ADVERTISEMENT

ಗೆದ್ದು ಬಂದವರು | ಕೋವಿಡ್ ಎದುರಿಸಲು ಸನ್ನದ್ಧರಾಗಿ

ಗಣೇಶ ವೈದ್ಯ
Published 29 ಜುಲೈ 2020, 16:10 IST
Last Updated 29 ಜುಲೈ 2020, 16:10 IST
ರುದ್ರಪ್ಪ ಎಂ. ಹೊರಟ್ಟಿ
ರುದ್ರಪ್ಪ ಎಂ. ಹೊರಟ್ಟಿ   

ಹುಬ್ಬಳ್ಳಿ: ‘ಕೊರೊನಾ ಸೋಂಕು ತಗುಲದಂತೆ ಮುನ್ನೆಚ್ಚರಿಕೆ ವಹಿಸಿದ್ದೆ. ಅದೆಲ್ಲದಕ್ಕಿಂತ ಹೆಚ್ಚಾಗಿ ಕೋವಿಡ್‌ ಎದುರಿಸಲು ಮಾನಸಿಕವಾಗಿ ಸಿದ್ಧನಾಗಿದ್ದೆ’

ಕೋವಿಡ್‌ನಿಂದ ಗುಣಮುಖರಾಗಿ ಜು. 24ರಂದು ಆಸ್ಪತ್ರೆಯಿಂದ ಬಿಡುಗಡೆಯಾಗಿರುವ ಹುಬ್ಬಳ್ಳಿಯ ವಿದ್ಯಾನಗರ ಪೊಲೀಸ್ ಠಾಣೆಯ ಕಾನ್‌ಸ್ಟೆಬಲ್ ರುದ್ರಪ್ಪ ಎಂ. ಹೊರಟ್ಟಿ ಅವರ ಮಾತುಗಳಿವು.

ಬೆಳಗಾವಿ ಜಿಲ್ಲೆ ರಾಮದುರ್ಗದ ಕಟಕೋಳ ಗ್ರಾಮದ 34 ವರ್ಷದ ರುದ್ರಪ್ಪ, ಜಿಲ್ಲೆಯಲ್ಲಿ ಸೋಂಕಿನ ಪ್ರಭಾವ ಹೆಚ್ಚಾಗುತ್ತಿದ್ದಂತೆ ಮುನ್ನೆಚ್ಚರಿಕೆಯಾಗಿ ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಊರಿಗೆ ಕಳುಹಿಸಿದ್ದಾರೆ. ಕೊರೊನಾ ವಾರಿಯರ್‌ ಪೋಷಾಕು ತೊಟ್ಟು ಸೋಂಕಿನ ವಿರುದ್ಧ ಹೋರಾಡುವ ಅಸ್ತ್ರಗಳನ್ನೂ ಕರಗತ ಮಾಡಿಕೊಳ್ಳತೊಡಗಿದ್ದರು. ಹಿರಿಯ ಸಹೋದ್ಯೋಗಿಗಳ ಬೆಂಬಲವೂ ಇತ್ತು.

ADVERTISEMENT

‘ಸೋಂಕಿತರ ಜೊತೆ ನಿತ್ಯ ವ್ಯವಹರಿಸಲಿದ್ದೇವೆ ಎಂಬ ಅರಿವಿದ್ದರೂ ಹಿಂಜರಿಯಲಿಲ್ಲ. ಎಂಥ ಸಂದರ್ಭದಲ್ಲಿಯೂ ಹೆಜ್ಜೆ ಹಿಂದಿಡದ ರೀತಿಯಲ್ಲಿ ನಮಗೆ ತರಬೇತಿ ನೀಡಲಾಗಿರುತ್ತದೆ. ಹಾಗೆ ನೋಡಿದರೆ ನಮ್ಮ ಎಂದಿನ ಕೆಲಸದಲ್ಲಿ ಎದುರಾಗುವ ಆತಂಕದ ಮುಂದೆ ಕೋವಿಡ್ ಏನೂ ಅಲ್ಲ’ ಎಂದು ತಾವು ಸಾಂಕ್ರಾಮಿಕ ರೋಗಕ್ಕೆ ಮುಖಾಮುಖಿಯಾದ ಬಗೆಯನ್ನು ತೆರೆದಿಟ್ಟರು.

’ಸೋಂಕು ದೃಢಪಟ್ಟಾಗ ಕೊಂಚವೂ ಅಳುಕಲಿಲ್ಲ. ಆದರೆ ವಿಷಯವನ್ನು ಮನೆ ಮಂದಿಗೆ ಹೇಳುವುದು ಹೇಗೆ ಎಂಬ ಯೋಚನೆ ಮಾತ್ರ ಕಾಡಿತ್ತು. ಆರೋಗ್ಯ ಸದೃಢವಾಗಿದ್ದ ಕಾರಣ ಯಾವ ಸಮಸ್ಯೆಯೂ ಆಗಲಿಲ್ಲ. ಕೋವಿಡ್ ಕೇರ್ ಸೆಂಟರ್‌ನಲ್ಲಿ ಸಾಕಷ್ಟು ಚಟುವಟಿಕೆಯಲ್ಲಿ ತೊಡಗಿಕೊಂಡು ಲವಲವಿಕೆಯಿಂದ ಇದ್ದೆ. ಈಗ ಹೋಂ ಕ್ವಾರಂಟೈನ್‌ನಲ್ಲಿದ್ದರೂ ಕ್ರಿಯಾಶೀಲವಾಗಿದ್ದೇನೆ’ ಎಂದು ಅವರು ತಮ್ಮ ಅನುಭವ ಹಂಚಿಕೊಂಡರು.

‘ಸೋಂಕು ತಗುಲದಂತೆ ಮುನ್ನೆಚ್ಚರಿಕೆ ವಹಿಸುವ ಜೊತೆಗೆ, ಕೋವಿಡ್ ಬಂದರೆ ಅದನ್ನು ಹೇಗೆ ಎದುರಿಸಬೇಕು ಎಂಬುದಕ್ಕೂ ಮಾನಸಿಕವಾಗಿ ಸಿದ್ಧವಾಗಬೇಕು. ಎದೆಗುಂದುವ ಅಗತ್ಯವಿಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.