ಹುಬ್ಬಳ್ಳಿಯ ಆರ್.ಎನ್. ಶೆಟ್ಟಿ ಕಲ್ಯಾಣ ಮಂಟಪದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಹಾಸಾದ್ವಿ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಚಿತ್ರಕ್ಕೆ ಗಣ್ಯರು ಪುಷ್ಪ ಸಮರ್ಪಿಸಿದರು
ಹುಬ್ಬಳ್ಳಿ: ‘ನಗರದಲ್ಲಿ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಗುಡಿ ನಿರ್ಮಿಸಲು ನಾನೂ ಸಂಪೂರ್ಣ ಸಹಕಾರ ನೀಡುತ್ತೇನೆ. ಸರ್ಕಾರದಿಂದ ಅನುದಾನ ಕೊಡಿಸುವುದಲ್ಲದೆ, ನನ್ನ ಕಡೆಯಿಂದಲೂ ₹15 ಲಕ್ಷದಿಂದ ₹20 ಲಕ್ಷ ಧನ ಸಹಾಯ ಮಾಡುತ್ತೇನೆ’ ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಭರವಸೆ ನೀಡಿದರು.
ನಗರದ ಆರ್.ಎನ್. ಶೆಟ್ಟಿ ಕಲ್ಯಾಣ ಮಂಟಪದಲ್ಲಿ ಹುಬ್ಬಳ್ಳಿಯ ರಡ್ಡಿ ಕ್ಷೇಮಾಭಿವೃದ್ಧಿ ಟ್ರಸ್ಟ್, ಮಹಾಸಾದ್ವಿ ಶಿವಶರಣೆ ಹೇಮರಡ್ಡಿ ಮಲ್ಲಮ್ಮರ ಜಯಂತ್ಯುತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಹಾಗೂ ಗಣ್ಯರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಒಂದೊಂದು ಕಾಲದಲ್ಲಿ ಒಬ್ಬೊಬ್ಬ ಮಹಾನ್ ಸಂತರು ಜನಿಸುತ್ತಾರೆ. ಹೇಮರಡ್ಡಿ ಮಲ್ಲಮ್ಮ ಸಹ ಅಪರೂಪದ ಸಂತರಲ್ಲಿ ಒಬ್ಬರು. ಜಗತ್ತಿನ ಶ್ರೇಷ್ಠ ಮಹಿಳೆ ಅವರಾಗಿದ್ದು, ಅವರ ಆದರ್ಶಗಳನ್ನು ಮುಂದಿನ ಪೀಳಿಗೆಗೆ ತಿಳಿಸುವ ಕಾರ್ಯವಾಗಬೇಕು. ಅವರು ಕಷ್ಟ, ಉಪವಾಸ, ವನವಾಸ ಅನುಭವಿಸಿದರೂ, ರಡ್ಡಿ ಕುಲಕ್ಕೆ ಕಡ್ಡಿಯಷ್ಟಾದರೂ ಬಂಗಾರ ಇರಬೇಕು ಎಂದು ಸಮಾಜ ಉದ್ಧಾರಕ್ಕೆ ಶ್ರಮಿಸಿದ್ದರು. ಮಕ್ಕಳಿಗೆ ಅವರ ಇತಿಹಾಸ ತಿಳಿಸುವ ಕೆಲಸ ಆಗಬೇಕು’ ಎಂದು ಹೇಳಿದರು.
ಶಾಸಕ ಎನ್.ಎಚ್. ಕೋನರಡ್ಡಿ ಮಾತನಾಡಿ, ‘ರಡ್ಡಿ ಉತ್ತಮ ಸಮಾಜವಾಗಿದ್ದು, ಶೈಕ್ಷಣಿಕ, ಆರ್ಥಿಕ, ರಾಜಕೀಯವಾಗಿ ಸದರಢವಾಗಬೇಕಿದೆ. ಹೇಮರಡ್ಡಿ ಮಲ್ಲಮ್ಮ ಅವರ ಆದರ್ಶಗಳನ್ನು ಮೈಗೂಡಿಸಿಕೊಂಡು, ಅವಿಭಕ್ತ ಕುಟುಂಬಕ್ಕೆ ಆದ್ಯತೆ ನೀಡಬೇಕಿದೆ. ಪಾಲಕರು ಮಕ್ಕಳಿಗೆ ಮಲ್ಲಮ್ಮರ ಬದುಕಿ ಪಾಠ ತಿಳಿಸುವಲ್ಲಿ ಮುಂದಾಗಬೇಕು’ ಎಂದರು.
ಮಣಕವಾಡ ಸುಕ್ಷೇತ್ರದ ಮೃತ್ಯುಂಜಯ ಮಹಾಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದ ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಸಮಾಜದ ಗಣ್ಯರಿಗೆ ಸನ್ಮಾನಿಸಲಾಯಿತು.
ರಡ್ಡಿ ಕ್ಷೇಮಾಭಿವೃದ್ಧಿ ಟ್ರಸ್ಟ್ ಗೌರವ ಅಧ್ಯಕ್ಷ ನಿಂಗನಗೌಡ ಪಾಟೀಲ, ಅಧ್ಯಕ್ಷ ಫಕ್ಕೀರಪ್ಪ ತಟ್ಟಿಮನಿ ಹಾಗೂ ಮುಖಂಡರಾದ ಸುರೇಶ ಬಣವಿ, ವೆಂಕಣ್ಣ ಕರಡ್ಡಿ, ರಘುನಾಥಗೌಡ ಕೆಂಪಲಿಂಗನಗೌಡ, ಶರಣಗೌಡ ಗಿರಡ್ಡಿ, ಎಸ್.ಬಿ. ಸಣಗೌಡ್ರ, ರಾಜಶೇಖರ ಪಾಟೀಲ, ರಾಮಪ್ಪ ಅರಿಷಿಣಗೇರಿ, ಬಸವರಾಜ ಕಳಕರಡ್ಡಿ, ಪ್ರಕಾಶ ಬಿದರಣ್ಣವರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.