋಬರ್ 2025, 5:19 IST
ಹುಬ್ಬಳ್ಳಿಯ ರೈಲ್ ಸೌಧದಲ್ಲಿ ಹಮ್ಮಿಕೊಂಡಿದ್ದ ವಿಜಿಲೆನ್ಸ್ ಜಾಗೃತಿ ಸಪ್ತಾಹ ಕಾರ್ಯಕ್ರಮದ ಅಂಗವಾಗಿ ವಿಜಿಲೆನ್ಸ್ ಜಾಗೃತಿ ಕುರಿತ ಭಿತ್ತಿಚಿತ್ರಗಳನ್ನು ನೈರುತ್ಯ ರೈಲ್ವೆಯ ಪ್ರಧಾನ ವ್ಯವಸ್ಥಾಪಕ ಮುಕುಲ್ ಸರನ್ ಮಾಥುರ್ ಅನಾವರಣ ಮಾಡಿದರು
ಹುಬ್ಬಳ್ಳಿಯ ರೈಲ್ ಸೌಧದಲ್ಲಿ ಹಮ್ಮಿಕೊಂಡಿದ್ದ ವಿಜಿಲೆನ್ಸ್ ಜಾಗೃತಿ ಸಪ್ತಾಹ ಕಾರ್ಯಕ್ರಮದ ಅಂಗವಾಗಿ ವಿಜಿಲೆನ್ಸ್ ಜಾಗೃತಿ ಕುರಿತ ಭಿತ್ತಿಚಿತ್ರಗಳನ್ನು ನೈರುತ್ಯ ರೈಲ್ವೆಯ ಪ್ರಧಾನ ವ್ಯವಸ್ಥಾಪಕ ಮುಕುಲ್ ಸರನ್ ಮಾಥುರ್ ಅನಾವರಣ ಮಾಡಿದರು   

ಹುಬ್ಬಳ್ಳಿ: ಇಲ್ಲಿನ ನೈರುತ್ಯ ರೈಲ್ವೆಯ ಪ್ರಧಾನ ಕಚೇರಿ ರೈಲ್ ಸೌಧದಲ್ಲಿ ವಿಚಕ್ಷಣಾ ಜಾಗೃತಿ ಸಪ್ತಾಹಕ್ಕೆ ನೈರುತ್ಯ ರೈಲ್ವೆ ಪ್ರಧಾನ ವ್ಯವಸ್ಥಾಪಕ ಮುಕುಲ್ ಸರನ್ ಮಾಥುರ್ ಸೋಮವಾರ ಚಾಲನೆ ನೀಡಿದರು. ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಸಮಗ್ರತಾ ಪ್ರತಿಜ್ಞಾವಿಧಿ ಬೋಧಿಸಿ, ವಿಚಕ್ಷಣಾ ಜಾಗೃತಿ ಕುರಿತ ಭಿತ್ತಿಚಿತ್ರ ಅನಾವರಣ ಮಾಡಿದರು.

ಬಳಿಕ ಮಾತನಾಡಿದ ಅವರು, ‘ನೌಕರರು, ಪಾಲುದಾರರು ಹಾಗೂ ನಾಗರಿಕರು ಜೀವನದಲ್ಲಿ ಪ್ರಾಮಾಣಿಕತೆ, ಪಾರದರ್ಶಕತೆ, ನೈತಿಕ ಮೌಲ್ಯಗಳನ್ನು ಹೊಂದಿರಬೇಕು. ಭ್ರಷ್ಟಾಚಾರದ ದುಷ್ಪರಿಣಾಮಗಳು ಆರ್ಥಿಕ ಬೆಳವಣಿಗೆ, ಸಾಮಾಜಿಕ ನ್ಯಾಯ ಮತ್ತು ಸಾರ್ವಜನಿಕ ನಂಬಿಕೆಗೆ ಹಾನಿ ಉಂಟು ಮಾಡುತ್ತವೆ’ ಎಂದರು.

ನೈರುತ್ಯ ರೈಲ್ವೆ ಹಿರಿಯ ಉಪ ಮಹಾಪ್ರಬಂಧಕ ಹಾಗೂ ಮುಖ್ಯ ಜಾಗೃತ ಅಧಿಕಾರಿ ಎ.ಅಣ್ಣಾದೊರೈ ಅವರು 2025ರ ವಿಚಕ್ಷಣಾ ಜಾಗೃತಿ ಸಪ್ತಾಹದ ಪ್ರಯುಕ್ತ ವಲಯದಾದ್ಯಂತ ಆಯೋಜಿಸಿದ ಕಾರ್ಯಕ್ರಮಗಳು ಮತ್ತು ಚಟುವಟಿಕೆಗಳ ಕುರಿತು ಮಾಹಿತಿ ನೀಡಿದರು.‌

ADVERTISEMENT

ರೈಲ್ವೆ ಕ್ರಿಕೆಟ್ ಮೈದಾನದಿಂದ ಹುಬ್ಬಳ್ಳಿ ರೈಲ್ವೆ ನಿಲ್ದಾಣದವರೆಗೆ ವಾಕಥಾನ್‌ ನಡೆಯಿತು. ಹೆಚ್ಚುವರಿ ಪ್ರಧಾನ ವ್ಯವಸ್ಥಾಪಕ ಪಿ.ಅನಂತ್, ಇಲಾಖೆಗಳ ಪ್ರಧಾನ ಮುಖ್ಯಸ್ಥರು, ಹಿರಿಯ ಅಧಿಕಾರಿಗಳು, ಸಿಬ್ಬಂದಿ ಇದ್ದರು.

ಹುಬ್ಬಳ್ಳಿ ವಿಭಾಗ: ‘ಭ್ರಷ್ಟಾಚಾರ ನಿವಾರಣೆ ಹಾಗೂ ನೈತಿಕ ಆಡಳಿತ ಉತ್ತೇಜಿಸುವುದು ವಿಜಿಲೆನ್ಸ್ ಜಾಗೃತಿ ಸಪ್ತಾಹದ ಉದ್ದೇಶ. ಭ್ರಷ್ಟಾಚಾರ ನಿರ್ಮೂಲನೆ ಎಲ್ಲರ ಮೂಲ ಧ್ಯೇಯವಾಗಲಿ’ ಎಂದು ನೈಋತ್ಯ ರೈಲ್ವೆ ಹುಬ್ಬಳ್ಳಿ ವಿಭಾಗೀಯ ರೈಲ್ವೆ ವ್ಯವಸ್ಥಾಪಕಿ ಬೇಲಾ ಮೀನಾ ಹೇಳಿದರು.

‘ನ.2ರವರೆಗೆ ಸಪ್ತಾಹ ನಡೆಯಲಿದ್ದು, ಹುಬ್ಬಳ್ಳಿ ರೈಲ್ವೆ ವಿಭಾಗದಿಂದ ಕಾರ್ಯಾಗಾರ, ವಾಕಥಾನ್, ಚರ್ಚಾ ಹಾಗೂ ಪ್ರಬಂಧ ಸ್ಪರ್ಧೆ, ಜಾಗೃತಿ ಅಭಿಯಾನ, ಮಾಹಿತಿ ಶಿಬಿರ ಆಯೋಜಿಸಲಿದೆ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.