ADVERTISEMENT

ಭ್ರಷ್ಟಾಚಾರ ರಹಿತ ಆಡಳಿತ; ಅಟಲ್ ಹೆಗ್ಗಳಿಕೆ

‘ಸುಶಾಸನ ದಿನಾಚರಣೆ, ಅಟಲ್ ಸ್ಮರಣೆ’ ಕಾರ್ಯಕ್ರಮ; ಸಿ.ಟಿ.ರವಿ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 26 ಡಿಸೆಂಬರ್ 2025, 4:46 IST
Last Updated 26 ಡಿಸೆಂಬರ್ 2025, 4:46 IST
ಹುಬ್ಬಳ್ಳಿಯ ದುರ್ಗದಬೈಲ್ ವೃತ್ತದಲ್ಲಿ ಗುರುವಾರ ಏರ್ಪಡಿಸಿದ್ದ ‘ಸುಶಾಸನ ದಿನಾಚರಣೆ, ಅಟಲ್ ಸ್ಮರಣೆ’ ಕಾರ್ಯಕ್ರಮದಲ್ಲಿ ಸಿ.ಟಿ.ರವಿ ಅವರು ಅಟಲ್ ಬಿಹಾರಿ ವಾಜಪೇಯಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು
ಹುಬ್ಬಳ್ಳಿಯ ದುರ್ಗದಬೈಲ್ ವೃತ್ತದಲ್ಲಿ ಗುರುವಾರ ಏರ್ಪಡಿಸಿದ್ದ ‘ಸುಶಾಸನ ದಿನಾಚರಣೆ, ಅಟಲ್ ಸ್ಮರಣೆ’ ಕಾರ್ಯಕ್ರಮದಲ್ಲಿ ಸಿ.ಟಿ.ರವಿ ಅವರು ಅಟಲ್ ಬಿಹಾರಿ ವಾಜಪೇಯಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು   

ಹುಬ್ಬಳ್ಳಿ: ‘ಪ್ರಧಾನಿಯಾಗಿ ಭ್ರಷ್ಟಾಚಾರ ರಹಿತ ಆಡಳಿತ ನೀಡಿದ್ದು ಅಟಲ್‌ ಬಿಹಾರಿ ವಾಜಪೇಯಿ ಅವರ ಹೆಗ್ಗಳಿಕೆ. ಪಕ್ಷಕ್ಕಿಂತ, ರಾಷ್ಟ್ರ ಹಿತ ಮುಖ್ಯ ಎಂದು ಅವರು ಕೆಲಸ ಮಾಡಿದರು’ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಹೇಳಿದರು.

ಬಿಜೆಪಿ ಹುಬ್ಬಳ್ಳಿ–ಧಾರವಾಡ ಪೂರ್ವ ವಿಧಾನಸಭಾ ಕ್ಷೇತ್ರದ ಯುವ ಮೋರ್ಚಾ ವತಿಯಿಂದ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನದ ಅಂಗವಾಗಿ ನಗರದ ದುರ್ಗದಬೈಲ್ ವೃತ್ತದಲ್ಲಿ ಗುರುವಾರ ಏರ್ಪಡಿಸಿದ್ದ ‘ಸುಶಾಸನ ದಿನಾಚರಣೆ, ಅಟಲ್ ಸ್ಮರಣೆ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಅಟಲ್‌ ಅವರ ಆಶಯದಂತೆ ಎಲ್ಲ ಹಂತದಲ್ಲಿ ಉತ್ತಮ ಆಡಳಿತ ಬರಬೇಕು. ದೇಶದಲ್ಲಿ ಭ್ರಷ್ಟಾಚಾರ ತೊಲಗಬೇಕು. ರಾಜ್ಯದಲ್ಲಿ ಕೆಟ್ಟ ಆಡಳಿತ ಕೊನೆಯಾಗಬೇಕು’ ಎಂದರು.

ADVERTISEMENT

‘ಸುವರ್ಣ ಚತುಷ್ಪಥ ಹೆದ್ದಾರಿಯನ್ನು ನಿರ್ಮಿಸಿದ್ದು ವಾಜಪೇಯಿ. ಅವರು ಪ್ರಧಾನಿಯಾಗುವುದಕ್ಕೂ ಮುನ್ನ ಕೇವಲ ಆರು ವಿಮಾನ ನಿಲ್ದಾಣಗಳಿದ್ದವು. ಅವರ ಅವಧಿಯಲ್ಲಿ ನೂರಾರು ವಿಮಾಣ ನಿಲ್ದಾಣಗಳು ನಿರ್ಮಾಣವಾದವು. ಅಂಬೇಡ್ಕರ್ ಅವರು ಸಂವಿಧಾನ ಶಿಲ್ಪಿಯಾದರೆ, ವಾಜಪೇಯಿ ನವ ಭಾರತ ನಿರ್ಮಾಣದ ಶಿಲ್ಪಿ’ ಎಂದು ಬಣ್ಣಿಸಿದರು.

‘ಅಟಲ್ ಅವರದ್ದು ಕವಿ ಹೃದಯ. ಮಾತಿನ ಶಕ್ತಿ, ಮೌನದ ಗಂಭೀರತೆಯ ಅರಿವು ಅವರಿಗಿತ್ತು. ಅವರದ್ದು ನಿರ್ಮೋಹಿ ವ್ಯಕ್ತಿತ್ವ. ಸ್ನೇಹಕ್ಕೂ ಬದ್ಧ, ಸಮರಕ್ಕೂ ಸಿದ್ಧ ಎಂದು ಸಾರಿದ್ದ ಅವರು, ಪೋಖ್ರಾನ್‌ನಲ್ಲಿ ಅಣ್ವಸ್ತ್ರ ಪರೀಕ್ಷೆ ನಡೆಸಿ, ಭಾರತ ಅಣ್ವಸ್ತ್ರ ಹೊಂದಿರುವ ದೇಶ ಎಂದು ಘೋಷಿಸಿದರು’ ಎಂದರು.

‘ಗೃಹಲಕ್ಷ್ಮಿ ಯೋಜನೆಯ ₹11 ಸಾವಿರ ಕೋಟಿಯನ್ನು ಕಾಂಗ್ರೆಸ್ ಲೂಟಿ ಮಾಡಿದೆ. ಕುಶಾಸನ, ಭ್ರಷ್ಟಾಚಾರ, ಬೆಲೆ ಏರಿಕೆ ಕಾಂಗ್ರೆಸ್‌ ಕೊಡುಗೆಗಳು’ ಎಂದು ಟೀಕಿಸಿದರು. 

‘ಸಂಪೂರ್ಣ ಗ್ರಾಮೀಣ ರೋಜಗಾರ್‌ ಯೋಜನೆಯನ್ನು ಮೊದಲು ಜಾರಿಗೆ ತಂದಿದ್ದು ವಾಜಪೇಯಿ. ಆ ನಂತರ ಅದನ್ನು ನರೇಗಾ ಎಂದು ಬದಲಾಯಿಸಲಾಯಿತು. ಈಗ ಅದನ್ನು ವಿಬಿ–ಜಿ ರಾಮ್‌ ಜಿ ಎಂದು ಬದಲಾಯಿಸಲಾಗಿದೆ. ಅದರಲ್ಲಿ ರಾಮನ ಹೆಸರು ಇರುವುದರಿಂದ ಕೆಲವರಿಗೆ ಸಹಿಸಲು ಆಗುತ್ತಿಲ್ಲ’ ಎಂದರು.

ಶಾಸಕ ಮಹೇಶ ಟೆಂಗಿನಕಾಯಿ ಮಾತನಾಡಿ, ಅಟಲ್ ಬಿಹಾರಿ ವಾಜಪೇಯಿ ಅವರು ಪ್ರಧಾನಿಯಾಗದಿದ್ದರೆ ದೇಶದ ಚಿತ್ರಣವೇ ಬೇರೆಯಾಗಿರುತ್ತಿತ್ತು. ಅವರು ಹಾಕಿಕೊಟ್ಟ ಮಾರ್ಗದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಸಾಗುತ್ತಿದ್ದಾರೆ ಎಂದು ಹೇಳಿದರು.

ವಿಧಾನ ಪರಿಷತ್‌ ಸದಸ್ಯ ಪ್ರದೀಪ ಶೆಟ್ಟರ್, ಲಿಂಗರಾಜ ಪಾಟೀಲ, ರಂಗಾ ಬದ್ದಿ, ಡಾ.ಕ್ರಾಂತಿ ಕಿರಣ್‌, ಪ್ರಭು ನವಲಗುಂದಮಠ, ರಾಜಣ್ಣ ಕೊರವಿ, ವೆಂಕಟೇಶ ಕಾಟವೆ, ಮಂಜುನಾಥ ಕಾಟಕರ, ಪ್ರೀತಂ ಅರಕೇರಿ, ಪ್ರವೀಣ ಕುಬಸದ ಇದ್ದರು.