
ಹುಬ್ಬಳ್ಳಿ: ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರು ವಿಧಾನ ಪರಿಷತ್ ಸದಸ್ಯರಾಗಿ 45 ವರ್ಷ ಪೂರೈಸಿದ ಪ್ರಯುಕ್ತ ಡಿ.13ರಂದು ಸಂಜೆ 4ಕ್ಕೆ ನಗರದ ನೆಹರೂ ಮೈದಾನದಲ್ಲಿ ಅಭಿನಂದನಾ ಸಮಾರಂಭ ಹಮ್ಮಿಕೊಂಡಿದ್ದು, ಈಗಾಗಲೆ ಸಮಾರಂಭದ ವೇದಿಕೆ ನಿರ್ಮಾಣ ಕಾರ್ಯ ಭರದಿಂದ ಸಾಗಿದೆ.
ವಿಶಾಲವಾದ ಮೈದಾನದಲ್ಲಿ ತೆರೆದ ವೇದಿಕೆಯನ್ನು ನಿರ್ಮಿಸಲಾಗುತ್ತಿದ್ದು, ಪೆಂಡಾಲ್, ನೆಲಹಾಸು ಹಾಕುವ ಕಾರ್ಯ ನಡೆಯುತ್ತಿದೆ. ಇದರೊಂದಿಗೆ ಮೈದಾನದಲ್ಲಿ 20 ಸಾವಿರಕ್ಕೂ ಅಧಿಕ ಜನರು ಕುಳಿತುಕೊಳ್ಳುವುದಕ್ಕಾಗಿಯೇ ಆಸನಗಳನ್ನು ಹಾಕುವ ಕಾರ್ಯವೂ ನಡೆಯುತ್ತಿದೆ.
ಇದು ಪಕ್ಷಾತೀತ ಕಾರ್ಯಕ್ರಮವಾದ ಹಿನ್ನೆಲೆಯಲ್ಲಿ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಸೇರಿದಂತೆ ಎಲ್ಲಾ ಪಕ್ಷದ ಜನರು ಹಾಗೂ ರಾಜ್ಯದ ವಿವಿಧೆಡೆಯಿಂದ ಅಪಾರ ಸಂಖ್ಯೆಯಲ್ಲಿ ಶಿಕ್ಷಕರು ಕಾರ್ಯಕ್ರಮದಲ್ಲಿ ಭಾಗವಹಿಸುವ ನಿರೀಕ್ಷೆ ಇದೆ.
‘ಕಾರ್ಯಕ್ರಮದಲ್ಲಿ ಭಾಗವಹಿಸುವ ಜನರ ವಾಹನಗಳ ನಿಲುಗಡೆಗಾಗಿ ನಗರದ ಗಿರಣಿಚಾಳ ಮೈದಾನ, ಲ್ಯಾಮಿಂಗ್ಟನ್ ಸ್ಕೂಲ್ ಮೈದಾನ, ರೈಲ್ವೆ ಗ್ರೌಂಡ್, ಮೂರುಸಾವಿರ ಮಠದ ಮೈದಾನ ಹಾಗೂ ಬುಳ್ಳಾ ಜಿನ್ನಿಂಗ್ ಪ್ರೆಸ್ ಮೈದಾನದಲ್ಲಿ ಈಗಾಗಲೇ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಕುಡಿಯುವ ನೀರಿನ ವ್ಯವಸ್ಥೆಯನ್ನೂ ಮಾಡಲಾಗಿದೆ’ ಎಂದು ಕಾರ್ಯಕ್ರಮದ ಆಯೋಜಕರು ತಿಳಿಸಿದ್ದಾರೆ.
ಸತತ ಎಂಟು ಬಾರಿ ಆಯ್ಕೆ: ಸಮಾರಂಭದ ಹಿನ್ನೆಲೆಯಲ್ಲಿ ನೆಹರೂ ಮೈದಾನದಲ್ಲಿ ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಕೆಎಲ್‌ಇ ಸಂಸ್ಥೆಯ ನಿರ್ದೇಶಕ ಶಂಕರಣ್ಣ ಮುನವಳ್ಳಿ, ‘ಬಸವರಾಜ ಹೊರಟ್ಟಿ ಅವರು ಪಶ್ಚಿಮ ಪದವೀಧರರ ಕ್ಷೇತ್ರದಿಂದ ಸತತ ಎಂಟು ಬಾರಿ ವಿಧಾನ ಪರಿಷತ್ತಿಗೆ ಆಯ್ಕೆಯಾಗಿ 45 ವರ್ಷ ಪೂರೈಸಿದ್ದಾರೆ. ಡಿ.13ರಂದು ಸಂಜೆ 4ಕ್ಕೆ ‘ಸನ್ಮಾನ್ಯ ಶ್ರೀ ಬಸವರಾಜ ಹೊರಟ್ಟಿ ಅಭಿನಂದನಾ ಸಮಿತಿ’ ವತಿಯಿಂದ ಅವರನ್ನು ಸನ್ಮಾನಿಸಲಾಗುತ್ತಿದೆ’ ಎಂದರು.
‘ಲ್ಯಾಮಿಂಗ್ಟನ್ ಸ್ಕೂಲ್‌ನಲ್ಲಿ ಅವರ ಶೈಕ್ಷಣಿಕ ಬದುಕು ಆರಂಭವಾದ ಕಾರಣ, ಅಂದು ಮಧ್ಯಾಹ್ನ 3ಕ್ಕೆ ಶಾಲೆಯ ಆವರಣದಿಂದ ಬಸವರಾಜ ಹೊರಟ್ಟಿ ದಂಪತಿಯನ್ನು ಅಲಂಕೃತ ತೆರೆದ ವಾಹನದಲ್ಲಿ ವಿವಿಧ ಕಲಾತಂಡಗಳೊಂದಿಗೆ ನೇರವಾಗಿ ನೆಹರೂ ಮೈದಾನದ ವೇದಿಕೆಗೆ ಕರೆತರಲಾಗುತ್ತದೆ’ ಎಂದರು.
‘ಧಾರವಾಡ, ಗದಗ, ಹಾವೇರಿ, ಉತ್ತರ ಕನ್ನಡ ಸೇರಿದಂತೆ ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳಿಂದ ಶಿಕ್ಷಕರು, ವಿದ್ಯಾರ್ಥಿಗಳು, ವಿವಿಧ ಸಂಘ– ಸಂಸ್ಥೆಗಳ ಪ್ರಮುಖರು, ಬಸವರಾಜ ಹೊರಟ್ಟಿ ಅವರ ಅಭಿಮಾನಿಗಳನ್ನು ಸಮಾರಂಭಕ್ಕೆ ಕರೆತರಲು ವಾಹನಗಳ ವ್ಯವಸ್ಥೆ ಮಾಡಲಾಗುವುದು. ಕೆಲವರು ಅವರೇ ಸ್ವತಃ ವಾಹನಗಳನ್ನು ಮಾಡಿಕೊಂಡು ಕಾರ್ಯಕ್ರಮಕ್ಕೆ ಬರಲಿದ್ದಾರೆ’ ಎಂದರು.
‘ಕಾರ್ಯಕ್ರಮದಲ್ಲಿ ಅಭಿನಂದನಾ ಸಮಾರಂಭ ವೇದಿಕೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ವೇದಿಕೆ ಎಂದು ಎರಡೂ ವೇದಿಕೆಗಳನ್ನು ನಿರ್ಮಿಸಲಾಗುತ್ತಿದ್ದು, ವ್ಯವಸ್ಥಿತವಾಗಿ ಕಾರ್ಯಕ್ರಮ ನಡೆಸಲು ಕ್ರಮವಹಿಸಲಾಗಿದೆ‘ ಎಂದು ಹೇಳಿದರು.
ಅಭಿನಂದನಾ ಸಮಿತಿಯ ಪ್ರಮುಖರಾದ ರಾಜಣ್ಣ ಕೊರವಿ, ಮೋಹನ್ ಲಿಂಬಿಕಾಯಿ, ರಾಜಶೇಖರ ಮೆಣಸಿನಕಾಯಿ, ಅನಿಲ್ ಕುಮಾರ್ ಪಾಟೀಲ, ಲಿಂಗರಾಜ ಪಾಟೀಲ, ವಿಕಾಸ ಸೊಪ್ಪಿನ್ ಪತ್ರಿಕಾಗೋಷ್ಠಿಯಲ್ಲಿ ಇದ್ದರು.
ಶನಿವಾರ ಸಂಜೆ ಕಾರ್ಯಕ್ರಮ ಹಮ್ಮಿಕೊಂಡಿರುವ ಕಾರಣ ಶಿಕ್ಷಕರ ಕಾರ್ಯಕ್ಕೆ ಹಾಗೂ ಮಕ್ಕಳ ಶೈಕ್ಷಣಿಕ ಚಟುವಟಿಕೆಗಳಿಗೆ ಯಾವುದೇ ತೊಂದರೆ ಆಗುವುದಿಲ್ಲಶಂಕರಣ್ಣ ಮುನವಳ್ಳಿ ಕೆಎಲ್‌ಇ ಸಂಸ್ಥೆಯ ನಿರ್ದೇಶಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.