ADVERTISEMENT

ಕ್ರಿಕೆಟ್‌: ಪ್ರಶಸ್ತಿಗಾಗಿ ಬಿಡಿಕೆ–ಎಚ್‌ಸಿಎ ಹಣಾಹಣಿ

ಹುಬ್ಬಳ್ಳಿ ಕೋಲ್ಟ್ಸ್‌, ತೇಜಲ್‌ ಅಕಾಡೆಮಿಗೆ ನಿರಾಸೆ

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2020, 17:07 IST
Last Updated 19 ಡಿಸೆಂಬರ್ 2020, 17:07 IST

ಹುಬ್ಬಳ್ಳಿ: ಮಹತ್ವದ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿದ ಬಿಡಿಕೆ ಸ್ಪೋರ್ಟ್ಸ್‌ ಫೌಂಡೇಷನ್‌ ಮತ್ತು ಹುಬ್ಬಳ್ಳಿ ಕ್ರಿಕೆಟ್‌ ಅಕಾಡೆಮಿ (ಎಚ್‌ಸಿಎ) ತಂಡಗಳು ‘ಸ್ಕೈ 360’ ಸಲ್ಯೂಷನ್‌ 14 ವರ್ಷದೊಳಗಿನವರ ಅಂತರ ಕ್ಯಾಂಪ್‌ಗಳ ಕ್ರಿಕೆಟ್‌ ಟೂರ್ನಿಯಲ್ಲಿ ಪ್ರಶಸ್ತಿಗಾಗಿ ಭಾನುವಾರ ಪೈಪೋಟಿ ನಡೆಸಲಿವೆ.

ಫಸ್ಟ್‌ ಕ್ರಿಕೆಟ್ ಅಕಾಡೆಮಿ ಜಿಮ್ಖಾನಾ ಮೈದಾನದಲ್ಲಿ ಆಯೋಜಿಸಿರುವ ಟೂರ್ನಿಯಲ್ಲಿ ಶನಿವಾರ ನಡೆದ ಸೆಮಿಫೈನಲ್‌ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಹುಬ್ಬಳ್ಳಿ ಕೋಲ್ಟ್ಸ್‌ 24.4 ಓವರ್‌ಗಳಲ್ಲಿ 89 ರನ್‌ ಗಳಿಸಿತು. ಸುಲಭವಾದ ಗುರಿಯನ್ನು ಎಚ್‌ಸಿಎ ತಂಡ 19.2 ಓವರ್‌ಗಳಲ್ಲಿ 1 ವಿಕೆಟ್‌ ಕಳೆದುಕೊಂಡು ತಲುಪಿತು. ಈ ತಂಡದ ಆರಂಭಿಕ ಬ್ಯಾಟ್ಸ್‌ಮನ್‌ ಆದಿತ್ಯ ಉಮ್ರಾಣಿ (ಅಜೇಯ 55, 61ಎಸೆತ, 9 ಬೌಂಡರಿ) ಅರ್ಧಶತಕ ಗಳಿಸಿದರು. ಮೂರು ವಿಕೆಟ್‌ ಕಬಳಿಸಿ ಬೌಲಿಂಗ್‌ನಲ್ಲಿಯೂ ಮಿಂಚಿದರು. ಮಹಮ್ಮದ್‌ ಆಯನ್‌ ಬಳ್ಳಾರಿ ಮೂರು ಮತ್ತು ಲಿಖಿತ್‌ ರಾಠೋಡ್‌ ಎರಡು ವಿಕೆಟ್ ಪಡೆದು ಕೋಲ್ಟ್ಸ್‌ ತಂಡವನ್ನು ಅಲ್ಪ ಮೊತ್ತಕ್ಕೆ ಕಟ್ಟಿಹಾಕಿದರು.

ಇನ್ನೊಂದು ಸೆಮಿಫೈನಲ್‌ ಪಂದ್ಯದಲ್ಲಿ ಬಿಡಿಕೆ ತಂಡ ನಾಲ್ಕು ರನ್‌ಗಳ ರೋಚಕ ಗೆಲುವು ದಾಖಲಿಸಿತು. ಮೊದಲು ಬ್ಯಾಟ್ ಮಾಡಿದ ಈ ತಂಡ 26 ಓವರ್‌ಗಳಲ್ಲಿ 130 ರನ್‌ ಗಳಿಸಿತು. ಎದುರಾಳಿ ತೇಜಲ್‌ ಶಿರಗುಪ್ಪಿ ಕ್ರಿಕೆಟ್ ಅಕಾಡೆಮಿ ನಿಗದಿತ 30 ಓವರ್‌ಗಳು ಮುಗಿದಾಗ ಎಂಟು ವಿಕೆಟ್‌ ಕಳೆದುಕೊಂಡು 126 ರನ್ ಕಲೆಹಾಕಿ ಗೆಲುವಿನ ಹೊಸ್ತಿಲಲ್ಲಿ ಎಡವಿತು. ಬಿಡಿಕೆ ತಂಡದ ಅಬ್ದುಲ್‌ ಸಮಿ ದಿವಾಲ್‌ಅಲಿ, ಭುವನ ಬಿಸಡೋಣಿ ತಲಾ ಎರಡು ವಿಕೆಟ್‌ ಪಡೆದರೆ, ರೋಹಿತ್‌ ಎಂ. ಯರೇಸೀಮಿ ಮೂರು ವಿಕೆಟ್‌ ಉರುಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.