ಹುಬ್ಬಳ್ಳಿ: ಹುಬ್ಬಳ್ಳಿ–ಧಾರವಾಡ ಮಹಾನಗರ ಬಿಜೆಪಿ ಘಟಕದ ನೂತನ ಸಾರಥಿಯಾಗಿ ಶಾಸಕ ಅರವಿಂದ ಬೆಲ್ಲದ ನೇಮಕವಾಗಿದ್ದಾರೆ.
ಜಿಲ್ಲೆಯಲ್ಲಿ ಪ್ರಬಲವಾಗಿರುವ ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ ಸೇರಿರುವ ಹಾಗೂ ಉದ್ಯಮಿಯಾಗಿ ಗುರುತಿಸಿಕೊಂಡಿರುವ ಬೆಲ್ಲದ ಅವರಿಗೆ ಮಹಾನಗರ ಘಟಕದ ಜವಾಬ್ದಾರಿ ವಹಿಸುವ ಮೂಲಕ ಮುಂಬರುವ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ತನ್ನ ಪಾರಮ್ಯ ಮುಂದುವರಿಸಲು ಯೋಜನೆ ರೂಪಿಸಿದೆ.
ಬಿಜೆಪಿ ಮಹಾನಗರ ಘಟಕದ ಅಧ್ಯಕ್ಷ ಸ್ಥಾನಕ್ಕೆ 11 ಆಕಾಂಕ್ಷಿಗಳು ಅರ್ಜಿ ಸಲ್ಲಿಸಿದ್ದರು. ಆದರೆ, ಈ ಪಟ್ಟಿಯಲ್ಲಿ ಬೆಲ್ಲದ ಅವರ ಹೆಸರಿರಲಿಲ್ಲ. ಬೆಲ್ಲದ ಅವರ ಹೆಸರನ್ನು ಪ್ರಕಟಿಸಿರುವುದು ಬಿಜೆಪಿ ವಲಯದಲ್ಲೇ ಅಚ್ಚರಿ ಮೂಡಿಸಿದೆ.
ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿದ್ದ ಬೆಲ್ಲದ ಅವರಿಗೆ ಪಕ್ಷ ಕಟ್ಟುವ ಜವಾಬ್ದಾರಿ ವಹಿಸುವ ಮೂಲಕ ಅವರನ್ನು ಸ್ಪರ್ಧೆಯಿಂದ ಹಿಂದಕ್ಕೆ ಸರಿಸುವ ತಂತ್ರವಾಗಿ ಹಾಗೂ ಜಿಲ್ಲೆಯಲ್ಲಿ ಸಚಿವ ಜಗದೀಶ ಶೆಟ್ಟರ್ ಅವರ ಪ್ರಭಾವ ಕುಗ್ಗಿಸುವ ಸಲುವಾಗಿ ಈ ಆಯ್ಕೆ ನಡೆದಿದೆ ಎಂಬ ಮಾತು ರಾಜಕೀಯ ವಲಯದಲ್ಲಿ ಕೇಳಿಬರುತ್ತಿವೆ.
ಮಹಾನಗರ ಜಿಲ್ಲಾ ಘಟಕದ ನೂತನ ಅಧ್ಯಕ್ಷರಾಗಿ ಅರವಿಂದ ಬೆಲ್ಲದ ಸೋಮವಾರ ಅಧಿಕಾರ ಸ್ವೀಕರಿಸಿದ ಬಳಿಕ ‘ಪ್ರಜಾವಾಣಿ’ಗೆ ನೀಡಿದ ಸಂದರ್ಶನದಲ್ಲಿ ಈ ಕುರಿತು ಮನ ಬಿಚ್ಚಿ ಮಾತನಾಡಿದ್ದಾರೆ.
ಬಿಜೆಪಿ ಮಹಾನಗರ ಜಿಲ್ಲಾ ಘಟಕದ ಅಧ್ಯಕ್ಷ ಸ್ಥಾನಕ್ಕೆ ನೀವೂ ಆಕಾಂಕ್ಷಿಯಾಗಿದ್ರಾ?
ಆಕಾಂಕ್ಷಿಯಾಗಿರಲಿಲ್ಲ. ಅರ್ಜಿಯನ್ನೂ ಸಲ್ಲಿಸಿರಲಿಲ್ಲ. ಪಕ್ಷ ಸಂಘಟನೆಗೆ ಹೆಚ್ಚಿನ ಒತ್ತು ನೀಡಬೇಕು. ಹೊಸಬರಿಗೆ ಅವಕಾಶ ನೀಡಬೇಕು ಎಂಬ ಕಾರಣಕ್ಕೆ ನನಗೆ ಅವಕಾಶ ನೀಡಲಾಗಿದೆ.
ಸಚಿವ ಸ್ಥಾನ, ನಿಗಮ ಮಂಡಳಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿದ್ದ ನಿಮ್ಮನ್ನು ಸುಮ್ಮನಿರಿಸಲು ಜಿಲ್ಲಾ ಘಟಕದ ಜವಾಬ್ದಾರಿ ವಹಿಸಲಾಗಿದೆಯೇ?
ಹಾಗೇನಿಲ್ಲ. ಈಗಲೂ ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದೇನೆ. ಪಕ್ಷವು ಸಚಿವ ಅಥವಾ ನಿಗಮ, ಮಂಡಳಿ ಸೇರಿದಂತೆ ಯಾವುದೇ ಜವಾಬ್ದಾರಿ ನೀಡಿದರೂ ನಿರ್ವಹಿಸಲು ಸಮರ್ಥನಿದ್ದೇನೆ. ವೈಯಕ್ತಿಕ ಬೆಳವಣಿಗೆ ಜೊತೆಗೆ ಪಕ್ಷಕ್ಕೂ ಅನುಕೂಲವಾಗಲಿದೆ ಎಂದು ಅಧ್ಯಕ್ಷರನ್ನಾಗಿಸಿರಬಹುದು.
ಜಿಲ್ಲೆಯಲ್ಲಿ ಸಚಿವ ಜಗದೀಶ ಶೆಟ್ಟರ್ ಅವರ ಪ್ರಭಾವ ಕುಗ್ಗಿಸಬೇಕು ಹಾಗೂ ಅವರಿಗೆ ಪರ್ಯಾಯವಾಗಿ ನಿಮ್ಮನ್ನು ಬೆಳೆಸಬೇಕು ಎಂಬ ಉದ್ದೇಶದಿಂದ ಮಹಾನಗರ ಘಟಕದ ಅಧ್ಯಕ್ಷ ಸ್ಥಾನ ನೀಡಲಾಗಿದೆಯೇ?
ಶೆಟ್ಟರ್ ಹಿರಿಯ ನಾಯಕರು. ಅವರಿಗೆ ಪರ್ಯಾಯವಾಗಿ ನನ್ನನ್ನು ಬೆಳೆಸಬೇಕು ಎಂಬ ಉದ್ದೇಶವಲ್ಲ. ಇದಕ್ಕೆ ಅಪಾರ್ಥ ಕಲ್ಪಿಸುವ ಅಗತ್ಯವಿಲ್ಲ. ಜನ ಒಂದೊಂದು ರೀತಿ ಮಾತನಾಡುತ್ತಾರೆ. ಅದಕ್ಕೆ ಉತ್ತರ ನೀಡಲಾಗದು.
ಶಾಸಕ ಸ್ಥಾನದ ಜವಾಬ್ದಾರಿ ಮತ್ತು ವೈಯಕ್ತಿಕ ವ್ಯವಹಾರಗಳ ಒತ್ತಡದಲ್ಲಿ ಮಹಾನಗರ ಜಿಲ್ಲಾ ಘಟಕದ ಸಾರಥ್ಯ ನಿಭಾಯಿಸುವುದು ಕಷ್ಟವಾಗುವುದಿಲ್ಲವೇ?
ರಾಜಕೀಯಕ್ಕೆ ಬಂದ ಮೇಲೆ ಬಿಸಿನೆಸ್‌ಗೆ ಸಮಯ ಕೊಡಲು ಆಗುತ್ತಿರಲಿಲ್ಲ. ಹೀಗಾಗಿ ಈಗಾಗಲೇ ನನ್ನ ಬಿಸಿನೆಸ್ ಜವಾಬ್ದಾರಿಯನ್ನು ಬಹುತೇಕ ಮನೆಯವರಿಗೆ ವಹಿಸಿದ್ದೇನೆ. ಮೊದಲ ಬಾರಿ ಶಾಸಕನಾಗಿದ್ದಾಗಲೇ ಅರ್ಧದಷ್ಟು ಜವಾಬ್ದಾರಿಯನ್ನು ಕೈಬಿಟ್ಟಿದ್ದೆ. ಇದೀಗ ಪೂರ್ತಿಯಾಗಿ ಕೈಬಿಡಬೇಕಾಗಿದೆ. ಜಿಲ್ಲಾ ಘಟಕದ ಅಧ್ಯಕ್ಷ ಸ್ಥಾನದಿಂದ ಹೆಚ್ಚಿನ ಒತ್ತಡ ಆಗುವುದಿಲ್ಲ. ಎಲ್ಲವನ್ನೂ ನಿಭಾಯಿಸುತ್ತೇನೆ
ಮಹಾನಗರದಲ್ಲಿ ಪಕ್ಷ ಸಂಘಟನೆಗೆ ವಿಶೇಷ ಕಾರ್ಯಕ್ರಮ ಅಥವಾ ಯೋಜನೆಗಳೇನಾದರೂ ಹಾಕಿಕೊಂಡಿದ್ದೀರಾ?
ಈಗ ತಾನೇ ನೂತನ ಜವಾಬ್ದಾರಿ ವಹಿಸಿಕೊಂಡಿದ್ದೇನೆ. ಪಕ್ಷದ ಹಿರಿಯ, ಕಿರಿಯ ಮುಖಂಡರೊಂದಿಗೆ ಚರ್ಚಿಸಿ ಹಾಗೂ ರಾಜ್ಯ ಘಟಕದ ಅಧ್ಯಕ್ಷರ ಸಲಹೆ ಪಡೆದುಕೊಂಡು ಯೋಜನೆ ರೂಪಿಸಲಾಗುವುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.