ADVERTISEMENT

ಹುಬ್ಬಳ್ಳಿ: ಶೋಷಣೆ ವಿರುದ್ಧ ಜಾಗೃತಿ ಮೂಡಿಸುವ ‘ಗಣಪ’

ವಿದ್ಯಾನಗರದ ಬಾಲಗಜಾನನ ಯುವಕ ಮಂಡಳಿಯ ಕಾರ್ಯಕ್ಕೆ ಜನರ ಮೆಚ್ಚುಗೆ

ಶಿವರಾಯ ಪೂಜಾರಿ
Published 31 ಆಗಸ್ಟ್ 2025, 4:55 IST
Last Updated 31 ಆಗಸ್ಟ್ 2025, 4:55 IST
<div class="paragraphs"><p>ಹುಬ್ಬಳ್ಳಿಯ ವಿದ್ಯಾನಗರದಲ್ಲಿ ಬಾಲಗಜಾನನ ಯುವಕ ಮಂಡಳಿ ಪ್ರತಿಷ್ಠಾಪಿಸಿರುವ ಗಣೇಶ ಮೂರ್ತಿ </p></div>

ಹುಬ್ಬಳ್ಳಿಯ ವಿದ್ಯಾನಗರದಲ್ಲಿ ಬಾಲಗಜಾನನ ಯುವಕ ಮಂಡಳಿ ಪ್ರತಿಷ್ಠಾಪಿಸಿರುವ ಗಣೇಶ ಮೂರ್ತಿ

   

ಪ್ರಜಾವಾಣಿ ಚಿತ್ರ: ಗೋವಿಂದರಾಜ ಜವಳಿ

ಹುಬ್ಬಳ್ಳಿ: ಇಲ್ಲಿನ ವಿದ್ಯಾನಗರದ ಬಾಲಗಜಾನನ ಯುವಕ ಮಂಡಳಿಯಿಂದ ಆಯೋಜಿಸಿರುವ 21ನೇ ಗಣೇಶೋತ್ಸವದಲ್ಲಿ, ಮಹಿಳೆಯರ ಮೇಲಿನ ಅತ್ಯಾಚಾರ, ಶೋಷಣೆ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ. ಗಣಪನ ದರ್ಶನಕ್ಕೆ ಬಂದವರು ಜಾಗೃತಿ ಸಂದೇಶ ಪಡೆದು ತೆರಳುತ್ತಿದ್ದಾರೆ.

ADVERTISEMENT

ಒಂಟಿ ಮಹಿಳೆಯ ಮೇಲೆ ದುಷ್ಕರ್ಮಿಯೊಬ್ಬ ಬಲಾತ್ಕಾರಕ್ಕೆ ಮುಂದಾಗಿ ಸೀರೆ ಎಳೆಯುವ ವೇಳೆ ರಕ್ಷಣೆಗೆ ಧಾವಿಸಿದ ಮಾದರಿಯ ‘ಗಣೇಶ’ ಮೂರ್ತಿಯನ್ನು ಇಲ್ಲಿ ಪ್ರತಿಷ್ಠಾಪಿಸಲಾಗಿದ್ದು, ಎಲ್ಲರನ್ನು ಸೆಳೆಯುತ್ತಿದೆ.

ರಾಜ್ಯ ಸೇರಿದಂತೆ ದೆಹಲಿ, ಬಿಹಾರ, ಜಾರ್ಖಂಡ್‌ ರಾಜ್ಯಗಳಲ್ಲಿ ಈಚೆಗೆ ನಡೆದ ಅತ್ಯಾಚಾರ ಪ್ರಕರಣ ಕುರಿತು ಜಾಗೃತಿ ಮೂಡಿಸಲು ಮಂಡಳಿಯು ಕೆಲವು ಮಾದರಿಗಳನ್ನು ಪೆಂಡಾಲ್‌ನ ಪ್ರವೇಶದ್ವಾರದಲ್ಲಿ ಅಳವಡಿಸಿರುವುದು ಗಮನ ಸೆಳೆಯುತ್ತಿದೆ.

ಒಂದು ಬದಿ ಅತ್ಯಾಚಾರಕ್ಕೊಳಗಾದ ಬಾಲಕಿ ಆಸ್ಪತ್ರೆಯಲ್ಲಿ ಸಾವು– ಬದುಕಿನ ನಡುವೆ ಹೋರಾಟ ಮಾಡುತ್ತಿರುವ ದೃಶ್ಯ, ದುರುಳರ ಕೃತ್ಯದ ಕರಾಳತೆ ತಿಳಿಸಿದರೆ, ಇನ್ನೊಂದು ಬದಿಯಲ್ಲಿ ಆರೋಪಿಯ ಜೈಲುವಾಸ ಹಾಗೂ ಆತ ಮರಣ ದಂಡನೆ ಶಿಕ್ಷೆಗೆ ಒಳಗಾಗುವ ದೃಶ್ಯಗಳ ರೂಪಕವನ್ನು ಪೆಂಡಾಲ್‌ನಲ್ಲಿ ಪ್ರದರ್ಶಿಸಲಾಗಿದೆ. ಕಳೆದ ವರ್ಷ ಬೆಂಗಳೂರಿನಲ್ಲಿ ಮಹಿಳೆಯನ್ನು ಕೊಲೆ ಮಾಡಿ, ಮೃತ ದೇಹವನ್ನು ತುಂಡು ತುಂಡಾಗಿ ಕತ್ತರಿಸಿ, ಫ್ರಿಡ್ಜ್‌ನಲ್ಲಿಟ್ಟ ರೂಪಕವನ್ನು ಮನಕಲಕುವಂತೆ ರೂಪಿಸಲಾಗಿದೆ.

‘ಬಾಲಕಿಯರ ಮೇಲೆ ಅತ್ಯಾಚಾರ ನಿಲ್ಲಲಿ’, ‘ಬಲಾತ್ಕಾರ ವಿರೋಧಿಸೋಣ, ಹೆಣ್ಣುಮಕ್ಕಳನ್ನು ರಕ್ಷಿಸೋಣ’, ‘ಬಲಾತ್ಕಾರ ಮಾಡುವವನು ಪಾ‍ಪಿ’, ‘ಗಣೇಶ ಹಬ್ಬವು ಪಾಪದ ಕೊಳಕು ಕೊನೆಗೊಳಿಸಲಿ’ ಎಂಬ ಬರಹದ ಪೋಸ್ಟರ್‌ಗಳನ್ನು ಸಹ ಪೆಂಡಾಲ್‌ ಒಳಗಡೆ ಅಳವಡಿಸಲಾಗಿದೆ. 

ಯುವಕ ಮಂಡಳದಿಂದ ಕಳೆದ ವರ್ಷದ ಗಣೇಶೋತ್ಸವದಲ್ಲಿ ಸಾಮಾಜಿಕ ಜಾಲತಾಣಗಳ ವಿಪರೀತ ಬಳಕೆಯಿಂದ ಆಗುವ ಸಮಸ್ಯೆಗಳ ಕುರಿತು ಜಾಗೃತಿ ಮೂಡಿಸಲಾಗಿತ್ತು. ಹಬ್ಬವನ್ನು ಆಚರಣೆಗಷ್ಟೇ ಸೀಮಿತಗೊಳಿಸದೆ, ಜಾಗೃತಿ ಮೂಡಿಸುವ ಕಾರ್ಯ ಮಾಡುತ್ತಿರುವುದು ಮೆಚ್ಚುಗೆಗೆ ಪಾತ್ರವಾಗಿದೆ.  

‘ಹೆಣ್ಣಿನ ಶೋಷಣೆ ನಿಲ್ಲಬೇಕಿದೆ. ಇಂತಹ ಸೂಕ್ಷ್ಮ ವಿಷಯದ ಕುರಿತು ಸಾಮಾಜಿಕ ಜಾಗೃತಿ ಮೂಡಿಸುತ್ತಿರುವ ಬಾಲಗಜಾನನ ಯುವಕ ಮಂಡಳಿಯ ಕಾರ್ಯ ಇತರ ಮಂಡಳಿಗಳಿಗೂ ಸ್ಫೂರ್ತಿಯಾಗಲಿ’ ಎಂದು ವಿದ್ಯಾನಗರ ನಿವಾಸಿ ಪ್ರಣೀತಿ ಎಸ್. ಹೇಳಿದರು.

ಇತ್ತೀಚಿನ ದಿನಗಳಲ್ಲಿ ಮಹಿಳೆಯರ ಮೇಲಿನ ಶೋಷಣೆ ಅತ್ಯಾಚಾರ ಪ್ರಕರಣಗಳು ಹೆಚ್ಚುತ್ತಿವೆ. ಈ ಬಗ್ಗೆ ಗಣೇಶೋತ್ಸವದಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ
ಅನೂಪ್ ವಿ. ನವಲಿ ಅಧ್ಯಕ್ಷ ಬಾಲಗಜಾನನ ಯುವಕ ಮಂಡಳಿ ವಿದ್ಯಾನಗರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.